Wednesday, November 15, 2006

ಒಂದಿಷ್ಟು ಮುತ್ತು ನುಡಿಗಳು



ಕಣ್ಣು ಅರಳಿಸಿ ನಗುತ್ತಿದ್ದ ಮಗುವನ್ನು ಕೇಳಿದೆ`ಯಾರೇ ನೀನು?
'ನಾನ...? ನಮ್ಮನೆ ರೌಡಿ...' ಪಟ್ ಅಂತ ಹೇಳಿತು ತುಂಟಿ!
ಆ ತುಂಟಿಗೆ ಅವಳ ಹುಟ್ಟು ಹಬ್ಬಕ್ಕೆಂದು ಈ ಚೆಂದದ ಫ್ರಾಕ್ ಸೆಟ್ ಹೆಣೆದು ಕಳಿಸಿಕೊಟ್ಟು ಇದನ್ನ ಹಾಕಿಕೊಂಡಾಗ ಮಗು ಹೇಗೆ ಕಾಣಬಹುದೆಂದು ಕಣ್ಣಲ್ಲೇ ಕಲ್ಪಿಸಿಕೊಂಡು ಖುಶಿ ಪಟ್ಟೆ
***********************
ಅಕ್ಕನ ಮಗು ಶ್ರೀನಿಧಿಯನ್ನು ಆಡಿಸುತ್ತಿದ್ದೆ`ಚಿತ್ತಿ...ಢಾಗೆ' ಅಂದ ನನಗೇನೂ ಅರ್ಥವಾಗಲಿಲ್ಲ
ಚಿತ್ತಿಯ ಪೆದ್ದುತನಕ್ಕೆ ಮರುಕ ಪಡುತ್ತಾ `ಢಾಗೆ ಢಾಯ್ ಢಾಯ್ ಅನ್ನುತ್ತೆ' ಅಂತ ವಿವರಿಸಿದ ನನ್ನ ಕನ್ಫ್ಯೂಶನ್ ಜಾಸ್ತಿ ಆಯ್ತು!`ಡಪ್ಪುದು...' ವರ್ಣಿಸಿದ ನಾನು ತುಟಿ ಮುಂದೆ ಮಾಡಿ ಅಡ್ಡಡ್ಡ ತಲೆ ಆಡಿಸಿದೆ ಅವನು ಲಕ್ಷ್ಯ ಕೊಡದೆ ಮುಂದುವರೆಸಿದ...`ಪೋಪ್ ಬೇತಾ ಅಂದೆ...' ನನ್ನ ತಲೆ ಪೂರ್ತಿ ಕೆಟ್ಟು ಹೋಯಿತು!

`ನಿನ್ನ ಮಗ ಮಾತಾಡುವ ಗ್ರೀಕ್ ಅಂಡ್ ಲ್ಯಾಟಿನ್ ನನಗರ್ಥ ಆಗಲ್ಲ ಕಣೆ' ಎಂದೆ ಅಕ್ಕನಿಗೆ.`ಅವನು ಚಿತ್ತಿ ಅಂದಾಗಲೇ ನಿನಗೆ ಅರ್ಥ ಆಗುತ್ತೆ ಅಂದ್ಕೊಂಡೆ ಗೊತ್ತಾಗಲಿಲ್ವಾ ದಡ್ಡಿ ನೀನು..' ಅಂತ ತನ್ನ ಮಗನನ್ನು ವಹಿಸಿಕೊಂಡು ನನ್ನನ್ನೇ ದಡ್ಡಿ ಮಾಡಿದಳು ನನ್ನ ಅಕ್ಕ!

ನಂತರ ತನ್ನ ಮಗರಾಯನ ಮುತ್ತು ನುಡಿಗಳನ್ನು ನನಗರ್ಥವಾಗುವ ಕನ್ನಡದಲ್ಲಿ ಹೇಳಿದಳು``ಚಿತ್ತಿ ಅನ್ನುವುದು ಚಿಕ್ಕಿಯನ್ನು(ಚಿಕ್ಕಮ್ಮನ ಶಾರ್ಟ್ ಫಾರ್ಮ್!) ಅವನು ಹೇಳುವ ರೀತಿ ಅವನಿಗೆ `ಕ' ಅಕ್ಷರ ಬರುವುದಿಲ್ಲ ಅಂತ ತಿಳೀಲಿಲ್ವೇ...' ಮತ್ತೆ ಢಾಗೆ?' ಅಂದೆ ಒಂದು ಸಣ್ಣ ರೂಲು ನೆನಪಿಟ್ಕೋ`ಪದದ ಮೊದಲಲ್ಲಿ ಕ ಬಂದ್ರೆ ಅದನ್ನ `ಡ' ನಿಂದ ರೀಪ್ಲೇಸ್ ಮಾಡ್ತಾನೆ ಕೊನೆಯಲ್ಲಿ ಬಂದ್ರೆ `ತ' ನಿಂದ...'
ತಲೆ ಅಲ್ಲಾಡಿಸಿದೆ `ಅವನಿಗೆ `ಸ' ಕೂಡಾ ಬರುವುದಿಲ್ಲ ಸೋ `ಸ' ಅಕ್ಷರವನ್ನ `ಪ'ದಿಂದ ರಿಪ್ಲೇಸ್ ಮಾಡ್ತಾನೆ `ಓಹೋ...ವ್ಯಾಟಿಕನ್ನಿನ ಪೋಪ್ ನಿಮ್ಮನೇಲಿ ಲಕ್ಸ್ ಸೋಪಲ್ಲಿ ಸ್ನಾನ ಮಾಡ್ತಾರೆ ಹಾಗಾದ್ರೆ...' ಅಂದೆ `ಅಯ್ಯೋ ಪೋಪ್ ಗಲ್ವೇ ಸ್ನಾನ ಮಾಡ್ತೀಯಾ ಅಂತ ಅವ್ನು ಕೇಳಿದ್ದು....ಕಪ್ಪು ಕಾಗೆಗೆ....' ಅಂದಳು! ಅಂತೂ `ಡಪ್ಪು ಢಾಗೆಯ' ಅರ್ಥ ಗೊತ್ತಾಯಿತು ಕೆಲವು ಸಾರಿ ನನ್ನ ಮಗ `ವ' ಜಾಗದಲ್ಲಿ ಯ' ಹೇಳ್ತಾನೆ...' ಮುಂದುವರೆಸಿದಳು... ನನ್ನ ತಲೆ ಕೆಟ್ಟು ಮೊಸರಾಗಿ `ಇದ್ಯಾವುದೋ ನನಗೆ ಬಾರದ `ಹೊಸ ಕನ್ನಡ' ಅಂತ ಮನದಟ್ಟಾಯಿತು...

******************************

ನಮ್ಮ ಬಳಗದ ಪುಟಾಣಿ ಚಿದಂಬರನಿಗೆ `ರ' ಅಕ್ಷರ ಹೇಳಲು ಬರುವುದಿಲ್ಲ ಮತ್ತು ಅದು ಅವನಿಗೆ ಗೊತ್ತು!ನಿನ್ ಹೆಸರೇನೋ ಮರಿ?' ಅಂತ ಯಾರಾದ್ರೂ ಅವನನ್ನ ಕೇಳದ್ರೆ`ನನ್ ಹೆಸ್ಲು ಚಿದಂಬವ ಆದ್ಲೆ ನಂಗೆ `ವ' ಹೇಳಕ್ಕೆ ಬಲಲ್ಲ' ಅಂತ ಅಂದು ಬಿಡುತ್ತಾನೆ!

*******************************
ನನ್ನ ಸ್ನೇಹಿತೆಯ ಅಣ್ಣನ ಮಗಳು ಪ್ರಿಯಾ .ಪ್ರಿಯಾಗೆ ಎದುರು ಮನೆಯಲ್ಲಿನ ಲೋಕೇಶ ಸ್ಕೂಲ್ ಮೇಟ್ ಕಂ ಪ್ಲೇ ಮೇಟ್.ಲೋಕೇಶ ಪ್ರಿಯಾಳನ್ನು `ಪಿಯಾ' ಅಂತಾನೂ ಪ್ರಿಯಾ, ಲೋಕೇಶನನ್ನು `ಲೋತೆಕ' ಅಂತಾನೂ ಕರೆದು ಕೊಳ್ಳುತ್ತಾರೆ.ಇಬ್ಬರೂ ಒಟ್ಟಿಗೆ ಆಡುತ್ತಾರೆ,ಸ್ಕೂಲ್ ಗೆ ಹೋಗುತ್ತಾರೆ

ಒಂದು ದಿನ ಪ್ರಿಯಾ ಮನೆ ಮುಂದೆ ಹಸುವೊಂದು ಸಗಣಿ ಹಾಕಿ ಹೋಯಿತು ಅವರ ಮನೆಗೆ ಆಡಲು ಬಂದ ಲೋಕೇಶ ಪ್ರಿಯಾನ್ನ ಕೇಳಿದ
ಪಿಯಾ...ಇದು ಯಾಲು ಮಾಡಿದ್ದು ಹೇಲು...?
`ಇದು ಹೇಲಲ್ಲ ಲೋತೆಕಾ...ಇದು ಅಂಬಕಕ್ಕ...'ಪ್ರಿಯಾ ಹೇಳಿದಳು
ಲೋಕೇಶ ಪಟ್ಟು ಬಿಡದೆ `ಇದು.. ಯಾಲು.. ಮಾಡಿದ್ದು.. ಹೇಲೂ..?' ಎಂದು ಪ್ರತಿ ಪದವನ್ನು ಒತ್ತೊತ್ತಿ ಹೇಳುತ್ತಾ ಮತ್ತೆ ಮತ್ತೆ ಕೇಳುತ್ತಿದ್ದ
ಪ್ರಿಯಾ ಕೂಡಾ ಅದೇ `ಇದು ಹೇಲಲ್ಲ...ಅಂಬ ಕಕ್ಕ'ಎಂಬ ಉತ್ತರವನ್ನ ಮತ್ತೆ ಮತ್ತೆ ಹೇಳುತ್ತಿದ್ದಳು
ಕೇಳಿಸಿ ಕೊಳ್ಳಕ್ಕೆ ತಮಾಶೆ ಯಾಗಿತ್ತು ಅಂತ ನನ್ನ ಸ್ನೇಹಿತೆ ನನಗೆ ಈ ಸಂಗತಿನ್ನ ಹೇಳಿದಳು
*********************************
ನನ್ನ ಇದೇ ಸ್ನೇಹಿತೆ ಒಂದು ಬೆಳಗ್ಗೆ ಪ್ರಿಯಾ ಮತ್ತು ಲೋಕೇಶ ಇಬ್ಬರನ್ನೂ ಶಾಲೆಗೆ ಬಿಡಲು ಕರೆದು ಕೊಂಡು ಹೋಗುತ್ತಿದ್ದಳು ಇಬ್ಬರೂ ಮೆಲ್ಲಮೆಲ್ಲಗೆ ಹೆಜ್ಜೆ ಹಾಕುತ್ತಾ ದಾರಿಯಲ್ಲಿ ಕಾಣುವ ನೂರೊಂದು ನೋಟಗಳಿಗೆ ತಮ್ಮದೇ ವಿವರಣೆ ಕೊಡುತ್ತಾ ನಡೆಯುತ್ತಿದ್ದರು
ಲೋಕೇಶ ಕೈ ತೋರಿಸಿ ಹೇಳಿದ `ನೋಡು ಪಿಯಾ...ಲಾಲಿ...' ಪ್ರಿಯಾ ತನ್ನ ಪುಟ್ಟ ಕೈಗಳಿಂದ ದೊಡ್ಡವರ ಸ್ಟೈಲ್ನಲ್ಲಿ ಹಣೆ ಚಚ್ಚಿಕೊಳ್ಳುತ್ತಾ ಹೇಳಿದಳು`ಅಯ್ಯೋ ಅದು ಲಾಲಿ ಅಲ್ಲ ಲೋತೆಕಾ...ಅದು ಲಾಡೀ...'
ಶಾಲೆಗೆ ತಡವಾಗುತ್ತಿದೆ ಎಂಬ ಗಮನವೇ ಇಲ್ಲದೇ ಲಾಲಿ/ಲಾಡಿಯ ಚರ್ಚೆ ಮಾಡುತ್ತಿದ್ದ ಇಬ್ಬರನ್ನೂ `ಅದು ಲಾಲೀನೂ ಅಲ್ಲ ಲಾಡೀನೂ ಅಲ್ಲ... ಲಾರಿ... ನಡೀರಿ ಇನ್ನ' ಅಂತ ಗದರಿಸಿ ನನ್ನ ಸ್ನೇಹಿತೆ ಶಾಲೆ ಕಡೆಗೆ ಎಳೆದುಕೊಂಡು ಹೋದಳು....

ಚಿಣ್ಣರದಿನ ವಿಶೇಷ-2

2 Comments:

Anonymous Anonymous said...

ಮಾಲಾ, ಮುದ್ದು ಮಕ್ಕಳ ಮುತ್ತು ನುಡಿಗಳು ಸದಾ ಸವಿಯಬಲ್ಲ "ನುಡಿಮುತ್ತು"ಗಳು. ಅವುಗಳಲ್ಲಿ ಕೆಲವನ್ನು ಪೋಣಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು.

ನಮ್ಮ ಮನೆಯ ಪೋಕರಿ, ಅಮ್ಮ ತನ್ನನ್ನು "ಪೋಕಿ" ಅನ್ನುತ್ತಾರೆಂದೂ, ಜೇನು-ತುಪ್ಪಕ್ಕೆ "ಜುಂಪ" ಎಂದೂ, ಚಿಕ್ಕಪ್ಪನಿಗೆ "ಚಿಕ್" ಎಂದೂ, ಉಪ್ಪು-ತುಪ್ಪ ಅನ್ನಕ್ಕೆ "ತುಪ್ಪುಪ್ಪು ಅನ್ನ" ಎಂದೂ, ಹೊದಿಕೆಗೆ (ತುಳುವಿನಲ್ಲಿ ನಾವು 'ಪೊದೆಪು' ಅನ್ನುತ್ತೇವೆ) "ಪೊಲ್ಲಟ್" ಎಂದೂ ಉಲಿಯುತ್ತಿತ್ತು.

ಇನ್ನೂ ಇಂತಹ ಸಕ್ಕರೆಕಣಗಳು ನಿನ್ನ ಕಣಜದಲ್ಲಿವೆಯೇ?

P.S.: ಕ್ರಯ ಕೊಟ್ಟರೂ ಸಿಗಲಾರದ ಕ್ರೋಶಾ ಕುಲಾವಿ ಸುಂದರವಾಗಿದೆ.

7:59 PM  
Blogger Satish said...

ನಿನ್ನೆ ಆಫೀಸ್‌ನಲ್ಲಿ ಈ ಬರಹ ಓದಿದ್ದಕ್ಕೆ ಸರಿಯಾಗಿ ನಗೋದಕ್ಕೂ ಆಗಲಿಲ್ಲ...ಇವೆಲ್ಲಾ ನಿಜವಾಗಿ ನಡೆದದ್ದೇ? ನಿಮ್ಮ ನೆನಪಿನ ಶಕ್ತಿಯನ್ನು ಎಷ್ಟು ಹೊಗಳಿದರೂ ಸಾಲದು.

1:57 AM  

Post a Comment

Subscribe to Post Comments [Atom]

<< Home