ರೇನ್ ಲಿಲ್ಲಿ ತಂದ ನೆನಪು...
ಕಳೆದ ವಾರದ ಪನ್ನೀರು ಚಿಮುಕಿಸಿದಂಥಾ ಮಳೆಗೆ ಪುಟಪುಟನೆ ಮೇಲೇಳುತ್ತಿವೆ ರೇನ್ ಲಿಲ್ಲಿಗಳು. ಪುಟಾಣಿ ಮೊಲದ ಮರಿಗಳಂತೆ...ನನ್ನ ಅಂಗಳದಲ್ಲೂ ಅಲ್ಲೊಂದು ಇಲ್ಲೊಂದು ನಕ್ಷತ್ರದಂತೆ ಈ ಮಿನಿ ಸ್ಕರ್ಟ್ ಲಿಲ್ಲಿ ಲಲನೆಯರು ನಸುಗುತ್ತಿದ್ದಾರೆ.
ರೇನ್ ಲಿಲ್ಲಿಯರಿಗೆ ದೇಶ-ಕಾಲದ ಬೇಧವೇನಿಲ್ಲ.ಸ್ವಲ್ಪ ಉಷ್ಣತೆ ಹೆಚ್ಚಾದ ದಿನಗಳಲ್ಲಿ ಪನ್ನೀರಿನಂತೆ ನಾಲ್ಕೆಂಟು ಹನಿ ಬಿದ್ದರೆ ಸಾಕು ಎರಡೇ ದಿನದಲ್ಲಿ ಅರಳಿ ನಕ್ಕುಬಿಡುತ್ತಾರೆ
ಬಹುಕಾಲದಿಂದ ಕಾದ ಇನಿಯ ಮಿಂಚಂತೆ ಬಂದು ಬರಸೆಳೆದಾಗ ಅವಳ ತುಟಿಯಲ್ಲಿ ಮೂಡುವ ನಗೆಮುತ್ತಿನಂತೆ...
ಬಹುಶಃ ಇಂಡಿಯಾದ ಅಮ್ಮನ ಮನೆಯಲ್ಲೂ ರೇನ್ ಲಿಲ್ಲಿ ನಕ್ಕಿರಬೇಕು ಇಷ್ಟೊತ್ತಿಗೆ...
***************
ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಇಂಗ್ಲಿಷ್ ಎಂ.ಎ ಗೆ ಸೇರಿದ ಹೊಸತು. ಬೆಂಗಳೂರು,ಬೆಂಗಳೂರಿನ ಜನಭರಿತ ರಸ್ತೆಗಳು,ಹಾಸ್ಟೆಲ್ಲು,ಹಾಸ್ಟೆಲ್ಲಿನ ಊಟ ,ರಾಗಿಂಗು ಇವೆಲ್ಲದರ ಮಧ್ಯೆಸಿಕ್ಕು ದಿಕ್ಕು ತಪ್ಪಿದ ತಬ್ಬಲಿಯಂತಾಗಿದ್ದೆ.
ಈ `ಇಂಗ್ಲೀಷಿನ ಎಮ್ಮೆ' ಕಟ್ಟುವುದೂ ಬೇಡಾ... ಹಾಸ್ಟೆಲ್ಲೂ ಬೇಡಾ... ನಮ್ಮೂರಿಗೆ ,ನಮ್ಮ ಮನೆಗೆ ಓಡಿಹೋಗಿ ಬಿಡೋಣಾ ಅಂತ ದಿನಕ್ಕೆ ಸಾವಿರ ಸಲ ಅನ್ನಿಸುತ್ತಿತ್ತು...
***************
ಶೇಷಾದ್ರಿ ಪುರಂ ಕಾಲೇಜಿಗೆ ಪಿ.ಜಿ ಸೆಂಟರ್ ಸಿಕ್ಕಿದ್ದು ಬಲು ಸಂಭ್ರಮದ ವಿಷಯ ಅಂತ ಪ್ರಿನ್ಸಿಪಾಲರಿಗೂ ಮ್ಯಾನೇಜ್ಮೆಂಟಿನವರಿಗೂ ಅನ್ನಿಸಿಬಿಟ್ಟಿತ್ತು.ಬೆಂಗಳೂರು ಯೂನಿವರ್ಸಿಟಿಯವರೇ ಕಾಮನ್ ಎಂಟ್ರೆಂನ್ಸ್ ನಲ್ಲಿ ಆರಿಸಿದ ವಿದ್ಯಾರ್ಥಿಗಳನ್ನು ಇವರಲ್ಲಿಗೆ ಕಳಿಸಿ ಕೊಡುತ್ತಿದ್ದುದರಿಂದ ಕಾಲೇಜಿಗೆ ನಮ್ಮಿಂದ ಪೈಸೆಯಷ್ಟೂ ಲಾಭವಿಲ್ಲದಿದ್ದರೂ ಹುರುಪಿನಿಂದ ಎಂ.ಎ ತರಗತಿಗಳನ್ನು ಶುರು ಮಾಡಿ ಬಿಟ್ಟಿದ್ದರು ಆಗ ಎರಡನೇ ಬ್ಯಾಚ್ ನಮ್ಮದು.
ಯೂನಿವರ್ಸಿಟಿ ವಿದ್ಯಾರ್ಥಿಗಳಿಗೆ ಇದ್ದಂಥಾ ಸುಸಜ್ಜಿತ ಲೈಬ್ರರಿಯಾಗಲೀ,ಅನುಭವಸ್ಥ ಅದ್ಯಾಪಕರುಗಳಾಗಲೀ ನಮಗೆ ಲಭ್ಯವಿರಲಿಲ್ಲ ಈ ಕೊರತೆಗಳನ್ನುತುಂಬಿಕೊಡಲು ನಮ್ಮ ಹತ್ತೇ ಜನ ವಿದ್ಯಾರ್ಥಿಗಳ ತರಗತಿಗೆ ಮೌಂಟ್ ಕಾರ್ಮಲ್,ಎಂ.ಇ.ಎಸ್ ನಂಥಾ ಬೆಂಗಳೂರಿನ ಪ್ರಮುಖ ಕಾಲೇಜುಗಳ ಹೆಸರಾಂತ ಅಧ್ಯಾಪಕರುಗಳು(ಸ್ನೇಹಪೂರ್ವಕವಾಗಿ) ನಮಗೆ ಪಾಠ ಮಾಡಲು ಒಪ್ಪಿಕೊಂಡರು.ಹಾಗೆ ನಮ್ಮಲ್ಲಿಗೆ ಒಪ್ಪಿಬಂದವರೇ ಮಲ್ಲೇಶ್ವರಂ ನ ಎಂ.ಇ.ಎಸ್ ಕಾಲೇಜಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಲಲಿತಾ ಮೂರ್ತಿಯವರು
****************
ಲಲಿತ ಮೂರ್ತಿಯವರದ್ದು ತೆಳ್ಳಗಿನ ಆಳ್ತನ.ಸಾಮಾನ್ಯವಾಗಿ ಕಾಟನ್ ಸೀರೆಗಳನ್ನೇ ಉಡುತ್ತಿದ್ದರು.ಗಂಭೀರ ಮುಖಭಾವ,ಅಲ್ಲಲ್ಲಿ ಇಣುಕುತ್ತಿದ್ದ ಬಿಳಿ ಕೂದಲು,ವಿಧ್ವತ್ತು ತುಂಬಿದ್ದ ಕಣ್ನುಗಳು.ಸರಸರನೆ ವೇಗವಾಗಿ ನಡೆಯುವ ಶೈಲಿ... ಮಾತು ,ಧ್ವನಿ ಎರಡೂ ಖಚಿತ.ಕ್ಲ್ಯಾಸಿನ ಒಳಗೂ ಹೊರಗೂ ಅನವಶ್ಯಕವಾದ ಒಂದೇ ಒಂದು ಪದವೂ ಇಲ್ಲ
ಮೊದಲ ವರ್ಷ ನಮಗೆ ರೊಮ್ಯಾಂಟಿಕ್ ಮಾರ್ಗದ ಕವಿಗಳಾದ ವರ್ಡ್ಸ್ ವರ್ತ್,ಕೋಲ್ ರಿಡ್ಜ್ ಬರೆದ ಕವಿತಾ ಭಾಗಗಳನ್ನೂ ಮತ್ತು ಕಾವ್ಯ ಸಂಹಿತೆಗಳನ್ನೂ ಪಾಠ ಮಾಡಿಸುತ್ತಿದ್ದರು
ಹೀಗೇ ಬಹುಶಃ ಅವತ್ತು ನಮ್ಮೊಂದಿಗೆ ಅವರ ಎರಡನೆಯ ಭೇಟಿಯೋ,ಮೂರನೆಯದೋ ಇರಬೇಕು.ಕೋಲ್ ರಿಡ್ಜ್ ನ ಕಬ್ಬಿಣದ ಕಡಲೆ `ಭಯಾಗ್ರಾಫಿಯಾ ಲಿಟರೇರಿಯಾ'ದ ಬಗ್ಗೆ ಉಪನ್ಯಾಸ ಕೊಡುತ್ತಿದ್ದರು.
ಮನಸ್ಸು ಯಾಕೋ ಅಂದು ರೋಸಿ ಹೋಗಿತ್ತು ...ಆಗಲೇ ನನ್ನ `ತಬ್ಬಲಿಮನಸ್ಥಿತಿಯ' ಬಗ್ಗೆ ಹೇಳಿದೆನಲ್ಲ... ಪಾಠ ನಡೆಯುತ್ತಿರುವಾಗ ಸ್ವಲ್ಪ ಮಿಸುಕಾಡಿರ ಬೇಕು ನಾನು...ಲಲಿತಾ ಮೂರ್ತಿಯವರ ಕಣ್ನು ನನ್ನ ಮೇಲೆ ಬಿತ್ತು! ಎಬ್ಬಿಸಿ ನಿಲ್ಲಿಸಿ ಒಂದು ದೊಡ್ಡ ಮಂಗಳಾರತಿ ಮಾಡಿದರು!
*****************
ನಮ್ಮ ತರಗತಿ ಮುಗಿಸಿ ಮಲ್ಲೇಶ್ವರಂ ನಲ್ಲಿದ್ದ ತಮ್ಮ ಕಾಲೇಜಿಗೆ ಓಡಬೇಕಾಗಿತ್ತು ಅವರು.ಕ್ಲಾಸ್ ರೂಮಿನಿಂದ ಹೊರ ಬಂದು ಎರಡು ಹೆಜ್ಜೆ ನಡೆದಿದ್ದವರು ಏನನ್ನೋ ನೆನೆಸಿಕೊಂಡು ಹಿಂದಿರುಗಿ ನೋಡಿ ನನ್ನನ್ನು ಕೈ ಸನ್ನೆಯಿಂದ ಕರೆದರು.ನಾನು ಹೆದರುತ್ತಾ ಇನ್ನೊಂದು ಸುತ್ತಿನ ಮಂಗಳಾರತಿಗೆ ಸಿದ್ಧವಾಗುತ್ತಾ ಅವರ ಬಳಿ ಹೋದೆ
ಲಲಿತಾ ಮೂರ್ತಿಯವರು ಸ್ನೇಹದಿಂದ ನನ್ನ ಹೆಗಲು ತಟ್ಟಿ ` ಈಸ್ ದೇರ್ ಎನಿ ಪ್ರಾಬ್ಲಂ ವಿದ್ ಯೂ ಚೈಲ್ಡ್?' ಅಂದರು!
ನಾನು ಚುಟುಕಾಗಿ ಅಂದಿನ ನನ್ನ ಮನಸ್ಥಿತಿ ವಿವರಿಸಿ ಕಣ್ಣಂಚಿನಲ್ಲಿ ಧುಮುಕಲು ರೆಡಿಯಾಗಿ ನಿಂತಿದ್ದ ಹನಿ ವರೆಸಿಕೊಳ್ಲುತ್ತಾ ನನ್ನ ಅವತ್ತಿನ ವರ್ತನೆಗಾಗಿ ಕ್ಷಮೆ ಬೇಡಿದೆ
`ಓ...ಫೀಲಿಂಗ್ ಹೋಮ್ ಸಿಕ್....' ಅವರು ವ್ಯಸನದಿಂದ ತಲೆ ಅಲುಗಿಸುತ್ತಾ ಹೇಳಿದರು `ಮೈ ಡೋರ್ಸ್ ಆರ್ ಆಲ್ವೇಸ್ ಓಪನ್ ಫಾರ್ ಯೂ.. ವೆನ್ ಎವರ್ ಯು ಫೀಲ್ ಹೋಮ್ ಸಿಕ್ ಕಮ್ ಹೋಮ್.. ಓಕೇ..." ಮತ್ತೊಮ್ಮೆ ನನ್ನ ಹೆಗಲು ತಟ್ಟಿ ತಮ್ಮ ಎಂದಿನ ಸರ ಸರ ನಡುಗೆ ಯಲ್ಲಿ ಹೊರಟೇ ಹೋದರು..
******************
ಮತ್ತೆಂದೂ ಲಲಿತ ಮೂರ್ತಿಯವರಿಂದ ಮಂಗಳಾರತಿ ಮಾಡಿಸಿಕೊಳ್ಳಲಿಲ್ಲ ನಾನು. ಹಾಸ್ಟೆಲ್ಲೂ, ಬೆಂಗಳೂರೂ ನಿಧಾನವಾಗಿ ಅಭ್ಯಾಸವಾಯಿತು ಲಲಿತ ಮೂರ್ತಿಯವರ ಅಗಾಧ ಪಾಂಡಿತ್ಯದ ಅರಿವಾಗಿ ಸಾಹಿತ್ಯದ ಅಭ್ಯಾಸದಲ್ಲಿ ರುಚಿ ಹತ್ತಿತು.
ಅವರು ವರ್ಡ್ಸ್ ವರ್ತ್ ನ `ಡ್ಯಾಫೊಡಿಲ್ಸ್' ವಿವರಿಸುವಾಗ ನನ್ನ ಮನದ ಪರದೆಯ ಮೇಲೆ ಆ ಹತ್ತು ಸಾವಿರ ಹೂಗಳೇ ನಲಿಯುತ್ತಿದ್ದವು
ನಾನೂ,ಲಲಿತ ಮೂರ್ತಿಯವರೂ, ವರ್ಡ್ಸ್ ವರ್ತೂ ಒಟ್ಟಾಗಿ `ಯಾರೋ' ನದಿ ತೀರಕ್ಕೆ ವಿಹಾರ ಹೋಗುತ್ತಿದ್ದೆವು
*******************
ಎಂ.ಎ ಎರಡನೇ ವರ್ಷದ ಅಂತಿಮ ಪರೀಕ್ಷೆಗೆ ತಯಾರಾಗುತ್ತಿದ್ದೆ ಮೇ ತಿಂಗಳ ಬಿರು ಬೇಸಿಗೆಯ ದಿನಗಳವು ಲಲಿತ ಮೂರ್ತಿಯವರ ಪಠ್ಯ ಭಾಗದಲ್ಲಿ ಯಾವುದೋ ಒಂದು ಸಂದೇಹ ಬಂತು ಅವರಿಗೆ ಹಾಸ್ಟೆಲ್ ಎದುರಿನ ಬೂತ್ ನಿಂದ ಫೋನ್ ಮಾಡಿದೆ ( ಆಗ ನಮ್ಮ ಎಲ್ಲಾ ಅಧ್ಯಾಪಕರುಗಳೂ ತಮ್ಮ ಮನೆ ಪೋನ್ ನಂಬರ್ ಗಳನ್ನು ನಮಗೆ ಕೊಟ್ಟಿರುತ್ತಿದ್ದರು) ಲಲಿತ ಮೂರ್ತಿ ಪೋನ್ ನಲ್ಲಿ ವಿವರಿಸಲು ಯತ್ನಿಸಿದವರು `ನೀನು ಕಾಲೇಜಿಗೆ ಬಾ ನಾನು ನಿಮ್ಮ ಡಿಪಾರ್ಟ್ ಮೆಂಟ್ ಹೆಡ್ ಗೆ ಪೋನ್ ಮಾಡಿ ಅವರಿಂದ ಜವಾನನಿಗೆ ಪೋನ್ ಮಾಡಿಸಿ ಡಿಪಾರ್ಟ್ ಮೆಂಟ್ ಬಾಗಿಲು ತೆಗೆದಿಟ್ಟಿರಲು ಹೇಳುತ್ತೇನೆ' ಅಂದು ಬಿಟ್ಟರು
ನಾನು ಬಸ್ಸು ಹಿಡಿದು ಕಾಲೇಜಿಗೆ ಹೋದೆ.ಹಾಗೆ ಹೋಗುವಾಗ ಹಿಂದಿನ ವಾರದ ಮಳೆಗೆ ಹಾಸ್ಟೆಲ್ಲಿನ ಹುಲ್ಲು ಹಾಸಿನ ನಡು ನಡುವೆ ಯಾರೂ ಬೆಳೆಸದೆಯೇ ಬೆಳೆದು,ಬಿಳಿ ತಾರೆಗಳಂತೆ ಅರಳಿ ನಗುತ್ತಿದ್ದ ಒಂದಿಷ್ಟು ರೇನ್ ಲಿಲ್ಲಿ ಗಳ ಕಿತ್ತು ಗುಚ್ಛ ಮಾಡಿಕೊಳ್ಳುತ್ತಾ ಹೋದೆ
ಇಡೀ ಕಾಲೇಜು ಭಣ ಗುಟ್ಟುತ್ತಿತ್ತು.ಡಿಪಾರ್ಟ್ ಮೆಂಟಿನ ರೂಮಿನಲ್ಲಿ ಲಲಿತ ಮೂರ್ತಿ ಒಬ್ಬರೇ ನನಗಾಗಿ ಕಾಯುತ್ತಾ ಕೂತಿದ್ದರುಸುಮಾರು ಎರಡು ಘಂಟೆಗಳ ಕಾಲ ಇಡೀ ಪಠ್ಯ ಭಾಗವನ್ನು ನನಗೆ ವಿವರಿಸಿದರು ನಿನಗೆ ಅರ್ಥ ವಾಯಿತೇ ಎಂದು ಪದೇ ಪದೇ ಕೇಳಿ ತಿಳಿದುಕೊಂಡರು
ಅವರು ವಾಪಸ್ಸು ಹೊರಟಾಗ `ವರ್ಡ್ಸ್ ವರ್ತ ನ ಡ್ಯಾಫೋಡಿಲ್ಸ್ ಅನ್ನು ಪಾಠ ಮಾಡುವ ಮ್ಯಾಮ್ ಗೆ ರೇನ್ ಲಿಲ್ಲಿಯ ಉಡುಗೊರೆ ' ಎಂದು ಹೇಳುತ್ತಾ ಅವರಿಗೆ ರೇನ್ ಲಿಲ್ಲಿಗಳ ಗುಚ್ಛ ಕೊಟ್ಟೆ
ಲಲಿತ ಮೂರ್ತಿಯವರ ಮುಖ ಆನಂದದಿಂದ ಬೆಳಗಿ ಹೋಯಿತು
*******************
ನಾನೇನೂ ತರಗತಿಯ ಅತಿ ಬುದ್ದಿವಂತ ವಿದ್ಯಾರ್ಥಿಯಾಗಿರಲಿಲ್ಲ.ನನ್ನಿಂದ ಕಾಲೇಜಿಗೆ ರಾಂಕ್ ಆಗಲೀ,ಚಿನ್ನದ ಪದಕವಾಗಲೀ ನಿರೀಕ್ಷಿಸುವಂತಿರಲಿಲ್ಲ.ಆದರೂ ನನಗಾಗಿ ಅಂದು ಆ ಬೇಸಿಗೆಯ ಮದ್ಯಾನ್ಹ ಮಧ್ಯ ವಯಸ್ಸು ದಾಟಿದ್ದ ಲಲಿತ ಮೂರ್ತಿಯವರು ಎರಡು ಘಂಟೆ ಕಾಲ ಶ್ರಮ ಪಟ್ಟಿದ್ದರು.ಹೇಳಿಕೊಳ್ಳಲು ಹೋದರೆ ಅಸಲಿಗೆ ನಾನು ಅವರ ಕಾಲೇಜಿನ ವಿದ್ಯಾರ್ಥಿಯೇ ಆಗಿರಲಿಲ್ಲ.
ಅಂದು ಶೇಷಾದ್ರಿ ಪುರಂ ಕಾಲೇಜಿಗೆ ಬಾಗಿಲು ತೆರೆಸಿಕೊಂಡು ಬಂದು ಎಂ .ಇ.ಎಸ್ ಕಾಲೇಜಿನ ಇಂಗ್ಲಿಷ್ ವಿಭಾಗ ಮುಖ್ಯಸ್ಥೆ ಯಾದ ಅವರು ಈ ಒಂದೇ ಒಂದು ವಿದ್ಯಾರ್ಥಿಗೆ ಪಾಠ ಹೇಳರದಿದ್ದಿದ್ದರೆ ಯಾರೂ ಅವರನ್ನು ಆಕ್ಷೇಪಿಸುತ್ತಿರಲಿಲ್ಲ ಅಥವಾ ಹೇಳಿದ್ದಕ್ಕೆ ಸನ್ಮಾನ ಮಾಡಲಿಲ್ಲ ಯಾರಿಗೂ ಹೇಳದೇ ಬಂದು ಯಾರಿಗೂ ಕಾಯದೇ ಒಂದೇ ದಿನ ಬೆಳಗಿ ತೆರೆ ಮರೆಗೆ ಸರಿವ ರೇನ್ ಲಿಲ್ಲಿಯಂತೆ ಅಂದು ಅವರು ತಾವು ಬಂದ ಕೆಲಸ ಮುಗಿಸಿ ಜವಾನನ ಕೈಗೆ ಬೀಗದ ಕೈ ಗೊಂಚಲು ಕೊಟ್ಟು ಆಟೋ ಏರಿ ಹೊರಟು ಹೋದರು
*********************
ಬಿರು ಬೇಸಿಗೆಯ ದಿನಗಳಲ್ಲಿ ನೆಲದೊಳಗಿಂದ ಧಿಡೀರನೆ ಒಂದು ದಿನ ತಲೆ ಎತ್ತಿ ನಗುವ ರೇನ್ ಲಿಲ್ಲಿ ತರುವ ಆಹ್ಲಾದದಂತೆ ಇಂಥಾ ಅನಿರೀಕ್ಷಿತ,ಅಪರೂಪದ ಪ್ರಸಂಗಗಳು ಮಾನವತೆಯ ಮೇಲೆ ನನಗಿರುವ ನಂಬಿಕೆಯನ್ನು ಬಲಗೊಳಿಸುತ್ತಾ ಬಂದಿವೆಪ್ರತಿ ವರ್ಷ ರೇನ್ ಲಿಲ್ಲಿ ಹೂ ನೋಡಿದಾಗ ಲಲಿತ ಮೂರ್ತಿ ಮತ್ತವರ ಶುಭ್ರ ಅಂತಃಕರಣ ನೆನಪಾಗುತ್ತದೆ....
13 Comments:
ಮಾಲಾ ಅವರೇ,
ಓಹ್..ತುಂಬಾ ಹೃದಯಸ್ಪರ್ಶಿಯಾಗಿತ್ತು..
ಯಾವುದೇ ಒಂದು ಕಾಲೇಜಿನಲ್ಲಿ ಇನ್ನಾವುದೋ ಕಾಲೇಜಿನ ಲೆಕ್ಚರರ್ ಅದು ಒಬ್ಬ ವಿಧ್ಯಾರ್ಥಿಗೆ ಹೇಳಿಕೊಡೋದು..ಎಲ್ಲಿವೆ ಆ ಮೌಲ್ಯಗಳು?
as always ತುಂಬಾ ಚೆನ್ನಾಗಿ ಬಂದಿದೆ ಲಿಲ್ಲಿ ಪೋಟೋ
Good one Mala. I always remain optimist b'cause, I also have gone through such experiences. There is lot of hope. We should just believe and spread the goodness.
Meera.
ನಿಮ್ಮ ಇಂಗ್ಲೀಷ್ ಹೂವುಗಳ ಮೇಲಿನ ಮೋಹದ ಹಿನ್ನೆಲೆ ಈಗ ಸಂಪೂರ್ಣವಾಗಿ ಗೊತ್ತಾಯ್ತು ನೋಡಿ!
ನಮ್ಮ ಸಮಕಾಲೀನ ವಿದ್ಯಾಭ್ಯಾಸ ಪದ್ಧತಿಯ ಪ್ರಕಾರ ಗಂಭೀರವಾಗಿ ಆರ್ಟ್ಸ್, ಲಿಟರೇಚರ್ ಓದುವ ವಿದ್ಯಾರ್ಥಿಗಳು ಕಡಿಮೆಯಾಗಿರೋದು ಮುಂದೆ ಲಲಿತಾ ಮೂರ್ತಿಯವರಂಥ ಮೇಷ್ಟ್ರುಗಳು ಕಡಿಮೆಯಾಗೋದಕ್ಕೆ ಕಾರಣವಷ್ಟೇ ಅಲ್ಲ ಜೊತೆಯಲ್ಲಿ ಹಲವಾರು ಚಿಂತನೆಗಳನ್ನು ಹುಟ್ಟಿಸುತ್ತೆ.
ಇವತ್ತಿಗೂ ನಾನು ನನ್ನ ಕನ್ನಡ-ಹಿಂದೀ-ಇಂಗ್ಲೀಷ್ ಭಾಷಾ ಶಿಕ್ಷಕರನ್ನು ಬಹಳ ಪ್ರೀತಿಯಿಂದ ನೆನೆಸಿಕೊಳ್ಳುತ್ತೇನೆ, ಸಾಹಿತ್ಯ ಅನ್ನೋದು ಹೊಟ್ಟೆ-ತುಂಬಿದ-ಮೇಲಿನ ಮಾತಾದರೂ ಅದರ ರುಚಿ ಬಲ್ಲವನೇ ಬಲ್ಲ!
I just cant find words to express what I am feeling at this moment! ಸುಮ್ಮನೆ ಅಭ್ಯಾಸದಂತೆ ಪ್ಲಾನೆಟ್ ಕನ್ನಡಕ್ಕೆ ವಿಜಿಟ್ ಹಾಕಿದಾಗ ಡ್ಯಾಫೊಡಿಲ್ಸ್ ಅಂತ ನೋಡಿ ಕಣ್ಣು ಚುರುಕಾಯ್ತು...ನೋಡ್ದ್ರೆ ಲಲಿತಾ ಮೂರ್ತಿ ಅಂತಲೂ ಕಂಡುಬಿಡೋದಾ! ಪಟ ಪಟ ಅಂತ ಪೂರ್ತಿ ಬರಹ ಓದಿ ಮುಗಿಸಿದೆ. ನಮ್ಮ ಪ್ರೀತಿಯ ಲಲಿತಾ ಮೂರ್ತಿ ಮ್ಯಾಡಂ ಬಗ್ಗೆ ಬರೆದಿರೋ ಅನುಭವಗಳು...
ಅವರ ಬಹಳಷ್ಟು ಶಿಷ್ಯರ ಪಾಲಿಗೆ ಇಂಥ ಅನುಭವಗಳು ಬಂದಿರುತ್ತವೆ... ಪಾಠದ ಬಗೆಗೆ ಎಷ್ಟು ಶಿಸ್ತೋ ವಿದ್ಯಾರ್ಥಿಗಳ ಬಗ್ಗೆ ಅಷ್ಟೇ ಅಕ್ಕರೆ! personal-professional ಸಂಬಂಧಗಳನ್ನ ಅಷ್ಟು ಚೆನ್ನಾಗಿ ತೂಗಿಸಿದವರು ಬಹಳ ಮಂದಿ ಇರಲಾರರು! ಎಂ ಇ ಎಸ್ ನಲ್ಲಿ ಬಿ ಎ,ಶೇಷಾದ್ರಿಪುರಂ ಕಾಲೇಜಿನಲ್ಲಿ ಎಮ್ ಎ - ಹೀಗೆ ಒಟ್ಟು ಐದು ವರ್ಷ ಅವರ ಪಾಠ ಕೇಳೋಹಾಗಾಗಿದ್ದು ನನ್ನ ಪುಣ್ಯ ಅಂತಲೇ ಅನ್ನಿಸುತ್ತೆ!
ಮಾಲಾ, ನಿಮ್ಮ ಲೇಖನ ಬಹಳ ಚೆನ್ನಾಗಿದೆ. ನನಗೂ ಅಂತಹ ಗುರುಗಳು ಸಿಗಬಾರದೇ ಎನಿಸುತ್ತದೆ. ಬಿ.ಇ. ಓದುತ್ತಿದ್ದಾಗ ಒಣವಿಭಾಗಗಳ ಜೊತೆ ಭಾಷೆಯೂ ಇರಬಾರದೇ ಎಂದು ಒದ್ದಾಡಿದ್ದೇನೆ. :-{
ಮಗಳಿಗೊಂದು ಲಾಲಿ ಹಾಡು ಬರೆದವರೂ ನೀವೇ ಅಲ್ವಾ? ಬಹಳ ಚೆನ್ನಾಗಿತ್ತು. ’ಅಮ್ಮನ ಸಂಕ್ರಾಂತಿ’ ಕೂಡ ಸೊಗಸಾದ ಲೇಖನ. ಧನ್ಯವಾದಗಳು.
ಶಿವು ಅವರೇ,
ಮೆಚ್ಚುಗೆಗಾಗಿ ಧ.ವಾ
ಅಷ್ಟು ನಿರಾಶರಾಗಬೇಡಿ ಲಲಿತಾ ಮೂರ್ತಿಯವರಂಥಾ
ದೊಡ್ಡಮನಸ್ಸಿನವರು ಇಂದಿಗೂ ಇದ್ದಾರೆ
ಹೌದು ಮೀರಾ..
ದೇರ್ ಈಸ್ ಅಲ್ವೇಸ್ ಹೋಪ್ ಅಂಡ್ ದಟ್ಸ್ ಡ್ರೈವಿಂಗ್ ಫೋರ್ಸ್!
ಸತೀಶರಿಗೆ ದುರ್ಗಕ್ಕೆ ಸ್ವಾಗತ
ನನಗೆ ಯಾವುದೇ ಹೂವಾಗಲೀ ಇಷ್ಟ ನನ್ನ ಅಪ್ಪ ಅಮ್ಮನ ಪ್ರಭಾವ!(ಈ ಬಗ್ಗೆ ಇನ್ನೊಮ್ಮೆ ಬರೆಯುವೆ)
ನಿಮ್ಮ `ಹಲವಾರು ಚಿಂತನೆ ಗಳ ಬಗ್ಗೆ ಬೆಳಕು ಚೆಲ್ಲುವಿರಾ?
ಶ್ರೀ,
ದುರ್ಗಕ್ಕೆ ಸ್ವಾಗತ
ಎರಡು ವರ್ಷ ಲಲಿತಾ ಮ್ಯಾಮ್ ನ ಪಾಠ ಕೇಳಿದ ನಾನೇ ಲಕ್ಕಿ ಅಂದ್ಕೊಂಡಿದ್ದೆ. ನೀವು ನನಗಿಂಥಾ ಲಕ್ಕಿ!
ಅಂದ ಹಾಗೆ ಎಷ್ಟನೇ ಬ್ಯಾಚ್ ನಿಮ್ಮದು?
ಎಂ.ಎ ನಲ್ಲಿದ್ದ ಯಾವುದಾದರೂ ಅಧ್ಯಾಪಕರುಗಳ ಜೊತೆ ಸಂಪರ್ಕ ಇನ್ನೂ ಇದೆಯೇ?
ಪೂರ್ಣಿಮಾ ಅವರಿಗೆ
ದುರ್ಗಕ್ಕೆ ಸ್ವಾಗತ
ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು
ಹೌದು ಲಾಲಿ ಹಾಡು ನಾನು ಬರೆದ ಕಥೆ
ಅಮ್ಮನ ಸಂಕ್ರಾಂತಿ ನಿಮಗಿನ್ನೂ ನೆನಪಿದೆಯೇ?
ಸಂತೋಷ....
ಹೀಗೇ ಆಗಾಗ ದುರ್ಗಕ್ಕೆ ಬರುತ್ತಿರಿ
ಮಾಲಾ ಮೇಡಂ,
ರೇನ್ ಲಿಲ್ಲಿಗಳೇ ಹರಡಿರುವ ಹಸಿರು ಹುಲ್ಲುಗಾವಲಲ್ಲಿ ಅಡ್ಡಾಡಿದ ಅನುಭವ ತುಂಬಿದೆ ಮನಸ್ಸಿನ ತುಂಬ - ನಿಮ್ಮ ಬರಹ ಓದಿ. ಚಿತ್ರ -ಬರಹ -ಭಾವನೆ ಎಲ್ಲದರ ಅದ್ಭುತ ಮಿಶ್ರಣ. ನಿಮ್ಮ ಲಲಿತಾ ಮೂರ್ತಿಯವರಂತ ಮಾನವೀಯ ವ್ಯಕ್ತಿಗಳಿಂದಲೇ ಮಳೆಯಾಗುತ್ತಿರುವುದು. ಅವರ ಸೌಜನ್ಯವೇ ಹೂಗಳಾಗಿ ಅರಳುತ್ತಿರುವುದು.
ಈ ಚಂದದ ಬರಹಕ್ಕಾಗಿ ಧನ್ಯವಾದ.
ಮಾಲಾ ಮೆಡಮ್,
ಅಂತರಂಗ, ಕಾಲಚಕ್ರದಲ್ಲಿ ಈ ರೀತಿ ಚಿಂತನೆಗಳು ಅವಾಗವಾಗ ಬರ್ತಾ ಇರ್ತವೆ...ನೋಡಿ!
ನನ್ನ ಹಿಂದಿನ ಭಾರತ ಪ್ರವಾಸದಲ್ಲಿ ಒಬ್ಬರು ಕಿರುತೆರೆ ನಿರ್ಮಾಪಕ/ನಿರ್ದೇಶಕರನ್ನು ಭೇಟಿ ಆಗಿದ್ದೆ, ಅವರೂ ಕೂಡ 'ಉತ್ತಮ' ಶಿಕ್ಷಕರು ಕಡಿಮೆಯಾಗಿರುವುದರ ಬಗ್ಗೆ ಅದರ ಲಾಂಗ್‌ಟರ್ಮ್ ಪರಿಣಾಮಗಳ ಬಗ್ಗೆ ಕಾಳಜಿ ವ್ಯಕ್ತ ಪಡಿಸಿದ್ದರು. ನಮ್ಮ 'ಉತ್ತಮ' ವಿದ್ಯಾರ್ಥಿಗಳೆಲ್ಲ ಸೈನ್ಸೂ/ಇಂಜಿನಿಯರಿಂಗ್ ಮಾರ್ಗದಲ್ಲೇ ಮುಂದೆ ಹೋಗಿ 'ಸಾಧಾರಣ'ದವರು ಮಾತ್ರ ಕಲೆ, ಸಾಹಿತ್ಯ, ಹ್ಯುಮ್ಯಾನಿಟೀಸ್ ಸಬ್ಜೆಕ್ಟ್‌ಗಳಲ್ಲಿ ಅಸ್ಥೆ ವಹಿಸುವಂತೆ ಪರಿಸ್ಥಿತಿ ಇದ್ದಾಗ ಎಲ್ಲರ ಮೇಲೆ ಅದರ ಪರಿಣಾಮಗಳೇನು ಅನ್ನೋದು ಒಂದು ಚಿಂತನೆ ಅಷ್ಟೇ!
namaskara mala,
I was so happy to read this post about my favourite teacher Lalita Murthy. I studied in MES college and we had Lalita Murthy teach English during PUC. She was liked by all her students. When I read your post I really wished I was also an English MA student. Looking at your beautiful photographs and thoughts you make life around us so beautiful. Thanks a lot for your nice work.
Madhu
Post a Comment
Subscribe to Post Comments [Atom]
<< Home