ಪುಳ್ಳಂಪರಚಿ ಮತ್ತು ಪ್ರೇಮಕವನ...
ನೀವು ಪುಳ್ಳಂಪರಚಿ ಸೊಪ್ಪು ಎಂದಾದರೂ ತಿಂದಿದ್ದೀರಾ? ಕಾಕಿ ಹಣ್ನು?
ಇಂಗ್ಲಿಷ್ ನಲ್ಲಿ oxalis ಅಂತ ಕರೆಸಿಕೊಳ್ಳುವ ಇದನ್ನು ಬಾಟನಿ ಕ್ಲ್ಯಾಸ್ ನಲ್ಲಿ oxalis-the runner ಅಂತ ನಿಮ್ಮಲ್ಲಿ ಕೆಲವರಾದರೂ ಓದಿರಬೇಕು ಮೂರು ಹೃದಯದಾಕಾರದ ಪುಟಾಣಿ ಎಲೆಗಳ ಸಂಗಮದಂತಿರುವ ,ಅಲ್ಲಲ್ಲಿ ಬಂಗಾರದ ನಕ್ಶತ್ರದಂತೆ ಹೊಳೆವ ಪುಟ್ಟ ಹಳದಿ/ಬಿಳಿ ಹೂವಿನಗಿಡ ಅದು.
ಕಾಕಿ ಗಿಡಕ್ಕೆ ಇಂಗ್ಲಿಷಿನಲ್ಲಾಗಲೀ ಬೇರೆ ಭಾಷೆಯಲ್ಲಾಗಲೀ ಏನಂತ ಹೇಳುತ್ತಾರೋ ನನಗೆ ಗೊತ್ತಿಲ್ಲ ಎರಡು-ಮೂರು ಅಡಿ ಎತ್ತರ ಇರುವ ಪುಟ್ಟ ಬಿಳಿ ಹೂಗಳಕಡಲೇ ಕಾಳು ಗಾತ್ರದ ಕಡು ಕಪ್ಪು ಹಣ್ನು ಬಿಡುವ ಬೇಲಿ ಗಿಡ ಅದು.ದೊಡ್ಡವರಿಗೂ,ಮಕ್ಕಳಿಗೂ ಏಕಪ್ರಕಾರವಾಗಿ ಇಷ್ಟವಾದುದು
ಪ್ರೇಮೋತ್ಸವಕ್ಕಾಗಿ ಹತ್ತಾರು ದಪ್ಪದಪ್ಪ ಪುಸ್ತಕಗಳಿಂದ ನೂರಾರು ಪ್ರೇಮಕವನಗಳನ್ನು ಓದುತ್ತಿರುವಾಗ ನನಗೆ ಪುಳ್ಳಂಪರಚಿಯೂ,ಕಾಕಿಹಣ್ಣೂ ಹಲವಾರು ಸಲ ನೆನಪಾದವು! ಇದೇನೂ?ಗೋಕುಲಾಷ್ಟಮಿ ಮತ್ತು ಇಮಾಂಸಾಬಿ ತರ...ಅನ್ನಿಸುತ್ತಿದೆಯೇನೋ ನಿಮಗೆ...
ಪುಳ್ಳಪರಚಿ ಸೊಪ್ಪು ಬಾಯಿಗೆ ಹಾಕಿಕೊಂಡು ಒಮ್ಮೆ ಅಗಿದರೆ ಮೆಲ್ಲಗೆ ಕಚಗುಳಿ ಇಡುವ ಹುಳಿರುಚಿ!
ಕಾಕಿ ಹಣ್ಣಿನದ್ದು ಒಂಥರಾ ಸಿಹಿ ಒಂಥರಾ ಹುಳಿ ಜೊತೆಗೆ ಒಂಥರಾ ಒಗರು... ಕೊಸರಿನಂತೆ ಹಣ್ಣು ನುಂಗಿದಮೇಲೆ ನಾಲಿಗೆಗೆ ಉಳಿಯುವ ಒಂಥರಾ ವಿಶಿಷ್ಟ ರುಚಿ!
ಒಟ್ಟಿನಲ್ಲಿ "ಒಂಥರಾ ಒಂಥರಾ" ಅನುಭವ!
ಈಗ ಹೇಳೀ... ಪ್ರೇಮಕ್ಕೂ, ಪ್ರೇಮಕವನಕ್ಕೂ ಮೇಲಿನ ಸಾಲುಗಳು ಒಂಥರಾ ಉಪಮೆ ತರಾನೋ, ವರ್ಣನೆ ತರಾನೋ ಅನ್ನಿಸಲ್ವಾ?
******************
ಪ್ರೇಮದ ಹಲವು ಭಾವ -ಬಳುಕನ್ನೂ, ಬಣ್ಣ-ಸೊಬಗನ್ನೂ ಸೊಗಸಾಗಿ ಚಿಮುಕಿಸುವ ಹಲವು ನೂರು ಕವನಗಳನ್ನು ಓದುತ್ತಿರುವಾಗ ಆದ ಅನುಭವ,ಅದನ್ನು ಸ್ವಲ್ಪ ಹೀಗೆ ಹೇಳಬಹುದೇನೋ...
`ಮೆಲ್ಲಗೆ ಬಂದು ಕೈ ಮುಟ್ಟಿ ಎದೆ ಝಲ್ ಎನ್ನಿಸಿದ ಕವನಗಳು,ಒಮ್ಮೆ ಕಿರು ನಗು ಬೀರಿ `ಇತ್ತ ಬಾ' ಎಂದವುಗಳು, ತುಂಟತನದಿಂದ ಕಣ್ ಹೊಡೆದು ನಕ್ಕವುಗಳು,`ಅವಳೂ...' ಅಂತ ಪ್ರಾರಂಭಿಸಿ ಕಣ್ತುಂಬಾ ನೀರು ತುಂಬಿಸಿದವುಗಳು,ನನ್ನ ಹುಡುಗಿ/ಹುಡುಗ ಅಂಥಾ ಹೆಮ್ಮೆಯಿಂದ ಬಣ್ಣಿಸಿದವುಗಳು...`ಹೋಗೇ ಹೋಗ್ ನಿನ್ನ ಮರತ್ ಬಿಡೋದೇನೂ ಅಷ್ಟು ಕಷ್ಟವಲ್ಲ ನೋಡ್ತಾ ಇರು'... ಅಂತ ಸವಾಲು ಹಾಕಿದವುಗಳು, ವೇದಾಂತಿಯಾಗಿ ಬದಲಾದ ಪ್ರೇಮಿಯ ಕನವರಿಕೆಗಳು ಪ್ರೇಮಕಾವ್ಯದ ಕಹಿಬರಹ,ವಿರಹದಿಂದ ತೊಯ್ದು ತೊಟ್ಟಿಕ್ಕುವಂಥಹವು...ಒಟ್ಟಿನಲ್ಲಿ ಕಾಮನಬಿಲ್ಲಿನ ಎಲ್ಲಾ ಬಣ್ಣದವುಗಳೂ...!
*******************
ಆಯ್ಕೆ ನಿಜಕ್ಕೂ ಕಷ್ಟವಾಯಿತು...ನನಗೆ ಇಷ್ಟವಾದ ಹಲವಾರು ಕವನಗಳು ಹಾಕಲಾಗಲಿಲ್ಲ ಒಂದೇ ಭಾಷೆಯ ಮೂಲದ ಎರಡು ಕವನ ಬೇಡಾ ಎಂಬ ಅನಿಸಿಕೆ ಓ ಈ ಕವನದ ಕತೃ ಬಗ್ಗೆ ಸಾಕಷ್ಟು ಮಾಹಿತಿ ಸಿಗಲಿಲ್ಲ ಎಂಬ ನೆಪ ವಿರಹಾ ಎಂಬ ಕಹಿಬರಹದ ಕವನ ಹಾಕಿ ಪ್ರೇಮಿಗಳ ದಿನಕ್ಕೆ ಮೊದಲೇ ಯುವ ಪ್ರೇಮಿಗಳ ಉತ್ಸಾಹ ಕಳೆಯುವುದು ಬೇಡಾ ಎಂಬ ಕಾಳಜಿ,ಇಷ್ಟಲ್ಲದೇ ಸಮಯದ ಅಭಾವದಿಂದ ಯಿದ್ದಿಶ್ ,ಝೆಕ್,ಗ್ರೀಕ್,ಪರ್ಷಿಯನ್ ಮುಂತಾದ ಹಲವಾರು ಭಾಷೆಯ ಕವನಗಳು ನನ್ನಲ್ಲೇ ಉಳಿದು ಬಿಟ್ಟವು
********************
ಹೇಳಿ, ಪುಳ್ಳಂಪರಚಿಯ ಕಚಗುಳಿಯನ್ನೂ, ಕಾಕಿಯ `ಒಂಥರಾ ' ರುಚಿಯನ್ನೂ ನೆನಪಿಸುವ
`ಕವನ ಮೆರವಣಿಗೆಯ ' ಝಲಕ್ ಗಳನ್ನು ನೋಡಲು ನನ್ನೊಂದಿಗೆ ಬರುವಿರಾ?
10 Comments:
ಮಾಲಾ ಅವರೇ,
'ಒಂಥರಾ' ಅನುಭವದ ಬಗ್ಗೆ ನೀವು ಹೀಗೆ ಹೇಳಿದರೆ ಇಲ್ಲಿ ನಮ್ಮ ಪಾತರಗಿತ್ತಿ ಪೂರ್ತಿ ತಲೆ ಕೆಡಿಸಿಕೊಂಡು 'ಪುಳ್ಳಪರಚಿ' ಸೊಪ್ಪನ್ನು-ಕಾಕಿ ಹಣ್ಣು ಎಲ್ಲಿ ಸಿಗುತ್ತೆ ಅಂತಾ ಕೇಳ್ತಿದೆ :)
ಸೊಪ್ಪು-ಹಣ್ಣು ಪೋಟೋ ನಿಮ್ಮ ಹತ್ತಿರ ಇದ್ದರೆ ಹಾಕಿ ಪ್ಲೀಸ್ ..
ದಯವಿಟ್ಟು ನೀವು ಓದಿದ ಆ ಎಲ್ಲಾ ಕವನಗಳನ್ನು ನಮ್ಮ ಜೊತೆ ಹಂಚಿಕೊಳ್ಳಿ..
ನಾನಂತು ಮೆರವಣಿಗೆ ಶುರುವಾಗೋಕೆ ಕಾಯ್ತಾ ಇದೀನಿ..
ನೀನು ಮುನ್ನಡೆಸು, ಹಿಂಬಾಕರು ನಾವು,
ನೀನು ತೋರಿದ ಕಡೆಗೆ ಜೊತೆ ಬರುವೆವು.
ಲಲಿತ ಸಹೃದಯ ಸ್ನೇಹ ಸಂಗಾತಿಯಿರೆ,
ಇಂಥ ಪಯಣಕ್ಕಿಂತ ಬೇಕೇನು ಬೇರೆ?
ಮಾಲಾ ಅವರೆ,
ನಾನು ಬರ್ತೀನಿ. ರೈಟ್ ಪೋಯ:-))
ಕಾಕಿ ಹಣ್ಣನ್ನು ನೆನಪಿಸಿದ್ದಕ್ಕೆ ನಿಮಗೆ ಸಾವಿರ ಸಾವಿರ ಥ್ಯಾಂಕ್ಸ್. ಅದರ ಸವಿ, ಸವಿದವರಿಗೇ ಗೊತ್ತು. ನಿಜಕ್ಕೂ ಅದು 'ಒಂಥರಾ ಒಂಥರಾ' ಅನುಭವ! ಸುಳ್ಳಲ್ಲ, ನಿಮ್ಮ ಪ್ರೇಮಕವನದ ಸೀರಿಸ್ ಓದುತ್ತಾ ಓದುತ್ತಾ ಕಾಕಿ ಹಣ್ಣು ತಿಂದಂಗೇ ಆಯ್ತು ಕಣ್ರೀ :)
ನಿಮ್ಮೆಲ್ಲರ ಉತ್ಸಾಹದ ಪ್ರತಿಕ್ರಿಯೆಗಾಗಿ ತುಂಬು ಹೃದಯದ ಧನ್ಯವಾದಗಳು
ಶಿವು ಅವರೇ,
ಪಾತರಗಿತ್ತಿಗೆ ಹೇಳಿ ವಿಕಿಪೀಡಿಯಾದಲ್ಲಿ ಪುಳ್ಳಂಪರಚಿಯ
ಚಿತ್ರ,ವಿವರಣೆ ಎರಡೂ ಇದೆ oxalis ಅಂತ search
ಮಾಡೂ ಅಂತ ಹೇಳಿ ಎಲೆ ಹುಳಿ ರುಚಿ ಅಂತ ನಂಗೊತ್ತು
ಹೂವಿನ ಜೇನಿನ ರುಚಿ ಬಗ್ಗೆ ಗ್ಯಾರೆಂಟಿ ಕೊಡಲಾರೆ!
ನಿಮ್ಮ ಪಾತರಗಿತ್ತಿಗೆ `ಕಿಕ್' ಹೊಡೆದರೆ ನನ್ನ `ಸ್ಯೂ'
ಮಾಡಬೇಡಿ ಮತ್ತೆ!
ಜ್ಯೋತೀ
ಕವನ ಮೆಚ್ಚುಗೆಗಾಗಿ ಥ್ಯಾಂಕ್ಸ್
ಬನ್ನಿ ಹೊರಡುವ ಸುಲಲಿತ ಪಯಣಕ್ಕೆ...
ನಡೀರೀ ಭಾಗವತರೇ,
ಅಂತೂ ಪ್ರೇಮಗೀತೆಗಳನ್ನು ಓದುವ ಹುರುಪಿನಲ್ಲಿ ನಿಮ್ಮ
ಜಗಲಿ ಬಿಟ್ಟು ಇಳಿದಿರಲ್ಲಾ...
ಸುಶ್ರುತರೇ
ಅಂತೂ ಕಾಕಿ ಹಣ್ಣು ನಿಮ್ಮನ್ನು ಮೋಡಿಮಾಡಿ ಬಿಟ್ಟಿದೆ!
ಇನ್ನೂ ಕವನ ಕಾಕಿ ಹಣ್ಣಿನ ಸುಗ್ಗಿ ಮುಗಿದಿಲ್ಲಾ...ಆಗಾಗ ಬರುತ್ತಾ ಇರಿ...
ಪುಳಿಸೊಪ್ಪು ಅಂತ ನಾವು ಕರೆಯುವ ಆ ಸೊಪ್ಪು ಮತ್ತು ಕಾಕಿಯ ಹಣ್ಣನ್ನು ಬಹಳ ಹಿಂದೆ ತಿಂದಿದ್ದೆ. ಈ ಪುಟ್ಟ ಲೇಖನ ಓದುತ್ತಿದ್ದಾಗ ಮತ್ತೆ ಆ ರುಚಿ ನಾಲಗೆಯ ಮೇಲೆ ನಲಿದಾಡಿತು. ವಂದನೆಗಳು
Post a Comment
Subscribe to Post Comments [Atom]
<< Home