ಕನ್ನಡ ರಾಜ್ಯೋತ್ಸವ ಮತ್ತು ಕ್ಯಾರೆಟ್ ಹಲ್ವ
ಈ ಸಲದ ರಾಜ್ಯೋತ್ಸವ ಐವತ್ತನೇದಂತೆ ನಿನ್ನ ಬ್ಲಾಗ್ ನಲ್ಲಿ ಸ್ಪೆಷಲ್ ಏನು ಮಾಡ್ತಿದೀಯಾ...?
ಭೂತದ ಹಬ್ಬದ ಸಂಜೆ ಅರವಿಂದ ಕೇಳಿದ ನಾನು ...ಕೆ.ಎಸ್.ನರಸಿಂಹ ಸ್ವಾಮಿ ಅಂತ ಒಬ್ಬರು ಕನ್ನಡದ ಹೆಸರುವಾಸಿ ಕವಿ...ಅವರ ಒಂದು ಸೊಗಸಾದ ಕವನ ತಕ್ಕೊಂಡು....ಅದಕ್ಕೆ ನಾನು ಆರಿಸಿಟ್ಟಿರುವ ಚಿತ್ರಗಳೂ...ಅಂತೆಲ್ಲಾ ಹೇಳಿದೆ
ಅದಕ್ಕವನು ಮೂತಿ ಸೊಟ್ಟ ಮಾಡಿ ಹೇಳಿದ `ಫೇಮಸ್ ಕವಿಯೊಬ್ಬರ ಒಂದು ಪೊಯಮ್ ತಗೊಂಡು ಮೈಸೂರು ಪಾಕನ್ನು ತುಂಡು ಮಾಡಿದ ತರ ತುಂಡು ತುಂಡು ಮಾಡಿ ಒಳ್ಳೇ ಡಯಟ್ ಮಾಡಿಸಿದಂತೆ ದಿನಾ ಒಂದೊಂದು ತುಂಡು ಹಾಕಿಬಿಟ್ಟರೆ ಅದೆಂಥಾ ವಿಶೇಷ? ಕರ್ನಾಟಕ ಗೌರ್ನಮೆಂಟಿನ ಯಾವುದೋ ಪೋಪಟ್ ಪ್ಲ್ಯಾನ್ ತರ ಇದೆ...' ಅಂದು ಬಿಟ್ಟ ನನಗೆ ಭಯಂಕರ ಸಿಟ್ಟು ರೇಗಿತು...ಗುರ್ ಗುರ್ ಅಂದೆ
`ಸರ ಸರಿ...ನೀನುಂಟು ನಿನ್ನ ಬ್ಲಾಗ್ ಉಂಟು ಏನಾದ್ರೂ ಮಾಡ್ಕೋ...ಕಿಚನ್ನಲ್ಲಿ ಏನು ಮಾಡ್ತಿದೀಯಾ ಅದನ್ನ ಹೇಳೂ...' ಅಂದ ನಾನು ಯಾವಾಗಲೋ ಬಾಯಿತಪ್ಪಿ`ನಮ್ಮಮ್ಮ ಪ್ರತಿವರ್ಷ ಆಗಸ್ಟ್ ಹದಿನೈದಕ್ಕೆ,ಜನವರಿ ಇಪ್ಪತ್ತಾರಕ್ಕೆ ಮತ್ತು ನವಂಬರ್ ಒಂದಕ್ಕೆ ತಪ್ಪದೆ ಸಿಹಿ ಮಾಡುತ್ತಿದ್ರೂ ಗೊತ್ತಾ...' ಅಂತ ಕೊಚ್ಚಿಕೊಂಡಿದ್ದನ್ನು ನೆನಪಿಟ್ಟುಕೊಂಡು ನನ್ನ ಮೇಲೇ ಬಾಣ ಬಿಡುತ್ತಾನೆಂದು ಒಂದಿಷ್ಟೂ ನಿರೀಕ್ಷಿಸಿರಲಿಲ್ಲ
ನಾನು ಒಂದಿಷ್ಟೂ ಯೋಚಿಸದೇ (ಆಸ್ ಯುಶುಯಲ್) ಬೀಸೊ ದೊಣ್ಣೆ ತಪ್ಪಿಸಿಕೊಳ್ಳುವ ಆತುರದಲ್ಲಿ ಯಾವುದೋ ಬಾಯಿಗೆ ಬಂದ ಸ್ವೀಟು...ಅಂದ್ಕೊಂಡು `ಕ್ಯಾರೆಟ್ ಹಲ್ವಾ' ಅಂದುಬಿಟ್ಟೆ ಮತ್ತು ನಾನು ಹೇಳಿದ್ದನ್ನು ಅವನು ಮರೆತು ಬಿಡಲಿ ಭುವನೇಶ್ವರೀ ಅಂತ ತಕ್ಷಣ ಪ್ರೇ ಮಾಡ್ಕೊಂಡೆ
ಮಾರನೇ ದಿನ ಬೆಳಗ್ಗೆ ಎದ್ದು ಎಂದಿನಂತೆ ಕಾರ್ನ್ ಹೊಟ್ಟು ತಿಂದು ಆಫೀಸಿಗೆ ಹೋದವನನ್ನು ನೋಡಿ `ಅಬ್ಬಾ..ಸದ್ಯ..ಕ್ಯಾರೆಟ್ ಹಲ್ವ ಮರೆತು ಬಿಟ್ಟಿದ್ದಾನೆ ಗುಡ್..ಗುಡ್ ' ಅಂದು ಕೊಂಡೆ.. ಅದೇ ತಪ್ಪಾಯಿತು ನೋಡೀ...ಮಟ ಮಟ ಮದ್ಯಾನ್ಹಕ್ಕೆ ಕಾಲ್ ಬಂತು `ಹ್ಯಾಪ್ಪಿ ಕನ್ನಡ ರಾಜ್ಯೋತ್ಸವ ಡೇ...ಗಾಜರ್ ಕಾ ಹಲ್ವಾ ರೆಡಿಯಾ...' ಅಂತಾ!
`ವೋ... ಬುವನೇಸ್ವರಮ್ಮನಿಗೆ ನನ್ನ ಮೇಲ್ಯಾಕೋ ಕ್ವಾಪ ಬಂದೈತೆ' ಅಂತ ಅಂದು ಕೊಳ್ಳುತ್ತಾ ಹಲ್ವಾ ಮಾಡಿ ಮುಗಿಸಿದೆ ರೆಸಿಪಿ ಇಲ್ಲಿ ನಿಮಗೆ ಕೊಟ್ಟಿದ್ದೇನೆ
ಕ್ಯಾರೆಟ್ ಹಲ್ವ
ತಾಜಾ ಕ್ಯಾರೆಟ್ -ಅರ್ಧ ಕೆ.ಜಿ
ಕೆನೆ ತೆಗೆಯದ ಹಾಲು-ಅರ್ಧ ಲೀಟರ್
ಸಕ್ಕರೆ- ಮುನ್ನೂರು ಗ್ರ್ಯಾಂ
ತುಪ್ಪ-ಮೂರು ದೊಡ್ಡ ಚಮಚ
ಒಣ ದ್ರಾಕ್ಷಿ,ಗೋಡಂಬಿ -ಒಂದು ಹಿಡಿ(ಹಲ್ವಾ ಮಾಡುತ್ತಾ ನಿಮಗೆ ಬಾಯಾಡುವ ಅಭ್ಯಾಸವಿದ್ದರೆ(ನನ್ನ ಥರ!)ಒಂದು ಬೊಗಸೆ!)
ಕ್ಯಾರೆಟ್ ಅನ್ನು ಕೈಯಲ್ಲೋ ಮಿಕ್ಸಿ ಯಲ್ಲೋ ತುರಿದುಕೊಳ್ಳಿ ಅದಕ್ಕೂ ಮುಂಚೆ ಕ್ಯಾರೆಟ್ ನ ಚೆನ್ನಾಗಿ ತೊಳೆಯುವುದು ಮರೆಯಬೇಡಿ ದಪ್ಪ ತಳದ ಪಾತ್ರೆಯಲ್ಲಿ ಕ್ಯಾರೆಟ್ ತುರಿ, ಹಾಲು ಹಾಕಿ ಮೀಡಿಯಂ ಗಿಂತಾ ಕೊಂಚ ಕಡಿಮೆ ಉರಿಯಲ್ಲಿ ಒಲೆಯ ಮೇಲಿಟ್ಟು ಬೇಕಾದ್ರೆ ನಿಮ್ಮ ಮೆಚ್ಚಿನ ಕಣ್ಣೀರ್ ಧಾರವಾಹಿಯೋ/Friends ನೋಡಿ.ADs ಬಂದಾಗ ಸ್ವಲ್ಪ ಎದ್ದು ಬಂದು ತಿರುಗಿಸದಿದ್ದರೆ ಹಲ್ವಾ ಹಾಳಾಗಿ
ಹೋಗತ್ತೆ.ಹಾಲೆಲ್ಲ ಇಂಗಿದ ಮೇಲೆ ಸಕ್ಕರೆ ಹಾಕಿ.ಇಷ್ಟು ಹೊತ್ತು ಇಂಗಿಸಿದ್ದೆಲ್ಲ ವೇಷ್ಟು ಆನ್ನು ವಂತೆ ಸಕ್ಕರೆ ಹಾಕಿದ ತಕ್ಷಣ ಹಲ್ವಾ ನೀರು ಬಿಟ್ಟು ಕೊಂಡು ಬಿಡುತ್ತೆ! ಈಗ ನಿಮಗೆ ನಿಜವಾದ ಛಾಲೆಂಜು! ಟಿ.ವಿ ಆರಿಸಿ ಹಲ್ವ/ಒಲೆ ಮುಂದೆಯೇ ನಿಂತು ಕೈಯಾಡಿಸಲು ಶುರುಮಾಡಿ (ಭರತ ನಾಟ್ಯವಲ್ಲಾ!) ಹಲ್ವಾನ ದೊಡ್ಡ ಚಮಚ ಒಂದರಿಂದ ಸತತವಾಗಿ ಮಗುಚಿ ಸಾಕು!ಸುಮಾರು ಅರ್ಧ ಘಂಟೆ ಹೀಗೆ ಮಾಡಿದ ಮೇಲೆ (ನೀವು ನನ್ನನ್ನು ಬೈದು ಕೊಳ್ಳುವ ಹೊತ್ತಿಗೆ) ಹಲ್ವ ಗಟ್ಟಿಯಾಗಲು ಶುರುವಾಗುತ್ತೆ ಈಗ ತುಪ್ಪ ಸುರಿಯಿರಿ ದ್ರಾಕ್ಷಿ ಮತ್ತು ಗೋಡಂಬಿ ಹಾಕಿ (ಉಳಿದಿದ್ದರೆ!) ಒಲೆಯಿಂದ ಕೆಳಗಿಳಿಸಿ ಆರಿದ ಮೇಲೆ ರುಚಿ ನೋಡಿ
ರಾಜ್ಯೋತ್ಸವಕ್ಕೆಂದು ಮಾಡಿದ ಸಿಹಿ ಫ್ರಿಜ್ ನಲ್ಲಿಟ್ಟಿದ್ದು microwaveನಲ್ಲಿ 20 second ಬಿಸಿ ಮಾಡಿ ಕೊಟ್ಟಿದ್ದೇನೆ ಫ್ರೆಶ್ ಆಗಿದೆ ತಿನ್ನಿ...
5 Comments:
naanU carrot halwa maaDidde swalpa dinada hiMde, officenalli Iran huDugiyarigella tuMbA ishTa aagittu, recipe kooDa kELi barskoMDru... :-)
ಹಲ್ವಾ ತುಂಬಿದ ಬಟ್ಟಲು, ಜೊತೆಗೆ ಚಮಚಾ ಬೇರೆ ಇರೋದು ನೋಡಿ ....ಬಾಯಲ್ಲಿ ನೀರೂರುತ್ತಿದೆ. ರಾಜ್ಯೋತ್ಸವದ ದಿನ ಮಾಡಿದ್ದು ಇನ್ನೂ ಉಳಿದಿದೆಯಾ? ಹಾಗಿದ್ದರೆ ಇದೊಂದು ದೊಡ್ಡ ಪವಾಡವೇ ಸರಿ!!
"ಗಾಜರ್ ಕಾ ಹಲ್ವಾ" ಅಂತ ಕರೆದರೆ ಭುವನೇಶ್ವರಮ್ಮನಿಗೆ ಇಷ್ಟ ಆಗಲಿಕ್ಕಿಲ್ಲ ನೋಡಿ. ಕ್ಯಾರೆಟ್‍ಗೆ ಏನಂತಾರೆ ಕನ್ನಡದಲ್ಲಿ? ಗಜ್ಜರಿ ಅಂತಾನಾ?
ಶ್ರೀಲತಾ,
ಅಂತೂ ಇರಾನಿನ ಹುಡುಗಿಯರಿಗೆ ನಮ್ಮ ಕ್ಯಾರೆಟ್ ಹಲ್ವಾದ ರುಚಿ ತೋರಿಸಿದ್ದೀರಿ ಭಲೇ...
ಅಂದಹಾಗೆ ಇರಾನಿನ ಹುಡುಗರಿಗೆ ನಿಮ್ಮ ಹಲ್ವಾ ಇಷ್ಟ ಆಗಲಿಲ್ಲವೋ?(just kidding!)
ಶ್ರೀ ತ್ರೀ
ಫೋಟೋ ತೆಗೆಯಲು ಉಳುಸಿದ್ದು ತೆಗೆದ ತಕ್ಷಣ ಖಾಲಿ ಆಯ್ತು!ನಿಮ್ಮ ಊಹೆ ಸರಿ
ಕ್ಯಾರೆಟ್ಗೆ ಕನ್ನಡದಲ್ಲಿ `ಗಜ್ಜರಿ ಅಂತ ಅನ್ನುತ್ತಾರೆ ಆದರೆ ಮೈಸೂರು ಕರ್ನಾಟಕದ ಕಡೆ ಯಾರೂ ಹಾಗೆ ಹೇಳಿದ್ದನ್ನು ನಾನು ಕಾಣೆ ಉತ್ತರ ಕರ್ನಾಟಕದವರು ಗಜ್ಜರಿ ಅನ್ನುವುದು ಕೇಳಿದ್ದೇನೆ
ಗಾಜರ್ ಕಾ ಹಲ್ವಾ ಅಂದಿದ್ದು ನಾನಲ್ಲ ಅರವಿಂದ!
ಅವನು ಹರುಕು -ಮುರುಕು ಕನ್ನಡ ಬಲ್ಲ ಹೊರನಾಡ ಕನ್ನಡಿಗನಾದ್ದರಿಂದ ನಮ್ಮ ಭುವನೇಶ್ವರಿ `ಹೋಗ್ಲಿ ಪಾಪ' ಅಂತ ದೊಡ್ಡಮನಸ್ಸು ಮಾಡಿ ಅವನನ್ನು ಕ್ಷಮಿಸಿ ಬಿಡುತ್ತಾಳೆಂದು ಆಶಿಸುತ್ತೇನೆ!
"ಕ್ಯಾರೆಟ್ ಹಲ್ವಾ ಮತ್ತು ಟಿವಿ ನೋಡುವಿಕೆ"ಯ ಬಗ್ಗೆ ವಿಚಿತ್ರಾನ್ನ ಸಂಚಿಕೆಯೊಂದರಲ್ಲಿ ಹೀಗೆ ಬರೆದಿದ್ದೆ:
-----
ಕ್ಯಾರೆಟ್ ಹಲ್ವಾ ತಿನ್ನಬೇಕೆಂಬ ಆಸೆಯಾದ ಗುಂಡಣ್ಣ ಅವತ್ತೇ ಸಂಜೆ ಮನೆಗೆ ವಾಪಸಾಗುತ್ತ ಮಾರ್ಕೇಟಿನಿಂದ ತಾಜಾ ಕ್ಯಾರೆಟ್, ತಾಜಾ (ಹಾಗೆಂದು ಬಾಟಲಿಯ ಮೇಲಿನ ಲೇಬಲ್ ಹೇಳುತ್ತಿತ್ತು) ನಂದಿನಿ ತುಪ್ಪ ಮತ್ತು ಸಕ್ಕರೆ ಎಲ್ಲವನ್ನೂ ತಂದು ಮಡದಿಯ ಮುಂದೆ ಸುರಿದ. ನಾಳೆ ಸಂಜೆ ಆಫೀಸಿನಿಂದ ಬಂದಾಗ ಹಲ್ವಾ ಮಾಡಿಡು ಎಂದು ಗುಂಡಾಜ್ಞೆಯನ್ನೂ ಇತ್ತ. ಹೆಂಡತಿಯ ಅಪ್ಪ ಅಂದರೆ ತನ್ನ ಮಾವ ಮನೆಯಲ್ಲಿರುವುದರಿಂದ, ತನ್ನ ಮೇಲಿನ ಪ್ರೀತಿಯಿಂದಲ್ಲದಿದ್ದರೂ ಅಪ್ಪನ ಮೇಲಿನ ಗೌರವದಿಂದ ಹಲ್ವಾ ಮಾಡಿಡಬಹುದೆಂದುಕೊಂಡಿದ್ದ ಗುಂಡ ಮಾರನೆ ದಿನ ಆಫೀಸಿಂದ ಬರುವಾಗ ಹೆಂಡತಿ ಇನ್ನೂ ಟೀವಿ ನೋಡುತ್ತಲೇ ಇದ್ದಳು. ಗುಂಡನಿಂದ ಗುಂಡು ಹಾರಿದಂತೆ ಒಂದು ಕವನ:
ಕ್ಯಾರೆಟ್ ಸಕ್ಕರೆ ನಂದಿನಿ ತುಪ್ಪ|
ಮಡಗಿದ್ದೆ ನಿನ್ನೇಯೇ ಅಲ್ವಾ?
ಕ್ಯಾರೇ ಇಲ್ಲ ಎದುರಿಗಿದ್ದರೂ ಅಪ್ಪ|
ಮಾಡಿಟ್ಟೀಯೇನೇ ಹಲ್ವಾ ??
-----
ನೀವು ಟಿವಿ ನೋಡುತ್ತಲೇ ಕ್ಯಾರೆಟ್ ಹಲ್ವಾ ಸಹ ಮಾಡಿದ/ಮಾಡುವ ಜಾಣೆ. ನಿಮಗೆ ಅಭಿನಂದನೆ!
Post a Comment
Subscribe to Post Comments [Atom]
<< Home