Thursday, March 01, 2007

ಬಾಳಕದ ಮೆಣಸಿನ ಕಾಯಿಯೂ,ಬೇಕಿಂಗ್ ಕಾಂಪಿಟಿಶನ್ನೂ...

No hard feelings please...' ಇದನ್ನು ಬರೆಯುವ ಮುಂಚೆನೇ ಹೇಳಿಬಿಡುತ್ತಿದ್ದೇನೆ
`am I opening can of worms?'ಎಂಬ ಯೋಚನೆ ಬರುತ್ತಿದ್ದರೂ ಬರೆಯದೇ ಇರಲಾಗುತ್ತಿಲ್ಲ
`ಇರಲಾರದೇ ಇರುವೆ ಬಿಟ್ಟು ಕೊಂಡರು' ಅಂತಾರಲ್ಲಾ ಹಾಗೇ...

******************
ಭಾನುವಾರ ಸಂಜೆ Food network ಷೋ ಒಂದರಲ್ಲಿ ಟೆಕ್ಸಾಸ್ ನಲ್ಲಿ ನಡೆದ ಕಂಟ್ರಿ ಫೇರ್ ಅನ್ನು ತೋರಿಸುತ್ತಿದ್ದರು ಅದೊಂದು ಕುಕಿಂಗ್ ಕಾಂಪಿಟಿಷನ್ ಅದರ ವೈಶಿಷ್ಯವೇನು ಅಂತ ಹೇಳಿಬಿಡುತ್ತೇನೆ `ನೂರು ನೂರೈವತ್ತು ವರುಷಗಳ ಹಿಂದಿನ ಅಮೆರಿಕನ್ ಅಡುಗೆಗಳನ್ನು ಅದೇ ಪುರಾತನ ಸೆಟಿಂಗ್ ನಲ್ಲಿ ,ಹಳೇ ಪಾತ್ರೆ ಪಡಗ ಉಪಯೋಗಿಸಿ ತಯಾರಿಸುವುದು!

*****************
1812ರ ಅಮೆರಿಕನ್ ಯುದ್ದದ ನಂತರ ಬಹಳಷ್ಟು ಜನ ಅಮೆರಿಕನ್ನರು ಹೊಸಜೀವನ ಅರಸಿ ಪೂರ್ವದಿಂದ ಪಶ್ಚಿಮದ ಕಡೆಗೆ ವಲಸೆ ಬಂದರು.ಹವಾಮಾನ ವೈಪರೀತ್ಯಗಳಲ್ಲದೇ, ಪ್ರಯಾಣಕ್ಕೆ ಆಧುನಿಕ ಸೌಲಭ್ಯ ಇಲ್ಲದ ಆ ದಿನಗಳಲ್ಲಿ ಈ ರೀತಿಯ ಸಾಹಸ ಸಾಕಷ್ಟು ರೋಮಾಂಚಕವಾಗಿತ್ತಾದರೂ,ಅಪಾಯಕಾರಿಯಾಗಿಯೂ ಇತ್ತು.
ಸಾವಿರಾರು ಜನ ಗುರಿ ತಲುಪುವ ಮುನ್ನವೇ ಪ್ರಾಣ ತೆತ್ತರು ಈ ರೀತಿ ಗುರಿ ತಲುಪಿದ ವೀರರ ಸಾಹಸ ನೆನೆದು ಸ್ಪೂರ್ತಿ ಪಡೆಯುವುದು,ಗುರಿ ತಲುಪದ ಅಮಾಯಕರ ತ್ಯಾಗವನ್ನು ಸ್ಮರಿಸುವುದು ಅಮೆರಿಕನ್ನರಿಗೆ ಯಾವತ್ತಿಗೂ ಪ್ರಿಯವಾದ ಕೆಲಸ.ಕೇವಲ ಮುನ್ನೂರು ಚಿಲ್ಲರೆ ವರ್ಷ ಇತಿಹಾಸ ಇರುವ ಇವರಿಗೆ ಅದೊಂದು ಅವಶ್ಯಕತೆಯೋ ಎಂಬಂತೆ ಆಗಿಬಿಟ್ಟಿರುವುದು ಸುಳ್ಳಲ್ಲ

*********************
ಪಶ್ಚಿಮಕ್ಕೆ ವಲಸೆ ಬಂದವರ ಕಾಲದ್ದೇ ಉಡುಗೆ ತೊಡುಗೆ ತೊಟ್ಟು ಬಯಲಲ್ಲಿ ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡಬೇಕಾದ್ದು ಸ್ಪರ್ಧೆಯ ನಿಯಮ.ನಮ್ಮ ಹಿಂದಿನವರು ಹೇಗಿದ್ದರು ಎಂದು ಇಂದಿನ ಮಕ್ಕಳಿಗೆ ತೋರಿಸುವುದೂ ಇದರ ಒಂದು ಉದ್ದೇಶ ಅದರಂತೆ ಸ್ಪರ್ಧಾಳುಗಳೆಲ್ಲಾ ಸಜ್ಜಾಗಿದ್ದರು.ಗಂಡಸರು ಕೌಬಾಯ್ ಹ್ಯಾಟ್ ಧರಿಸಿ ಒಲೆ ಉರಿಸುತ್ತಿದ್ದರು. ಹೆಂಗಸರು ಪಕ್ಕಾ ಹದಿನೆಂಟನೇ ಶತಮಾನದ ಬ್ರಿಟಿಶ್ ಹೆಂಗಸರಂತೆ ಲೇಸ್ ಗಳಿಂದ ಅಲಂಕೃತವಾದ ಲಂಗ ತೊಟ್ಟು ನವಿರಾದ ಕುಸುರಿ ಕೆಲಸದ ಹ್ಯಾಟ್ ತೊಟ್ಟು ಹಳೆ ಕಾಲದ ಕಬ್ಬಿಣದ ಪಾತ್ರೆಗಳಲ್ಲಿ ಅಡುಗೆ (ಮುಖ್ಯವಾಗಿ ಬೇಕ್ ) ಮಾಡುತ್ತಿದ್ದರು ಅವರುಗಳು ಎಷ್ಟು ಸುಂದರವಾಗಿ ಕಾಣುತ್ತಿದ್ದರೆಂದರೆ ಒಂದು ಕ್ಷಣ ನನಗೆ `ವಾವ್' ಅನ್ನಿಸಿದ್ದು ನಿಜ....

******************
ಆಯಿತು ...ಸ್ಪರ್ಧೆ ಮುಗಿಯಿತು...ಬಹುಮಾನ ಹಂಚಿ ಆಯಿತು...ಸಾರ್ವಜನಿಕರೆಲ್ಲಾ ತಿಂಡಿ ಪಧಾರ್ಥಗಳನ್ನು ಕೊಂಡು ತಿನ್ನಲಾರಂಭಿಸಿದರು ಟಿ.ವಿ ಚಾನಲ್ ನವರು ಸ್ಪರ್ಧಾಳುಗಳನ್ನೂ ತಿಂಡಿ ತಿನ್ನುತ್ತಿದ್ದ ಜನರನ್ನೂ ಮಾತಾಡಿಸಿದರು.ತಮ್ಮ ಮಕ್ಕಳನ್ನು ಕರೆತಂದ ಅಪ್ಪ ಅಮ್ಮಂದಿರು ಮಕ್ಕಳಿಗೆ ತುಂಬಾ ವಿಷಯಗಳು ತಿಳಿಸಿದಂತಾಯಿತು ಪುಸ್ತಕದಲ್ಲಿ ಓದುವುದಕ್ಕಿಂಥಾ ಕಣ್ಣಾರೆ ನೋಡಿಮಕ್ಕಳು ನಮ್ಮ ತಾತ ,ಮುತ್ತಾತಂದಿರ ಕಾಲದ ಜೀವನದ ಬಗ್ಗೆ ತಿಳಿದರು ಎಂದು ಮೆಚ್ಚುಗೆ ಸೂಚಿಸಿದರು. ಸ್ಪರ್ಧಾಳುಗಳು ನಮಗೆ ತುಂಬಾ ವಿನೂತನ ಅನುಭವ ಕ್ರೇಝಿ ಫೀಲಿಂಗ್...ಮುಂದಿನ ವರ್ಷವೂ ಈ ಅನುಭವಕ್ಕಾಗಿ ಇಲ್ಲಿಗೆ ಬರಲು ಪ್ರಯತ್ನಿಸುತ್ತೇವೆ ಎಂದರು

***********************
ನಮ್ಮ ದೇಶದಲ್ಲೂ ಹೀಗೆ ಸ್ಪರ್ಧೆ ಏರ್ಪಡಿಸಿದರೆ ಸಖತ್ತಾಗಿ ಇರುತ್ತಲ್ಲವಾ ಅಂತ ಯೋಚಿಸಲಾರಂಭಿಸಿದೆ .ಒಂದೇ ಒಂದು ನಿಮಿಷ ಹಾಗೆ ಯೋಚಿಸಿರಬೇಕು ನಾನು...
ಕುಪ್ಪಸವಿಲ್ಲದೆ (ಕುಪ್ಪಸ ತೊಡುವವರು ಗರತಿಯರಲ್ಲದ ಮಿಟಕಲಾಡಿ ಮೀನಾಕ್ಷಿಯರು ಎಂದು ಆಗಿನ ಕಾಲದ ಭಾವನೆ ಆಗಿತ್ತಂತೆ) ಸಾಂಪ್ರದಾಯಕ ಹದಿನೆಂಟು ಮೊಳದ ದಪ್ಪ ಸೀರೆಯನ್ನುಅದೇನೋ ಬಾಳೇಕಾಯಿ ಹಾಕಿಕೊಂಡು ಉಟ್ಟು ಬೀಸಿ,ಕೇರಿ,ಕುಟ್ಟಿ ಕಟ್ಟಿಗೆ ಒಲೆಯಲ್ಲಿ ನನಗೆ ಅಡುಗೆ ಮಾಡಲು ಆಗುತ್ತಾ ಅಂತ ಭಯ ಆಗಲು ಶುರು ಆಯಿತು!
ಅದೇನು ಪರವಾಗಿಲ್ಲ ಒಂದು ದಿನ ಯಾವುದೋ ನಾಟಕದ ಕಾಸ್ಟ್ಯೂಮ್ ಅಂದು ಕೊಳ್ಳಬಹುದು ಒಂದು ದಿನಕ್ಕೆ ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡುವುದೂ different experience ಅಂತ ಸಮಾಧಾನ ಮಾಡಿಕೊಳ್ಳ ತೊಡಗಿದೆ.


ನಿಧಾನವಾಗಿ ಇಂಥದೊಂದು ಸ್ಪರ್ಧೆ ಏರ್ಪಡಿಸಿದರೆ ಅದರ after effects ಏನಿರಬಹುದು ಅಂತ ಯೋಚನೆ ಬಂತು. (ಸ್ಪರ್ಧೆಗೆ ಮುನ್ನವೇ ) ಭಾರತೀಯ ಸಂಸ್ಕೃತಿಯನ್ನು ಉಳಿಸುತ್ತೀವೆಂದು ಬಾಯಿ ಬಡಿದು ಕೊಳ್ಳುವ ಸೋಕಾಲ್ಡ್ ಸನಾತನಿಗಳು ಮತ್ತು ಹೆಂಗಸರಿಗೆ ಮುಕ್ತಿ ದೊರಕಿಸುತ್ತೇವೆಂದು ಗುಟುರು ಹಾಕುವ ವುಮೆನ್ ಲಿಬ್ಬು ಗಳ ಪರಸ್ಪರ ಕೆಸರೆರೆಚಾಟ ಹೇಗಿರಬಹುದೆಂದು ಊಹೆ ಮಾಡಿಕೊಂಡಾಗ ಉಗುಳು ನುಂಗುವಂತಾಯಿತು ಎರಡೂ ಗುಂಪಿನವರದ್ದೂ ಒಂದೊಂದು ಅತಿರೇಕ!
ಒಟ್ಟಿನಲ್ಲಿ ಪೇಪರ್ ನವರಿಗೆ ಸುಗ್ಗಿ ಅಷ್ಟೇ...


ಅದಿರಲೀ.. ಮನೆಮನೆಯಲ್ಲಿ ಇಂಥದೊಂದು ಕಾರ್ಯಕ್ರಮಕ್ಕೆ ನೋಡಿ,ಕೇಳಿ,ಭೇಟಿ ಕೊಟ್ಟವರ ಅಭಿಪ್ರಾಯ ಏನಿರಬಹುದೆಂದು ಯೋಚಿಸತೊಡಗಿದೆ

`ಅಯ್ಯೋ...ಅದೆಲ್ಲಾ ಓಲ್ಡ್ ಫ್ಯಾಶನ್.. ಥೂ...' ಅಂಥಾ ಎಳೆ ನಿಂಬೆಗಳು ಮೂಗು ಮುರಿಯಬಹುದು

` ನೋಡಿ ನಮ್ ಹಿಂದಿನ ಕಾಲದರ್ವಿಗೆ ಗೊತ್ತಿಲ್ಲದ್ದು ಏನಾದ್ರೂ ಇತ್ತಾ... ಅವ್ರು ಎಷ್ಟೆಲ್ಲಾ ಬುದ್ದಿವಂತರಾಗಿದ್ರು ಅವರಿಗೆ "ಎಲ್ಲಾ" ಗೊತ್ತಿತ್ತು ಹಾಗೆಲ್ಲಾ ನ್ಯಾಚುರಲ್ಲಾಗಿ ಮಾಡಿ ತಿಂತಿದ್ದಿದ್ದಕ್ಕೇ ಅವರುಗಳು ಯಾವ ಕಾಯಿಲೇನೂ ಬಾರದೆ ಎಷ್ಟು ಗಟ್ಟಿ ಮುಟ್ಟಾಗಿರ್ತಿದ್ರು' ಅಂತ ಹಳೆತಲೆಗಳು ತಮಗೆ ತಿಳಿದಷ್ಟೇ ಅರ್ಧಸತ್ಯಾನ ಮೆಲಕು ಹಾಕಬಹುದು

`ಆಹಾ ಹದಿನೆಂಟು ಮೊಳದ ಸೀರೆ ಉಟ್ಟರೆ ಎಂಥಾ ಲಕ್ಷಣ ಈಗಿನ ಕಾಲದವೂ ಇವೆ...' ಅಂತ ಮೂಗು ಮುರಿಯಬಹುದು

`ಹೋಳಿಗೆ,ಕಜ್ಜಾಯ,ಮುರುಕು ಅಂಥಾವೆಲ್ಲಾ ಯಾರಾದ್ರೂ ಮಾಡಿಕೊಟ್ರೆ ತಿನ್ನಬಹುದು ರೇಜಿಗೆ ಕೆಲಸವಪ್ಪಾ ನಾನು ಮಾಡೋದು ಕಲೀಲಾರೆ' ಅಂತ ಹುಡುಗಿಯರು ಹುಬ್ಬು ಹಾರಿಸುತ್ತಾ ಹೇಳಿ`ಹೇಗೂ ಅಂಗಡಿಲೇ ಸಿಗುತ್ತಲ್ಲಾ' ಅಂತ ಸಮಜಾಯಿಷಿ ಕೊಡಬಹುದು

ಮೆಚ್ಚಿ ಮೆಚ್ಚಿ ಮದುವೆಯಾದ ಊರ್ವಶಿ ನಮ್ಮಜ್ಜಿ ತರ ಅಡುಗೆ ಮಾಡುವುದಿಲ್ಲವೆಂದು ಕೊರಗುವ ಹುಡುಗ ಕಮ್ ಗಂಡಸು `ನೋಡೇ... ನೀನೂ ಸ್ವಲ್ಪ ಕಲೀ...' ಅಂತ ಅವಳ ಮೂತಿ ತಿವಿಯಬಹುದು

ದೊಡ್ಡವನನ್ನು ಕಾಲೇಜಿಗೂ, ಚಿಕ್ಕವಳನ್ನು ಹೈಸ್ಕೂಲಿಗೂ ಹೊತ್ತೊತ್ತಿಗೆ ರೆಡಿ ಮಾಡಿ ಕಳಿಸಿ `ಯಜಮಾನರ' ಡಬ್ಬವನ್ನೂ ಕಟ್ಟಿ ಕರ್ಚೀಪು ಕೈಗಿಡುವಲ್ಲಿ ಸೊಂಟನೋವು ಮರೆಯಬೇಕಾದ ನಲವತ್ತು ತಲುಪುತ್ತಿರುವ ಹೆಂಗಸು `ಉಸ್ಸ್ಯಪ್ಪಾ' ಅಂತ ತಾನೇ ಅಮೃತಾಂಜನ ಹಚ್ಚಿಕೊಳ್ಳುತ್ತಿರುವಾಗ `ಇನ್ ಮೇಲೆ ಒರಳಲ್ಲಿ ರುಬ್ಬಿ ಮಾಡು ರುಚಿಯಾಗಿರುತ್ತೆ... ನಮ್ಮಮ್ಮ ಮಾಡ್ತಿದ್ದ ರುಚೀ... ಆ ನಿನ್ ಮಿಕ್ಸಿ ಮೂಲೆಗಿಡು...'ಅಂತ ಯಜಮಾನರು ಅಪ್ಪಣೆ ಕೊಡಿಸಿದಾಗ ರೇಗ ಬಾರದಾ....?

********************
ಒಟ್ಟಿನಲ್ಲಿ ನಮ್ಮ ಸಮಾಜ ಒಂದು ಸಂಕ್ರಮಣ ಸ್ಥಿತಿಯಲ್ಲಿದೆಯಾ ಅಂತ ಅನುಮಾನ. ಹಳೆ ತಲೆಗಳಿಗೆ ಹಿಂದಿನದ್ದೇ ಕನವರಿಕೆ ನಮ್ ತರಾನೇ ಈಗಿನವರೂ ಮಾಡಲೀ ಎಂಬ ಹಟ. ನಾವೆಷ್ಟು ಕಷ್ಟ ಪಟ್ಟೆವು ಇವರುಗಳು ಎಷ್ಟು ಆರಾಮವಾಗಿದ್ದರಲ್ಲಾ ಎಂಬ ಸಂಕಟನಾ ಇವರಿಗೇ ಅಂತ ಕೆಲವೊಮ್ಮೆ ಅನ್ನಿಸದೇ ಇರುವುದಿಲ್ಲ

ಯಾವುದೇ ಜ್ಞಾನ ವಾಗಲೀ ಅದು ನಮ್ಮ ಮುಂದಿನವರಿಗೆ ಕಾಪಿಡಬೇಕಾದ ಆಸ್ತಿ ಎಂಬ ಸಣ್ಣ ತಿಳುವಳಿಕೆಯೂ ಇಲ್ಲದೆ, ತಾವೂ ಮಾಡದೆ ಅಕಸ್ಮಾತ್ ಮಾಡುವವರನ್ನೂ ಹಂಗಿಸುವ `ಚುರುಕು ಮತಿಯ'ಹೊಸ ಯುಗದ ಇಂದಿನವರು!
ಯಾರು ಹಿತವರು ಈ ಈರ್ವರೊಳಗೆ ???

**********************
ಕಳೆದ ವಾರದ ಒಂದು ಮಧ್ಯಾನ್ಹ ಇದ್ದಕ್ಕಿದ್ದ ಹಾಗೆ ಬಾಳಕದ (ಉಪ್ಪು)ಮೆಣಸಿನ ಕಾಯಿ ತಿನ್ನಬೇಕೆಂದು ನನಗೆ ಬಯಕೆಯಾಗಿಬಿಟ್ಟಿತು
ಸಣ್ಣ ಯೋಚನೆಯಂತೆ ಶುರುವಾದ ಅದು ಸಂಜೆ ಯಾಗುವಷ್ಟರಲ್ಲಿ ಬೃಹದಾಕಾರವಾಗಿ ಬೆಳೆದು ಕಚ್ಚಿ ಕೊರೆಯತೊಡಗಿತು ಹೊರಗೆ ಆಕಾಶದ ತುಂಬಾ ಮೇಘಮಾಲೆ ಮಳೆ ಬರ್ಲಾ ಬರ್ಲಾ ಅಂತಿತ್ತು
ಸರಿ ಇಂಡಿಯನ್ ಸ್ಟೋರ್ ನಲ್ಲಿ ಮೆಣಸಿನ ಕಾಯಿ ಹುಡುಕಿಕೊಂಡು ಹೊರಟೆ ಪುಣ್ಯಕ್ಕೆ ತಕ್ಕ ಮೆಣಸಿನಕಾಯಿ ಸಿಕ್ಕಿಯೂ ಬಿಟ್ಟಿತು ಮರುದಿನ ಕೂತು ಬಾಳಕದ ಮೆಣಸಿನ ಕಾಯಿ ಮಾಡಿ ಮುಗಿಸಿದೆ

ನನ್ನ ಆತುರಕ್ಕೆ ಬಿಸಿಲು ಬರಬೇಕಲ್ಲಾ...
ವಾರಾಂತ್ಯ ಧಾರಾಕಾರ ಮಳೆ
ವಿಧಿ ಇಲ್ಲದೇ ಈಗ ಮನೆಯೊಳಗೆ ಮೆಣಸಿನ ಕಾಯಿ ಒಣಗಿಸುತ್ತಿದ್ದೇನೆ
ಮನೆ ತುಂಬಾ ಹಸಿ ಮೆಣಸಿನ ಘಾಟು,ಜೀರಿಗೆ ಧನಿಯಗಳ ಘಮ್ ಘಮ ಒಂಥರಾ ಚೆನ್ನಾಗಿದೆ
ಆದರೆ ಸ್ವಲ್ಪ ಮೂಗು ಹಿಡೀತಾ ಇದೆ

*************************
ಮೊನ್ನೆ ನಮ್ಮ ಸ್ನೇಹಿತ ದಂಪತಿಗಳು ನಮ್ಮ ಮನೆಗೆ ಬಂದರು ನನ್ನ ಸ್ನೇಹಿತೆ ಮೊದಲು ಒಳಗೆ ಬಂದವಳು ಒಮ್ಮೆ ಜೋರಾಗಿ ಉಸಿರು ತೆಗೆದುಕೊಂಡು`ಏನೇ ಇದೂ ಹಳೇ ಕಾಲದ ಗೌರಮ್ಮನ ತರಾ...ಬಾಳಕ ಮಾಡ್ಕೊಂಡು... ಒಳ್ಳೇ ಅಜ್ಜಿ ನೀನೂ...ನೋಡೂ ಹೇಳ್ತಿದೀನಿ...ಈ ಗಂಡಸರಿಗೆ ಇದೆಲ್ಲಾ ಮಾಡಿಕೊಟ್ಟು ಕಲಿಸ ಬಾರದು ಆಮೇಲೆ ಅದೂ ಮಾಡೂ ಇದೂ ಮಾಡು ಅಂತ ತಲೆ ಮೇಲೇ ಕೂತ್ಕೋತಾರೆ' ಅಂದಳು

`ಅಮ್ಮಾ ತಾಯೀ.. ಬಾಳಕ ಮಾಡು ಅಂತ ಯಾರೂ ನನ್ನ ತಲೆ ಮೇಲೆ ಕೂತಿರಲಿಲ್ಲ ನಾನು ಹಾಗೆ ಕೂರಿಸಿ ಕೊಳ್ಳುವವಳೂ ಅಲ್ಲ ನನಗೇ ತಿನ್ನಬೇಕೂ ಅನ್ನಿಸಿದ್ದರಿಂದ ಮಾಡಿದ್ದು ಅಷ್ಟೇ..' ಅಂತ ನಾನು ಹೇಳುತ್ತಿರುವಾಗಲೇ ಮನೆಯೊಳಗೆ ಬಂದ ಅವಳ ಪತಿ ಮಹಾಶಯರು` ಹೇಯ್.. ಬಾಳಕದ ಮೆಣಸಿನ ಕಾಯಿ.. ಯಾವ ಕಾಲವಾಯಿತೂ ತಿಂದು.. ನಮ್ಮ ಅಮ್ಮ ಮಾಡ್ತಿದ್ದರು ಈಗಿನ ಕಾಲದವರಿಗೆ ನಮ್ಮದು ಸಂಪ್ರದಾಯ,ಸಂಸ್ಕೃತಿ ಏನೂ ಬೇಡಾ...ಇವಳೂ ಇದಾಳೆ...ನೋಡೂ ಸ್ವಲ್ಪ ಕಲೀ...'ಅಂತ ಉಪದೇಶಾಮೃತ ಶುರು ಮಾಡಿ ಬಿಟ್ಟರು!

ಹಳೆ ಕಾಲದ ಒಳ್ಳೆ ಮೌಲ್ಯಗಳನ್ನು ಉಳಿಸುವುದು (ಅದು ಬರೀ ಅಡುಗೆಗೇ ಸೀಮಿತ ಅಲ್ಲವಲ್ಲ) ಬರೀ ಹೆಂಗಸರ ಗುತ್ತಿಗೇನಾ... ಅದಕ್ಕೆ ನಿಮ್ಮ ಕೊಡುಗೆ ಏನು ಅಂತ ಆ ಪುಣ್ಯಾತ್ಮರನ್ನು ಕೇಳ ಬೇಕೆನ್ನಿಸಿತು
***********************

4 Comments:

Blogger Jagali bhaagavata said...

ತುಂಬ ಚೆನ್ನಾಗಿದೆ ಈ ಲೇಖನ.

ಅಂದಹಾಗೆ, ಪ್ರೇಮಕವನಗಳೆಲ್ಲಿ? ನಾನು ಟ್ಯೂಶನ್ ತಗೊಳ್ಳೊಣ ಅಂತ ನಿಮ್ಮ ಬ್ಲಾಗ್-ಗೆ ಬಂದ್ರೆ, ಇವತ್ತು ಶಾಲೆಗೆ ರಜೆ:-))

ಯಾವುದೇ ಜ್ಞಾನ ವಾಗಲೀ ಅದು ನಮ್ಮ ಮುಂದಿನವರಿಗೆ ಕಾಪಿಡಬೇಕಾದ ಆಸ್ತಿ ಎಂಬ ಸಣ್ಣ ತಿಳುವಳಿಕೆಯೂ ಇಲ್ಲದೆ.....ಈ ಥರ dialogue ಹೊಡೆದ್ಬಿಟ್ಟು, ಈಗ ಪ್ರೇಮಕವನಗಳನ್ನು ನಿಲ್ಲಿಸೋದು ಸರೀನಾ? ನೀವೇ ಹೇಳಿ:-)

ಬೇಕೇ ಬೇಕು, ನ್ಯಾಯ ಬೇಕು.
ಬೇಕೇ ಬೇಕು, ಹಿಂದಿನ ಪ್ರೇಮ-ದುರ್ಗ ಬೇಕು:-)

ಶಿವು, ಎಲ್ಲಿದ್ದೀರಿ? ಈ ಅನ್ಯಾಯದ ವಿರುದ್ಧ ಸಂಘಟಿತರಾಗಿ ಹೋರಾಡೋಣ:-D

8:57 PM  
Blogger Shiv said...

ಆ ಆಡುಗೆ ಸ್ಪರ್ಧೆ ನಿಜಕ್ಕೂ ಕುತೂಹಲಕಾರಿಯಾಗಿತ್ತು..
ಹಾಂ...ಹಾಗೇ ನಮ್ಮಲ್ಲೂ ಅ ತರ ಅಡುಗೆ ಸ್ಪರ್ಧೆ ಎರ್ಪಾಡಿಸಿದರೆ ಮುಗಿಯಿತು ಕತೆ !

ಯಾರು ಹಿತವರು ಈ ಈರ್ವರೊಳಗೆ? ಯಕ್ಷ ಪ್ರಶ್ನೆ !!

ಬಾಳಕ ಮೆಣಸಿನಕಾಯಿ ತೋರಿಸಿ ಬಾಯಲ್ಲಿ ನೀರು ಬರಿಸಿದ್ದೀರಾ...ನಮ್ಮ ಕಡೆಗೆ ಸ್ಪಲ್ಪ ಕಳಿಸಿ ಪುಣ್ಯ ಕಟ್ಟಿಕೊಳ್ಳಿ :)

12:54 PM  
Blogger Shrilatha Puthi said...

"ಲೇಸ್ ಗಳಿರುವ ಲಂಗ, ನವಿರಾದ ಕುಸುರಿ ಕೆಲಸದ ಹ್ಯಾಟ್"ಗಳ ವರ್ಣನೆ ಕೇಳಿ ನಾನು ಇತ್ತೀಚೆಗೆ ತಾನೇ ಓದಿದ ’Gone with the Wind' ಕಾದಂಬರಿಯ ಪಾತ್ರಗಳ ನೆನಪಾಯ್ತು.

ಮತ್ತೆ, ಬಾಳಕ ಮೆಣಸಿನಕಾಯಿಯ (ನಾವು ’ಸಂಡಿಗೆ ಮೆಣಸು’ ಅಂತೇವೆ) ಚಿತ್ರ ಬಾಯಲ್ಲಿ ನೀರೂರಿಸುವಷ್ಟು ಚೆನ್ನಾಗಿ ದೆ :-)

2:05 AM  
Blogger Shiv said...

ಭಾಗವತರೇ,
ನಿಮ್ಮ ಹೋರಾಟಕ್ಕೆ ನನ್ನ ಪೂರ್ಣ ಬೆಂಬಲವಿದೆ..
ನಮ್ಮ ಹೋರಾಟ ಶುರು ಮಾಡುವ ಮೊದಲೇ ಮಾಲಾ ಅವರು ನಿಮಗೆ-ನನಗೆ ಬೇಕಾದದ್ದು ಮತ್ತೆ ಚಿತ್ರ-ದುರ್ಗದಲ್ಲಿ ಅರಳಿಸಿದ್ದಾರೆ..

10:56 PM  

Post a Comment

Subscribe to Post Comments [Atom]

<< Home