Sunday, July 12, 2009

ಕ್ಯಾಲೆಂಡರ್ ಮೇಲಿನ ಗುರುತುಗಳು


ಎದುರಿಗೆ ಪುಟಾಣಿ ತಟ್ಟೆಯಲ್ಲಿಟ್ಟ ಉದ್ದಿನ ವಡೆ...
ಪುಟ್ಟ ಒಂದು ಚೂರು ಮುರಿದು ಬಾಯಿಗೆ ಹಾಕಿಕೊಂಡು ಜಗಿಯುತ್ತಾ' ಕಮ್ ಮಾಮ ಕಮ್ ಈಟ್.." ಅಂತ ಕೈ ಜಗ್ಗುತ್ತಿದ್ದಾನೆ
ಇಲ್ಲ ಮರಿ ನೀನು ತಿನ್ನು ಅಂತ ಕೈ ಬಿಡಿಸಿಕೊಳ್ಳುತ್ತಾಳೆ
ಉದ್ದಿನವಡೆ ಹಳ್ಳ ನೋಡುತ್ತಾ ಎನೇನೋ ನೆನಪು ಬರುತ್ತಿದೆ
ಯಾಕೆ ".....ಟೀಫನ್ನ್ಸ್" ನ ವಡೆ ಬೇಡವೇ ಅಂತ ಅವನು ಹುಬ್ಬೇರಿಸುತ್ತಾನೆ

*****************
2009 ರ calender ಮೇಜಿನ ಮೇಲೆ ಕೂತಿದೆ
ಅದರ ಮೇಲೆ ಪುಟ್ಟನ ಟ್ರಕ್ಕು
ದಿನಾಂಕಗಳ ಮೇಲೆಲ್ಲಾ ಟೈರಿನ ಗುರುತುಗಳು ಅಡ್ಡಾದಿಡ್ಡಿಯಾಗಿ ಹಾದು ಹೋಗಿವೆ
This calender has been prepared for North America based on San Francisco ಅಂತೇನೋ ಬರೆದಿದೆ ಜೊತೆಗೆ calender ಬರೆದವರ ಹೆಸರುಗಳು....

ಜೀವನವನ್ನೂ ಹೀಗೇ ನಮಗಿಷ್ಟ ಬಂದ ಹಾಗೆ ನಾವೇ ಬರೆದುಕೊಳ್ಳುವಂತಿದ್ದರೆ...ಅಂದುಕೊಳ್ಳುತ್ತಾಳೆ
ಮೈಕೇಲ್ ಜ್ಯಾಕ್ಸನ್ 'ಬೀಟ್ ಈಟ್...." ಅಂತ ಅಣಗಿಸುತ್ತಾನೆ
ಪುಟ್ಟನಂಥಾ ದೇವರಿಗೆ ಗಾಡಿ ಹುಷಾರಾಗಿ ಓಡಿಸಪ್ಪಾ ಅಂತ ಪಿಸುಗುಡುತ್ತಾಳೆ
ಕಡಲೂ ನಿನ್ನದೇ ಹಡಗೂ ನಿನ್ನದೇ ಅಂತಾ ಜಾನಕಿ ಹಾಡುವಾಗ ಯಾವುದೋ ಹಳೆ ಹಡಗು ಒಡೆಯುವ ಕಟ್ಟೆ ನೆನಪಿಗೆ ಬರುತ್ತದೆ ಹಡಗು ಒಡೆಯುವ ಕಟ್ಟೆಯಲ್ಲಿ ಯಾರೂ ಈ ಹಾಡು ಹಾಡುವುದಿಲ್ಲವೇ...? ಪ್ರಶ್ಣೆ ಸುಳಿಯುತ್ತದೆ
ಅವರೂ ಹಳೆ ಹಡಗಿನ ಹಾಗೇ ಇದ್ದರಲ್ಲವೇ..ಅಷ್ಟೇ ಧೀಮಂತವಾಗಿ... ಅಂದುಕೊಳ್ಳುತ್ತಾಳೆ

********************
ಪುಟ್ಟ ಆಟದ ಸುತ್ತಿಗೆ ಹಿಡಿದು ಓಡಿ ಬಂದು ಅವಳ ತಲೆ ಮೇಲೊಂದು ಪುಟ್ಟಾಣಿ ಏಟು ಕೊಡುತ್ತಾನೆ
ರಬ್ಬರಿನ ಸುತ್ತಿಗೆಯಾದರೂ ಸುತ್ತಿಗೆ ಸುತ್ತಿಗೆ ತಾನೇ..?
ಊ...ಊ..ಊ.. ಅಂತ ಅಳು ಅಭಿನಯಿಸುತ್ತಾಳೆ
ಪುಟ್ಟನ ಮುಖದಲ್ಲಿ ಎಂತದೋ ತಾಪ
ಓಡಿ ಹೋಗಿ ಅಮೃತಾಂಜನ ತಂದು ಕೈಲಿಟ್ಟು ಪಿಳಿಪಿಳಿ ಅಂತ ಅವಳನ್ನೇ ನೋಡುತ್ತಾನೆ

Friday, July 10, 2009

ಎಲೆ ಮೇಲಿನ ಹನಿ

ಗಲ್ಲದ ಕೆಳಗಿನ ಕೈ ಹಾಗೇ ಇತ್ತು ಕೈ ಗಲ್ಲದ ಕೆಳಗಿತ್ತು ಯಾಕೆಂದರೆ ಅವಳಿಗೆ ತಲೆ ಮೇಲೆ ಕೈ ಇಟ್ಟುಕೊಳ್ಳುವುದು ಇಷ್ಟವಾಗುವುದಿಲ್ಲ.....

ತಟ ತಟ ಮಳೆ ಹನಿಗಳು ಜಾರಿ ಹೋಗುತ್ತಿವೆ

ಇದೇ ಹನಿಗಳು ತೊರೆಯಾಗಿ ಉಪನದಿಯಾಗಿ ನದಿಯಾಗಿ ಸಮುದ್ರ ಸೇರಿ ಮತ್ತೆ ಮೋಡವಾಗಿ ನಮ್ಮ ಮನೆ ಅಂಗಳಕ್ಕೇ ಬರುವುದೆಂದು ಗೊತ್ತಿದ್ದರೂ.......

ಕೆಂಪು ಚಿಗುರು ಹಸಿರಾಗಿ ಹೂವಾಗಿ ಹಣ್ಣಾಗಿ ಹಣ್ಣೆಲೆಯಾಗಿ ಮತ್ತೆ ಉದುರಿ ಮಣ್ಣಾಗಿ ಮತ್ತೆ ಚಿಗುರುವುದಿಲ್ಲವೇ...?

ಏನು ನನಗೆ ಜೀವದಲ್ಲಿ ವಿಶ್ವಾಸವಿಲ್ಲವೇ ? ಮತ್ತೆ ಮತ್ತೆ ಪ್ರಶ್ನಿಸಿಕೊಳ್ಳುತ್ತಾಳೆ

ಆದರೆ ಗಿಡುಗ ಕದ್ದ ಕೋಳಿಮರಿಯ ಅಮ್ಮನ ಅಳಲಿಗೆ ಹೇಗೆ ಸಮಾಧಾನ ಹೇಳುವುದು..?
***************
ಅಂಗೈ ಬಿಚ್ಚಿ ನೋಡಿದರೆ ಕಾಣುವುದು ಗೆರೆಗಳ ಸಮೂಹವೋ ಅಥವಾ ಬದುಕೋ...? ಅಂತ ಯೋಚಿಸುವಾಗ ಪುಟ್ಟನ ಅಂಗೈಯಲ್ಲಿ ಒಂದು ಬಣ್ಣದ ಬಳಪ ಸಿಗಬಹುದೇನೋ ಅಂತ ಅಡ್ಡ ಯೋಚನೆ ಬಂದು ನಗು ಬಂದುಬಿಡುತ್ತದೆ

ನಿನ್ನ ಒದ್ದೆ ಅಂಗೈ ನೋಡು ... ಆಕಾಶ ,ಸುತ್ತಲ ಹಸಿರು, ನಮ್ಮಿಬ್ಬರ ಮುಖ ಎಲ್ಲಾ ಕಾಣುತ್ತದೆ ಅಂತ ಅವನು ಪಿಸುಗುಡುತ್ತಾನೆ
ಆರ್ದ್ರತೆ ಕೊಡು ಆರ್ದ್ರತೆ ನನಗೆ ಅಂತ ಮಿಸುಗುತಾಳೆ

****************
ಪುಟ್ಟನಿಗೆ ಚಡ್ಡಿ ಬದಲಿಸಿ ತೊಳೆಸುವಾಗ ಏನೇನೋ ಯೋಚನೆ ಬರುತ್ತದೆ
ಇನ್ನೊಂದು ಎಂಭತ್ತು ತೊಂಭತ್ತು ವರ್ಷಗಳ ನಂತರ ಇವನ ನೇವರಿಸುವ ಕೈ ಹದಬಿಸಿ ಇರಲಿ ದೇವರೇ ಅಂತ ಬೇಡಿಕೊಳ್ಳುತ್ತಾಳೆ

ಎಲೆ ಮೇಲಿನ ಹನಿ ನಿಶ್ಯಬ್ದವಾಗಿ ನೆಲ ತಾಗುತ್ತದೆ................

Saturday, July 04, 2009

ಉಲ್ಲಾಸದ ಹೂಮಳೆ.....


ಬಹುದಿನಗಳಿಂದ ಇವಳನ್ನು ನೋಡಬೇಕೆಂದು ಹಂಬಲಿಸುತ್ತಿದ್ದೆ

ನೆನ್ನೆ ಕಾಣಸಿಕ್ಕಿದಳು

ನನಗೆ ಇವಳೊಂದು ಸೋಜಿಗ

ಸಾವಿರ ಸೋಲಿಗೆ ಹೆದರದ ಇವಳ ಜೀವನೋತ್ಸಾಹ ನನಗೆ ಸದಾ ಸ್ಪೂರ್ತಿ

ನನ್ನ ಹೆತ್ತವರು ಜೊತೆಯಾದವನು ನನ್ನ ಬರವಣಿಗೆಗೆ ಪ್ರೋತ್ಸಾಹ ನೀಡಿರುವುದು ನಿಜ

ಆದರೆ ನನ್ನ ಬರವಣಿಗೆಯ ಬಗ್ಗೆ ಬದುಕಿನ ಬಗ್ಗೆ ನನಗೇ ನಂಬಿಕೆ ಇಲ್ಲದ ಆ ದಿನಗಳಲ್ಲಿ ಬಹುದೊಡ್ಡ ಒತ್ತಾಸೆಯಾಗಿ ನಿಂತವಳಿವಳು

ನನಗೆ ಬದುಕು ಹದ ತಪ್ಪುತ್ತಿದೆ ಅನ್ನಿಸಿದಾಗಲೆಲ್ಲಾ ಇವಳ ನೆನೆಸಿ ಕೊಳ್ಳುತ್ತೇನೆ

ಇವಳ ಸ್ವಲ್ಪ ಒರಟು ಮಾತು, ಮುಂಗೋಪ....

ಸಾಧಿಸಿಯೇ ತೀರುತ್ತೀನೆಂಬ ಗಟ್ಟಿ ಹಟ, ಎಂಥಾ ಘಳಿಗೆಯಲ್ಲೂ ಕಳೆದು ಕೊಳ್ಳದ ಜೀವನ ಪ್ರೀತಿ....

ಆ ನಾಜೂಕು ಆಕೃತಿಯಲ್ಲಿ ಅದೆಷ್ಟು ಚಂದ ಬದುಕುವ ಕೆಚ್ಚು ಇದೆಯಂದರೆ....

ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ.....

*************

ನನಗಿವತ್ತೆಲ್ಲಾ ಉಲ್ಲಾಸದ ಹೂಮಳೆ.....

Friday, June 19, 2009

ಹೂವಿನ ಭಾಷೆ -ಹುಲ್ಲಿನ ಭಾಷೆ- ಹಲ್ಲಿನ ಭಾಷೆ...


ರೆಪ್ಪೆ ತೆರೆದರೆ ಮೆಲ್ಲನೆ ಬೀಸಿಬಂದ ಗಾಳಿ ಹೊತ್ತಾಯ್ತು ಏಳೇ.. ಅಂತ ಕೈ ಜಗ್ಗಿ ಎಬ್ಬಿಸುತ್ತಿದೆ
ಅದರದೇ ತಂಪಿನ ಭಾಷೆಯಲ್ಲಿ.
ಕೈ ಉಜ್ಜುತ್ತಾ ಎದ್ದಾರೆ ಬಳೆಗಳ ಕಿಣಿ ಕಿಣಿ...
ನಲ್ಲಿಯಲ್ಲಿ ತಟ್ ಪಟ್ ಅಂತ ಹನಿ ಹನಿಯೇ ನೀರು ತೊಟ್ಟಿಕ್ಕಿದರೂ ಬೇಸರವಾಗಲಿಲ್ಲ
ಮುಖ ತೊಳೆಯದೇ ಹೊರಬಂದೆ ಅಷ್ಟೇ...

ಅಂಗಳದಲ್ಲಿ ಹಸು ಕರು ಹುಲ್ಲು ಭಾಷೆಯಲ್ಲಿ ಮಾತಾಡುತ್ತಿದ್ದವು
ಹೂವುಗಳದ್ದೋ ಸೌಗಂಧದ ಭಾಷೆ...
ಜೇನುಹುಳುಗಳದ್ದು ಝೇಂಕಾರದ ಭಾಷೇನೋ ಗುಂಯ್ ಭಾಷೆನೋ ನಿರ್ಧರಿಸಲಾಗಲಿಲ್ಲ ...
ದಾಸವಾಳ ನೋಡಿ ಪೂರ್ವ ನಾಚ್ಕೋತಿದೆಯೋ ಅಥ್ವಾ ಪೂರ್ವ ನ ನೋಡಿ ದಾಸವಾಳವೋ...
ಅಥ್ವಾ ಇವ್ರಿಬ್ರೂ ಸೂರ್ಯನ್ನ ನೋಡಿ ನಾಚ್ಕೋತಿದಾರೋ...ಗೊಂದಲವಾಯಿತು

ಪುಟಾಣಿ ಹಳದಿ ಪಕ್ಷಿಯೊಂದು ಟ್ವಿ ..ಟಿಟಿವಿ...ಟ್ವೀವ್.. ಅಂತ ಕೇಳಿದ್ದಕ್ಕೆ ಅಳಿಲು ತನ್ನ ಕೈಲಿದ್ದ ಯಾವುದೋ ಬೀಜನ
'ಅಯ್ಯೋ ಮುದ್ದು ...ಇದ್ ನಿಂಗೆ ಬೇಕೇನೇ... ತೊಗೊ ಅಂತ ಕೆಳಗಿಟ್ಟು ಓಡಿ ಹೋಯಿತು...

ನಾನು ತೊಳೆಯದ ಮೂತಿಯಲ್ಲಿ ಇದೆಲ್ಲಾ ನೋಡ್ತಾ ಕಣ್ಣರಳಿಸಿಕೊಂಡು ಕೇಳ್ತಾ ಇದ್ದೆ

ಆಗ-
ಕಳ್ಳ ನನ್ ಮಗನೇ ನಿನ್ನ ಹುಟ್ಟಲಿಲ್ಲ ಅನ್ನಿಸಿ ಬಿಡ್ತೀನಿ ಇವತ್ತು...
ಧಬ್! ಧಬ್! ಧಬ್!
ಊಊ...ಊಊ..ಊಊ..

ಕೇಳಸ್ತು......