ಚಿತ್ರದುರ್ಗದ ಓದುಗರಾದ ರಾಧಿಕಾ ಡಿ.ವಿ.ಜಿಯವರ ವನಸುಮ ಕವನದ ಪೂರ್ಣಪಾಠ ದೊರಕಿಸಿ ಕೊಟ್ಟಿದ್ದಾರೆ
ಧನ್ಯವಾದ ರಾಧಿಕ
ವನಸುಮದೊಳೆನ್ನ ಜೀವನವು ವಿಕಸಿಸುವಂತೆ
ಮನವನನುಗೊಳಿಸು ಗುರುವೇ
ಜನಕೆ ಸಂತಸವೀವ ಘನನು ನಾನೆಂದೆಂಬ
ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ಬಿಡದೆ
ಕಾನನದಿ ಮಲ್ಲಿಗೆಯು ಮೌನದಿಂಬಿರಿದು ನಿಜ
ಸುರಭವ ಸೂಸಿ ನಲವಿಂ
ತಾನೆಲೆಯ ಪಿಂತಿರ್ದು ದೀನತೆಯ ತೋರಿ
ಅಭಿಮಾನವನು ತೊರೆದು ಕೃತ ಕೃತ್ಯತೆಯ ಪಡೆವಂತೆ
ಉಪಕಾರಿ ನಾನು ಎನ್ನುಪಕೃತಿಯು ಜಗಕೆಂಬ
ವಿಪರೀತ ಮತಿಯನಳಿದೂ
ವಿಪುಲಾಶ್ರಯವನೀವ ಸುಫಲ ಸುಮಭರಿತ
ಪಾದಪದಂತೆ ನೈಜಮಾ ದೊಳ್ಪಿನಲಿ ಬಾಳ್ವವೊಲು
***********
ಡಿ.ವಿ.ಜಿ (1889-1975)ಎಂದೇ ಹೆಸರಾದ ಡಿ.ವಿ.ಗುಂಡಪ್ಪನವರು ಕನ್ನಡ ಸರಸ್ವತಿ ಮುಡಿದ ಸಿರಿದಾವರೆಗಳಲ್ಲೊಬ್ಬರು.ಅವರ ಮಂಕುತಿಮ್ಮನ ಕಗ್ಗ ಅಪಾರ ಜನಮನ್ನಣೆ ಪಡೆದ ಕೃತಿ .ಅವರ ಸಾಹಿತ್ಯ ಕೃಷಿ ಸಂಖ್ಯೆಯಿಂದಲೂ ಮೌಲ್ಯದಿಂದಲೂ ಅಮಿತವಾದುದು.ಅವರ ಸಮಗ್ರಸಾಹಿತ್ಯವು ಐನೂರು ಪುಟಗಳ ಹದಿನೈದು ಸಂಪುಟಗಳಾಗುತ್ತವೆಯೆಂದರೆ...ಊಹಿಸಿಕೊಳ್ಳಿ...
ಕನ್ನಡದ ಹಿರಿಯ ಲೇಖಕರಾಗಿದ್ದ ಡಿವಿಜಿ ಹೃದಯ ಶ್ರೀಮಂತಿಕೆಯಲ್ಲೂ ಹಿರಿತನ ತೋರಿ ಕಿರಿಯರನ್ನು ಹರಸಿದವರು ಅವರು ಮುನ್ನುಡಿ ಬರೆದು ಹರಸಿದ ಹಲವು ಲೇಖಕರು ನಂತರದ ದಿನದಳಲ್ಲಿ ಕನ್ನಡದಲ್ಲಿ ಹೆಸರು ಮಾಡಿದರು
ಅವರು ಬರೆದ ಮುನ್ನುಡಿಗಳನ್ನೇ ಎರಡು ಸಂಪುಟಗಳಾಗಿ ಪ್ರಕಟಿಸಲಾಯಿತು ಎಂದರೆ ಅವುಗಳ ಸಂಖ್ಯೆ ಮತ್ತು ಮೌಲ್ಯ ಎಷ್ಟಿರಬಹುದು..? ನಿಮ್ಮಊಹೆಗೇ ಬಿಡುತ್ತೇನೆ
ಡಿವಿಜಿ ಅವರ ಈ ಎರಡೂ ಪುಸ್ತಕಗಳನ್ನು ನನ್ನ ತಂದೆ ಒಮ್ಮೆ ಮನೆಗೆ ತಂದಿದ್ದರು ಅವುಗಳಲ್ಲಿ ಓದಿದ ಕೆಲವು ವಾಖ್ಯಗಳು ಇಂದಿಗೂ ನನ್ನ ನೆನಪಲ್ಲಿ ಉಳಿದಿವೆ
"ಸರೋಜ ಹಾಲು ಕಾಯಿಸುತ್ತಿದ್ದಳು...ಯಾರೋ ನಿಂಬೆಹಣ್ಣು ಸಿಡಿಸಿಬಿಟ್ಟರು. ಒಡೆದು ಹೋದ ಹಾಲಿಗಾಗಿ ಅವಳು ಅಳುತ್ತಾ ಕೂರಲಿಲ್ಲ ಮೊಸರು ಮಾಡಿ ಎಲ್ಲರಿಗೂ ಬಡಿಸಿದಳು..."
ಕಾದಂಬರಿಯೊಂದಕ್ಕೆ ಮುನ್ನುಡಿ ಬರೆಯುತ್ತಾ ಡಿ.ವಿ.ಜಿ ಹೇಳಿದ ಮಾತುಗಳಿವು
ಆ ಕಾದಂಬರಿಯ ಹೆಸರೇನೋ ಅದನ್ನು ಬರೆದವರು ಯಾರೋ ಯಾವುದೂ ನೆನಪಿಲ್ಲ
ಮುಂದೆ ಬಹುಷಃ ಅದು ಆರತಿ ಅಭಿನಯದ ಚಲನಚಿತ್ರವಾಯಿತೆಂದು ಅನ್ನಿಸುತ್ತಿದೆ....