Friday, April 24, 2009

ಹೇಳಬೇಕೇ ಇನ್ನು ರಸಿಕರ ಗತಿಯನು?

ಚೆಲುವೆಯರ ನಗೆಯಂತೆ ಬೆಳ್ಳಗೆ ಹೊಳೆವ ಮೊಲ್ಲೆಯ ಹೂಗಳು

ತುಂಬಿ ತುಳುಕುವ ಬಯಲುಗಳನೊಳಗೊಂಡಿರುವ ಉಪವನಗಳು

ಸರ್ವಸಂಗ ತ್ಯಾಗಿ ಗಳ ವರಯೋಗಿಗಳ ಜಿತ ಮನವನೂ

ಸೆಳೆವವೆನ್ನಲು ಹೇಳಬೇಕೇ ಇನ್ನು ರಸಿಕರ ಗತಿಯನು?

-ಕಾಳಿದಾಸನ ಋತುಸಂಹಾರ
ಅನುವಾದ-ಹೆಚ್ .ಎಸ್ ವೆಂಕಟೇಶ ಮೂರ್ತಿಯವರ 'ಋತು ವಿಲಾಸ'



ಚಿತ್ರದ ಬಗ್ಗೆ- ಇಂಡಿಯ ದಲ್ಲಿ ಅಮ್ಮನ ಮನೆಯಲ್ಲಿ ಅರಳಿದ್ದ ನಿತ್ಯ ಮಲ್ಲಿಗೆ

ವಸಂತ ಹಬ್ಬ-7

Labels:

Tuesday, April 21, 2009

ಹರಡಿ ನಿಂತು ಹೊಳೆವ ಹಾಸ...


ಬಂದಿದೆ ವಸಂತ ಮಾಸ
ಹರಡಿ ನಿಂತು ಹೊಳೆವ ಹಾಸ


ಮಾಗಿ ಬೆನ್ನನೇರಿ ಚೈತ್ರ
ಬಂದು ನಕ್ಕ ಮೋಡಿಗೆ
ಮುಗಿಲಿಗೊರಗಿ ನಿಂತ ಭುವಿಗೆ
ಎಚ್ಚರಾಯ್ತು ಮೆಲ್ಲಗೆ


ಎಲೆಯ ಮರೆಯ ಹಕ್ಕಿ ಕೊರಳ
ಉಕ್ಕಿ ಹರಿದ ಗಾಯನ
ಮರಗಳೆಲೆಯ ಅಪ್ಪಿನಿಂತ
ಹೂವು ತಳಿರು ಕಾರಣ


ಹಸಿರು ಹೊನ್ನ ಧರಿಸಿ ಮೆರೆವ
ಕಾಡಿನೊಡತಿ ಕಣ್ಣಲಿ
ಹೊಳೆದ ಬೆಳಕು ಸುತ್ತ ಸುರಿದು
ಬೆಳ್ಳಿಯಾಯ್ತು ಮಣ್ಣಲಿ


ನೆಳಲು ಬೆಳಕಿನಾಟದೆದಿರು
ಸೂರೆಹೋದ ಮನಸಲಿ
ಹೊಳೆದುದೇನೋ ಆಸೆ ಕನಸು
ಹೇಳದಂಥ ಬಗೆಯಲಿ

-ಈ ಕವಿತೆ ಬರೆದ ಕವಿ ಯಾರೆಂದು ನನಗೆ ಗೊತ್ತಿಲ್ಲ ನಿಮಗೆ ತಿಳಿದಿದ್ದರೆ ತಿಳಿಸಿ...

ಚಿತ್ರದ ಬಗ್ಗೆ- ಸ್ಟೀವನ್ಸ್ ಕ್ರೀಕ್ ಪಾರ್ಕ್ ನಲ್ಲಿ ಉಲಿಯುತ್ತಿದ್ದ ನೀಲಿ ಹಕ್ಕಿ

ವಸಂತ ಹಬ್ಬ-6

Labels:

Monday, April 20, 2009

'ಇವನ' ಹೆಸರ ಹೇಳಲಾರೆನು....


ಶಿಶಿರ ಸವಾರ

ಮತ್ತೆ ಮತ್ತೆ ಬರುವವನು
ಹೊತ್ತು ಹೊಂಚಿ ಇಣುಕುವನು
ಕತ್ತಲಲ್ಲು ಕೆಣಕುವನು
ಯಾವ ಊರ ವೀರನು?

ಮೆಲ್ಲ ಮೆಲ್ಲ ಸುಳಿವವನು
ಸೊಲ್ಲು ಎತ್ತಿ ಕರೆವವನು
ಎಲ್ಲ ಬಲ್ಲೆ ಎನುವವನು
ಯಾರ ದೂತನೀತನು?

ಚಿಗುರ ಕೆಂಪು ಬರೆವವನು
ಚಿಗರೆ ಗುಂಪು ತರುವವನು
ಚೆನ್ನ ಬಣ್ಣ ಬೆರೆಸುವನು
ಯಾವ ಚಿತ್ರಕಾರನು?

ಕುಸುಮ ಸ್ಫೋಟ ನಡೆಸುವನು
ಕಿಲಕಿಲಗಳ ನುಡಿಸುವನು
ಕೆಲಸ ಕಾರ್ಯ ಕೆಡಿಸುವನು
ಯಾರ ಮನಕೆ ಮಾರನು?

ಹುರುಪು ಹರುಷ ತುಂಬುವನು
ಬಿಸುಪು ಬಂಧ ಬೆಸೆಯುವನು
ಅರಿವು ಕಳೆದು ನಿಲಿಸುವನು
ಹೆಸರ ಹೇಳಲಾರೆನು!
-ಸುಪ್ತದೀಪ್ತಿ
ಚಿತ್ರದ ಬಗ್ಗೆ- ಸಾಂತಾಕ್ಲಾರಾದ ಹ್ಯಾಲ್ಫರ್ಡ್ ಗಾರ್ಡನ್ಸ್ ನಲ್ಲಿ ಅರಳಿದ್ದ ಸಾಸರ್ ಮ್ಯಾಗ್ನೋಲಿಯಾ ಹೂಗಳ ಮರ
ವಸಂತ ಹಬ್ಬ-5

Labels:

Friday, April 17, 2009

ಬಂದಂತೆ ಮರು ವಸಂತ

ಬಂದಂತೆ ಮರು ವಸಂತ
ನೀ ಬಂದೆ ಬಾಳಿಗೆ
ಅನುರಾಗ, ಆಮೋದ
ಎದೆಯಲ್ಲಿ ತುಂಬಿದೆ

ಕೈ ಸೋಕಿ, ನಿನ್ನ ಬಿಸಿ ತಾಕಿ,
ಚಿಮ್ಮಿದೆ ಹೊಸ ಚಿಗುರು;
ನಗೆಯಂತೆ, ನಿನ್ನ ಬಗೆಯಂತೆ
ಅರಳಿದೆ ಹೂವುಗಳು;
ನಿನ್ನ ಪ್ರೀತಿಯ ಪ್ರಖರತೆಗೆ
ಮಾಗಿಯ ಮಂಜು ತೆರೆ
ಕರಗಿ, ಸೊರಗಿ, ಮರೆಯಾಗಲು
ಜಗವೇ ಝಗಝಗಿಸಿದೆ.

ಕಂದಿದ್ದ ಕಣ್ಣಿಗೆ ಹೊಸ ಹೊಳಪು
ನೀ ತಂದೆ ಹೊಸ ನೋಟವ,
ಎಂದೆಂದೂ ಜೋಡಿ ನಾನೆಂದು
ನೀಡಿದೆ ಒಡನಾಟವ;
ನಿನ್ನ ಒಲವೆಂಬ ಸಂಜೀವಿನಿ
ಹೊಸ ಶಕ್ತಿ ತೋಳಿಗೆ,
ಧೃತಿಯ ತಂದಿಹುದು ಹೆಜ್ಜೆಗೆ,
ಭರವಸೆಯ ಬದುಕಿಗೆ.

- ಬಿ ಆರ್ ಲಕ್ಷ್ಮಣರಾವ್.

ಚಿತ್ರದ ಬಗ್ಗೆ-ಸಿಯರಾ ರೋಡ್ ನಲ್ಲಿನ ಐರಿಸ್ ಫಾರ್ಮ್ ನಲ್ಲಿ ಅರಳಿದ್ದ ಐರಿಸ್ ಹೂಗಳು

ವಸಂತ ಹಬ್ಬ-4

Labels:

Thursday, April 16, 2009

ಯಾವ ಸಂತ ನೀ ವಸಂತ




ಯಾವ ಸಂತ ನೀ ವಸಂತ
ಬಂದು ನನ್ನಲಿಣುಕಿದ
ಮೈಯನ್ನೆಲ್ಲಾ ಕಲಕಿದಾ
ಮನಸಿನಲ್ಲಿ ಕಲೆಸಿದಾ

ಜುಂ ಎನುವುದೇನು ಚೆಂದ
ಕಮ್ಮನೆರದೆ ಕ್ಷಣ ಕ್ಷಣ
ಬವಣೆಗಳಿಗೆ ಕವಣೆ ಇಡುವ
ಕೋಮಲತೆಯ ಅಣುರಣ

ಉದ್ವೇಗದಿ ಸಂಚು ಹೂಡಿ
ಚಿಗುರಿಸಿದನು ಕಾತರ
ಬಯಕೆ ಬುಗ್ಗೆಯೊಡೆದ ಮೊಗ್ಗೆ
ರೋಮಾಂಚನದಿಂಚರ

-ವೇಣುಗೋಪಾಲ ಸೊರಬ
ಚಿತ್ರದ ಬಗ್ಗೆ-
ಸ್ಯಾನ್ ಹೋಸೆ ನಗರದ ಪ್ರಸಿದ್ದ ರೋಸ್ ಗಾರ್ಡನ್ನಲ್ಲಿ ಅರಳಿದ ಗುಲಾಬಿ


ವಸಂತ ಹಬ್ಬ-3

Labels:

Wednesday, April 15, 2009

ಕಾಳಿದಾಸ ಕಂಡ ವಸಂತ


ಮರದಲರಳಿವೆ ಹೂವು,ಕೊಳದಲಿ ಕಮಲಗಳು ತೇಲುತಿವೆ
ರಾಗದಾವೇಗಕ್ಕೆ ಸಿಕ್ಕವರೆದೆಯಲಿ ಬೆದೆಯುಕ್ಕಿವೆ
ಹಗಲು ಗೆಲುವಾಗಿಹುದು, ಸಂಜೆಯು ರಂಜನೀಯವು ಎನಿಸಿದೆ
ಚೈತ್ರಮಾಸವು ಜಗದ ಚೆಲುವಿಗೆ ಚೆಲುವಿನುಡುಗೊರೆ ನೀಡಿದೆ
-ಕಾಳಿದಾಸನ ಋತುಸಂಹಾರ
ಅನುವಾದ-ಹೆಚ್ .ಎಸ್ ವೆಂಕಟೇಶ ಮೂರ್ತಿಯವರ 'ಋತು ವಿಲಾಸ'

ಚಿತ್ರದ ಬಗ್ಗೆ-
ಉತ್ತರ ಕ್ಯಾಲಿಫೋರ್ನಿಯಾದ ಮೆಂಡೋಸಿನೋ ಬೊಟಾನಿಕಲ್ ಗಾರ್ಡನ್ ನಲ್ಲಿ ಅರಳಿದ್ದ ರೋಡೋಡೆಂಡ್ರಾನ್ ಹೂ ಮರಗಳು



ವಸಂತ ಹಬ್ಬ-2

Labels:

Tuesday, April 14, 2009

ದುರ್ಗದಲ್ಲಿ ಇಂದಿನಿಂದ ವಸಂತಹಬ್ಬ


ವಸಂತ ತನ್ನ ಮಾಯಾಜಾಲ ಮತ್ತೆ ಬೀಸಿದ್ದಾನೆ ಎಲ್ಲರ ಮನದಲ್ಲೂ ಹುರುಪು ತುಂಬುವ ಮಾಯಾವಿ ಅವನು!
ಬನ್ನಿ ಇನ್ನು ಕೆಲವು ದಿನ ವಸಂತನ ಸೊಬಗಿನಲ್ಲಿ ಮುಳುಗೇಳೋಣ...

ವಸಂತ ಬಂದ ಋತುಗಳ ರಾಜ ತಾ ಬಂದ
ಚಿಗುರನು ತಂದ ಹೆಣ್ಗಳ ಕುಣಿಸುತ ನಿಂದ
ಚಳಿಯನು ಕೊಂದ ಹಕ್ಕಿಗಳುಲಿಯಗಳೇ ಚಂದ
ಕೂವೂ ಜಗ್ ಜಗ್ ಪುವ್ವೀ ಟೂವಿಟ್ಟವೂ...

ಕುರಿ ನೆಗೆದಾಟ ಕುರುಬರ ಕೊಳಲಿನೂದಾಟ
ಇನಿಯರ ಬೇಟ ಬನದಲಿ ಬೆಳದಿಂಗಳೂಟ
ಹೊಸ ಹೊಸ ನೋಟ , ಹಕ್ಕಿಗೆ ನಲಿವಿನ ಪಾಠ
ಕೂವೂ ಜಗ್ ಜಗ್ ಪುವ್ವೀ ಟೂವಿಟ್ಟವೂ...

ಮಾವಿನ ಸೊಂಪು ಮಲ್ಲಿಗೆ ಬಯಲೆಲ್ಲ ಕಂಪು
ಗಾಳಿಯ ತಂಪು ಜನಗಳ ಜಾತ್ರೆಯ ಗುಂಪು
ಕಿವಿಗಳಿಗಿಂಪು ಹಕ್ಕಿಗಳುಲುಹಿನ ಪೆಂಪು
ಕೂವೂ ಜಗ್ ಜಗ್ ಪುವ್ವೀ ಟೂವಿಟ್ಟವೂ...
ಬಂದ ವಸಂತ -ನಮ್ಮಾ ರಾಜ ವಸಂತ...

-ಬಿ.ಎಂ.ಶ್ರೀ

ಚಿತ್ರದ ಬಗ್ಗೆ-
ಕಳೆದ ವಾರ ನಾವು ಭೇಟಿ ನೀಡಿದ ಸ್ಟಾಕ್ಟನ್ ನಗರದ ಬಳಿಯ ' ಡ್ಯಾಫೋಡಿಲ್ ಹಿಲ್' ಎಂಬ ಜಾಗದಲ್ಲಿ ತೆಗೆದ ಬಂಗಾರದ
ಡ್ಯಾಫೋಡಿಲ್ ಗಳು

ವಸಂತ ಹಬ್ಬ-1

Labels: