Saturday, October 21, 2006

ಹೀಗೊಂದು ಪ್ರಶ್ನೆ....



ಈ ಚಿತ್ರವನ್ನು ಇಂದು ನಿಮಗೆ ತೋರಿಸೋಣ ಅಂತ ನನ್ನ ಚಿತ್ರಗಳ ರಾಶಿಯಿಂದ ಇದನ್ನು ಆರಿಸಿ,ಏನು ಬರೆಯುವುದೆಂದು ಒಂದು ಕ್ಷಣ ಯೋಚಿಸಿದಾಗ ಒಂದು ಪ್ರಶ್ನೆ ಮನದಲ್ಲಿ ಮೂಡಿತು ಹೌದಲ್ಲಾ...ಈ ಪ್ರಶ್ನೆಗೆ ಉತ್ತರವೇನು? ಅಂತ ಗಹನವಾಗಿ ಯೋಚಿಸ ತೊಡಗಿದೆ.ಚಿತ್ರವನ್ನು ತಿರುಗಿಸಿ ,ಮುರುಗಿಸಿ ಬಾರಿ ಬಾರಿ ನೋಡಿದೆ ಮನಸ್ಸಿಗೆ ಬಂದ ಮೂರ್ನಾಲ್ಕು ಉತ್ತರಗಳಲ್ಲಿ ಯಾವುದೂ ಸರಿ ಇಲ್ಲಾ ಅನ್ನಿಸಿತು ಕಣ್ಣು ಪಿಳುಕಿಸುತ್ತಾ,ತಲೆ ಕೆರೆದು ಕೊಳ್ಳುತ್ತಾ ಯೋಚಿಸತೊಡಗಿದೆ ಯೋಚಿಸಿದಷ್ಟೂ ಉತ್ತರ ದೊರಕುವುದು ಹೆಚ್ಚೆಚ್ಚು ಕಠಿನವೆನ್ನಿಸ ತೊಡಗಿತು.

ಒಂದೆರಡರ ಪುಟ್ಟ ಮಗು ಅಪ್ಪ ಅಮ್ಮನೊಂದಿಗೆ ಅವರ ಯಾವುದೋ ಸ್ನೇಹಿತರ ಮನೆಗೆ ಹೋಗಿದೆ. ಅಪ್ಪ ಅಮ್ಮನ ಮಾತು-ಕಥೆ ಊಟ ನೋಟವೆಲ್ಲ ಮುಗಿದು ಇನ್ನೇನು ಮನೆಗೆ ಹೊರಡುವ ಘಳಿಗೆ ಹತ್ತಿರ ಬಂದಿದೆ. ಮಗುವಿಗೂ ಅತ್ಲಾಗೆ ನಮ್ಮನೇಗೆ ಯಾವಾಗ ಹೋದೇನಪ್ಪಾ ಅನ್ನಿಸಿಬಿಟ್ಟಿದೆ.ಅಪ್ಪ ಅಮ್ಮನಿಗಿಂಥಾ ಮೊದಲು ಚಪ್ಪಲಿ ಮೆಟ್ಟಿಕೊಂಡು ಜೋರುದನಿಯಲ್ಲಿ `ಬಾಯ್...ಬಾಯ್' ಅನ್ನುತ್ತಿದೆ. ಸ್ವಲ್ಪ ಕೀಟಲೆ ಮನಸ್ಸಿನ ಆತಿಥೇಯರು ಮಗುವಿಗೆ ಅದು ಜೀವನದಲ್ಲಿ ಈವರೆಗೆ ಕೇಳಿರುವುದರಲ್ಲೆಲ್ಲಾ ಅತ್ಯಂತ ಕಷ್ಟಕರವಾದ ಪ್ರಶ್ನೆ ಕೇಳಿ ಬಿಡುತ್ತಾರೆ.

ಮಗು ಅಮ್ಮನ ಕಡೆಗೊಮ್ಮೆ,ಅಪ್ಪನ ಕಡೆಗೊಮ್ಮೆ ನೋಡುತ್ತದೆ.ತನ್ನೆಲ್ಲಾ ಚಿಕ್ಕ ಚಿಕ್ಕ ನೋವಿಗೂ ಓಡಿಬಂದು `ನೋವಾಯ್ತಾ ಪುಟ್ಟಾ...' ಅಂತ ಮುದ್ದುಮಾಡಿ ಸಮಾಧಾನಿಸುವ ಅಪ್ಪ ಅಮ್ಮ ಇಂದೇಕೋ ಅದರ ಕೈ ಬಿಟ್ಟು ಬಿಟ್ಟಿದ್ದಾರೆ.ಇಬ್ಬರೂ ನಸುನಗುತ್ತಾ ಆ ಕಠಿಣ ಮನಸ್ಸಿನ ,ಬುದ್ದಿಗೇಡಿ ಪ್ರಶ್ನೆ ಕೇಳಿದ `ಆಂಟಿ/ಅಂಕಲ್ ಪಕ್ಷ ಸೇರಿ ಬಿಟ್ಟಿದ್ದಾರೆ.ಮಗುವಿನ ಕಣ್ಣಲ್ಲಿ ನಿಧಾನವಾಗಿ ಕಂಬನಿ ತುಂಬಿ ಕೊನೆಗೆ `ಇನ್ನು ತಡಕೊಳ್ಳಲಾರೆ'ಅಂತ ಮಗು ಜೋರಾಗಿ ಅಳಲು ಶುರು ಮಾಡುತ್ತೆ.ಆಗ ಅಮ್ಮ ಅಪ್ಪ ಮಗುವನ್ನೆತ್ತಿಕೊಡು ಸಮಾಧಾನ ಮಾಡುತ್ತಾರೆ ಅಂಥಾದೊಂದು ಅರ್ಥಹೀನ ಪ್ರಶ್ನೆ ಕೇಳಿದ ಹಿರಿಯರ ಮುಖದಲ್ಲೊಂದು ನಗೆ ಮೂಡುತ್ತದೆ ಅಟ್ ದ ಕಾಸ್ಟ್ ಆಫ್ ಮಗುವಿನ ಅಳು!

ಅಷ್ಟಕ್ಕೂ ಅವರು ಮಗುವನ್ನು ಕೇಳಿದ ಪ್ರಶ್ನೆಯಾದರೂ ಏನು? " ನಿಂಗೆ ಅಮ್ಮ ಬೇಕೋ ಅಪ್ಪ ಬೇಕೋ...ಅಮ್ಮ ಬೇಕಾದ್ರೆ ಅಪ್ಪನ್ನ ನಾವೇ ಇಟ್ಟಕೊಂಡು ಬಿಡ್ತೀವಿ...ಅಪ್ಪ ಬೇಕಾದ್ರೆ ಅಮ್ಮ ಇಲ್ಲೇ ಉಳೀತಾಳೆ ನೀನು ನಿಮ್ಮಪ್ಪನ ಜೊತೆ ಮನೆಗೆ ಹೋಗು....ಹೇಳು ನಿಂಗೆ ಇವರಿಬ್ಬರಲ್ಲಿ ಯಾರನ್ನ ಕಂಡ್ರೆ ಇಷ್ಟಾ...?" ಪಾಪದ ಮಗು ಯಾರನ್ನ ಅಂಥಾ ಆರಿಸುತ್ತೇ?ಏನೂ ಉತ್ತರ ಹೇಳಲಾರದೇ ಮಗು ಅಳುತ್ತೇ ಅಂತ ಇಂಥಾ ಘನಂದಾರಿ ಪ್ರಶ್ನೆ ಕೇಳಿದ ಪುಣ್ಯಾತ್ಮರಿಗೂ ಗೊತ್ತು ಮತ್ತು ಅವರಿಗೆ ಬೇಕಾಗಿರುವುದೂ ಅದೇ !

ಇಂಥಾ ಅರ್ಥವೇ ಇಲ್ಲದ, ಮಗುವನ್ನು ಅಳಿಸುವುದನ್ನು ಬಿಟ್ಟು ಬೇರೆ ಯಾವ ಉಪಯೋಗವೂ ಇಲ್ಲದ ಪ್ರಶ್ನೆಗಳಿಂದ ಆಗುವ ಉಪಯೋಗವಾದರೂ ಏನು? ನಾವುಗಳು ಜೀವನದಲ್ಲಿ ನಮಗೆ ನಾವು ಹಾಕಿಕೊಳ್ಳುವ ,ಅಥ್ವಾ ಬೇರೆಯವರು ನಮಗೆ ಹಾಕಿದಾಗ ಉತ್ತರ ತಿಳಿಯದೆ ತೊಳಲಾಡುವ ಪ್ರಶ್ನೆಗಳಲ್ಲಿ ಬಹುಪಾಲು ಇದೇ ಕೆಟಗರಿಯವು.ನಮ್ಮ್ನನ್ನು ಉತ್ತಮತೆಯ ಕಡೆಗೆ ಕರೆದುಕೊಂಡು ಹೋಗುವಪ್ರಶ್ನೆಗಳನ್ನು ಕಡೆಗಣಿಸಿ ಇಂಥಾ ಕೆಲಸಕ್ಕೆ ಬಾರದ ಪ್ರಶ್ನೆಗಳಿಗೆ ಉತ್ತರ ಹುಡುಕುವುದರಲ್ಲೇ ಜೀವನ ಕಳೆದು ಬಿಡುತ್ತೀವಿ ನಾವು.

ಅಷ್ಟಕ್ಕೂ ಈ ಮೊದಲು ನನ್ನ ತಲೆ ಅಂಡ್ ಸಮಯ ತಿಂದ ಮಹಾನ್ ಪ್ರಶ್ನೆ ಏನು ಗೊತ್ತಾ? `ಈ ಚಿತ್ರದಲ್ಲಿ ಹಸಿರು ಚೆನ್ನಾಗಿದೆಯೋ ಅಥ್ವಾ ನೀಲಿಯೋ?' ಎಂಬುದು!

`ಹಸಿರೂ ಚೆನ್ನಾಗಿದೆ ನೀಲಿಯೂ ಚೆನ್ನಾಗಿದೆ ಒಂದಕ್ಕೊಂದು ಪೂರಕವಾಗಿ ಎರಡೂ ಚೆನ್ನಾಗಿವೆ ಹಸಿರು ನೀಲಿಯ ಬಗ್ಗೆ ಪ್ರಶ್ನೆ ಕೇಳಿಕೊಳ್ಳುವುದನ್ನು ಬಿಟ್ಟು ಅವುಗಳ ಒಟ್ಟು ಸೌಂದರ್ಯವನ್ನು ನೋಡಿ ಸಂತೋಷ ಪಡುವುದನ್ನು ಕಲಿ ಮೊದಲು ಮಂಕುತಿಮ್ಮೀ...' ಅಂತ ನನಗೆ ನಾನು ಹೇಳಿ ಕೊಳ್ಳಲು ಒಂದಷ್ಟು ಸಮಯ ಹಿಡಿಯಿತು. ಆದರೆ ಹಾಗೆ ಹೇಳಿಕೊಂಡ ಮೇಲೆ ನೋಡಿದರೆ ಈ ಚಿತ್ರ ಮೊದಲಿಗಿಂತಾ ಇನ್ನೂ ಹೆಚ್ಚು ಅಂದವಾಗಿ ಕಾಣಿಸಿತು!

2 Comments:

Anonymous Anonymous said...

citra bahaLa cennAgide. eLeya bidirina elege sUrya SAKa taTTi elli marugi naluguvudO eMdu haNNAguttiruva elegaLu CAvaNi nIDuttive. haudA? idu nanna anisikeyaShTe. nODidaShTU heccu heccu arthagaLu siguvudu. bahaLa oLLeya citravannu nODugarige nIDiddIri.

I citradalli nanage haLadiya baNNa heccu AkarShisitu.

tale keredukoMDAga EnAdarU keLage bittE :P

9:29 AM  
Anonymous Anonymous said...

hasiro neeli gotilla...chitra maatra boMbaTagi ide...adre poorakavada vivaraNe baaLa chalo ide...

10:14 AM  

Post a Comment

Subscribe to Post Comments [Atom]

<< Home