ಬಾಡಿದ ಹೂ...
ನನ್ನ ತಂಗಿ ತುಮಕೂರಿನ ಸೋಮೇಶ್ವರ ಶಾಲೆಯಲ್ಲಿ ಓದುತ್ತಿದ್ದಾಗ ಅವಳ ಒಬ್ಬರು ಮಿಸ್ ಅವಳಿಗೂ ಅವಳ ಸ್ನೇಹಿತೆಯರಿಗೂ ಬಹು ಪ್ರಿಯವಾಗಿದ್ದರು.ಮಿಸ್ ನ ಬಗ್ಗೆ ದಿನವೂ ಮನೆಯಲ್ಲಿ ಬಂದು ವರದಿ ಒಪ್ಪಿಸುತ್ತಿದ್ದಳು.`ನಂ ಮಿಸ್ ಅಷ್ಟು ಒಳ್ಳೆಯವರು ಇಷ್ಟು ಒಳ್ಳೆಯವರು....,ಮಿಸ್ಸು ಎಷ್ಟು ಚೆನ್ನಾಗಿ ಪಾಠ ಮಾಡ್ತಾರೆ, ಮಿಸ್ಸಿಗೆ ಕೋಪಾನೇ ಬರಲ್ಲ... ಇವತ್ತು ಮಿಸ್ ಏನ್ ಹೇಳುದ್ರು ಗೊತ್ತಾ...,ಮಿಸ್ ನನ್ನ ಇವತ್ತು ಹೊಗಳುದ್ರು...,ಮಿಸ್ ಎಷ್ಟು ಚೆನ್ನಾಗಿದ್ದಾರೆ ..., ಮಿಸ್ ಇವತ್ತು ಹೊಸ ಸೀರೆ ಉಟ್ಟು ಬಂದಿದ್ರು... ಹೀಗೆ...
ಒಟ್ಟಿನಲ್ಲಿ ಅವರ್ಯಾರೋ ಮಿಸ್ಸು ತಮ್ಮ ವಿದ್ಯಾರ್ಥಿಗಳ ಮನದ ತುಂಬಾ ಆವರಿಸಿಕೊಂಡು ಬಿಟ್ಟಿದ್ದರು
ಹೀಗಿರುವಾಗ ಒಮ್ಮೆ `ನಂ ಮಿಸ್ಸಿಗೆ ಮದುವೆಯಂತೆ ಇನ್ನು ಒಂದು ತಿಂಗಳು ಅವರು ಸ್ಕೂಲಿಗೆ ಬರುವುದಿಲ್ಲವಂತೆ' ಅಂತ ತುಂಬಾ ಬೇಜಾರು ಮಾಡಿಕೊಂಡು ಹೇಳಿದಳು ಅವಳ ಬೇಜಾರು ನೋಡಿ `ಮದ್ವೆ ಮಾಡಿಕೊಂದು ವಾಪಸ್ಸು ಬರ್ತಾರೆ ಬಿಡು' ಅಂತ ಅವಳನ್ನು ಸಮಾಧಾನ ಮಾಡುವ ಹೊತ್ತಿಗೆ ಅಮ್ಮನಿಗೆ ಕಲಿತ ಬುದ್ದಿ ಎಲ್ಲಾ ಖರ್ಚಾಗಿತ್ತು
ಮಕ್ಕಳೆಲ್ಲಾ ಕಾದಿದ್ದೂ ಕಾದಿದ್ದೇ... ಮಿಸ್ ಯಾವಾಗ ವಾಪಸ್ಸು ಬರ್ತಾರೆ ಅಂತಾ...ಅಂತೂ ಮಿಸ್ಸು ವಾಪಸ್ಸು ಬಂದರು ನನ್ನ ಅಮ್ಮನನ್ನೂ ಸೇರಿಸಿ ತಂಗಿಯ ಸ್ನೇಹಿತೆಯ ಅಮ್ಮಂದಿರೆಲ್ಲಾ ಸಮಾಧಾನದ ಉಸಿರು ಬಿಟ್ಟರು!
********************
ನಂತರವೂ ಮಿಸ್ ನ ಬಗ್ಗೆ ತಂಗಿ ಆಗಾಗ ಹೇಳುತ್ತಿದ್ದಳಾದರೂ ಯಾಕೋ ಅದರಲ್ಲಿ ಉತ್ಸಾಹ ಇರುತ್ತಿರಲಿಲ್ಲ. ` ಮಿಸ್ ಯಾಕೋ ಸಪ್ಪಗಿದ್ರು...ಮಿಸ್ಸಿಗೆ ತಲೆನೋವು ಬಂದಿತ್ತು ಇವತ್ತು...ಅಂತೇನೋ ಒಂದೆರಡು ಬಾರಿ ಹೇಳಿದ ನೆನಪು `ಒಮ್ಮೆ ಮಿಸ್ ನ ಮುಖ ಕೈಯೆಲ್ಲಾ ಗಾಯ ಆಗಿಬಿಟ್ಟಿತ್ತಮ್ಮಾ'ಅಂತ ಆತಂಕದಿಂದ ಹೇಳಿದ್ದಳು
ಪರೀಕ್ಷೆ ಹತ್ತಿರ ಬರುತ್ತಿದ್ದುದರಿಂದ ಓದಿನಲ್ಲಿ ಸೀರಿಯಸ್ ಆಗಿ ಮಿಸ್ ಬಗ್ಗೆ ಮಾತಾಡುವುದು ಕಡಿಮೆ ಮಾಡಿದ್ದಾಳೆಂದುಕೊಂಡು ಅಮ್ಮ ಸುಮ್ಮನಾಗಿಬಿಟ್ಟರು ನಾವುಗಳೂ ನಂ ನಮ್ಮ ಪರೀಕ್ಷೆಗಳಿಗೆ ಓದುವ ಭರದಲ್ಲಿ ಅವಳ ಹತ್ತಿರ ಅವಳ ಮಿಸ್ ಬಗ್ಗೆ ಕೇಳಲು ಸಮಯ ಇರುತ್ತಿರಲಿಲ್ಲ
ಒಂದು ದಿನ ಬೆಳಗ್ಗೆ ಶಾಲೆಗೆ ಹೋದವಳು ಅರ್ಧಗಂಟೆಯಲ್ಲೇ ಅಳುತ್ತಾ ಮನೆಗೆ ಬಂದಳು. ಅಮ್ಮ`ಏನಾಯ್ತೇ..ಏನಾಯ್ತೇ...ಅಂತ ಕೇಳಿದರೆ ಬಿಕ್ಕಿ ಬಿಕ್ಕಿ ಅಳುತ್ತಾ `ನಂ ಮಿಸ್ಸು...ನಂ ಮಿಸ್ಸೂ.. ಅನ್ನುತ್ತಿದ್ದಳೇ ಹೊರತು ಬೇರೇನೂ ಹೇಳುತ್ತಿರಲಿಲ್ಲ. `ನಿಮ್ ಮಿಸ್ಸು ನಿಂಗೆ ಏನಾದ್ರೂ ಬೈದ್ರೇನೇ...ಹೊಡದ್ರ...ಅಮ್ಮ ಎಲ್ಲಾ ಕೇಳಿ ಆಯಿತು ಯಾವುದಕ್ಕೂ ಉತ್ತರವಿಲ್ಲ...
ಕೊನೆಗೆ ಪಕ್ಕದ ಮನೆಯರು ವಿಷಯ ತಿಳಿಸಿದರು` ವರದಕ್ಷಿಣೆ ಸಾಕಷ್ಟು ಕೊಡಲಿಲ್ಲ ಅಂತ ನಿಮ್ಮ ಮಗಳ ಸ್ಕೂಲಿನ ಮಿಸ್ಸನ್ನ ಅವರತ್ತೆ ಮನೆಯವರು ಸೀಮೆ ಎಣ್ನೆ ಹಾಕಿ ಸುಟ್ಟು ಬಿಟ್ಟರಂತೆ... ಇವತ್ತಿನ ಲೋಕಲ್ ಪೇಪರಲ್ಲಿ ಬಂದಿದೆ...'
***************
ರಾತ್ರಿ ಎಲ್ಲಾ ತಂಗಿಗೆ ಕೆಂಡದಂಥಾ ಜ್ವರ ಏನೇನೋ ಕನವರಿಸುತ್ತಿದ್ದಳು. ಅವಳು ಪೂರ್ತಿಯಾಗಿ ಹುಶಾರಾಗುವ ವರೆಗೂ ಶಾಲೆಗೆ ಕಳಿಸಲು ಆಗುವುದಿಲ್ಲಾ ಅಂತ ಹೆಡ್ಮಿಸ್ಸಿಗೆ ಹೇಳಲು ಅಮ್ಮ ಹೋದಾಗ `ತುಂಬಾ ಮಕ್ಕಳು ನಿಮ್ಮ ಮಗಳ ಹಾಗೇನೇ ಅಪ್ ಸೆಟ್ ಆಗಿಬಿಟ್ಟಿದ್ದಾರೆ ಆ ಮಿಸ್ಸು ಮಕ್ಕಳ ಫೇವರೆಟ್ ಆಗಿದ್ರು' ಅಂತ ಹೆಡ್ಮಿಸ್ಸು ಅಮ್ಮನಿಗೆ ಹೇಳಿದರಂತೆ
ಬೆಂಕಿ ,ಸೀಮೇ ಎಣ್ಣೆ, ಅಯ್ಯೊ ಸುಡ್ ಬೇಡೀ..' ಅಂತೆಲ್ಲಾ ಮಕ್ಕಳು ನಿದ್ದೆಯಲ್ಲೂ ಎಚ್ಚರದಲ್ಲೂ ಪದೇ ಪದೇ ಹೇಳುತ್ತಾ ಭಯ ಪಡುತ್ತಿದ್ದಾರೆಂದೂ ಅಮ್ಮಂದಿರು ಮಾತಾಡಿ ಕೊಳ್ಳುತ್ತಿದ್ದದ್ದು ನನಗೆ ನೆನಪಿದೆ
*****************
ನನ್ನ ತಂಗಿ ಪೂರ್ತಿಯಾಗಿ ಸಮಾಧಾನ ಮಾಡಿಕೊಳ್ಳಲು ಮೂರು-ನಾಲ್ಕು ತಿಂಗಳೇ ಹಿಡಿಯಿತು. ಅವಳ ಸ್ನೇಹಿತೆಯರಿಗೂ ಬಹುಶಃ ಅಷ್ಟೇ ಸಮಯ ಹಿಡಿದಿರಬೇಕು
*****************
ಈ ಎಲ್ಲಾ ಸಂಗತಿ ನಡೆದು ಹತ್ತಿರ ಹತ್ತಿರ ಇಪ್ಪತ್ತು ವರ್ಷಗಳಾಗುತ್ತಾ ಬಂತು
ಈ ಇಪ್ಪತ್ತು ವರ್ಷಗಳಲ್ಲಿ ಭಾರತದ ಚಿತ್ರ ಸಾಕಷ್ಟು ಬದಲಾಗಿದೆ
ವಿಜ್ಞಾನ ,ತಂತ್ರ ಜ್ಞಾನ,ಸಾಫ್ಟ್ ವೇರು,ಹಾರ್ಡ್ ವೇರು ಅಂತೆಲ್ಲಾ ಪ್ರಗತಿಗಳಾಗಿವೆ
2015 ರ ಹೊತ್ತಿಗೆ ಇಂಡಿಯಾನೇ ಸೂಪರ್ ಪವರ್ ಅಂತೆ ಅಂತ ಯಾರಾದರೂ ಹೇಳಿದಾಗ ಮನಸ್ಸು ಹೆಮ್ಮೆಯಿಂದ ಉಬ್ಬುತ್ತೆ
ಆದರೆ ನನ್ನ ತಂಗಿಯ ಮಿಸ್ಸಿನ ಕಥೆ ಇವತ್ತಿಗೂ ಮತ್ತೆ ಮತ್ತೆ ಮರುಕಳಿಸುತ್ತಿದೆ
********************************
ಎಲ್ಲಿ ಹೆಂಗಸರು ಪೂಜೆಗೊಳ್ಳುತ್ತಾರೋ ಅಲ್ಲಿ ದೇವತೆಗಳು ನೆಲೆಸುವರಂತೆ (ಯತ್ರ ನಾರ್ಯಾಸ್ತು ಪೂಜ್ಯಂತೆ ರಮಂತೇ ತತ್ರ ದೇವತಾ...)
ಎಲ್ಲಿ ಹೆಂಗಸರನ್ನು ಸುಡಲಾಗುತ್ತದೋ, ಹುಟ್ಟುವ ಮೊದಲೇ ಹೊಸಕಿ ಹಾಕಲಾಗುತ್ತದೋ ಅಲ್ಲಿ ಯಾರು ನೆಲೆಸುತ್ತಾರೆ???
********************************
ನಾನು ಕಾಣದೇ ಹೋದ ನನ್ನ ತಂಗಿಯ ಮಿಸ್ಸಿಗೆ,
ಮತ್ತು ಅಂಥಹ ನೂರಾರು ಸುಟ್ಟು ಕರಕಲಾದ ಹೂಗಳಿಗೆ,
ಪ್ರಪಂಚಕ್ಕೆ ಕಣ್ನು ಬಿಡುವ ಮೊದಲೇ ಹೊಸಕಲ್ಪಟ್ಟ ನೂರಾರು ಕಂದಮ್ಮಗಳಿಗೆ....
13 Comments:
ಮಾಲಾ, ಇಂಥ ಮಿಸ್ಸುಗಳನ್ನು, ಅಂಥ ಕಂದಮ್ಮಗಳನ್ನು ಕಾಡುವವರೂ ಇಂದಿನ ದಿನದ "ಹೀರೋಯಿನ್"ಗಳೇ, ನೋವು ದುಪ್ಪಟ್ಟು ಮಾಡುವ ವಿಷಯ ಅದು. ಸೊಸೆ ವರದಕ್ಷಿಣೆ ತರಲಿಲ್ಲ, ಅಥವಾ ಸಾಕಾಗಲಿಲ್ಲ ಅಂದಾಗ ಕಟ್ಟಿಕೊಂಡ ಗಂಡನ ಜೊತೆ ಅತ್ತೆಯೂ ಇವಳ ಪರವಾಗಿ ನಿಂತರೆ..!? ಹುಟ್ಟಲಿರುವ ಮಗು ಹೆಣ್ಣೆ ಅಂತ ಗೊತ್ತಾದಾಗ ಮಗುವಿನ ಅಮ್ಮನ ಜೊತೆ, ಅಪ್ಪ, ಅಜ್ಜಿಯರೂ ನೆಲಕ್ಕೆ ಕಾಲೂರಿ ನಿಂತರೆ..!? ಅಂಥ ಧೀರೆಯರಿಲ್ಲದ ನಾಡಿನಲ್ಲಿ ಯಾವ ದೇವರಿದ್ದಾರೆಂದು ಏನು ಗ್ಯಾರಂಟಿ? "ಎಲ್ಲ ನಮ್ಮ ಹಣೆ ಬರಹ" ಅಂದುಕೊಳ್ಳುವವರೂ ಬಾವಿಗೆ ಮುಖವಿಡುತ್ತಾರೆಯೇ ಹೊರತು ಗದರುವವರನ್ನು ಎದುರಿಸುವ ಮನೋಶಕ್ತಿ ಕಳೆದುಕೊಂಡಿರುತ್ತಾರೆ, ಬೆಂಬಲವಿಲ್ಲದೆ ನರಳುತ್ತಿರುತ್ತಾರೆ. ಅಂಥವರ ಶಕ್ತಿಗಾಗಿ ಈ ದಿನವಿರಲಿ....
ಏನು ಬರೆಯಲೂ ತೋಚುತ್ತಿಲ್ಲ. ಮಾತುಗಳಿಗೆ ಅರ್ಥವಿಲ್ಲ.. ....
ಏನು ಬರೆಯಲೂ ತೋಚುತ್ತಿಲ್ಲ. ಮಾತುಗಳಿಗೆ ಅರ್ಥವಿಲ್ಲ.. ....
tumba chennagide !!!!!
ಅಂದಿಗೂ ಇಂದಿಗೂ ನಮ್ಮ ದೇಶದ ಚಿತ್ರಣ ಎಷ್ಟೇ ಬದಲಾಗಿದೆ ಎಂದುಕೊಂಡರೂ 'ಅಂದು ಹಾಗಾಗಿತ್ತು' ಎಂಬುದು ನಮ್ಮ ಭವ್ಯ ಇತಿಹಾಸದ ಪುಸ್ತಕದ ಮೇಲಿಟ್ಟ ಒಂದು ದೊಡ್ಡ ಕಪ್ಪು ಚುಕ್ಕಿ. ಭಾವಭರಿತ ಬರಹ.
ಬಾಡಿದ ಕರಕಲಾದ ಹೂಗಳಿಗೆ ಮೌನ ನಮನ..
ಜ್ಯೋತಿ,
ನಿಮ್ಮ ಆಶಯಕ್ಕೆ ನನ್ನ `ಅಮೆನ್'
ಶ್ರೀತ್ರೀ
ನಿಮ್ಮ ಮನದ ನೋವು ನನ್ನದೂ ಸಹ...
ಇಷ್ಟು ವರುಶಗಳ ನಂತರವೂ ಈ ಸಂಗತಿಯನ್ನು ಬರೆಯುವಾಗ ಬರೆದು ಮುಗಿಸಿದಾಗ ಮನಸ್ಸಿಗೆ ಬಹಳ ಕಷ್ಟವಾಯಿತು....
ಮಹಂತೇಶರೇ
`ಇಂಥಾ ಚೆನ್ನಾಗಿಗುವ'ಲೇಕನ ಇನ್ನೊಮ್ಮೆ ಬರೆಯುವ ಪಾಡು ನನಗೆ ಬಾರದಿರಲಿ.........
ಹೌದು ಸುಶ್ರುತರೇ, ಇಂಥಾ ಕಪ್ಪು ಚಿಕ್ಕಿಗಳನ್ನು ಧರಿಸಿ ನಿಂತ ಭಾರತಾಂಬೆ ಸುಂದರವಾಗಿ ಕಾಣುವುದಿಲ್ಲಾ ಅಂತ ನಮಗೆ ಮನವರಿಕೆ ಆಗುವವರಿಗೂ....
ಹೌದು ಸುಶ್ರುತರೇ, ಇಂಥಾ ಕಪ್ಪು ಚಿಕ್ಕಿಗಳನ್ನು ಧರಿಸಿ ನಿಂತ ಭಾರತಾಂಬೆ ಸುಂದರವಾಗಿ ಕಾಣುವುದಿಲ್ಲಾ ಅಂತ ನಮಗೆ ಮನವರಿಕೆ ಆಗುವವರಿಗೂ....
ಹೌದು ಸುಶ್ರುತರೇ, ಇಂಥಾ ಕಪ್ಪು ಚಿಕ್ಕಿಗಳನ್ನು ಧರಿಸಿ ನಿಂತ ಭಾರತಾಂಬೆ ಸುಂದರವಾಗಿ ಕಾಣುವುದಿಲ್ಲಾ ಅಂತ ನಮಗೆ ಮನವರಿಕೆ ಆಗುವವರಿಗೂ....
ಶಿವು,
ನಿಮ್ಮನಮನಗಳೋಂದಿಗೆ ನನ್ನದೂ ಸಹ...
Post a Comment
Subscribe to Post Comments [Atom]
<< Home