Monday, September 11, 2006

ಐದು ವರುಷದ ಹಿಂದೆ.......



ನಾನೀಗ `ಗ್ರೌಂಡ್ ಝೀರೋ'ಗೆ ಹೋದ್ರೆ ಐದು ವರುಷದ ಹಿಂದೆ ಮ್ಯಾನ್ ಹ್ಯಾಟನ್ ನ ಬೀದಿಯಲ್ಲಿ ಅತ್ತಿತ್ತ ಅಲೆದಾಡಿದ್ದು ನೀನಲ್ಲವಾ...ಅಂತ ಅದು ಕೇಳುತ್ತಾ? ಗೊತ್ತಿಲ್ಲಾ...`ಎಷ್ಟು ಶಾಂತವಾಗಿದೆ ಅಲ್ಲಾ...ಒಳ್ಳೆ ಟೆಂಪಲ್ ತರ ಇದೆ ಅಲ್ವಾ...' ಅಂದ ಸುಗಂಧಿಗೆ `ಈಗ್ಲೂ ಇಲ್ಲಿ ಶಾಂತವಾಗೇ ಇದೆ.ಆದರೆ ನೀನವತ್ತು ಹೇಳಿದ ತರ ದೇವಸ್ಥಾನದ ನೆಮ್ಮದಿ ತರುವ ಶಾಂತಿಯಲ್ಲಾ...ಮಸಣದ ಮನೆಯ ನೀರವ ಶಾಂತಿ...' ಅಂತ ಹೇಳುತ್ತಾ? ಗೊತ್ತಿಲ್ಲಾ...

ಐದು ವರುಷದ ಹಿಂದೆ ಜುಲೈ9 ರಂದು ನಾನು,ಅರವಿಂದ್ ನಮ್ಮ ಸ್ನೇಹಿತ ದಂಪತಿಗಳಾದ ಕೆ.ಕೆ ಮತ್ತು ಸುಗಂಧಿ ಅವರ 9 ತಿಂಗಳ ಮಗು ಧ್ರುವ್ ನೊಂದಿಗೆ ವರ್ಲ್ಡ್ ಟ್ರೇಡ್ ಸೆಂಟರ್ ನ ನೋಡಲು ಹೋಗಿದ್ದೆವು.ತಲಾ 13 ಡಾಲರ್ ತೆತ್ತು ಮೇಲೆ ಹೋಗಿದ್ದೂ ಆಯಿತು.ಅಲ್ಲಿ W.T.C ಬಗ್ಗೆ ತೋರಿಸಿದ ಕಿರುಚಿತ್ರ ನೋಡಿಕೊಂಡು ಸಿಕ್ಕಷ್ಟೇ ಸಸ್ಯಾಹಾರಿ ಊಟ ತಿಂದು ಸುತ್ತ ಮುತ್ತವೆಲ್ಲಾ ಕಣ್ಣಾಡಿಸಿದೆವು. ನಾನು ಆಗಷ್ಟೇ ಹೊಸ ಕ್ಯಾಮ್ ಕಾರ್ಡರ್ ಕೊಂಡಿದ್ದರಿಂದ W.T.C ಯ ಮೂಲೆ ಮೂಲೆಯನ್ನೂ ಬಿಡದೆ ವಿಡಿಯೋ ತೆಗೆದಿದ್ದೂ ತೆಗೆದಿದ್ದೇ...

ನಂತರ ಅರವಿಂದ ಮತ್ತು ಕೆ.ಕೆ `ನ್ಯೂಯಾರ್ಕ್ ಸ್ಟಾಕ್ ಎಕ್ಸ್ ಚೇಂಜ್' ನೋಡಲು ಹೊರಟಾಗ ಬೆಳಗ್ಗೆಯಿಂದಾ ಸುತ್ತಿ ಸುಸ್ತಾಗಿದ್ದ ನಾನು `ನನ್ನ ಕೈಲಿ ಆಗಲ್ಲಪ್ಪಾ..ನಾನಿಲ್ಲೇ ಕೂರುತ್ತೀನಿ' ಅಂತ ಹೇಳಿದೆ. ಮಗು ಧ್ರುವ್ ಗೆ ನಿದ್ದೆ ಬಂದಿತ್ತಾದ್ದರಿಂದ ಸುಗಂಧಿಯೂ ನನ್ನೊಡನೆ ಕೂತಳು.`ಕಾರ್ ನಲ್ಲಿ ಕೂರಿ' ಅಂತ ಅರವಿಂದ ಹೇಳಿದನಾದರೂ `ಇಲ್ಲಾ ಇಲ್ಲೇ ಚೆನ್ನಾಗಿದೆ' ಅಂದೆ ನಾನು...

W.T.C ಯ ಎರಡು ಟವರ್ ಗಳ ಮಧ್ಯೆ ಇದ್ದ ವಿಶಾಲವಾದ ಜಾಗದಲ್ಲಿ ಸುಮಾರು 4 ಅಡಿಗಳಷ್ಟು ದೊಡ್ಡ ದೊಡ್ದ ಬಾಣಲೆಯಂಥಾ ಕುಂಡ ಗಳಲ್ಲಿ ಬಣ್ಣ ಬಣ್ಣದ ಹೂಗಿಡಗಳನ್ನು ಬೆಳೆಸಿದ್ದರು ಅಲ್ಲಿದ್ದ ಕಲ್ಲು ಬೆಂಚ್ ನ ಮೇಲೆ ಮೇಲೆ ನಾನು ಕೂತೆ. ಸುಗಂಧಿಯ ಕಣ್ಣು ಬಿಳಿಯನೊಬ್ಬ ಮಾರುತ್ತಿದ್ದ W.T.C ಯ ಪ್ರತಿಕೃತಿಯ ಮೇಲೆ ಬಿತ್ತಾದ್ದರಿಂದ ಅದನ್ನು ಕೊಳ್ಳಲು ಹೊರಟಳು.ಧ್ರುವ್ ನನ್ನ ಮಡಿಲಲ್ಲಿ ಮಲಗಿದ್ದ. ನಾಲ್ಕು ಮಾರು ಹೋದವಳು ಮಗು ಅಳುತ್ತಿದಾನೋ ಏನೋ ಎಂದು ಹಿಂದಿರುಗಿ ನೋಡಿ ಧ್ರುವ್ ನಗುತ್ತಿದ್ದದು ನೋಡಿ ತನ್ನ ಕೈಲಿದ್ದ ಕ್ಯಾಮರಾದಿಂದ ಸುಮ್ಮನೆ ಒಂದು ಸಲ ಕ್ಲಿಕ್ಕಿಸಿದಳು.

ಧ್ರುವ್ ಆರಾಮವಾಗಿ ಮಲಗಿದ್ದ...ನಾನು ಅತ್ತಿತ್ತ ಕಣ್ಣಾಡಿಸುತ್ತಿದ್ದೆ.ಸುಗಂಧಿ ಸುಮಾರು ಹೊತ್ತು ಚೌಕಾಸಿ ಮಾಡಿ ಗೆದ್ದ ನಗೆಯೊಂದಿಗೆ ನಾಲ್ಕಿಂಚಿನ W.T.C ಯ ಮೆಟಲ್ ನ ಪ್ರತಿಕೃತಿ ಕೈಯಲ್ಲಿ ಹಿಡಿದು ತಂದು ತೋರಿಸಿದಳು `ಅಛ್ಛಾ...ಹೇನಾ...ಮಜ್ ಬೂತ್ ಹೇ ಟೂಟೇಗಾ ನಹೀ...' ಅಂದಳು ( ಚೆನ್ನಾಗಿದೆ ಅಲ್ವಾ... ಗಟ್ಟಿಮುಟ್ಟಾಗಿದೆ....ಮುರಿಯುವುದಿಲ್ಲಾ...)
`ಹಾಂ..ಹಾಂ...ಬಹುತ್ ಅಛ್ಛಾ ಹೇ...ಮೆಟಲ್ ಕಾ ಹೇನಾ...ಮಜ್ ಬೂತ್ ಹೋನಾ ಹೀ ಚಾಯಿಯೇ....ಕೈಸೇ ಟೂಟೇಗಾ..? ಅಂದೆ ನಾನು.(ಹೌದೌದು...ತುಂಬಾ ಚೆನ್ನಾಗಿದೆ...ಮೆಟಲ್ ದಲ್ಲವಾ...ಗಟ್ಟಿಮುಟ್ಟಾಗಿಯೇ ಇರುತ್ತೆ...ಹೇಗೆ ಮುರಿಯಕ್ಕೆ ಸಾದ್ಯ...? )

ಏಂಥಾ ಐರನಿ!!!!!!!!!!!

ನನ್ನ ಪಕ್ಕದಲ್ಲಿ ಕೂತು ಅತ್ತಿತ್ತ ನೋಡಿ `ಕಿತ್ ನಾ ಶಾಂತ್ ಹೇನಾ ಯಹಾ...ಮಂದಿರ್ ಜೈಸಾ ಲಗ್ ರಹಾ ಹೇ' ಅಂದಳು.(ಎಷ್ಟು ಶಾಂತವಾಗಿದೆ ಇಲ್ಲಿ....ದೇವಸ್ಥಾನ ದಂತೆ ಅನ್ನಿಸುತ್ತಿದೆ)

ಅದಕ್ಕುತ್ತರವಾಗಿ ನಾನಂದೆ `ಹೌದಲ್ಲಾ........

ಅದಾಗಿ ಎರಡು ತಿಂಗಳಿಗೆ ಅದೇ ಸುಗಂಧಿ ಬೆಳಗಿನ ಜಾವಕ್ಕೆ ಪೋನ್ ಮಾಡಿ `W.T.C ಗೆ ಪ್ಲೇನ್ ಕ್ರ್ಯಾಶ್ ಆಗಿದೆ .ಒಂದು ಟವರ್ ಕುಸಿದು ಹೋಯಿತಂತೆ....'ಎಂದಳು .ಸ್ವಲ್ಪ ಹೊತ್ತಿನಲ್ಲೇ ಎರಡನೇ ಟವರ್ ಕೂಡಾ ನೋಡು ನೋಡುತ್ತಿದ್ದಂತೆಯೇ ಕುಸಿದು ಹೋಯಿತು......

W.T.C ಇತಿಹಾಸದ ಮರೆಗೆ ಸರಿದು ಹೋಗಿತ್ತು.

ಅಂದು ಅಲ್ಲಿ ಸಾವನ್ನಪ್ಪಿದವರಿಗೆ, ಭಾರತ, ಇರಾಕ್, ಇಸ್ರೇಲ್, ಲೆಬನಾನ್ ಗಳನ್ನೂ ಸೇರಿಸಿ ಭೂಮಿಯ ಎಲ್ಲೆಡೆ ಇಂಥಾ "ಕುರುಡು ಬೆಂಕಿ" ಗೆ ಸಿಕ್ಕು ಸಾವನ್ನಪ್ಪುತ್ತಿರುವ ಮುಗ್ಧ ಸಾಮಾನ್ಯ ಜನಕ್ಕೆ, ಅವರ ಹೆತ್ತವರಿಗೆ, ಪ್ರಿಯರಿಗೆ.....

ಇದೋ ಕಣ್ಣ ಹನಿಗಳ ತರ್ಪಣ.....


5 Comments:

Blogger bhadra said...

ಗತಲೋಕದ ನೆನಪುಗಳನ್ನು ಕೆದಕಿ, ನನಗೂ ಕಟುನೆನಪುಗಳ ನೆನೆಯುವಂತೆ ಮಾಡಿದಿರಿ. ನಾಲ್ಕು ಮಾತುಗಳ ನೆನಪುಗಳನ್ನು ಬಹಳ ಸುಂದರವಾಗಿ ಹೆಣೆದಿದ್ದೀರಿ. ವಿಶ್ವ ವ್ಯಾಪಾರ ಸಂಸ್ಥೆಯ ಬಗ್ಗೆ ನಿಮ್ಮ ಇತರೆ ನೆನಪುಗಳನ್ನೂ ನಮ್ಮೊಂದಿಗೆ ಹಂಚಿಕೊಳ್ಳಿ.

ಒಂದು ಸಂದೇಹ - ನನ್ನ ಹೆಸರು ನಿಮಗೆ ಹೇಗೆ ಗೊತ್ತಾಯ್ತು (ತವಿಶ್ರೀ)! ಬ್ಲಾಗಿನಲ್ಲಿ ಇನ್ಯಾರೋ ಬರೆದದ್ದು ನೋಡಿದ್ರೋ ಅಥವಾ ನನ್ನ ಪರಿಚಯವಿದೆಯೋ?

ಒಳ್ಳೆಯದಾಗಲಿ.

8:50 AM  
Blogger Satish said...

ಮಾಲಾ ಮೆಡಮ್, ಬಿಳಿ ಗುಲಾಬಿ ಚಿತ್ರಾನ ಶಾಂತಿ ಸಂಕೇತಕ್ಕೋಸ್ಕರ ಹಾಕಿದ್ದೀರೋ ಏನೋ?

ಈ ಲೋಕದ ವ್ಯವಹಾರ ನೋಡ್ತಾ ಇದ್ರೆ ಶಾಂತಿ ಈ ಶತಮಾನದಲ್ಲಿ ಹುಟ್ಟೋ ಹಾಗೆ ಕಾಣ್ಸಲ್ಲ.

7:37 PM  
Blogger mala rao said...

ತವಿಶ್ರೀಯವರೇ,
ಮೊದಲಿಗೆ ನನ್ನ ದುರ್ಗಕ್ಕೆ ನಿಮಗೆ ಸ್ವಾಗತ ಮತ್ತು ಕಮೆಂಟ್ ಗೆ
ಥ್ಯಾಂಕ್ಸ್.
ನಿಮಗೆ ಹಳೆಯ ಕಟು ನೆನಪು ಬಂದು ಮನಸ್ಸಿಗೆ ಬೇಜಾರಾಗಿದ್ದರೆ
ಸಾರಿ
ನೀವು ನನಗೆ ಗೊತ್ತು ಮತ್ತು ಗೊತ್ತಿಲ್ಲಾ
ನೀವು ದಟ್ಸ್ ಕನ್ನಡದಲ್ಲಿ ಬರೆದ ಎಲ್ಲಾ ಲೇಖನ, ಕವನ
ಓದಿದ್ದೀನಾದಾರಿಂದ ಮತ್ತು ನಿಮ್ಮ ಮಾವಿಮಯಾನಸ, ಆಸ್ರಯ ಗಳಿಗೆ ಹಲವಾರು ಬಾರಿ ಭೇಟಿ ಕೊಟ್ತಿದ್ದೀನಾದ್ದರಿಂದ
ನೀವು ಗೊತ್ತು!
ಜೊತೆಗೆ ಇನ್ನೂ ಒಂದು ಕಾರಣವಿದೆ. ನನ್ನ ಇನ್ ಲಾಸ್ ಮುಂಬೈನಲ್ಲೇ ಇರುತ್ತಾರಾದ್ದರಿಂದ ಆಗಾಗ ನಾನೂ ಕೆಲಕಾಲ
ಮುಂಬೈನಲ್ಲಿ ಇರುತ್ತೇನೆ.ಹಾಗಾಗಿ ನಿಮ್ಮ ಮುಂಬೈ ಅನುಭವಗಳಲ್ಲಿ ಕೆಲವು ನನ್ನದೇ ಅನುಭವ ಅನ್ನಿಸುತ್ತೆ .ಹೀಗೆಕೂಡಾ ನೀವು ಗೊತ್ತು!

ನಿಮ್ಮ ವೈಯಕ್ತಿಕ ಪರಿಚಯ ಇಲ್ಲದ್ದರಿಂದ ಇಲ್ಲಿ ತನಕ ನೀವು
ಗೊತ್ತಿರಲಿಲ್ಲ ಈಗ ಹಾಗೂ ಗೊತ್ತು!

12:24 PM  
Blogger mala rao said...

ತವಿಶ್ರೀಯವರೇ,
ಮೊದಲಿಗೆ ನನ್ನ ದುರ್ಗಕ್ಕೆ ನಿಮಗೆ ಸ್ವಾಗತ ಮತ್ತು ಕಮೆಂಟ್ ಗೆ
ಥ್ಯಾಂಕ್ಸ್.
ನಿಮಗೆ ಹಳೆಯ ಕಟು ನೆನಪು ಬಂದು ಮನಸ್ಸಿಗೆ ಬೇಜಾರಾಗಿದ್ದರೆ
ಸಾರಿ
ನೀವು ನನಗೆ ಗೊತ್ತು ಮತ್ತು ಗೊತ್ತಿಲ್ಲಾ
ನೀವು ದಟ್ಸ್ ಕನ್ನಡದಲ್ಲಿ ಬರೆದ ಎಲ್ಲಾ ಲೇಖನ, ಕವನ
ಓದಿದ್ದೀನಾದಾರಿಂದ ಮತ್ತು ನಿಮ್ಮ ಮಾವಿಮಯಾನಸ, ಆಸ್ರಯ ಗಳಿಗೆ ಹಲವಾರು ಬಾರಿ ಭೇಟಿ ಕೊಟ್ತಿದ್ದೀನಾದ್ದರಿಂದ
ನೀವು ಗೊತ್ತು!
ಜೊತೆಗೆ ಇನ್ನೂ ಒಂದು ಕಾರಣವಿದೆ. ನನ್ನ ಇನ್ ಲಾಸ್ ಮುಂಬೈನಲ್ಲೇ ಇರುತ್ತಾರಾದ್ದರಿಂದ ಆಗಾಗ ನಾನೂ ಕೆಲಕಾಲ
ಮುಂಬೈನಲ್ಲಿ ಇರುತ್ತೇನೆ.ಹಾಗಾಗಿ ನಿಮ್ಮ ಮುಂಬೈ ಅನುಭವಗಳಲ್ಲಿ ಕೆಲವು ನನ್ನದೇ ಅನುಭವ ಅನ್ನಿಸುತ್ತೆ .ಹೀಗೆಕೂಡಾ ನೀವು ಗೊತ್ತು!

ನಿಮ್ಮ ವೈಯಕ್ತಿಕ ಪರಿಚಯ ಇಲ್ಲದ್ದರಿಂದ ಇಲ್ಲಿ ತನಕ ನೀವು
ಗೊತ್ತಿರಲಿಲ್ಲ ಈಗ ಹಾಗೂ ಗೊತ್ತು!

12:25 PM  
Blogger mala rao said...

ಕಾಳೂ ಅವರೇ,
ನಿಮ್ಮ ಊಹೆ ಸರಿ ಶಾಂತಿ ಹಾರೈಸಿಯೇ ನಾನು
ಬಿಳಿ ಗುಲಾಬಿಯ ಚಿತ್ರ ಹಾಕಿದ್ದು....
ದುರ್ಗಕ್ಕೆ ಆಗಾಗ ಭೇಟಿ ಕೊಟ್ಟು ಪ್ರೋತ್ಸಾಹಿಸುತ್ತಿರುವುದಕ್ಕೆ
ಥ್ಯಾಂಕ್ಸ್

12:31 PM  

Post a Comment

Subscribe to Post Comments [Atom]

<< Home