Monday, January 29, 2007

ದುರ್ಗದಲ್ಲಿ ಪ್ರೇಮೋತ್ಸವ



ಹೇಳು ಪ್ರೀತಿಗೆ ಯಾವ ಭಾಷೆ?
ಹೇಳು ಕನಸಿಗೆ ಎಂಥಾ ಭಾಷೆ?

ಎಂದೋ ಕೇಳಿದ ಹಾಡು ಇಂದು ನೆನಪಿಗೆ ಬರುತ್ತಿದೆ ...

ಪ್ರೀತಿಗೆ ಭಾಷೆ ಯಾಕೆ ಬೇಕು?
ಕಣ್ಣಿಂದ ಕಣ್ಣಿಗೆ ತೂಗುವ ಹೂನೋಟದ ಸೇತುವೆಯಲ್ಲಿ ಸಂದೇಶಗಳು ಪಯಣಿಸುವಾಗ....

ಹೃದಯದ ಭಾಷೆ ಯಾವುದು?
ಅದನ್ನು ಹೃದಯವೇ ಅರಿಯುವುದು!

ಆದರೆ ಈ ಮೌನ ಭಾಷೆ ರಿಲೆಯಬಲ್ಲಾ? ಯೋಚನೆ ಬಂತು
ಕಣ್ಣಿನ /ಹೃದಯದ ಭಾಷೆ ಅಷ್ಟೊಂದು ಪ್ರಾಕ್ಟಿಕಲ್ ಅಲ್ಲಾ ಅಲ್ವಾ? ಅನ್ನಿಸೋಕೆ ಶುರುವಾಯಿತು!

ಕಣ್ಣಿನ ಭಾಷೆ ಅರ್ಥವಾಗದ `ಜಾಣ ಜಾಣೆಯರೂ' ಇರುತ್ತಾರೆಂಬುದಕ್ಕೆ ನೆನಪಿನ ಕೋಶದಿಂದ ಹಲವಾರು ನಿದರ್ಶನಗಳು ಎದ್ದು ಬಂದು ಕಣ್ಮುಂದೆ ನಿಂತವು
ನಾನು ಹೀಗೆ ಕವಿಗಳ ಭಾಷೆಯಲ್ಲಿ ಹೇಳಿ ಸುಮ್ಮನಾಗಿ ಬಿಟ್ಟರೆ ನನ್ನ ತಮ್ಮ ತಂಗಿಯರು ಬೈದು ಕೊಳ್ಳೋಲ್ವೇ?ಅಂತಾನೂ ಅನ್ಸೋಕೆ ಶುರುವಾಯಿತು
ಎಲ್ಲರೂ ಕಣ್ಣಿನ /ಹೃದಯದ ಭಾಷೆಯ ಮೇಲೇ ಭಾರ ಹಾಕಿ `ಸುಮ್ಮನೆ ಕೈ ಕಟ್ಟಿ ಕೂತು ಬಿಟ್ಟರೆ' ಪ್ರೇಮ ನೌಕೆ ದಡ ಸೇರುವುದು ಹೇಗೆ?

**********
ಒಂದಿಷ್ಟು ಒಳ್ಳೇ ಪ್ರೇಮ ಕವನಗಳನ್ನಾಯ್ದು ಒಂದು `ಪ್ರೇಮ ಕವನ ಗುಚ್ಛ'ವನ್ನು ಕಟ್ಟಿಕೊಡಬಾರದೇಕೆ ಅಂತ ಯೋಚನೆ ಮಾಡಿದೆ...
ಪ್ರೇಮಿಗಳ ದಿನದಿಂದ ಶುರು ಮಾಡಿ ವಾರವೋ ಹತ್ತು ದಿನವೋ ಕವನ ಪ್ರಕಟಿಸುವಾ ಅಂತ ಮೊದಲು ಅಂದುಕೊಂಡೆ ಹಾಗೆ ಮಾಡಿದರೆ ಅದು ಉದ್ದೇಶಿತರಿಗೆ ಉಪಯೋಗವಾಗುವುದು ಮುಂದಿನ ವರ್ಷವೇ...(ಅದೂ ಹುಡುಗಿ ಕಾದೂ ಕಾದೂ ಸಾಕಾಗಿ ಕೈ ಕೊಟ್ಟು ಹೋದ ಮೇಲೇನೇ...) ಅಂತ ಕೀಟಲೆಯ ಕಮೆಂಟ್ ಬಂತು!

ಈ ಕವನ ಗುಚ್ಛಕ್ಕಾಗಿ ಒಂದೊಂದೇ ಅಪರೂಪದ ಹೂ ಆರಿಸಿ ಜೋಡಿಸಲು ಪ್ರಾರಂಭಿಸಿದ್ದೇನೆ
ಸದ್ಯದಲ್ಲೇ ಹಲವು ಬಣ್ಣಗಳ `ಸುಂದರ ಬೊಕೇ' ದುರ್ಗದಲ್ಲಿ ಕಂಗೊಳಿಸಲಿದೆ
ಈ ಬೊಕೆಯಿಂದ `ಅವಳಿಗೆ /ಅವನಿಗೆ ' ಇಷ್ಟವಾಗಬಹುದಾದ `ಬಿಡಿ ಹೂ' ಆರಿಸಿ ನಿಮ್ಮ ಮನದ ಮಾತು
ಹೇಳುವುದು ನಿಮ್ಮ ಕೆಲಸ!



***************

ಟಿಪ್ಪಣಿ-`ಇಹದ ಪರಿಮಳದ ಹಾದಿ' ಪ್ರೇಮೋತ್ಸವದ ನಂತರ ಮುಂದುವರೆಯಲಿದೆ

Wednesday, January 24, 2007

ನನ್ನ ತೋಟದ ನಿತ್ಯ ಮಲ್ಲಿಗೆ


`white fragrant carpet of snow'(ಶುಭ್ರ ಬಿಳಿ ಮಂಜಿನ ಸುಗಂಧಿತ ನೆಲಹಾಸು)
ಎಂದು ನಾನು ಮೊದಲ ಬಾರಿ Alyssum ಅನ್ನು ಕಂಡದ್ದನ್ನು ಬಣ್ಣಿಸ ಬಹುದೇನೋ....
I see her in the faces of flowers,
her laugh lying in wait
in the sweet white alyssum....
ಎನ್ನುತ್ತಾನೆ ಕವಿ. Alyssum ಗುಲಾಬಿಯಂತೆ ಕಣ್ಣು ಕೋರೈಸುವ ಹೂವೇನಲ್ಲ ಆದರೆ ಅದರ ಜೇನಿನಂಥಾ ಮಧುರ ಪರಿಮಳವಿದೆ ನೋಡೀ...ಆ ಪರಿಮಳವನ್ನು ನೆನಪಿಸಿ ಕೊಂಡೇ ಕವಿ ತನ್ನ ಪ್ರೇಮಿಕೆಯ ನಗೆಯನ್ನು Alyssum ನಲ್ಲಿ ಕಂಡಿರಬೇಕು
Alyssum ಪುಟ್ಟ ಪುಟ್ಟ ಬಿಳಿ ಹೂಗಳ ಪುಟಾಣಿ ಗೊಂಚಲುಗಳಿಂದ ಕೂಡಿದ ಲಿಲಿಪುಟ್ಟಿನಂಥಾ ಗಿಡ (ಎತ್ತದ 4-6 ಇಂಚು)ತಿಂಗಳುಗಳಗಟ್ಟಲೆ ನಿರಂತರವಾಗಿ ಹೂ ಸುರಿಸುವ Alyssum ಬೇರೆಲ್ಲಾ ಗಿಡಗಳು ಎಲೆ ಹೂ ಏನೊಂದೂ ಇಲ್ಲದೆ ಮಂಕಾಗಿ ನಿಲ್ಲುವ ಛಳಿಗಾಲದಲ್ಲೂ ಸುಗಂಧ ಸೂಸಿ ನಲಿಯುತ್ತಿರುತ್ತದೆ
ಈ ಪುಟ್ಟ ಸುಗಂಧ ರಾಣಿಯನ್ನು ಸಾಮಾನ್ಯವಾಗಿ ಹುಲ್ಲು ಹಾಸಿನ ಅಂಚಿಗೆ ಸುವಾಸನೆಯ ಜರತಾರಿಯಂತೆ ಬೆಳೆಸುತ್ತಾರೆ ವಿಶೇಷ ಆರೈಕೆ ಏನೂ ಬೇಡದ Alyssum ನಿಜವಾಗಿಯೂ `Worth beyond beauty'
ನಮ್ಮನೆಯ ಕುಂಡದಲ್ಲಿ ಸದಾ ಅರಳಿ ನಗುವ ಈ ಬೆಳ್ಳಿ ಚುಕ್ಕಿ ಸುಂದರಿ ನನ್ನ ತೋಟದ ನಿತ್ಯ ಮಲ್ಲಿಗೆ
ಪುರಾತನ ಗ್ರೀಕ್ ವಿದ್ವಾಂಸರು ಈ ಸುವಾಸನೆಯ ಸರಳ ಸುಂದರಿಯನ್ನು ತಮ್ಮ ಗ್ರಂಥಗಳಲ್ಲಿ ವರ್ಣಿಸಿರುವುದು ಹೀಗೆ...
Alyssum, a dainty plant of slender, silvery leaves interspersed with fragrant clusters of small
white flowers is a cure for madness. In Greek “a” is “not”, and “lysa” is “madness”.
ಆದರೆ ನನ್ನ ಅಭಿಪ್ರಾಯದಲ್ಲಿ Alyssum ನ ಸುಗಂಧವೇ ಹುಚ್ಚು ಹಿಡಿಸುವಂತದ್ದು...ಇನ್ನು ವಾಸಿ ಮಾಡುವುದೇನು ಬಂತೂ...?
ಇಹದ ಪರಿಮಳದ ಹಾದಿ-3
********************
ಟಿಪ್ಪಣಿ-
ಬಹಳ ದಿನಗಳಿಂದ ಮಿತ್ರರ ಬ್ಲಾಗ್ ಲಿಂಕ್ ದುರ್ಗದಲ್ಲಿ ಹಾಕುವ ಕೆಲಸ ಉಳಿದಿತ್ತು ಇವತ್ತು ಹಾಕಿದ್ದೇನೆ. ಇನ್ನೂ ಕೆಲವನ್ನು ಹಾಕಬೇಕು. ಅನುಮತಿ ಕೊಟ್ಟ ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು

Saturday, January 20, 2007

ಗಾಳಿ ಬೀಸಿ ಕಂಪು ತಂದು...


ಏಕ್ ಹವಾ ಕಾ ಜೋಂಖಾ.....ಮೆಲ್ಲನೆ ತಟ್ಟಿ ಮುಂದೆ ಸರಿಯಿತು...
*********
ನನ್ನ ಸ್ನೇಹಿತೆಯ ಬಾಲ್ಕನಿಯ ಮೂಲೆಯಲ್ಲಿ ಚರ್ಚೆಯಲ್ಲಿ ಮುಳುಗಿ ಹೋಗಿದ್ದೆವು ಇಬ್ಬರೂ....
ಅವಳು ಸ್ಪಾನಿಷ್ ಸಾಹಿತ್ಯವನ್ನು ಆಳವಾಗಿ ಓದಿ ಕೊಂಡವಳು.ನನ್ನದು ಕನ್ನಡ ಸಾಹಿತ್ಯದಲ್ಲಿ ಆಸಕ್ತಿ
ಇಬ್ಬರಿಗೂ ಅಷ್ಟಿಷ್ಟು ಇಂಗ್ಲಿಷ್ ಸಾಹಿತ್ಯ ಗೊತ್ತು....ಚರ್ಚೆಗೆ ಕಾವೇರಲು ಸಾಕಲ್ಲಾ...
ಆಗ....
ಏಕ್ ಹವಾ ಕಾ ಜೋಂಖಾ.....ಮೆಲ್ಲನೆ ತಟ್ಟಿ ಮುಂದೆ ಸರಿಯಿತು...
ಮತ್ತು ನಮ್ಮ ಮಾತಿನ ಹಾದಿಯನ್ನೇ ಬದಲಿಸಿತು!
ಇದ್ಯಾವ ಸುಮಧುರ ಗಂಧ...? ನನಗರಿವಿಲ್ಲದಂತೇ ಮಾತು ಜಾರಿತು....
ಅವಳು ಒಮ್ಮೆ ಅತ್ತ ನೋಡಿ ಮೆಲ್ಲನೆ ಉಸುರಿದಳು....`ನಾನೂ ಅವನೂ ಒಮ್ಮೊಮ್ಮೆ ಇಲ್ಲಿ ನಿಂತು ಮಾತಾಡುವಾಗ ಹೀಗೇ....ಒಮ್ಮೆ ಗಾಳಿ ಬೀಸಿದ ಘಳಿಗೆ... ಮೌನವಾಗಿ ಬಿಡುತ್ತೇವೆ ಒಬ್ಬರನ್ನೊಬ್ಬರು ನೋಡುತ್ತಾ...'ಅವಳು ಯಾವುದೋ ಸ್ವಪ್ನ ಲೋಕದಲ್ಲಿ ಇರುವವಳಂತೆ ಮಾತಾಡುತಿದ್ದಳು ಕಣ್ಣುಗಳಲ್ಲಿ ಈ ತನಕ ಕಾಣದ ಕಾಂತಿ....
***************
ಕೆಲ ಸಮಯದ ನಂತರ ಅವಳನ್ನು ಕೇಳಿದೆ `ಇದ್ಯಾವ ಹೂವು..?'
ಅಷ್ಟೊತ್ತಿಗೆ ಅವಳು ಭೂಮಿ ಮೇಲೆ ವಾಪಸ್ಸು ಬಂದಿದ್ದಳು `ಓ...ಅದಾ ಬಾ ಇಲ್ಲಿ ತೋರಿಸ್ತೇನೆ...' ಅಂತ ಸಡಗರದಿಂದ ಕರೆದೊಯ್ದಳು ಅಚ್ಚಬಿಳಿ,ತಿಳಿಗುಲಾಬಿ,ದಟ್ಟಪಿಂಕ್ ಮತ್ತು ನೇರಳೆ ಬಣ್ಣದ ಪುಟಾಣಿ ಗೊಂಚಲುಗಳಲ್ಲಿ ನಗುತ್ತಿದ್ದ ಹೂಗಳನ್ನು ತೋರಿಸಿ `ಇದೇ Stock' ಅಂದಳು
ನನಗೆ ಭಯಂಕರ ಸಿಟ್ಟು ಬಂತು! ಇಂಥಾ ಸುಮಧುರ ಪರಿಮಳದ ಸುಂದರಿಗೆ `ಪ್ಪೆಪ್ಪೆಪ್ಪೆ' ಎನ್ನುವಂಥಾ ಹೆಸರು! ಈ unromantic ಹೆಸರಿಟ್ಟ ವ್ಯಕ್ತಿನ ಚೂರು ಚೂರು ಮಾಡಿ ಉಪ್ಪಿನ ಕಾಯಿ ಹಾಕಿದರೂ ಪಾಪ ಬರುವುದಿಲ್ಲ ಅನ್ನಿಸಿತು!
***************
ನನ್ನ ಸ್ನೇಹಿತೆ ನಮ್ಮೂರು ಬಿಟ್ಟು ಹೊರಡುವಾಗ ಅವಳ ಕೆಲವು ಗಿಡಗಳೊಂದಿಗೆ Stockಅನ್ನು ನನ್ನಲ್ಲಿ ಕೊಟ್ಟು ಹೋದಳು
ಈಗ ನನ್ನ ಅಂಗಳದಲ್ಲಿ ಸುಗಂಧದ ಹೊಳೆ ಹರಿಯುತ್ತಿದೆ.
ಗಾಳಿ ಬೀಸಿ ಕಂಪು ತಂದು ಮನಕ್ಕೆ ಮುದ ನೀಡಿದಾಗಲೆಲ್ಲಾ ನನ್ನ ಗೆಳತಿಯ ನೆನಪಾಗುತ್ತದೆ...
ಇಹದ ಪರಿಮಳದ ಹಾದಿ-2

Tuesday, January 16, 2007

ziva ಎಂಬ diva!


ಡಿಸೆಂಬರ್ ಜನವರಿಗಳ ಕಡು ಚಳಿಯಲ್ಲಿ ಸುತ್ತಲ ಜಗತ್ತೆಲ್ಲಾ ಸ್ಠಬ್ದ... ಸ್ಠಬ್ದ...ಮಂಕಾದ ಆಕಾಶ... ಮನಸ್ಸಿಗೂ ಏನೋ ಮಂಕು ಕವಿದಂತನ್ನಿಸುವ ಘಳಿಗೆಗಳು...ಎಲ್ಲಿಂದ ತರುವುದು ಉತ್ಸಾಹವನ್ನು? ನಾ ಕಂಡು ಕೊಂಡ ಉತ್ತರ ಈ ziva ಎಂಬ diva!
Zivaಳ ಸುಗಂಧದಲೆಗಳು ನನ್ನನ್ನಿಡೀ ಆವರಿಸಿದಾಗ ಆ ಅಧ್ಬುತ ಅನುಭೂತಿ... ಮಾತಲ್ಲಿ ವಿವರಿಸಲು ಕಷ್ಟ ಆದರೂ...
ಮಾಗಿಯ ಚಳಿಯಲ್ಲಿ ವಸಂತವೇ ಮನೆಯೊಳಗೆ ಬಂದಂತೆ...
ಶುಭ್ರ ಶ್ವೇತ ರೆಕ್ಕೆಗಳ ಪುಟ್ಟಪುಟ್ಟ ಚಿಟ್ಟೆಗಳು,
ಮನೆ-ಮನವೆಲ್ಲಾ ಹಾರಾಡಿ ಪನ್ನೀರು ಚಿಮುಕಿಸಿದಂತೆ...
ಬಿಳಿ ಬಿಳಿ ಮೊಲ ಪುಟು ಪುಟನೆ ಕುಪ್ಪಳಿಸಿದಂತೆ...
ಮೃದು ಮೈನ ಈ ಬಾಲೆಯರು ಚೆಲುವು ತೋರಿ
ತುಂಟ ಮರಿ ದುಂಬಿಗಳನ್ನು ತಮ್ಮೆಡೆಗೆ ಕರೆಯುತ್ತಿದ್ದರೇ...
ನಾನು ಹ್ಯಾಪ ಮೂತಿ ಹಾಕಿಕೊಂಡು ಹೇಗೆ ಕೂರುವುದು ಹೇಳಿ?
ಉಹುಂ...ಆಗುವುದಿಲ್ಲಾ...Ziva ಮಾಯೆಯೇ ಅಂಥದ್ದು!
ಅದಕ್ಕೇ ಚಳಿಗಾಲದ ಈ ಮೂರು ತಿಂಗಳು ನಮ್ಮನೆಯಲ್ಲಿ ನಾನು Ziva paperwhite Narcissus ಅನ್ನು ಬೆಳೆಸುತ್ತೇನೆ
ಅದೂ ಒಂದಿಷ್ಟೂ ಮೈಕೈ ಮಣ್ನು ಮಾಡಿ ಕೊಳ್ಳದೇ....!
ಹೇಗೆ ಅಂತೀರಾ? ಆಳವಿಲ್ಲದ ಬೋಗುಣಿಯೊಂದರಲ್ಲಿ ಒಂದಿಷ್ಟು ಪುಟ್ಟಪುಟ್ಟ ಕಲ್ಲು ತುಂಬಿ 5-6 Ziva ಗೆಡ್ದೆಗಳನ್ನು ಕೂರಿಸಿ ನೀರು ಹುಯ್ದರಾಯಿತು! ಮನೆಯ ಮೂಲೆಯೊಂದರಲ್ಲೋ, ಬಾಲ್ಕನಿಯಲ್ಲೋ ಇಟ್ಟು ವಾರಕ್ಕೊಮ್ಮೆ ನೀರು ಹಾಕಬೇಕು ಅಷ್ಟೇ...2-3 ವಾರದಲ್ಲೇ ಮನೆಯಿಡೀ ಘಮಘಮ...ಹೇಳಿ...ನೆಟ್ಟ ಮೂರೇ ವಾರದಲ್ಲಿ ಸುಗಂಧ ಚೆಲ್ಲುವ Zivaಳಂಥಾ ಹೂ ಇನ್ಯಾವುದಿದ್ದೀತು?
ಬಾಲ್ಯದಲ್ಲಿ ನನಗೆ ಮಲ್ಲಿಗೆ ಹೂ ಕಟ್ಟುವುದು (ಹೂ ಮುಡಿಯುವುದಕ್ಕಿಂತಲೂ) ತುಂಬಾ ಪ್ರಿಯವಾದ ಕೆಲಸವಾಗಿತ್ತು ಕೈಯೆಲ್ಲಾ ಸುವಾಸನೆಯಿಂದ ಘಮ ಘಮಿಸುವುದಲ್ಲಾ ಅದಕ್ಕೇ...ಮಲ್ಲಿಗೆ ಕಾಲದಲ್ಲಿ ನಮ್ಮನೆಗೆ ಬಂದ ಯಾರೂ ನಾನು ಕಟ್ಟಿದ ಹೂ ಮುಡಿಯದೇ ಹೊರಡುತ್ತಿರಲಿಲ್ಲ ಈಗ ನಮ್ಮ ಮನೆಗಾಗಿ ಅಲ್ಲದೇ ನನ್ನ ಸ್ನೇಹಿತರಿಗೆಂದು ಕೆಲವು 'Ziva ಬೋಗುಣಿ'ಗಳನ್ನು ಜೋಡಿಸುತ್ತೇನೆ ಹೀಗೆ ziva ನನ್ನ ಮತ್ತು ನನ್ನ ಸ್ನೇಹಿತರ ನಡುವೆ `ಸುಗಂಧ ಸೇತುವೆ'ಯಾಗಿದ್ದಾಳೆ
ಇಹದ ಪರಿಮಳದ ಹಾದಿ-1

Friday, January 05, 2007

`ಇಹದ ಪರಿಮಳದ ಹಾದಿ'



ತಾಯಿನೆಲದಿಂದ ದೂರ ಇರುವವರಿಗೆ ಹೆಜ್ಜೆ ಹೆಜ್ಜೆಗೂ `ನಮ್ಮೂರು' ನೆನಪಾಗುವುದು ಸುಳ್ಳಲ್ಲ.ಹಳೆಯ ನೆನಪುಗಳು ಒಮ್ಮೊಮ್ಮೆ ತುಟಿಯಂಚಿನಲ್ಲಿ ಕಿರು ನಗು ತಂದರೆ
ಹಲವು ಬಾರಿ ನಿಟ್ಟುಸಿರು ತರುತ್ತದೆ. ಮಾತಿನಲ್ಲಿ ವಿವರಿಸಲಾರದ ಸಂಕಟ ಸುಂಟರಗಾಳಿಯಂತೆ ಸುತ್ತಿಕೊಂಡು ಗಿರಗಿರನೆ ತಿರುಗಿಸಿ ದೊಪ್ಪನೆ ನೆಲಕ್ಕೆ ಕುಕ್ಕಿ ಹೊರಟು ಹೋಗುತ್ತದೆ
ಅಂಥಾ ಘಳಿಗೆಯಲ್ಲಿ ಇನ್ನು ಈ ದಿನ ಪೂರ್ತಿ ನಿಟ್ಟುಸಿರಾಗುವುದೇ ನನಗೆ ಬರೆದಿರುವುದು ಅಂತ ಅನಿಸಿ ಬಿಡುತ್ತದೆ ನಿಮ್ಮಲ್ಲಿ ಹಲವರಿಗೆ ನನ್ನ ಹಾಗೇ ಅನ್ನಿಸಿರಬಹುದು

ನಮ್ಮನೆ ಅಂಗಳದ ದುಂಡುಮಲ್ಲಿಗೆ ಹೂವಿನ ಸುವಾಸನೆ,ಗಿಣಿಮೂತಿ ಮಾವಿನ ಕಾಯಿಯ ನೆನಪು ಬಂದಾಗಲೆಲ್ಲಾ ನನಗೆ ಸ್ವರ್ಗ ಕೊಟ್ಟರೂ ಬೇಡ ನಮ್ಮೂರಿಗೆ ಓಡಿ ಹೋಗಿ ಬಿಡೋಣಾ ಅನ್ನಿಸುತ್ತೆ
ಹೇಳಿ...ಏನು ಮಾಡುವುದೂ...?

ನನ್ನದೇ ವಿಧಾನದಿಂದ ನನ್ನ ಮನಸ್ಸಿಗೆ ಸಮಾಧಾನ ಹೇಳ ಹೊರಟ ನಾನು ಅಚಾನಕ್ಕಾಗಿ ತುಳಿದಿದ್ದು `ಈ ಇಹದ ಪರಿಮಳದ ಹಾದಿ...' ಸುವಾಸನೆ ಬೀರುವ ಹೂಗಳನ್ನು ಹುಡುಕಿ ಹೊರಟಾಗ ನನಗೆ ಸಿಕ್ಕಿದ ಸುಗಂಧ ಸಿರಿಯನ್ನು ನಿಮ್ಮೊಂದಿಗೆ ಹಂಚಿ ಕೊಳ್ಳಬೇಕೆಂದು ಹೊಸದೊಂದು ಮಾಲೆ ಪೋಣಿಸುತ್ತಿದ್ದೇನೆ

ಅಮ್ಮನ ಮನೆ ಅಂಗಳದ ದುಂಡು ಮಲ್ಲಿಗೆ ನೆನಪು ಕಾಡುವುದು ಈ ಕ್ಷಣಕ್ಕೂ ಸತ್ಯ ಆದರೆ ಮಹಾಭಾರತದ ಭೀಮಸೇನ ಸೌಗಂಧಿಕಾ ಪುಷ್ಪವನ್ನು ಹುಡುಕಿ ಹೊರಟಂತೆ ನಾನು ನಡೆಸಿದ ಈ ಪ್ರಯತ್ನ ನನ್ನ ಮನಸ್ಸಿಗೆ ಒಂದಿಷ್ಟು `ಹಾಯಿ' ತಂದಿದ್ದು ಸುಳ್ಳಲ್ಲ
ಈ ಅನನ್ಯ ಕುಸುಮಗಳು ನನ್ನ ಮನಕ್ಕೆ ನೆಮ್ಮದಿ ತಂದ ತೆರದಿ ನಿಮಗೂ ತಂಪೆರೆಯುತ್ತದೆ ಅಂತ ನನ್ನ ಆಶಯ

ಸದ್ಯದಲ್ಲೇ ಪ್ರಾರಂಭವಾಗಲಿರುವ `ಇಹದ ಪರಿಮಳದ ಹಾದಿ' ಯಲ್ಲಿ ನನ್ನೊಂದಿಗೆ ಹೆಜ್ಜೆ ಹಾಕುವಿರಾ...?

***************************
ಟಿಪ್ಪಣಿ- ಮೇಲೆ ಕಾಣುವ ಚಿತ್ರದಲ್ಲಿರುವುದು ಕೃತಕವಾಗಿ ಒತ್ತೊತ್ತಾಗಿ ಜೋಡಿಸಿದ ಪ್ಲ್ಯಾಸ್ಟಿಕ್ ಹೂಗಳಲ್ಲ
ನಿಜವಾದ ಟುಲಿಪ್ ಹೂಗಳು ಅರಳಿರುವ ಹೂವಿನ ಕುಂಡ. ನೀವು ನಿಧಾನವಾಗಿ ಗಮನಿಸಿದರೆ ಕುಂಡ ನಿಮಗೆ ಕಾಣಬರುತ್ತದೆ!