Thursday, April 12, 2007

ರಾಜಕುಮಾರ



ಅವತ್ತೇಕೋ ಬೇಸರ... ಸೋಮಾರಿತನ... ಸೋಂಭೇರಿ ತರ ಹಾಸ್ಟೆಲ್ ರೂಮಿನ ಮಂಚದ ಮೇಲೆ ಬಿದ್ದುಕೊಂಡಿದ್ದೆ.ನೆಪ ಮಾತ್ರಕ್ಕೆ ಕೈಯಲ್ಲೊಂದು ಪುಸ್ತಕ ನಾಳೆ ನಾಡಿದ್ದರಲ್ಲಿ ಸಬ್ಮಿಟ್ ಮಾಡಬೇಕಾದ ಅಸೈನ್ಮೆಂಟುಗಳು ಏನೂ ಇಲ್ಲದ್ದರಿಂದ ಸೀರಿಯಸ್ಸಾಗಿ ಏನೂ ಓದಲೂ ಇರಲಿಲ್ಲ ಸಂಜೆಗೆಂಪಿನ ಸೂರ್ಯ ಕಿಟಕಿಯಿಂದ ಕಾಣುತ್ತಿದ್ದನಾನು ಆಕಳಿಸುತ್ತಾ ಕಿಟಕಿ ಪಕ್ಕದಲ್ಲಿದ್ದ ಮರದಲ್ಲಿನ ಕಪ್ಪು ಗೊದ್ದಗಳನ್ನು ತಪ್ಪು ತಪ್ಪಾಗಿ ಎಣಿಸುತ್ತಾ ಇದ್ದೆ
ಬಾಗಿಲು ತೆರೆದು ಬಂದ ಸಂಗೀತಾ `ಬಿಡುವಾಗಿದೀಯಾ ಮಾಲಾ...?' ಅಂತ ಕೇಳಿದಳು
ನಾನು `ಹುಂ.. ಉಹೂಂ..' ಮಧ್ಯದ ಯಾವುದೋ ರಾಗದಲ್ಲಿ ಏನೋ ಉತ್ತರಿಸಿ ಕವುಚಿ ಮಲಗಿಕೊಂಡೆ...
`ಅಣ್ಣಾವ್ರ ಮನೆಗೆ ಹೋಗ್ತಿದೀನಿ ಬರ್ತೀಯಾ...?' ಅಂದಳು
`ಇಲ್ಲಾ...' ನಾನು ಮಲಗಿಕೊಂಡೇ ಉತ್ತರಿಸಿದೆ
`ರಾಜ್ ಕುಮಾರ್ ಮನೆಗೆ ಕಣೇ...' ನಾನು ರಾಜ್ ಅಭಿಮಾನಿ ಎಂದು ಗೊತ್ತಿದ್ದ ಸಂಗೀತಾ ಸ್ಪಷ್ಟೀಕರಿಸಿದಳು
`ಇಲ್ಲಾ.. ನಾನು ಬರೋಲ್ಲ.. ಸೋಪನ್ನ ಕರಕೊಂಡು ಹೋಗು...'
ಅಂದು ಸಂಗೀತಾ ಸೋಪನ್ನು(ಸೋಫಿಯಾಳ ಮುದ್ದು ಹೆಸರು) ಕರಕೊಂಡು ರಾಜ್ ಮನೆಗೆ ಹೋದಳು
ನಮ್ಮ ಸೋಪಿಗೆ ಕನ್ನಡವೂ ಬಾರದು ರಾಜ್ ಚಿತ್ರಗಳ ಗಂಧ ಗಾಳಿಯೂ ಇಲ್ಲ
ಸದಾಶಿವ ನಗರದ ಮನೆಯಲ್ಲಿ ಆ ಸಂಜೆ ಪಿಳಿಪಿಳಿ ಕಣ್ನು ಬಿಡುತ್ತಾ ಕೂತಿದ್ದಿರಬೇಕು ಸೋಪು...
*****************
ಬಹುಶಃ ರಾಜ್ ಬ್ಯಾನರಿನ ಯಾವುದೋ ಹೊಸಚಿತ್ರಕ್ಕೆ ಸಂಗೀತಾ ಹಾಡುವವಳಿದ್ದಳು
ಆ ಸಂಭಂದವಾಗಿ ಮಾತಾಡಲು ಪಾರ್ವತಮ್ಮ ಸಂಗೀತಾನ್ನ ತಮ್ಮ ಸದಾಶಿವ ನಗರದ ಮನೆಗೆ ಬರಹೇಳಿದ್ದರು
ಸಂಗೀತಾ ಕಟ್ಟಿಯೊಂದಿಗೆ ನಾನು ಆಗಾಗ ಸಂಗೀತ ಸಂಜೆಗಳಿಗೆ,ಭಾವಗೀತೆಯ ಕಾರ್ಯಕ್ರಮಗಳಿಗೆ ಹೋಗುವುದಿತ್ತು.ಸಂಗೀತಾಗೆ ಜೊತೆ ಸಿಕ್ಕ ಹಾಗೂ ಆಯಿತು ನನಗೆ ಪುಕ್ಕಟ್ಟೆ ಪ್ರೋಗ್ರಾಂ ನೋಡಿದ ಖುಷಿ!
ಅಂದಿಗೆ ಭಾವಗೀತೆ ,ಕನ್ನಡ ಚಿತ್ರಗೀತೆಗಳ ಬಗ್ಗೆ ನಮ್ಮ ಹಾಸ್ಟೆಲ್ಲಿನಲ್ಲಿದ್ದ ಎಲ್ಲರಿಗಿಂತಾ ನನ್ನ ಜ್ಞಾನ ಚೆನ್ನಾಗಿತ್ತು
( ಹಾಳೂರಿಗೆ ಉಳಿದವನೇ ಗೌಡ!)
ಈ ಕಾರಣಕ್ಕಾಗೇ ಸಂಗೀತಾಗೆ ನನ್ನ ಕಂಡರೆ ಸ್ವಲ್ಪ ಇಷ್ಟ ಮತ್ತು ಅವತ್ತು ರಾಜ್ ಮನೆಗೆ ತನ್ನೊಂದಿಗೆ ಬಾ ಅಂತ ಕರೆದಿದ್ದು
************
ಅವತ್ತೇಕೆ ನಾನು ಸಂಗೀತಾ ಜೊತೆಗೆ ಹೋಗಲು ನಿರಾಕರಿಸಿದೆನೋ ಇಂದು ಸ್ಪಷ್ಟವಾಗಿ ನೆನಪಿಲ್ಲ
`ಅವರೆಲ್ಲಾ ದೊಡ್ಡ ಮನುಷ್ಯರಪ್ಪಾ ಯಾವುದೋ ಪ್ರೋಗ್ರ್ಯಾಂನಲ್ಲಿ ಅವರುಗಳು ಸ್ಟೇಜಿನ ಮೇಲಿರುವಾಗ ಹತ್ತರೊಳಗೊಬ್ಬಳಾಗಿ ನೋಡುವುದು ಬೇರೆ ಅವರ ಮನೆಗೇ ಹೋಗುವುದು ಬೇರೆ' ಅಂತೇನೋ ಅನ್ನಿಸಿದ್ದಿರಬೇಕು ನನಗೆ
ಸಂಗೀತಾ ಪಾರ್ವತಮ್ಮನವರೊಂದಿಗೆ ಖಾಸಗಿಯಾಗಿ ಮಾತಾಡುತ್ತಿರುವಾಗ ನಾನೊಬ್ಬಳೇ ಹಾಲ್ ನ ಸೋಫಾದಲ್ಲಿ ಕಣ್ ಕಣ್ ಬಿಡುತ್ತಾಕೂರುವುದು ಹೇಗೆ..? ಅಂತ ನಾನು ಅಂದು ಯೋಚಿಸಿದ್ದು ನೆನಪಿದೆ
ಅದೇನೋ ಅಂತೂ ನಾನು ಅವತ್ತು ರಾಜ್ ಮನೆಗೆ ಹೋಗಲಿಲ್ಲ
ಹೋಗಲಿಲ್ಲಾ ಅಂತ ಕಳೆದ ಹತ್ತು ವರ್ಷಗಳಲ್ಲಿ ಯಾವತ್ತೂ ಪರಿತಪಿಸಲಿಲ್ಲ ಪಶ್ಚಾತಾಪ ಪಡಲಿಲ್ಲ
************
ಕಳೆದ ವರ್ಷ ಏಪ್ರಿಲ್ ಮೊದಲ ವಾರದಲ್ಲಿ ದಟ್ಸ್ ಕನ್ನಡ ದಲ್ಲಿ ತಮ್ಮ ಮಗನ ಹೊಸ ಸಿನಿಮಾಕ್ಕೆ ಶುಭ ಹಾರೈಸಲು ಬಂದಿದ್ದ ರಾಜ್ ಪೋಟೋ ನೋಡಿದೆ ಎಷ್ಟು ಕಳೆ ಕಳೆ ಯಾಗಿ ಕಾಣುತ್ತಿದ್ದಾರಲ್ಲಾ ಅಂದುಕೊಂಡೆ.
ನಾಲ್ಕೈದು ದಿನಗಳ ನಂತರ ಒಂದು ಮಧ್ಯಾನ್ಹ ಹಾಗೇ ಹಾಸಿಗೆಯಲ್ಲಿ ಉರುಳಿಕೊಂಡು ನಮ್ಮಮ್ಮ ಕುಮಾರತ್ರಯರೆಂದು ಹೆಸರು ಪಡೆದಿದ್ದ ರಾಜ್ ಕುಮಾರ್,ಕಲ್ಯಾಣಕುಮಾರ್ ಮತ್ತು ಉದಯಕುಮಾರ್ ಬಗ್ಗೆ ಹೇಳುತ್ತಿದ್ದ ಅಭಿಮಾನದ ಮಾತುಗಳನ್ನು ನೆನಪಿಸಿಕೊಳ್ಳುತ್ತಾ ಎರಡು ಕುಮಾರ್ ಗಳು ಹೊರಟು ಹೋದರು ರಾಜ್ ಕುಮಾರ್ ಇನ್ನೂ ಹಲವು ವರ್ಷ ಚೆನ್ನಾಗಿರಲಪ್ಪಾ ಅಂದುಕೊಂಡೆ
ಸಂಜೆ ದಟ್ಸ್ ಕನ್ನಡ ನೋಡಿ ಎದೆ ಧಸಕ್ ಅಂದಿತು
ರಾಜ್ ಹೊರಟು ಹೋಗಿದ್ದರು...
**************
ರಾತ್ರಿ ಅರವಿಂದ ಮನೆಗೆ ಬಂದಾಗ ನಾನು ಮಂಕು ಹಿಡಿದವಳಂತೆ ಕೂತುಕೊಂಡಿದ್ದೆ
ಅರವಿಂದನಿಗೆ ಕನ್ನಡ ಬಾರದಿದ್ದರೂ ಅವನೂ ರಾಜ್ ಅಭಿಮಾನಿ
ರಾಜ್ ಸ್ಮರಣೆಯೋ ಎಂಬಂತೆ ತನ್ನ ಎಂದಿನ ಅಮೆರಿಕನ್ ಚಾನಲ್ಗಳನ್ನು ಬಿಟ್ಟು ರಾಜ್ ಅಭಿನಯದ ಹಾಡುಗಳ ವಿ.ಸಿ.ಡಿ ಹಾಕಿದ
ಟಿ.ವಿ ಪರದೆಯಲ್ಲಿ ರಾಜ್ ಹೊಸಬೆಳಕೂ ಅಂತ ಹಾಡುತ್ತಿದ್ದರೆ ನನಗೆ ಕಣ್ಣು ಕತ್ತಲಿಡುತ್ತಿತ್ತು
ಪ್ಲೀಸ್....ಟಿ.ವಿ ಆರಿಸುತ್ತೀಯಾ ಅಂತ ಕಿರುಚಿದೆ
ನಿನಗ್ಯಾಕೋ ಇವತ್ತು ಸರಿ ಇಲ್ಲಾ ಹೊರಗೆ ಸುತ್ತಾಡಿ ಬರುವ ಬಾ ಅಂತ ಕರಕೊಂಡು ಹೋದ
ಆಗ ಬಂತಲ್ಲಾ ಅಳು!`
"ಸಂಗೀತಾ ಅವತ್ತು ನನ್ನ ಕರೆದಾಗ ನಾನು ಹೋಗಬೇಕಾಗಿತ್ತು ಕಣೋ..ಹಾಗಂತ ಹತ್ತುವರ್ಷಗಳ ನಂತರ ಮೊದಲ ಬಾರಿಗೆ ಇವತ್ತು ಅನ್ನಿಸುತ್ತಿದೆ..."ಅಂತ ಹಲುಬಿದೆ
ಅರವಿಂದ ತಾನೇ ಏನು ಹೇಳುತ್ತಾನೆ? ಬರಿದೇ ತಲೆ ಆಡಿಸಿದ
ಒಂದೆರಡು ದಿನಗಳ ನಂತರ ಅವನು ತನ್ನ ಹೊಸ ಐಪಾಡ್ ನಲ್ಲಿ ಹಾಡಿಸಲೆತ್ನಿಸಿದ ರಾಜ್ ಹಾಡುಗಳಿಗೂ ಅದೇ ಗತಿಯಾಯಿತು
ರಾಜ್ ಹೊಸ ಬೆಳಕಿನ ಹಾಡು ಹಾಡುತ್ತಿದ್ದರೆ ನನಗೆ ಕಣ್ಣೀರ ಧಾರೆ...
ಅವರು `ಇದೇಕೆ ಇದೇಕೆ?' ಎಂದರೆ ನಾನು ಏನು ಹೇಳುವುದು?
ನಂತರದ ಆರು ತಿಂಗಳು ನಮ್ಮ ಮನೆಯಲ್ಲಿ ರಾಜ್ ಹಾಡುಗಳು ಹಾಕಲು ನಾನು ಬಿಡಲಿಲ್ಲ
********************
ಒಂದು ವಾರಾಂತ್ಯ ಅರವಿಂದ ಏಳೆಂಟು ರಾಜ್ ಅಭಿನಯದ ಚಿತ್ರಗಳ ವಿ.ಸಿ.ಡಿ.ತಂದು ಒಂದೊಂದೇ ಸಿನಿಮಾ ಹಾಕಿ ನೋಡಲಾರಂಭಿಸಿದ ನನ್ನನ್ನೂ ಬಾ ಅಂತ ಕರೆದು ಪಕ್ಕ ಕೂರಿಸಿಕೊಂಡ
ಹಾಗೆ ಇಡೀ ವಾರ `ಗಂಧದ ಗುಡಿ,ಪ್ರೇಮದ ಕಾಣಿಕೆ,ಹೊಸ ಬೆಳಕು,ಸಮಯದ ಗೊಂಬೆ,ರವಿಚಂದ್ರ ಮೊದಲಾದ ಚಿತ್ರಗನ್ನು ನೋಡಿದೆವು
ಆಗನ್ನಿಸಿತು....
ರಾಜ್ ಇಲ್ಲ ಮತ್ತು ರಾಜ್ ಇಲ್ಲೇ ಇದ್ದಾರೆ....
ಅದೇ ಭಾವವೇ ಮನದಲ್ಲಿ ಇಂದೂ ಇದೆ

5 Comments:

Blogger Satish said...

ನನಗೂ ಅದೊಂದೇ ಕೊರಗು...ರಾಜ್ ಅವರನ್ನು ಮುಖತಃ ನೋಡಲಾಗಲಿಲ್ಲವಲ್ಲಾ ಎಂದು!
ಹೀಗೇ ದಿನೇ-ದಿನೇ ಒಬ್ಬೊಬ್ರೇ ಹೋಗ್ತಾ ಇರೋದನ್ನ ನೋಡಿದ್ರೆ ಬಹಳ ಬೇಸರ ಅನ್ಸುತ್ತೆ.

2:18 PM  
Blogger Sushrutha Dodderi said...

ತುಂಬಾ ಆಪ್ತ ಬರಹ...

2:15 AM  
Blogger ಸುಪ್ತದೀಪ್ತಿ suptadeepti said...

ಹೋದವರು ಹೋದರೆನ್ನುವ ಬದಲು ಏನು ಕೊಟ್ಟು ಹೋದರು ಅನ್ನುವುದನ್ನು ನೆನೆಸಿಕೊಳ್ಳೋಣ. ಮುಂದೊಂದು ದಿನ ನಾವೂ ಹೊರಟುಹೋದಾಗ ನಮ್ಮ ಕಿರಿಯರಿಗಾಗಿ ಏನನ್ನು ಕೊಡಬಲ್ಲೆವು, ಅದರ ಬಗ್ಗೆ ಯೋಚಿಸಿ ಆ ದಿಕ್ಕಲ್ಲಿ ಹೆಜ್ಜೆ ಇಡೋಣ. ಯಾರೂ ಶಾಶ್ವತ ಅಲ್ಲ ಅನ್ನುವುದು ಗೊತ್ತಿದ್ದೂ ನಮ್ಮ ಉಸಿರಿರುವವರೆಗೂ ಉಳಿದೆಲ್ಲರೂ ಇರಬೇಕೆಂದು ಇಚ್ಛಿಸುವುದು ಸರಿಯೇ?

ಸಂದವರ ನೆನಪುಗಳು ನಿಂದರದೇ ಬಾಳು.

11:41 AM  
Blogger Shiv said...

ಮಾಯಾ ಅವರೇ,

ನೀವು ರಾಜ್ ಮನೆಗೆ ಹೋಗದೆ ಇರೋದು ನಿಮ್ಮನ್ನು ಹೇಗೆ ಕಾಡ್ತಿದೆ ಅನ್ನೋದು ಅರ್ಥ ಆಗುತ್ತೆ..ಯಾಕೆಂದರೆ ಇದೇ ರೀತಿ ಸಂಕಟ ನನ್ನ ಹುಡುಗಿ ಪಡ್ತಿದಾಳೆ. ತೇಜಸ್ವಿಯವರಿಗೆ ಇಷ್ಟವಾದ ಅಣಬೆ ತಗೊಂಡು ಹೋಗಿ ಕೊಡಲಿಲ್ಲ ಅಂತಾ..

11:27 PM  
Blogger Mahantesh said...

tumdba sogasaada barah...
raja namma nimmalle idare annodu suLLalla

9:29 AM  

Post a Comment

Subscribe to Post Comments [Atom]

<< Home