Friday, June 19, 2009

ಹೂವಿನ ಭಾಷೆ -ಹುಲ್ಲಿನ ಭಾಷೆ- ಹಲ್ಲಿನ ಭಾಷೆ...


ರೆಪ್ಪೆ ತೆರೆದರೆ ಮೆಲ್ಲನೆ ಬೀಸಿಬಂದ ಗಾಳಿ ಹೊತ್ತಾಯ್ತು ಏಳೇ.. ಅಂತ ಕೈ ಜಗ್ಗಿ ಎಬ್ಬಿಸುತ್ತಿದೆ
ಅದರದೇ ತಂಪಿನ ಭಾಷೆಯಲ್ಲಿ.
ಕೈ ಉಜ್ಜುತ್ತಾ ಎದ್ದಾರೆ ಬಳೆಗಳ ಕಿಣಿ ಕಿಣಿ...
ನಲ್ಲಿಯಲ್ಲಿ ತಟ್ ಪಟ್ ಅಂತ ಹನಿ ಹನಿಯೇ ನೀರು ತೊಟ್ಟಿಕ್ಕಿದರೂ ಬೇಸರವಾಗಲಿಲ್ಲ
ಮುಖ ತೊಳೆಯದೇ ಹೊರಬಂದೆ ಅಷ್ಟೇ...

ಅಂಗಳದಲ್ಲಿ ಹಸು ಕರು ಹುಲ್ಲು ಭಾಷೆಯಲ್ಲಿ ಮಾತಾಡುತ್ತಿದ್ದವು
ಹೂವುಗಳದ್ದೋ ಸೌಗಂಧದ ಭಾಷೆ...
ಜೇನುಹುಳುಗಳದ್ದು ಝೇಂಕಾರದ ಭಾಷೇನೋ ಗುಂಯ್ ಭಾಷೆನೋ ನಿರ್ಧರಿಸಲಾಗಲಿಲ್ಲ ...
ದಾಸವಾಳ ನೋಡಿ ಪೂರ್ವ ನಾಚ್ಕೋತಿದೆಯೋ ಅಥ್ವಾ ಪೂರ್ವ ನ ನೋಡಿ ದಾಸವಾಳವೋ...
ಅಥ್ವಾ ಇವ್ರಿಬ್ರೂ ಸೂರ್ಯನ್ನ ನೋಡಿ ನಾಚ್ಕೋತಿದಾರೋ...ಗೊಂದಲವಾಯಿತು

ಪುಟಾಣಿ ಹಳದಿ ಪಕ್ಷಿಯೊಂದು ಟ್ವಿ ..ಟಿಟಿವಿ...ಟ್ವೀವ್.. ಅಂತ ಕೇಳಿದ್ದಕ್ಕೆ ಅಳಿಲು ತನ್ನ ಕೈಲಿದ್ದ ಯಾವುದೋ ಬೀಜನ
'ಅಯ್ಯೋ ಮುದ್ದು ...ಇದ್ ನಿಂಗೆ ಬೇಕೇನೇ... ತೊಗೊ ಅಂತ ಕೆಳಗಿಟ್ಟು ಓಡಿ ಹೋಯಿತು...

ನಾನು ತೊಳೆಯದ ಮೂತಿಯಲ್ಲಿ ಇದೆಲ್ಲಾ ನೋಡ್ತಾ ಕಣ್ಣರಳಿಸಿಕೊಂಡು ಕೇಳ್ತಾ ಇದ್ದೆ

ಆಗ-
ಕಳ್ಳ ನನ್ ಮಗನೇ ನಿನ್ನ ಹುಟ್ಟಲಿಲ್ಲ ಅನ್ನಿಸಿ ಬಿಡ್ತೀನಿ ಇವತ್ತು...
ಧಬ್! ಧಬ್! ಧಬ್!
ಊಊ...ಊಊ..ಊಊ..

ಕೇಳಸ್ತು......

Monday, June 15, 2009

ಬೇ ಏರಿಯಾ ಕನ್ನಡ ಬ್ಲಾಗಿಗರ ಹರಟೆ ಕೂಟ

ಬೇ ಎರಿಯಾದ ಬ್ಲಾಗಿಗರು ಮೊನ್ನೆ ಸ್ಯಾನೆಹೋಸೆಯ ಪಾರ್ಕೊಂದರಲ್ಲಿ ಭೇಟಿಯಾಗಿದ್ದೆವು
ಅಂದು ಕೊಂಡಷ್ಟು ಜನ ಬಾರದೇ ಹೋದರೂ ಮನೆಗೆ ಮರಳುವಾಗ ಹೊಸ ಸ್ನೇಹಿತರನ್ನು ಸಂಪಾದಿಸಿದ ಖುಷಿ....
ಬೆಂಗಳೂರಿನಲ್ಲೋ ಮಂಗಳೂರಿನಲ್ಲೋ ಕನ್ನಡಿಗರು ಸುಲಭವಾಗಿ ಸಿಗಬಹುದು
ಡೆಲ್ಲಿಯಲ್ಲೂ ಬಾಂಬೆಯಲ್ಲೂ ಇಂಡಿಯನ್ಸ್ ಸಹಾ...
ಆದರೆ ದೇಶ ಬಿಟ್ಟು ಬಂದವರಿಗೆ ಭಾರತೀಯರೂ ಅದೂ ಕನ್ನಡಿಗರು ಬರೆಯುವುದರಲ್ಲಿ ಆಸಕ್ತಿ ಇರುವ ಕನ್ನಡಿಗರು
ಒಟ್ಟಾಗಿ ಸಿಕ್ಕರೆ ಅದರ ಆನಂದವನ್ನು ಹೇಗೆ ಬಣ್ಣಿಸುವುದೂ...?

ಕರಡಿಗೆ ಹಲಸು ಜೇನು ಸಿಕ್ಕ ಹಾಗೆ...
ತುಂಬಾ ದಿಸ ಆದಮೇಲೆ ಅಮ್ಮನ ತಿಳಿಸಾರು ಕುಡಿದ ಹಾಗೆ...

ಹೊರಡುವಾಗ ನಾನು ಜ್ಯೋತಿ, ಭಾರ್ಗವಿ ಹೇಮಶ್ರೀ ಮಾತಾಡ್ತಾ ನಿಂತಿದ್ದೆವು
ಅರವಿಂದ ಅಮರ್ತ್ಯ ಕಾಯ್ತಾ ಇದ್ರೂ ನನಗೆ ಹೊರಡುವ ಮನಸ್ಸಿಲ್ಲ!
ಇಪ್ಪತೈದು ಸಾರಿ ಬಾಯ್ ಬಾಯ್ ಅನ್ನುತ್ತಾ ಅಲ್ಲೇ ನಿಂತಿದ್ದೆ
ಕೊನೆಗೆ ಜ್ಯೋತಿಯೇ ಅರವಿಂದ ಮಗು ಕಾಯ್ತಾ ಇದಾರೆ ಹೋಗು ಸಾಕು ಅಂತ ನನ್ನ ದಬ್ಬ ಬೇಕಾಯ್ತು...!