ಚಿನ್ನದ ಟೋಪಿ... ಬಣ್ಣದ ಟೋಪಿ.....
ಕಳೆದ ವಾರಾಂತ್ಯ ಗೆಳತಿಯೊಬ್ಬಳ ಮನೆಗೆ ರಾತ್ರಿ ಅಲ್ಲೇ ಉಳಿಯುವ ಪ್ರೋಗ್ರಾಂ ನೊಂದಿಗೆ ಹೊರಟು ನಿಂತಾಗ ಕೊನೆಗಳಿಗೆಯಲ್ಲಿ `ಯಾವುದಕ್ಕೂ ಟೈಂ ಪಾಸ್ ಗೆ ಇರಲಿ' ಎರಡು ಉಂಡೆ ಉಲನ್ ಅನ್ನೂ ಕ್ರೋಶೆ ಯನ್ನೂ ಚೀಲಕ್ಕೆ ಸೇರಿಸಿದ್ದೆ ಸುಮಾರು ಎರಡು ಘಂಟೆಗಳ ಡ್ರೈವ್ ನಂತರ ಅವಳ ಮನೆ ತಲುಪಿದಾಗ ಆಕಾಶ ಕೆಂಪು ಕೆಂಪಾಗುತ್ತಿದ್ದ ಹೊತ್ತು.ಕಾಫಿ ತಿಂಡಿಯೊಂದಿಗೆ ಆರಂಭವಾದ ಗಲ ಗಲ ಎಂಬ ಮಾತು ನಗೆಗಳ ಅಲೆಗಳು ಮನೆ ತುಂಬಾ ತುಂಬಿ ಬ್ಯಾಕ್ ಯಾರ್ಡ್ ಗೂ ಹರಿದವು.
ಮಾತುಕಥೆ ಬೆಂಗಳೂರಿನ ಸೈಟುಗಳ ಭಯಂಕರ ರೇಟು,ಬುಶ್ಶಣ್ಣನ ಇರಾಕ್ ವಾರು,ಕರ್ನಾಟಕದಲ್ಲಿ ಕುಮಾರಣ್ಣನ ದರ್ಬಾರು,ಸ್ಪಿನಾಚ್ ನ ಇ-ಕೊಲಿ ಗಳಂಥ ಜನರಲ್ ಟಾಪಿಕ್ ಗಳ ಕಡೆಗೆ ತಿರುಗಿದಾಗ ನಾನು ಮೆಲ್ಲಗೆ ಕ್ರೋಶ ಮತ್ತು ಉಲನ್ ಗಳ ಸರಸಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.ಕೈ ಬೆರಳು ಗಳಿಗೆ ಉಲನ್ ,ಕ್ರೋಶಾದೊಂದಿಗೆ ಡ್ಯಾನ್ಸ್ ಮಾಡಲು ಬಿಟ್ಟು ,ಬಾಯಲ್ಲಿ ಪ್ರಪಂಚದೆಲ್ಲ ವಿಷಯ ಮಾತಾಡುತ್ತಿದ್ದರೂ ನನ್ನ ಮನದ ಅಂಗಳದಲ್ಲ ಮೂಡುತ್ತಿದ್ದ ಚಿತ್ರವೇ ಬೇರೆ...
ಶಾಲೆಯ ಮಕ್ಕಳು ವೃತ್ತಕಾರವಾಗಿ ನೆಲದ ಮೇಲೆ ಕೂತಿದ್ದಾರೆ.ಅವರಲ್ಲೊಂದು ಹುಡುಗ ಖಾಲಿ ಚೀಲವನ್ನೋ,ಕರ್ಛೀಪ್ ಅನ್ನೋ ಹಿಡಿದುವೃತ್ತದ ಸುತ್ತ ಗುಂಡಗೆ ಸುತ್ತು ಹಾಕಲಾರಂಭಿಸುತ್ತಾ ಹಾಡುತ್ತಾನೆ.ಕುಳಿತ ಮಕ್ಕಳು ಒಕ್ಕೊರಲಿನಿಂದ ಉತ್ತರ ಕೊಡುತ್ತಾರೆ
ಟೋಪಿ ಬೇಕೆ ಟೋಪಿ...?
ಎಂಥಾ ಟೋಪಿ...?
ಚಿನ್ನದ /ಬಣ್ಣದ ಟೋಪಿ....
ಎಷ್ಟು ರುಪಾಯೀ...?
ಸಾವಿರ ರೂಪಾಯಿ....
ಎಲ್ಲಾ ಮಕ್ಕಳೂ `ನಂಗೇ... ನಂಗೇ' ಅಂತ ಕೂಗಿದಾಗ ಎಲ್ಲರಿಗೂ ಬೆನ್ನು ಬಗ್ಗಿಸಿ ತಲೆಯನ್ನು ನೆಲಕ್ಕಿಡಲು ಸೂಚಿಸುತ್ತಾನೆ. ನಂತರ ಯಾರಾದರೊಬ್ಬರ ಮೇಲೆ ತನ್ನ ಕೈಲಿದ್ದ ಚೀಲವನ್ನು ಹಾಕಿ ಓಡುತ್ತಾನೆ . ಹೀಗೆ ಟೋಪಿ ಪಡೆದುಕೊಂಡವನು ಅದನ್ನು ಹಿಡಿದು ತನಗೆ ಟೋಪಿ ಹಾಕಿದವನ ಹಿಂದೆ ಓಡಿ ಮೊದಲನೆಯವ ಇವನ ಜಾಗದಲ್ಲಿ ಕೂರುವ ಮುನ್ನ ಅವನನ್ನು ಮುಟ್ಟಿಸಬೇಕು.ಹಾಗೆ ಮುಟ್ಟಿಸಲಾಗದಿದ್ದರೆ ಹೊಸ ಹುಡುಗನೊಂದಿಗೆ `ಟೋಪಿ ಬೇಕೆ ಟೋಪಿ ...' ಅಂತ ಆಟ ಮೊದಲಿಂದ ಶುರುವಾಗುತ್ತದೆ ಚಿಕ್ಕಂದಿನಲ್ಲಿ ನಾವುಗಳು ಗಂಟಾನುಗಟ್ಟಲೆ ಆಡುತ್ತಿದ್ದ ಬೇಜಾರೇ ಬರದ ಸಖತ್ತು ಖುಶಿಯ ಆಟ ಇದು...
ಬಾಲ್ಯದ ಈ ಸವಿನೆನಪಿನಿಂದ ಮನಸ್ಸು ಮುದಗೊಂಡಿದ್ದ ಸಮಯದಲ್ಲಿ ಹೊಟ್ಟೆ ಸೇರಿದ ಮೃದುವಾದ ಮಲ್ಲಿಗೆ ಇಡ್ಲಿಗಳ ಲೆಕ್ಕ ಸಿಗಲಿಲ್ಲ.ಹರಟೆಗೊಂದು ಅರ್ಧವಿರಾಮ ಹಾಕಿ `ಹನ್ನೊಂದಾಯಿತು ಇನ್ನು ಮಲಗುವಾ'ಎಂದು ಒಬ್ಬರಿಗೊಬ್ಬರು ಹೇಳಿಕೊಳ್ಳುವ ಹೊತ್ತಿಗೆ ಗೆಳತಿಯ ಪುಟ್ಟ ಮಗನಿಗೆ ಕೆಂಪು ಗುಲಾಬಿ ಹೂವಂತಿದ್ದ ಈ ಸುಂದರ ಟೋಪಿ ತಯಾರಾಗಿತ್ತು....
ಧನ್ಯವಾದ-ನನಗೆ ಅರ್ಧಂಬರ್ದ ನೆನಪಿದ್ದ `ಟೋಪಿ ಹಾಡಿಗೆ' fill in the blanks ಮಾಡಿದ ಮೀರಾಗೆ ಥ್ಯಾಂಕ್ಸ್
1 Comments:
ಟೋಪಿಯ ಹಾಡು ಚೆನ್ನಾಗಿದೆ. ನಾನು ಕೇಳಿರಲಿಲ್ಲ.
ಅಂದ ಹಾಗೆ ನಿಶು ಟೋಪಿ ಕಳೆದು ಹೋಗಿದೆ ಅಂತ ಹುಡುಕ್ತಿದ್ದರು. ಇದೇ ಅಲ್ವೇ?
ಏ ನಿಶು ಪಾಪು, ನೋಡೋ ನಿನ್ನ ಟೋಪಿ ಆಂಟಿ ಹತ್ತಿರ ಇದೆ. ಬೇಗ ಬಂದು ಹಾಕಿಕೋ, ಛಳಿಗಾಲ ಹತ್ತಿರ ಬರ್ತಿದೆ.
Post a Comment
Subscribe to Post Comments [Atom]
<< Home