Wednesday, April 25, 2007

ಐಶ್ ಮದುವೆ

ಅಬ್ಬಾ.. ಅಂತೂ ಐಶ್ವರ್ಯ-ಅಭಿಷೇಕರ ಮದುವೆ ಮುಗಿಯಿತಲ್ಲಾ...'
ಎಲ್ಲರ ಬಾಯಿಂದ ಹೊರಡುತ್ತಿರುವ ಮಾತು!
ಮಾಧ್ಯಮಗಳು ಈ ಮದುವೆಗೆ ಕೊಟ್ಟ ಪ್ರಚಾರ ವಾಕರಿಕೆ ತರಿಸುವಂತಿತ್ತು. ಬೇರೆಲ್ಲಾ ಪ್ರಚಲಿತ ವಿಷಯಗಳನ್ನು ಕಡೆಗಣಿಸಿ ಸಿನಿಮಾನಟರ ವೈಯಕ್ತಿಕ ವಿಷಯಕ್ಕೆ ಇಷ್ಟು ಪ್ರಾಮುಖ್ಯತೆ ಕೊಡುವ ಅಗತ್ಯ ಖಂಡಿತಾ ಇರಲಿಲ್ಲ.ಇದು ನಮ್ಮ ಸಮಾಜದ ಯಾವ ಮಗ್ಗುಲನ್ನು ಎತ್ತಿ ತೋರಿಸುತ್ತದೆ ಅಂತ ಯೋಚಿಸಿದಾಗ ನಗಬೇಕೋ ಅಳಬೇಕೋ ತಿಳಿಯುವುದಿಲ್ಲ

***************
ಹೀಗೆಲ್ಲಾ ಬರೆದ ಮಾತ್ರಕ್ಕೆ ನಾನು ಐಶ್ಯರ್ಯ ದ್ವೇಷಿ ಅಂತ ನೀವೇನೂ ಯೋಚಿಸ ಬೇಕಿಲ್ಲ. ಐಶ್ ಕಂಡರೆ ಅವಳ ಸ್ನಿಗ್ಧ ಸೌಂದರ್ಯಕ್ಕಾಗಿ ನನಗೂ ಇಷ್ಟವೇ.ಒಂದು ಕಾಲದಲ್ಲಿ ವಿಪರೀತ ಅನ್ನಿಸುವಷ್ಟು ಇಷ್ಟ ಇದ್ದುದ್ದೂ ನಿಜ...
ಆ ಹಳೆ ಕಥೆಯನ್ನೇ ನಾನೀಗ ಹೇಳ ಹೊರಟಿರುವುದು

*************
ಐಶ್ ವಿಶ್ವ ಸುಂದರಿಯಾಗಿ ಆಯ್ಕೆಯಾದಾಗ ಅವಳ ಸರ್ ನೇಮ್ ಅನ್ನು `ರಾಯ್' ಅಂತ ತಪ್ಪಾಗಿ ವ್ಯಾಖ್ಯಾನಿಸಿ ಐಶ್ ಬೆಂಗಾಲಿ ಎಂಬ ಭ್ರಮೆ ಎಲ್ಲರಿಗೂ ಕೆಲಕಾಲ ಉಂಟಾಗಿತ್ತು ಉತ್ತರದವರು ಅದರಲ್ಲೂ ಬೆಂಗಾಲಿಗಳು ಮಾತ್ರ ಸುಂದರರು,ಬುದ್ದಿವಂತರು ಎಂಬ ಭ್ರಮೆ ಭಾರತದಲ್ಲಿ ವ್ಯಾಪಕವಾಗಿದೆ.(ಬಾಲಿವುಡ್ ನಲ್ಲಿ ಮೆರೆಯುವ ಸುಂದರಿಯರಲ್ಲಿ ಬಹುಪಾಲು ದಕ್ಷಿಣದವರೇ ಆಗಿದ್ದರೂ ದಕ್ಷಿಣದವರು ಎಂದರೆ ಕೆಟ್ಟ ತಮಿಳು ಶೈಲಿಯಲ್ಲಿ ಹಿಂದಿ ಮಾತಾಡುವ ಕಪ್ಪುಮುಖದವರು ಎಂಬುದು ಸಾಮಾನ್ಯ ನಂಬಿಕೆ!)ಆಗಿನ ಕೇಂದ್ರ ವಾರ್ತಾಮಂತ್ರಿಯಾಗಿದ್ದ ಕಲ್ಪನಾಥ್ ರಾಯ್ ಐಶ್ ಅನ್ನು ಅಭಿನಂದಿಸಿದ್ದೂ ಆದ ಮೇಲೆ ಈ ಸದರಿ `ರೈ 'ಮಂಗಳೂರಿನ ಬಂಟರ ಹುಡುಗಿ ಅಂತ ಗೊತ್ತಾಗಿದ್ದು ಮತ್ತು ವಿಶ್ವ ಸುಂದರಿ ಕನ್ನಡದವಳು ಅಂತಾ ನಮ್ಮಂಥಾ ಕನ್ನಡದ ಟೀನೇಜರ್ ಗಳಿಗೆ ಪುಳಕವಾಗಿ ಹೋಗಿದ್ದು!

***************
ಸರಿ ಶುರುವಾಯಿತಲ್ಲಾ ಐಶ್ಯರ್ಯಳ ಫೋಟೋಗಳನ್ನು ಕತ್ತರಿಸಿ ಇಟ್ಟುಕೊಳ್ಳುವುದೇನೂ, ಅವಳ ಲೇಟೇಸ್ಟ್ ಸಿನಿಮಾ ಬಗ್ಗೆ ವಿಶ್ಯ ಸಂಗ್ರಹಿಸುವುದೇನೂ ನಮ್ಮ(ಅಂದರೆ ನನ್ನ ಮತ್ತು ನನ್ನ ತಂಗಿಯ) ಗೆಳತಿಯರ ಗುಂಪಿನಲ್ಲಿ ಪೈಪೋಟಿ ಶುರುವಾಗಿ ಬಿಟ್ಟಿತು
ಐಶ್ ನಮ್ಮೆಲ್ಲರ ಆರಾಧ್ಯ ದೇವತೆಯಾಗಿ ಬಿಟ್ಟಳು.
ನಮ್ಮೆಲ್ಲಾ ಈ ಹುಚ್ಚಾಟಗಳನ್ನು ಕೊನೆಗಣ್ಣಿನಲ್ಲೇ ಗಮನಿಸುತ್ತಾ ಇರುತ್ತಿದ್ದ ಅಮ್ಮ ಸುಮ್ಮನೆ ಒಂದು ಕಿರುನಗು ನಕ್ಕು ಬಿಡುತ್ತಿದ್ದರು (ಈ ಕಿರು ನಗುವಿಗೆ ಕಾರಣ ನಂತರ ಹೇಳುವೆ)

*********
ಅದೇ ಸಮಯದಲ್ಲಿ ನನ್ನ ಅಕ್ಕ ತಿಪಟೂರಿನ ಪೋಸ್ಟಾಫೀಸಿನಲ್ಲಿ ಕೆಲಸ ಮಾಡುತ್ತಿದ್ದಳು ಮತ್ತು ದಿನವೂ ನಾವಿದ್ದ ತುಮಕೂರಿನಿಂದ ತಿಪಟೂರಿಗೆ ಅಪ್ ಅಂಡ್ ಡೌನ್ ಮಾಡುತ್ತಿದ್ದಳು
ನನ್ನಕ್ಕ ಗಂಭೀರ ವ್ಯಕ್ತಿತ್ವದವಳು ಮತ್ತು ಕೊಂಚ ಸಿಡುಕಿ ನನ್ನ ಮತ್ತು ನನ್ನ ತಂಗಿ ತರ ಹುಡುಗಾಟದ ಕಪಿ ಸ್ವಭಾವದವಳಲ್ಲ.ಇಂಥಾ ಅಕ್ಕ ಒಮ್ಮೆ ಸಂಜೆ ಮನೆಗೆ ಬಂದವಳು ನಮ್ಮಿಬ್ಬರಿಗೂ ರೋಮಾಂಚನವಾಗುವಂಥಾ ಸುದ್ದಿಯೊಂದನ್ನು ಹೇಳಿದಳು ನಮ್ಮ ದೇವತೆ ಐಶ್ವರ್ಯಳ ಚಿಕ್ಕಪ್ಪ ಅವಳ ಆಫೀಸಿಗೆ ವರ್ಗವಾಗಿ ಬಂದಿದ್ದರು!
*************
ನಾವಿಬ್ಬರೂ ಅವಳನ್ನು ವಿಚಾರಣೆ ಮಾಡಲು ಶುರು ಮಾಡಿದೆವು
ಎಷ್ಟು ದಿನವಾಯಿತು ಐಶ್ವರ್ಯ ಚಿಕ್ಕಪ್ಪ ನಿಮ್ಮ ಆಪೀಸಿಗೆ ಬಂದೂ?
ಹತ್ತತ್ರ ಒಂದು ತಿಂಗಳಾಗಿರಬೇಕು....
ಮತ್ತೆ ಈಗ ಹೇಳ್ತಿದೀಯಲ್ಲಾ...
(ನಮ್ಮಿಬ್ಬರಿಗೂ ಅಕ್ಕನ ಮೇಲೆ ಭಯಂಕರ ಕೋಪ ಬಂತು)
ನನಗೆ ಗೊತ್ತಾಗಿದ್ದೇ ಇವತ್ತು...ಯಾಕಂದ್ರೆ ಅವರು ಹೇಳಿದ್ದೇ ಇವತ್ತು...
ಅವರಿಗೆ ಅಷ್ಟೂ ಗೊತ್ತಾಗಲ್ವಾ ಒಂದು ತಿಂಗಳಿಗೆ ಇವತ್ತಾ ಹೇಳೋದೂ...
(ನಮ್ಮ ಭಯಂಕರ ಕೋಪ ಈಗ ಚಿಕ್ಕಪ್ಪನ ಕಡೆ ತಿರುಗಿತು!!)

************
ಅಂತೂ ನಾವಿಬ್ಬರೂ ದೊಡ್ಡ ಮನಸ್ಸು ಮಾಡಿ ನಮ್ಮಗಳ ಕೋಪ ನುಂಗಿಕೊಂಡು ಮುಂದುವರಿದೆವು
ಸರಿ ಅವರ ಹೆಸರೇನೂ..?
ಶೆಟ್ರೂ... ಅಂತಾ...
ಅವ್ರು ಐಶ್ಯರ್ಯ ರೈ ಗೆ ಹೇಗೆ ಚಿಕ್ಕಪ್ಪ?
ಶೆಟ್ರ ಹೆಂಡ್ತಿ ಐಶ್ವರ್ಯ ಚಿಕ್ಕಮ್ಮ...(ಐಶ್ಯರ್ಯಳ ಅಮ್ಮ ವೃಂದಾ ರೈ ತಂಗಿ)
ಹೀಗೇ ಇನ್ನೇನ್ನೇನು ಕೇಳಿದೆವೋ ಅಕ್ಕ ಏನೇನು ಹೇಳಿದಳೋ ಇಂದು ನೆನಪಿಲ್ಲ
ಅಂತೂ ನಮ್ಮ ಗೆಳತಿಯರ ಗುಂಪಿನಲ್ಲಿ ನಮ್ಮಿಬ್ಬರ ಸ್ಥಾನ ಬಲು ಮೇಲಕ್ಕೇರಿ ಬಿಟ್ಟಿತು

**************
ದಿನವೂ ಅವಳು ಆಫೀಸಿನಿಂದ ಮನೆಗೆ ಬರುವುದೇ ಕಾದಿದ್ದು ಅವಳನ್ನು ನಮ್ಮ ಪ್ರಶ್ಣೆಗಳ ಸುರಿಮಳೆಯಿಂದ ದಿಕ್ಕುಗೆಡಿಸುತ್ತಿದ್ದೆವು
ಪಾಪ... ಅವಳು `ಇವತ್ತು ಶೆಟ್ರು ಐಶ್ವರ್ಯ ಬಗ್ಗೆ ಏನೂ ಹೇಳಲಿಲ್ಲ ' ಎಂದರೆ ನಮಗೆ ಸಮಾಧಾನವೇ ಇಲ್ಲ
ಯಾಕೆ ಹೇಳಲಿಲ್ಲ ಅಂತ ಕೋಪ ಮಾಡಿಕೊಳ್ಳುತ್ತಿದ್ದೆವು

ಸಂಸಾರವಂದಿಗರಾದ ಜವಾಬ್ದಾರಿಯುತ ಮಧ್ಯವಯಸ್ಸಿನ ವ್ಯಕ್ತಿಯೊಬ್ಬರಿಗೆ ತಮ್ಮಹೆಂಡತಿಯ ಬಳಗದ `ವಿಶ್ವಸುಂದರಿಯ'
ಬಗ್ಗೆ ದಿನದಿನವೂ ಮಾತಾಡುವಂತದ್ದೇನಿರುತ್ತೆ ಎಂಬ ಸಿಂಪಲ್ ಸತ್ಯಾನೂ ಅರ್ಥ ಮಾಡಿಕೊಳ್ಳದಷ್ಟು ಅಂಧಾಭಿಮಾನಿಗಳಾಗಿ ಬಿಟ್ಟಿದ್ದೆವು!

***************
ಶೆಟ್ರು ಮಂಗಳೂರಿನ ಹತ್ರದ ತಮ್ಮಊರಲ್ಲಿ ದೊಡ್ಡ ಪೂಜೆ ಮಾಡಿಸಿದರಂತೆ ಅದಕ್ಕೆ ಐಶ್ವರ್ಯ ಬಂದಿದ್ದಳಂತೆ ಇವತ್ತು ಫೋಟೋಆಲ್ಬಂ ತಂದಿದ್ದರು ಅಂತ ಒಮ್ಮೆ ಅಕ್ಕ ಹೇಳಿದಳು(ಆಫೀಸಿನ ಯಾರ ಮನೆಯಲ್ಲಿ ಯಾವ ಸಮಾರಂಭವಾದರೂ ನಂತರ ಫೋಟೋಆಲ್ಬಂ ತೊಗೊಂಡು ಹೋಗಿ ತೋರಿಸುವುದು ಅಕ್ಕನ ಆಫೀಸಿನಲ್ಲಿದ್ದ ರೂಢಿ)
ನಾವು ನೋಡಲು ಯಾಕೆ ನೀನು ಆಲ್ಬಮ್ ತರಲಿಲ್ಲ ಅಂತ ನಾವುಗಳು ಮತ್ತೆ ಸಿಟ್ಟು ಮಾಡಿಕೊಂಡೆವು
ಆಗ ಅಕ್ಕ ಇನ್ನೊಂದು ವಿವರ ಹೇಳಿದಳು`ಶೆಟ್ಟರ ಮಗಳಿಗೆ ಐಶ್ವರ್ಯ ಐನೂರರ ನೋಟೊಂದನ್ನು ಕಾಣಿಕೆಯಾಗಿ ಕೊಟ್ಟಳಂತೆ'
(ಆಗ ಐನೂರು ರೂ ನೋಟು ಈಗಿನಂತೆ ಸಸ್ತಾ ಆಗಿರದೆ ಅಪರೂಪವಾಗಿತ್ತು)
ನನ್ನ ತಂಗಿಗೆ ಆಲ್ಬಂ ನೋಡಲಾಗಲಿಲ್ಲವಲ್ಲಾ ಎಂಬ ನಿರಾಸೆಯಿಂದುಂಟಾದ ಕೋಪ ಇನ್ನೂ ಇಳಿದಿರಲಿಲ್ಲ
`ಅಯ್ಯೋ... ವಿಶ್ವ ಸುಂದರಿಗೆ ವರ್ಷ ಪೂರ್ತಿ ವರ್ಲ್ಡ್ ಟೂರ್ ಅಲ್ಲದೇ ಸಾಕಷ್ಟು ಒಡವೆವಸ್ತ್ರಗಳು ಬಹುಮಾನವಾಗಿ ಸಿಗುತ್ತಂತೆತಂಗಿಯಾಗ ಬೇಕಾದವಳಿಗೆ ಬರೀ ಒಂದು ಐನೂರರ ನೋಟು ಹಿಡಿಸಿ ಮುಗಿಸಿ ಬಿಟ್ಟಳಾ ನಿಮ್ ಐಶ್ವರ್ಯ ರೈ... ತುಂಬಾ ಜಿಪುಣಿಯಪ್ಪಾ...' ಅಂದು ಎದ್ದು ಹೋದಳು
ಇವಳಿಗೇ ಏನೋ ನಷ್ಟವಾದವಳಂತೆ!

*******************
ಮುಂದೆ ನಾನು ಇಂಗ್ಲಿಷ್ ಎಮ್ಮೆ ಕಟ್ಟಿಕೊಂಡು ಹಾಸ್ಟೆಲ್ ಸೇರಿದೆ.
ಐಶ್ ಬಗ್ಗೆ ಅಭಿಮಾನ ಪಡಲು ಪುರುಸೊತ್ತು ಇರಲಿಲ್ಲ
ನಾನು ಹುಡುಗರಿಗೆ ಇಂಗ್ಲೀಶು ಕಲಿಸಲು ಪರದಾಡುತ್ತಿರುವಾಗ ತಂಗಿ ಎಂ.ಕಾಂ ಸೇರಿದ್ದಳು
ಅಕ್ಕನಿಗೆ ಮದುವೆಯಾಗಿ ತಿಪಟೂರು ಬಿಟ್ಟಿದ್ದಳು
ಮತ್ತು ನಮ್ಮಿಬ್ಬರಿಗೂ ಐಶ್ ಹುಚ್ಚು ಬಿಟ್ಟಿತ್ತು!

******************
ಒಂದು ಕೆ.ಜಿ.ಅಕ್ಕಿಗೆ ಎಷ್ಟು ರುಪಾಯಿ ಎಂದು ಗೊತ್ತಿರದ ವಯಸ್ಸಿನಲ್ಲಿ ನಮಗಿದ್ದ ಐಶ್ ಹುಚ್ಚಿನಂಥಾ ಯಾವುದೋ ಒಂದು ಹುಚ್ಚು ಸಾಮಾನ್ಯವಾಗಿ ಎಲ್ಲರಿಗೂ ಇರುತ್ತೆ
ಅಮ್ಮ ದಿನಕ್ಕೆ ಮೂರು ಹೊತ್ತು ಬಿಸಿಬಿಸಿಯಾಗಿ ಮಾಡಿ `ಆರಿ ಹೋಗುತ್ತೆ ಬಾರೇ...'ಅಂತ ಕರೀತಿರುವಾಗ ಅದರ ಬೆಲೆ ಗೊತ್ತಾಗುವುದಿಲ್ಲ!
ಕಾಲೇಜು,ಟ್ಯೂಶನ್ನು,ಹಾಸ್ಟೆಲ್ಲಿನ ಫೀಸು ಅಪ್ಪ ಎಷ್ಟು ಕಷ್ಟ ಪಟ್ಟು ಕಟ್ಟುತ್ತಿದ್ದಾರೆ ಎಂಬ ಯೋಚನೆ ಅಪ್ಪಿ ತಪ್ಪಿಯೂ ಹತ್ತಿರ ಸುಳಿಯುವುದಿಲ್ಲ

ಏಕೆಂದರೆ ಅದು ಹೂಮನಸ್ಸಿನ ಹುಡುಗಾಟದ ವಯಸ್ಸು!

************
ಈ ಹೂಮನಸ್ಸು,ಹುಡುಗಾಟ ಪ್ರತಿಯೊಬ್ಬರ ಜೀವನದಲ್ಲೂ ಬಂದು ಹೋಗುವಂಥದ್ದೇ
ಆದರೆ ಬಂದಿದ್ದು"ಹೋಗದೇ"ಅಲ್ಲೇ ಉಳಿದು ಬಿಟ್ಟರೆ ಮಾತ್ರ ಕಷ್ಟ ಕಷ್ಟ...
ಆಗ ಆ ಮನುಷ್ಯನೂ "ಅಲ್ಲೇ" ಉಳಿದು ಬಿಡುತ್ತಾನೆ.

ಮಾತ್ರವಲ್ಲ,ಮಿಕ್ಕವರಿಗೆ ತಲೆ ನೋವಾಗುತ್ತಾನೆ

***************
ಹದಿಹರೆಯದ,ಜೀವನದ ಅನುಭವವಿಲ್ಲದ ಕಾಲೇಜು ಹುಡುಗ ಹುಡುಗಿಯರಿಂದ ಇಂಥಾ ಅಪಕ್ವ ನಡವಳಿಕೆಯನ್ನು"ಕೆಲಕಾಲ" ಸಹಿಸಿಕೊಳ್ಳಬಹುದೇನೋ
ಕಾಲ,ಮುಂಬರುವ ಜೀವನದ ಕಷ್ಟನಷ್ಟಗಳು ಅವರಿಗೆ ಪಕ್ವತೆ ತಂದು ಕೊಡುತ್ತವೆ ಎಂದು ಆಶಿಸಬಹುದು

ಆದರೆ ಪ್ರಜಾಪ್ರಭುತ್ವದ ಜೀವನಾಡಿಗಳಲ್ಲೊಂದಾದ ಪತ್ರಿಕೋದ್ಯಮದಂಥಾ(ಮತ್ತು ಇತರ ಸುದ್ದಿ ಮಾದ್ಯಮಗಳು)ಜವಾಬ್ದಾರಿಯುತ ಮಾಧ್ಯಮದ ಅಪಕ್ವಬೇಜವಾಬ್ದಾರಿಯುತ ನಡವಳಿಕೆಯನ್ನು ಸಹಿಸಿಕೊಳ್ಳಲಾಗದು

ಐಶ್ ಮದುವೆಯಂಥಾ ಕ್ಷುಲ್ಲಕ ವಿಷಯದ ಬಗ್ಗೆ ಮಾಧ್ಯಮಗಳು ತೋರಿಸಿದ ಅನಗತ್ಯ ಉತ್ಸಾಹ ನೋಡಿದಾಗ ಖೇದವಾಗುತ್ತದೆ. ಇವರುಗಳ `ಮಚ್ಯೂರಿಟಿ'ಯ ಮಟ್ಟ ಇಷ್ಟೇನಾಅಂತ ಯೋಚನೆಯಾಗುತ್ತದೆ

ದುಡ್ಡು ದುಡಿವುದೊಂದೇ ಕಾರಣಕ್ಕಾಗಿ ಸುದ್ದಿ ಬರೆಯುವವರು,ಪ್ರಕಟಿಸುವವರು ಏನಾದ್ರೂ ಬರಕೊಂಡು ಹೋಗಲಿ
ಆದರೆ ನಮ್ಮ ಸಮಾಜ ಎತ್ತ ಸಾಗುತ್ತಿದೆ ಅಂತ ಯೋಚಿಸಿದಾಗ ಮಾತ್ರ ಗಾಭರಿಯಾಗುತ್ತದೆ...
______________________________________




ಟಿಪ್ಪಣಿ-
೧)ಈಗೊಂದೆರಡು ವರ್ಷಗಳ ಹಿಂದೆ ಒಂದು ದಿನ ನಾನೂ ಅಮ್ಮನೂ ಹಳೆಯ ಟ್ರಂಕು ತಡಕುವಾಗ ಅದರಲ್ಲಿ ಅಮ್ಮನ ಬಿ.ಎಸ್ಸಿ ಯ ನೋಟ್ಸು ಸಿಕ್ಕಿತು ಮುಖ ಪುಟಕ್ಕೆ ಅಮ್ಮಹಾಕಿದ್ದ `ರೊಟ್ಟಿ'ನಲ್ಲಿ ನಗುತ್ತಿದ್ದವಳು ಅಂದಿನ ಜನಪ್ರಿಯ ನಟಿ `ಸಾಧನಾ! ನಾನು `ಇದೇನಮ್ಮಾ' ಅಂತಾ ಆಚ್ಚರಿಯ ದನಿಯಲ್ಲಿ ರಾಗ ಎಳೆದಾಗ`ನೀವುಗಳು ಐಶ್ವರ್ಯ ರೈ ರೊಟ್ಟು ಹಾಕ್ಕೊತಿರ್ಲಿಲ್ವೇ...'ಅಂತ ಅಮ್ಮ ನಕ್ಕುಬಿಟ್ಟರು!

೨)ಐಶ್-ಅಭಿ ಜೀವನ ಸುಖಮಯವಾಗಲಿ

6 Comments:

Blogger ಸುಪ್ತದೀಪ್ತಿ suptadeepti said...

ವಯಸ್ಸು, ಅಂಧಾಭಿಮಾನ, ಅನುಕರಣೆ, ಅತಿ-ಹುಚ್ಚು... ಎಲ್ಲ ಸರಿ, ಒಂದಿಷ್ಟು ಇರುವಂಥದ್ದೇ! ಇವೆಲ್ಲ ಇಲ್ಲದಿದ್ದವರು ನಾರ್ಮಲ್ಲೇ? ಅಲ್ಲವೇ?

11:19 PM  
Blogger Shiv said...

ಮಾಯಾ ಅವರೇ,

ತುಂಬಾ ಸೊಗಸಾಗಿ ಮೂಡಿ ಬಂದಿದೆ ನಿಮ್ಮ ಲೇಖನ..

ಹೌದಲ್ವಾ ಎಲ್ಲರಿಗೂ ಒಂದಲ್ಲಾ ಒಂದು ಕಾಲದಲ್ಲಿ(ಹರೆಯದಲ್ಲಿ) ಯಾವುದೋ ಒಂದು ಈ ತರ ಹುಚ್ಚು ಬಂದಿರುತ್ತೆ..

ನೀವು ಹೇಳಿದ ಹಾಗೆ ಪತ್ರಿಕೋದ್ಯಮಕ್ಕೆ ಈಗ TOI ವ್ಯಾಧಿ ಹಿಡಿದಿದೆ ಅನಿಸುತ್ತೆ. ಹೇಗಿದ್ದರೂ ಅವರ ಹತ್ತಿರ ಸಿದ್ದ ಉತ್ತರವಿದೆಯಲ್ವಾ..ಜನ ಇಷ್ಟ ಪಡೋದನ್ನ ನಾವು ಕೊಡ್ತೀವಿ

11:23 PM  
Blogger ಸುಪ್ತದೀಪ್ತಿ suptadeepti said...

ಶಿವ್, ದುರ್ಗದೊಡತಿ ಮಾಲಾ ಮಾಯಾ ಆಗಿದ್ದು ಯಾವಾಗ?

10:59 PM  
Blogger Shiv said...

ಮಾಲಾ ಅವರೇ,
ನಿಮ್ಮ ಹೆಸರನ್ನು ತಪ್ಪಾಗಿ ಬರೆದಿದ್ದಕ್ಕೆ ಕ್ಷಮೆಯಿರಲಿ !

ಸುಪ್ತದೀಪ್ತಿಯವರೇ,
ಎಲ್ಲಾ ಮಾಯೆ :)

1:17 PM  
Anonymous Anonymous said...

'ಅಬ್ಬಾ.. ಅಂತೂ ಐಶ್ವರ್ಯ-ಅಭಿಷೇಕರ ಮದುವೆ ಮುಗಿಯಿತಲ್ಲಾ...'
ಇಲ್ಲಾ ಮೆಡಮ್, ನಮ್ಮೂರ್ ಪಡ್ಡೇ ಹುಡುಗ್ರು ಬೇಜಾನ್ ದುಕ್ಕಾ ಮಾಡ್‌ಕಂಡೋರೆ, ಐಶ್ ಮದ್ವೇ ಆತು, ಮಾಧುರಿ ಹಾದಿನೇ ಹಿಡಿತಾಳ್ ಅವ್ಳಿನ್ನು ಅಂದ್‍ಕೊಂಡೂ...

8:58 AM  
Anonymous Anonymous said...

ಹೋಯ್, ಅವರ ಮದುವೆ ಆಗಿ honey+moon ಕೂಡಾ ಮುಗೀತು. ನೀವಿನ್ನೂ ಕನಸು ಕಾಣ್ತಾ ಇದ್ದೀರ?

4:31 PM  

Post a Comment

Subscribe to Post Comments [Atom]

<< Home