ಅತ್ತೂ ಅತ್ತೂ ಅಮ್ಮನಾಗುವ ಹೊತ್ತು....
ಕಳೆದ ಹತ್ತು ದಿನಗಳಿಂದ ಗೆಳತಿಯೊಬ್ಬಳು ಅಳುತ್ತಿದ್ದಾಳೆ
ಅವಳ ಅಮ್ಮ ಮರಳಿ ಬಾರದ ಊರಿಗೆ ಹೊರಟು ಹೋಗಿಬಿಟ್ಟಿದ್ದಾರೆ
ಇವಳಿಲ್ಲಿ ಅಮೆರಿಕಾದ ಮರಳ ಕಣಿವೆಯಲ್ಲಿ ಕೂತು ದೂರದ ರಾಜ ಮಂಡ್ರಿಯಲ್ಲಿ
ಕಳೆದು ಹೋದ ಅಮ್ಮನ ಮಡಿಲಿಗಾಗಿ ಕಣ್ತುಂಬಿ ಕೊಳ್ಳುತ್ತಿದ್ದಾಳೆ...
ವಿಷಯ ಅಷ್ಟೇ ಆಗಿದ್ದರೆ ನಮ್ಮೆಲ್ಲರ ಮನ ಅಷ್ಟೋಂದು ಕದಡುತ್ತಿರಲಿಲ್ಲವೇನೋ....
ಅಜ್ಜಿ ಕೈಲಿ ನೀರು ಹಾಕಿಸಿಕೊಂಡು ಎಣ್ಣೆ ತೀಡಿಸಿಕೊಂಡು
ಮುದ್ದು ಹಣೆಗೊಂದು ಕಪ್ಪು ಬೊಟ್ಡಿಡಿಸಿಕೊಳ್ಳಲು ಆ ಪುಟಾಣಿ ಹುಡುಗಿ
ಭೂಮಿಗೆ ಬರುವ ಮುನ್ನವೇ ಏನೋ ಅವಸರವಾಗಿ
ಅಜ್ಜಿ ದಾಪುಗಾಲಿಟ್ಟುಕೊಂಡು ನಡೆದು ಹೋಗಿಬಿಟ್ಟಿದ್ದಾರೆ
ನನ್ನ್ನ ಗೆಳತಿಗೀಗ ಎಂಟು ತಿಂಗಳು...
ಅಮ್ಮನನ್ನು ಕಳೆದು ಕೊಂಡಿರುವ ಅವಳಿಗೆ ನಾವು
ಯಾವ ಯಾವ ಮಾತುಗಳಿಂದ ತಾನೆ ಸಮಾಧಾನ ಹೇಳುವುದು???
ಅತ್ತೂ ಅತ್ತೂ ಅಮ್ಮನಾಗುವ ಹೊತ್ತಿಗೆ ಎಷ್ಟು ಬಾಡಿ ಹೋಗಿ ಬಿಡುತ್ತಾಳೋ ಹುಡುಗಿ ಅಂತ ನಾವೆಲ್ಲಾ ಮಿಡುಕುತ್ತಿದ್ದೇವೆ
************
************
ಗೆಳತೀ...
ನಿನ್ನ ಚೆಂದದ ಮಗಳು ಸುಖವಾಗಿ ಹುಟ್ಟಲಿ
ಚಿಗುರಿನ ಕನಸಿನಲ್ಲಿ ಮನದ ದುಗುಡ ಕಳೆಯಲಿ
ಬಾನಲ್ಲಿ ನಕ್ಷತ್ರವಾದ ಅಮ್ಮನ ಕಣ್ಣಿನ ತಂಪು
ಪುಟಾಣಿಯ ನೆತ್ತಿವರೆಗೆ ಪಸರಿಸಲಿ
ಆಮೆನ್...