Thursday, July 31, 2008

ಸೀದು ಹೋಗುತಿದೆ ಹೂವಿನ ತೋಟ...

ದಿನವೂ ತೆರೆಯುವ ಬೆಳಗಿನ ಬಾನೊಳು ರಕ್ತದ ಕಲೆಗಳ ಛಾಯೆ ಇದೆ
ದಿನವೂ ಮುಚ್ಚುವ ಸಂಜೆಗತ್ತಲೊಳು ನೋವಿನ ದನಿಗಳ ಹುಯ್ಯಲಿದೆ


ದಟ್ಟಕತ್ತಲಿನ ಕಾರಿರುಳಲ್ಲಿ ಒಳಸಂಚಿನ ಪಿಸುಮಾತುಗಳು
ನೆಮ್ಮದಿಗಳ ಮನೆಬಾಗಿಲ ಬಡಿಯುವ
ಭಯ...
ಸಂಶಯ...
ಭಯ ಸಂಶಯಗಳ ಭೂತಗಳು


ದಿನಬೆಳಗಾದರೆ ಹತ್ಯಾಕಾಂಡದ ತತ್ತರಿಸುವ ದುರ್ವಾರ್ತೆಗಳು
ಮೂರು ಬಣ್ಣಗಳ ಧ್ವಜದೆತ್ತರಕು ಹಬ್ಬಿದ ಭೀತಿಯ ಜ್ವಾಲೆಗಳು
ಛಿಧ್ರವಾಗುತಿದೆ ಮುಗ್ಧ್ರರ ಬದುಕು ಕ್ಷುದ್ರಸ್ವಾರ್ಥಗಳ ಧಾಳಿಯಲಿ
ಸೀದುಹೋಗುತಿದೆ ಹೂವಿನ ತೋಟ ಕುರುಡು ಬೆಂಕಿಗಳ ಕುಣಿತದಲಿ


ವ್ಯರ್ಥವಾಗುತಿದೆ ಹಿರಿಯರು ಕಲಿಸಿದ
ಸತ್ಯ ಅಹಿಂಸೆಯ ಮಂತ್ರಗಳು
ಉಸಿರು ಕಟ್ಟಿಸುವ ದಟ್ಟ ಹೊಗೆಯೊಳಗೆ
ತಡವರಿಸುತ್ತಿವೆ ಹೆಜ್ಜೆಗಳು

_ಕೆ.ಸಿ. ಶಿವಪ್ಪ

**********
ನಾನು ಈ ಹಾಡು ಕೇಳಿದ್ದು ಸುಮಾರು ಹದಿನೈದು ವರ್ಷಗಳ ಹಿಂದೆ.
ಕವಿ ಈ ಕವಿತೆಯನ್ನು ಬರೆದು ಇನ್ನೂ ಹೆಚ್ಚು ವರ್ಷಗಳಾಗಿರಬಹುದು
ಪ್ರಕಾಶಿಸುತ್ತಿರುವ ಮೇರ ಮಹಾನ್ ಭಾರತದಲ್ಲಿ ಅದೇ ಪರಿಸ್ಥಿತಿಯನ್ನು ಮೇನೆಟೇನ್ ಮಾಡಿಕೊಂಡು ಬಂದಿರುವುದಕ್ಕೆ ನನಗೆ ಬಹಳ ಹೆಮ್ಮೆಯೆಸುತ್ತದೆ....

**********
ಕೆ.ಸಿ. ಶಿವಪ್ಪ ಅವರು ನನ್ನ ಮೆಚ್ಚಿನ ಕವಿಗಳಲ್ಲೊಬ್ಬರು ಹಲವಾರು ಸುಂದರ ಕವನಗಳನ್ನು ಬರೆದಿದ್ದಾರೆ
ಅವರ ಬಗ್ಗೆ ನನಗೆ ಹೆಚ್ಚೇನೂ ತಿಳಿದಿಲ್ಲ. ನಿಮಗ್ಯಾರಿಗಾದರೂ ವಿವರಗಳು ಗೊತ್ತಿದ್ದರೆ ಇಲ್ಲಿ ದಯವಿಟ್ಟು ಹಂಚಿಕೊಳ್ಳಿ

Monday, July 21, 2008

ಅಕ್ಷರ ತೋಟದಲ್ಲಿ ಎರಡು ಹೊಸ ಹೂಗಳು

ಬರುವ ಭಾನುವಾರ ಕನ್ನಡ ಅಕ್ಷರ ತೋಟದಲ್ಲಿ ಎರಡು ಹೊಸ ಹೂಗಳು ಅರಳಲಿವೆ
ಕಂಪು ಸೂಸುತ್ತಾ 'ತುಳಸೀವನ' ಬಿರಿದರೆ,' ಭಾವಬಿಂಬ'ದಲ್ಲಿ ಜಗದೆಲ್ಲಾ ಚೆಲುವಿನ ಪ್ರತಿಬಿಂಬವಿದೆ
**************
ಆತ್ಮೀಯ ಗೆಳತಿಯರಾದ ಜ್ಯೋತಿ ಮತ್ತು ತ್ರಿವೇಣಿ ಇಬ್ಬರಿಗೂ ಅಭಿನಂದನೆಗಳು
ಕನ್ನಡದಲ್ಲಿ ಪುಸ್ತಕ ಪ್ರಕಟಿಸುವ ಉತ್ತಮ (ಸಾಹಸ)ಕಾರ್ಯ ಮಾಡುತ್ತಿರುವಿರಿ
*****************
ಮನದಲ್ಲಿ ಸದಾ ಚೈತ್ರವಿರಲಿ
ಹಸಿರೂ ಚಿಗುರೂ
ಕಂಪೂ ಇಂಪೂ
ತುಂಬಿಬರಲಿ
ನಿಮ್ಮ ಕನ್ನಡ ಪ್ರೀತಿಯ
ಅಕ್ಕರೆಯ
ಸಕ್ಕರೆಯ
ಬಿಂಬ
ನೂರ್ಕಾಲ ಉಳಿಯಲಿ....

Saturday, July 12, 2008

ಹಸುರಿನ ಮಡಿಲು ಏನೆಂಥ ಒಡಲು



ಹಸುರಿನ ಮಡಿಲು ಏನೆಂಥ ಒಡಲು
ನಿನ್ನ ಆಸರೆಯೇ ಮುದವಿಟ್ಟ ಗುಡಿಯು


ಓ ನಮ್ಮ ತಾಯಿ... ಗಿಡಬಳ್ಳಿಯಾಗಿ
ನೆಲದ ಹಾಸಾಗಿ ತಲೆಮೇಲೆ ತೂಗಿ
ನೀನೇನೆ ನಮ್ಮ ಆಹಾರವಮ್ಮ
ಅಪ್ಪಿಡುವೆ ನಿನ್ನ ಅಪ್ಪಿಕೋ ಬಾಮ್ಮ


ಓ ನೀನೆ ಮಾಯಿ... ಹೂಗೊಂಚಲಾಗಿ
ಮಧುವಾಗಿ ಚೆಲುವಾಗಿ ಸವಿಜೇನು ತೂಗಿ
ನೀನೇನೆ ನಮ್ಮ ಒಲವಿಂಚಿಯಮ್ಮ
ಅಪ್ಪಿಡುವೆ ನಿನ್ನ ಅಪ್ಪಿಕೋ ಬಾಮ್ಮ


ಹೇ ಮಹಾ ಮಾಯಿ...ಹಸುರಾದ ಬಾಯಿ
ಚಿಗುರಿಡುವ ಸೊನೆಗರೆವ ಹೂಹಣ್ಣು ಕಾಯಿ
ನೀನೇನೆ ನಮ್ಮ ಗುರಿ ತೋರಿಸಮ್ಮ
ಅಪ್ಪಿಡುವೆ ನಿನ್ನ ಅಪ್ಪಿಕೋ ಬಾಮ್ಮ
- ವೇಣುಗೋಪಾಲ ಸೊರಬ

********
ವೇಣುಗೋಪಾಲ ಸೊರಬ(1937-)ಕನ್ನಡದ ಪ್ರಮುಖ ಕವಿ ಬೆಂಗಳೂರು ಜಿಲ್ಲೆಯ ದೇವನಹಳ್ಳಿಯವರು
ಮುಸುಕು-ನಸುಕು ,ಜೀವ-ಜೀವಂತ ,ಗರಿ ಮುರಿದ ಹಕ್ಕಿಗಳು ಇವರ ಕೆಲವು ಕವನ ಸಂಕಲನಗಳು
ಸೊರಬ ಅವರ ಗರಿ ಮುರಿದ ಹಕ್ಕಿಗಳು”(1974) ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಬಂದಿದೆ