ಚೆಂಗುಲಾಬಿ
ಚೆಂಗುಲಾಬಿಯ ನಡುವೆ ನಾನಿನ್ನ ಕಂಡೆ
ನಿನ್ನ ಮುಡಿಯೊಳಿತ್ತು ಮಲ್ಲಿಗೆಯ ದಂಡೆ
ನಿನ್ನೊಲವು ಜಿಂಕೆಗಳು ನರ್ತಿಸುವ ತಾಣ
ನಿನ್ನೊಲವು ನಿಜದಲ್ಲಿ ನನ್ನೆದೆಯ ಪ್ರಾಣ
ನಿನ್ನೊಲವು ತಾರೆಗಳು ತುಂಬಿರುವ ದೋಣಿ
ಕೆಂಪು ಕೆನ್ನೆಯ ಹೆಣ್ಣೇ ನೀನೆನ್ನ ರಾಣಿ
ತಿಲಕ ಹೊಳೆಯುತ್ತಿತ್ತು ನಿನ್ನ ಹಣೆಯಲ್ಲಿ
ನಿಟ್ಟುಸಿರ ಹಬ್ಬಿಸುತ ಹೂದೋಟದಲ್ಲಿ
ಹಸಿರು ಗರಿಕೆಯ ಮೇಲೆ ನೀನಿತ್ತ ಬಂದೆ
ಬರುವಾಗ ಒಂದೆರಡು ಹೂಗಳನು ತಂದೆ
ನೀನಾವ ದೇವತೆಯೊ ನಾನೇನು ಬಲ್ಲೆ
ಬಿಳಿಯುಡಿಗೆ ಉಟ್ಟವಳೆ ನೀನೆನ್ನ ನಲ್ಲೆ
ಉತ್ತರವ ಚೆಲ್ಲಿಬಿಡು ನಿನ್ನ ಕಣ್ನಲ್ಲೇ
ಬಳಿಬಂದು ನಿಂತವಳು ನೀನೇಕೆ ನಿಲ್ಲೆ?
-ಕೆ.ಎಸ್. ನರಸಿಂಹ ಸ್ವಾಮಿ.
*********
ಬಣ್ಣಗಳ ಬಗ್ಗೆ ಸರಣಿ ಮಾಡುತ್ತಿರುವಾಗ ಕೆಂಪನ್ನು ಮರೆಯುವುದು ಹೇಗೆ?
ಆ ಕೆಂಪು ಹೂ, ಕೆಂಪು ಗುಲಾಬಿಯಲ್ಲದೇ ಮತ್ಯಾವುದಾಗಲು ಸಾಧ್ಯ?
ಕೆ.ಎಸ್.ನ ಬಗ್ಗೆ ಹಿಂದೊಮ್ಮೆ ಬರೆದಿದ್ದೆ. ಅವರ ಬಗ್ಗೆ ಬರೆದು ತೀರಿಸಲು ಸಾಧ್ಯವಿಲ್ಲ
ಕೆ.ಎಸ್.ನ ಬಗ್ಗೆ ಹಿಂದೊಮ್ಮೆ ಬರೆದಿದ್ದೆ. ಅವರ ಬಗ್ಗೆ ಬರೆದು ತೀರಿಸಲು ಸಾಧ್ಯವಿಲ್ಲ
ಸೋ ಈ ಚೆಂಗುಲಾಬಿ ಪದ್ಯದ ಬಗ್ಗೆ ಬರೆಯುತ್ತೇನೆ
ಬೆಂಗಳೂರು ಆಕಾಶವಾಣಿಯಲ್ಲಿ `ನವಸುಮ'ಎಂಬ ಕಾರ್ಯಕ್ರಮದಲ್ಲಿ ಈ ಹಾಡು ಮೊದಲು ಕೇಳಿದ್ದು ನಾನು
ಹದಿನಾರು ಹದಿನೇಳರ ವಯಸ್ಸು ಮನದ ತುಂಬ ಕೆಂಪು ಗುಲಾಬಿಯ ದಳಗಳು ಅರಳಿ ನಿಂತು ಬಿಟ್ಟವು
ಶಿವಮೊಗ್ಗ ಸುಬ್ಬಣ್ಣ ಅವರ ಧೀರ ಗಂಭೀರ ಧ್ವನಿಗೆ ಜೊತೆಕೊಟ್ಟದ್ದು ಬಿ.ಆರ್,ಛಾಯಾ ಅವರ ತುಂಟತನ ಬೆರೆತ ಇನಿದನಿ
ಆದರೆ ಈ ಜೇನಿನ ಹಾಡನ್ನು ನಂತರ ಇನ್ಯಾರೂ ಹಾಡಿದ್ದು ನಾನು ಕೇಳಲೇ ಇಲ್ಲ
"ನಿನ್ನೊಲವು ತಾರೆಗಳು ತುಂಬಿರುವ ದೋಣಿ" ಸಾಲಿನಲ್ಲಿ ಕೆ.ಎಸ್.ನ ಮೆರೆದಿರುವ ಉಪಮೆಯನ್ನು ಜೇನು ತೊಟ್ಟಿಕ್ಕುವಂತೆ ಹಾಡಿದ್ದು ಛಾಯಾ
"ಉತ್ತರವ ಚೆಲ್ಲಿಬಿಡು ನಿನ್ನ ಕಣ್ನಲ್ಲೇ"ಎಂದು ಮೋಡಿ ಗೊಳಿಸಿದ ಸುಬ್ಬಣ್ಣ "ಬಳಿಬಂದು ನಿಂತವಳು ನೀನೇಕೆ ನಿಲ್ಲೆ?" ಎಂದು ಕೇಳಿದ್ದು ಇನ್ನೂ ನನ್ನ ಕಿವಿಯಲ್ಲಿ ಗುಃಯ್ ಗುಡುತ್ತಿದೆ