ಹೊನ್ನಸೀರೆಗೆ ಬೆಳ್ಳಿ ಅಂಚು
ವರ್ಷ ತೊಡಕು ಚಿಕ್ಕಂದಿನಲ್ಲಿ ನಾವುಗಳು ಬಲು ಭಯ ಪಡುತ್ತಿದ್ದ ಹಬ್ಬ! "ಇವತ್ತೇನು ಮಾಡ್ತೀವೋ ವರ್ಷ ಪೂರ್ತಿ ಅದೇ ಮಾಡ್ತೀವಂತೆ" ಅನ್ನೋ ನಂಬಿಕೇನೇ ಭಯಕ್ಕೆ ಕಾರಣ!ಬೆಳಗ್ಗೆ ಬೇಗ ಎದ್ದು ಸ್ನಾನ ಮುಗಿಸಿ ಯಾವುದೋ ಒಂದು ಪಾಠದ ಪುಸ್ತಕ ಹಿಡಿದುಕೊಂಡು ತೂಕಡಿಸುತ್ತಾ ಕೂತಿರುತ್ತಿದ್ದೆವು. ಅವತ್ತೆಲ್ಲಾ ಅಪ್ಪ ಅಮ್ಮನ ಹತ್ರ ಬೈಸಿ ಕೊಳ್ಳಬಾರದೆಂಬ ಕಟ್ಟೆಚ್ಚರ ಬೇರೇ...ಒಬ್ಬರಿಗೊಬ್ಬರು ಬೈಯದೆ ಜಗಳವಾಡದೆ ದಿನ ಕಳೆಯುವುದು ತುಂಬಾ ಕಷ್ಟವಾಗುತ್ತಿತ್ತು ! ಆದರೂ ಹೇಗೊ ಹಲ್ಲು ಕಚ್ಚಿಕೊಂಡು ಸಹಿಸಿಕೊಂಡಿರುತ್ತಿದ್ದೆವು(`ನಾಳೆ ನೋಡ್ಕೋತೀನಿ ನಿನ್ನ...' ಅಂತ ಗೊಣಗಿಕೊಂಡು)
ಅಮ್ಮ ಯುಗಾದಿಗಷ್ಟೇ ಅಲ್ಲದೆ ವರ್ಷ ತೊಡಕಿಗೂ ಹೊಸ ಬಟ್ಟೆ ಅಂತ ಎರಡೆರಡು ಹೊಸ ಬಟ್ಟೆ ಹೊಲೆಯುತ್ತಿದ್ದರು ಎರಡನೇ ಹೊಸಬಟ್ಟೆ ಸಿಕ್ಕಿದ್ದೊಂದೇಈ ಭಯಪಡಿಸುವ ಹಬ್ಬದಿಂದ ನಮ್ಮಗಳಿಗೆ ಆಗುತ್ತಿದ್ದ ಲಾಭ !
ದಿನವೆಲ್ಲಾ ಒಳ್ಳೆ ಮಕ್ಕಳಾಗಿ ರಾತ್ರಿ ಮಲಗುವ ವೇಳೆಗೆ `ಅಬ್ಬಾ ಅಂತೂ ಈ ದಿನ ಮುಗಿಯಿತಲ್ಲಾ ಇನ್ನು ಮುಂದಿನ ವರ್ಷದ ತನಕ (ಒಳ್ಳೆ ಹುಡುಗಿ ತರ ನಟಿಸುವ) ಚಿಂತೆಯಿಲ್ಲಾ...'ಎಂಬ ನಿರಾಳ ಭಾವ ಮನದಲ್ಲಿ ತುಂಬಿಕೊಂಡು ನಿದ್ದೆಗೆ ಜಾರುವುದು ಈ ಹಬ್ಬ ಕೊಡಮಾಡುತ್ತಿದ್ದ ಬೋನಸ್ಸು
ಮರುದಿನ ಯಥಾಪ್ರಕಾರ ಜುಟ್ಟು ಜುಟ್ಟು ಹಿಡಿದು ಜಗಳ, ಅಮ್ಮನ ಹತ್ತಿರ ಬೈಗುಳ ತಿನ್ನುವುದು ಸೇರಿಸಿ ನಮ್ಮ ಎಂದಿನ ಸಕಲ ಕೆಟ್ಟಬುದ್ದಿಗಳನ್ನೂ ಹೊಸ ವರ್ಷದಲ್ಲಿ ಹೊಸ ಹುಮ್ಮಸ್ಸಿನಿಂದ ಪ್ರಾರಂಭಿಸುತ್ತಿದ್ದೆವು!
***********
ಇದು ವರ್ಷತೊಡಕೋ ಅಥವಾ ವರ್ಷತೊಡಗೋ? ಬಹುಶಃ ಎರಡನೆಯದೇ ಇರಬೇಕು ಜನಸಾಮಾನ್ಯರ ಬಾಯಲ್ಲಿ ತೊಡಕಾಯಿತೋ ಏನೊ...
ಇವತ್ತಿಗೆ `ಕರಿ ಹಬ್ಬ' ಅಂತನೂ ಹೇಳುತ್ತಾರೆ. ಇಲ್ಲಿ ಕರಿ ಅಂದರೆ ಕಪ್ಪು ಬಣ್ಣವಲ್ಲ
`ಕರಿ'ಗೆ ಅಂಚು ಎಂಬ ಅರ್ಥವೂ ಇದೆ.
ಅಂದರೆ ನಾವು ಸೀರೆಯ ಅಂಚು ಕಟ್ಟುವಂತೆ ಇದು ವರ್ಷದ ಅಂಚು ಕಟ್ಟುವ ದಿನ!
ಕಳೆದ ವರ್ಷಕ್ಕೆ,ಕಳೆದ ವರ್ಷದ ವ್ಯವಹಾರಗಳಿಗೆ ಅಂಚು ಕಟ್ಟಿ ಭದ್ರ ಪಡಿಸಿ ಹೊಸ ವರ್ಷ ಪ್ರಾರಂಭಿಸುವ ದಿನ ಹಿಂದಿನ ಕಾಲದಲ್ಲಿ ನಿಖರವಾಗಿ ದಿನ ಲೆಕ್ಕ ಹಾಕಲು ಈಗಿನಂತೆ ಸಾಧನಗಳು ಅಷ್ಟಾಗಿ ಇಲ್ಲದಿದ್ದುದರಿಂದ,ಮತ್ತು ಬಾಯಿಲೆಕ್ಕ ಹಾಕುವಷ್ಟು ಚತುರತೆ ಎಲ್ಲರಿಗೂ ಸಾಧ್ಯವಾಗದ್ದಿರಿಂದ ಈ ಲೆಕ್ಕ ಹಾಕುವ ,ಲೆಕ್ಕ ಹಾಕಿ ವ್ಯವಹಾರ ಚುಕ್ತಾ ಗೊಳಿಸುವ ದಿನ ಜನ ಸಾಮಾನ್ಯರಿಗೆ ತಲೆನೋವಿನ ದಿನ ಅಥವಾ ತೊಡಕು ಅಂತಾನೂ ಅನ್ನಿಸಿರಬಹುದೇನೋ...
ನಮಗಂತೂ ಈ ಹಬ್ಬ ತೊಡಕು ಅನ್ನಿಸುತ್ತಿದ್ದದ್ದುದ್ದು ತರಲೆ ಮಾಡಲಾಗುವುದಿಲ್ಲವಲ್ಲಾ ಅಂತ...!
8 Comments:
"ವರ್ಷ ತೊಡಕು", "ಕರಿ" ವಿವರಣೆಗೆ ಧನ್ಯವಾದ. ಈ ಬಗ್ಗೆ ಇನ್ನಷ್ಟು ಸಂಶೋಧನೆ ಮಾಡಿ ತಿಳಿಸಿ :-)
ನಮ್ಮಲ್ಲಿ ಅಂಚಿಗೆ "ಕರೆ" ಅನ್ನುತ್ತೇವೆ.
ವರ್ಷ ತೊಡಕು (ಅಥವಾ ವರ್ಷ ತೊಡಗು) ಅನ್ನುವ ಪದ ಪ್ರಯೋಗವೇ ಕೇಳಿರಲಿಲ್ಲ, ಈಗ ಗೊತ್ತಾಯ್ತು.
ಯುಗಾದಿಯ ದಿನವೇ ನಮ್ಮಲ್ಲಿ "ಮಕ್ಕಳಿಗೆ ತೊಡಕು" ಆಗುತ್ತಿತ್ತು. ಅಂದು ತಂಟೆ, ತಕರಾರು ಮಾಡುವಂತಿಲ್ಲ, ಹಿರಿಯರಿಂದ ದಂಡಿಸಿಕೊಳ್ಳುವಂತಿಲ್ಲ....
ಇವತ್ತೇನು ಮಾಡ್ತೀವೋ ವರ್ಷ ಪೂರ್ತಿ ಅದೇ ಮಾಡ್ತೀವಿ !!
ಹಿಹಿ..ತುಂಬಾ ಚೆನ್ನಾಗಿದೆ 'ಒಳ್ಳೆ ಮಕ್ಕಳಾಗಿ' ಇರುವ ನಟನೆಯ ಕತೆ :)
ಕರಿ ಹಬ್ಬ..ಅದರ ಬಗ್ಗೆ ಗೊತ್ತಿರಲಿಲ್ಲ
ವಂದನೆಗಳು
ಅಂದಾಗೆ ನೀವು ಸುಪ್ತದೀಪ್ತಿ ಕ್ಯಾಮರ ತಗೊಂಡು ಇಬ್ಬರು ಒಂದೇ ಜಾಗಕ್ಕೆ ಹೋಗಿ ಪುಷ್ಪಸಾಲುಗಳ ಪೋಟೋ ಕ್ಲಿಕಿಸಿದ ಹಾಗಿದೇ :)
ವರ್ಷತೊಡಕು ಮತ್ತು ಕರಿಹಬ್ಬ.. ಎರಡೂ ಇದೇ ಮೊದಲು ಕೇಳಿದ್ದು. ಒಳ್ಳೆಯ ಮಾಹಿತಿ.
ಇಡೀ ಒಂದು ದಿನ ಬೈಸಿಕೊಳ್ಳದೆ, ತರಲೆ ಮಾಡದೆ ಇರ್ತಾ ಇದ್ರಾ? ಯಪ್ಪಾ...:-))
ವರ್ಷ ತೊಡಕು ದಿನದಂದು ನಾವು ಕೂಡ ಊಟ ಮಾಡಲೇಬಾರದೆಂದು ನಿರ್ಧರಿಸಿದ್ದೆವು. ವರ್ಷಪೂರ್ತಿ ಉಳಿತಾಯ ಮಾಡೋ ಜಿಪುಣತನ.... ಆದ್ರೆ....
ಹಬ್ಬವಾಗಿ ತುಂಬ ದಿನಗಳ ನಂತರ ಈ ಬ್ಲಾಗ್ ಓದಿದೆ. ಹಳೆಯ ನೆನಪುಗಳ ಹೊನ್ನ ಸೀರೆಗೆ ಬೆಳ್ಳಿಯಂಚಾಗಿದೆ ಬರಹ.. ಛಾಯಾಚಿತ್ರಗಳಂತೂ ತುಂಬ ತುಂಬ ಚಂದವಿವೆ. ನಿಮ್ಮ ಮನೆಯಂಗಳದಿ ನೂರು ಹೂವರಳಿ, ಬ್ಲಾಗಿನ ಹೂಮಾಲೆ ಘಮಘಮಿಸುತಿರಲಿ..
ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು
ಸಿಂಧು ಅವರಿಗೆ ದುರ್ಗಕ್ಕೆ ಸ್ವಾಗತ
ಶಿವು ಅವರಿಗೆ,
ನಾನೂ ಸುಪ್ತದೀಪ್ತಿಯವರು ಒಂದೇ ಜಾಗದಲ್ಲಿ ಫೋಟೋ ತೆಗೆದದ್ದೆಂದು ನಿಮಗೆ ಗುಮಾನಿ ಬಂದಿದ್ದರೆ ಸಹಜವೇ
ಆದರೆ ದೀಪ್ತಿಯವರು ತಿಳಿಸಿರುವಂತೆ ಅವರು ದಕ್ಷಿಣ ಕ್ಯಾಲಿಫೋರ್ನಿಯಾದ ಸ್ಯಾಂಡಿಯಾಗೋ ಸಮೀಪದ ಊರೊಂದರಲ್ಲಿ ತೆಗೆದ ಚಿತ್ರ ಹಾಕಿದ್ದಾರೆ
ನಾನು ನನ್ನ ಚಿತ್ರ ಕ್ಲಿಕ್ಕಿಸಿದ್ದು ಉತ್ತರ ಕ್ಯಾಲಿಫೋರ್ನಿಯಾದ
ಗಿಲ್ ರಾಯ್ ಸಮೀಪ!
ನನ್ನ ಚಿತ್ರದಲ್ಲಿರುವುದು ಸೇವಂತಿಗೆ ಹೂಗಳು
ದೀಪ್ತಿಯವರದ್ದು ರೆನ್ಯಾನ್ ಕ್ಯುಲಸ್ ಹೂಗಳು
ಅಷ್ಟಕ್ಕೂ ದೀಪ್ತಿಯರ ಸಂಗಡ ಟ್ರಿಪ್ ಹೋಗುವ ಐಡಿಯಾ ಕೊಟ್ಟಿದ್ದಕ್ಕೆ ಥ್ಯಾಂಕ್ಸ್! ಹಾಗೇ ಇಬ್ಬರಿಗೂ ಟಿಕೆಟ್ ಕಳಿಸಿ ಮತ್ತು ಅದಕ್ಕಾಗಿ ಅಡ್ವಾನ್ಸ್ ಥ್ಯಾಂಕ್ಸ್ ಈಗಲೇ ತೊಗೊಳ್ಳಿ...
ಸುಪ್ತ ದೀಪ್ತಿ ಪ್ಯಾಕಿಂಗ್ ಶುರು ಮಾಡಿ ಬೇಗ...
ಮಾಲಾ ಅವರೇ,
ಎಲ್ಲೋ ಒಂದು ಗಾದೆ ಓದಿದಾಗಿತ್ತು..
'ಯಾಕೇ ಹುಡುಗಿ ಮದುವೆ ಅಗಿಲ್ಲಾ ಅಂದ್ರೆ..ನೀನೇ ನನ್ನ ಗಂಡ ಅಂದಳಂತೆ'
:)))
ನಿಮಗೆ ಯಾವ ಪುಷ್ಪಕದಲ್ಲಿ ಟಿಕೇಟ್ ಬೇಕೆಂದು ತಿಳಿಸಬೇಕು !
Post a Comment
Subscribe to Post Comments [Atom]
<< Home