Wednesday, September 13, 2006

ಶ್ರೀಮಾನ್ ಸಕ್ಕರೇ ಡಬ್ಬೇಶ್ವರರು

ಮೇಲಿನ ಚಿತ್ರದಲ್ಲಿ ಕಾಣುತ್ತಿರುವವರು ಛೇ...ಛೇ...ತಪ್ಪು...ತಪ್ಪು....ವಿರಾಜಿಸುತ್ತಿರುವವರು ನಮ್ಮಅಡುಗೆ ಮನೆ ಸಂಸ್ಥಾನದ ಮುಖ್ಯ ಮಂತ್ರಿಗಳಾದ ಶ್ರೀಮಾನ್ ಸಕ್ಕರೆ ಡಬ್ಬೇಶ್ವರರು. ಶ್ರೀ ಸ.ಡ ರು ಅಧಿಕಾರ ವಹಿಸಿಕೊಂಡಾಗ ಎಲ್ಲರಂತೆ (ಅಂದರೆ ಸಂಸ್ಥಾನದ ಇತರ ಹಿರಿ, ಮರಿ,ಕಿರಿ,ಕಿರಿ-ಕಿರಿ ಡಬ್ಬಾ ಪ್ರಜೆಗಳಂತೆ) ನೆಟ್ಟಗೇ ಇದ್ದರು.ಸ್ವಲ್ಪ ದಿನ ಒಳ್ಳೊಳ್ಳೆ ಕೆಲಸಗಳನ್ನೂ ಮಾಡಿದರು ಸಕ್ಕರೆ ಸಿಹಿ ಮಾತುಗಳನ್ನೂ ಆಡಿದರು.ಕೆಲವೇ ದಿನಗಳಲ್ಲಿ ಹತ್ತಿತಲ್ಲಾ ಅಧಿಕಾರದ ರುಚಿ!
ಬೆಳಗಿನ ಕಾಫೀಗೂ ನಾನೇ...ಸೀರಿಯಲ್ (ಇಲ್ಲಿ ಬೆಳಗ್ಗೆ ಕಷ್ಟ ಪಟ್ಟು ತಿನ್ನುವ ಕಾರ್ನ್ ಫ್ಲೇಕ್ಸ್ ಎಂಬತೌಡು!)ನಲ್ಲೂ ನಾನೇ...ವೀಕೆಂಡ್ ನಲ್ಲಂತೂ ನಾನೇ....ನಾನೇ... ಅಂತ ಸಮಯ ಸಿಕ್ಕಾಗಲೆಲ್ಲಾ ಸ್ವಪ್ರಶಂಸೆ ಮಾಡಿಕೊಳ್ಳಲಾರಂಭಿಸಿ ಬಿಟ್ಟರು.

ಅರವಿಂದ ಈ ಸ.ಡ ರ ಪುರಾಣ ಕೇಳೀ ಕೇಳೀ ಒಮ್ಮೆ ಕೋಪ ಬಂದು `ತಾಳು ನಿನಗೆ ಸ್ವಲ್ಪ ಬಿಸಿ ಮುಟ್ಟುಸ್ತೀನಿ`ಅಂತಾನೋ ಏನೋ ಕಾಫಿಗೊಂದು ಚಮಚ ಬೆಳಗ್ಗೆ ಸಕ್ಕರೆ ಹಾಕಿಕೊಂಡವನು ಶ್ರೀ ಸ.ಡ ರನ್ನು ಒಲೆಯ ಪಕ್ಕದಲ್ಲೇ ಕುಕ್ಕಿ ಹೋಗಿದ್ದ.(ಆಮೇಲೆ ನನ್ನ ಹತ್ರ `ನಂಗೆ ಮರೆತು ಹೋಯಿತು' ಅಂತಾ ಹೇಳಿದನಾದರೂ ಅವನು ಬೇಕಂತ್ಲೇ ಮಾಡಿದ್ದೆಂದು ನನಗೆ ಗುಮಾನಿ!) ಇರಲಿ,ಎಲೆಕ್ಟ್ರಿಕ್ ಒಲೆಯ ಬಿಸಿಗೆ ಶ್ರೀ ಸ.ಡ ರ ಮೂತಿ ನಮ್ಮ ಮಾಜಿ ಮುಖ್ಯ ಮಂತ್ರಿಗಳೊಬ್ಬರನ್ನು ನೆನಪಿಸುವಂತೆ ಆಗಿಬಿಟ್ಟಿತ್ತು!

ಶ್ರೀ ಸ.ಡ.ನನ್ನ ಹತ್ತಿರ ದೂರು ಮಾಡಲು ಬಂದರು. ನಮ್ಮ ಶ್ರೀಮತಿ ಇಟಲಿ ಮಾತೆಯವರು ಅವರಕೈ ಕೆಳಗಿನ ಮು.ಮ ಗಳ ಮಾತುಗಳನ್ನು `ಉಫ್' ಅನ್ನಿಸುವಂತೆ ಶ್ರೀ ಸ.ಡ.ಅವರ ಮಾತುಗಳನ್ನು ನಾನು ನಿರ್ಲಕ್ಷಿಸಿ ಬಿಟ್ಟೆ. ಅಷ್ಟಕ್ಕೇ ಶ್ರೀ ಸ.ಡ ಅವರು ತೆಪ್ಪಗಾಗಿ ತಮ್ಮ ಬುದ್ದಿ ಕುದುರಿಸಿಕೊಳ್ಳುತ್ತಾರೆಂದು ಥೇಟ್ ಶ್ರೀಮತಿ ಇ.ಮಾ ರಂತೆ ನಾನು ನಿರೀಕ್ಷಿಸಿದ್ದೆ
ನನ್ನ ಲೆಕ್ಕ ತಪ್ಪಾಯಿತು!

ಶ್ರೀ ಸ.ಡ ಪ್ರತಿ ದಿನ ಹೊಸ ಹೊಸ ಆಟ ಕಟ್ಟಲಾರಂಭಿಸಿದರು.ನನಗೂ ಒಮ್ಮೆ ಸಹನೆ ಮೀರಿ ಒಂದು ರಾತ್ರಿ ಅಡುಗೆ ಮುಗಿಸಿದವಳು ಶ್ರೀ ಸ.ಡ ರನ್ನು ಒಲೆ ಪಕ್ಕವೇ ಬಿಟ್ಟು ಹೊರನಡೆದೆ. ಶ್ರೀ ಸ.ಡ ರ ಮೂತಿಯ ಇನ್ನೊಂದು ಸೈಡ್ ಗೂ ಲಕ್ವ ಹೊಡೆದದ್ದು ಹೀಗೆ! ಸ್ವಯಂಕೃತಾಪರಾಧ !!

ಈಗ ಅಡುಗೇ ಮನೆ ಸಂಸ್ಥಾನದ ಹಿರಿಯ,ಕಿರಿಯ ಡಬ್ಬಾ ಪ್ರಜೆಗಳಿಗೆ ಈ ಮುಖ್ಯಮಂತ್ರಿ ಬೇಡವಂತೆ. ಹಾಗೆಂದು ಮೊನ್ನೆ ನಡೆದ ಚುನಾವಣೆಯಲ್ಲಿ ಸ್ಪಷ್ಟವಾಗಿ ಸಾರಿಬಿಟ್ಟಿದ್ದಾರೆ. ಸೋ ಈಗ ಶ್ರೀ ಸಕ್ಕರೇ ಡಬ್ಬೇಶ್ವರರು ಕುರ್ಚಿತ್ಯಾಗ ಮಾಡ ಬೇಕಾಗಿ ಬಂದಿದೆ. ಅಧಿಕಾರ ಬಿಡುವ ಮುಂಚೆ ಒಮ್ಮೆ ನಿಮ್ಮ ಬ್ಲಾಗಿನಲ್ಲಿ ನನ್ನದೊಂದು ಫೋಟೋ ಹಾಕಿ ಅಂತ ಮೊನ್ನೆ ನನ್ನ ಬಳಿ ಬಂದು ತುಂಬಾ ಕೇಳಿ ಕೊಂಡರು.ನಮ್ಮ ಸಂಸ್ಥಾನಕ್ಕೆ ಅಷ್ಟಿಷ್ಟು ಸೇವೆ ಮಾಡಿದ್ದಾರೆ ಪಾಪ ಈಗ ಮನೆಗೆ ಹೋಗುತ್ತಿದ್ದಾರೆ.ಯಾಕೆ ಅವರನ್ನು ನೋಯಿಸುವುದೂ ಅಂತಾ ನಾನು ಇವತ್ತು ಅವರ ಫೋಟೋ ಹಾಕಿದ್ದು.ಶ್ರೀ ಸ.ಡ ಅವರ ವಿಶ್ರಾಂತ ಜೀವನಕ್ಕೆ ನಾವೆಲ್ಲಾ ಶುಭ ಹಾರೈಸೋಣವೇ...

4 Comments:

Blogger Satish said...

ಮಾಜಿ ಪ್ರಧಾನಿ ಅಂದ್ರೆ ಊಹಿಸಿಕೋತಿದ್ನೋ ಏನೋ, ಮಾಜಿ ಮುಖ್ಯ ಮಂತ್ರಿ ಮುಖ ಅಂದ್ರೆ ಯಾರೂ ಅಂತ ಸ್ಪಷ್ಟ ಆಗ್ಲಿಲ್ಲ.

ಅದಿರ್ಲಿ ಮು.ಮ. ಕುರ್ಚಿಗೆ ಯಾರು ಯಾರಲ್ಲಿ ಪೈಪೋಟಿ ನಡೆದಿದೇ ಅಂತ ಕುತೂಹಲ...ಹೀಗೆ ಇನ್ಯಾರ ಮುಸುಡಿಯನ್ನು ಏನೇನು ಮಾಡಿದ್ದೀರೋ ಯಾರಿಗೆ ಗೊತ್ತು, ನಮ್ಮ ಮನೇಲಿ ಎಣ್ಣೆ-ತುಪ್ಪದ ಡಬ್ಬೇಶ್ವರ-ಡಬ್ಬೇಶ್ವರಿಯರಿಗೆ ಈ ಗತಿ ಬರೋದು ಖಾಯಂ ಆಗಿತ್ತು. ಸಿಹಿ ಹಂಚೋ ಸಕ್ರೆಗೆ ಇಂತಾ ಗತಿ ತರಿಸೋಷ್ಟು ಕೆಟ್ ಜನ ಅಲ್ಲ ನೋಡ್ರಿ ನಾವು :-)

6:47 PM  
Blogger mala rao said...

ಕಾಳೂ ಅವರೇ,
ನಾನು ಸೂಚಿಸಿದ ಮಾಜಿ ಮು.ಮ ಅವರ ಹೆಸರಲ್ಲಿ ಲೋಹಗಳ
ರಾಜನಿದ್ದಾನೆ.ಬುದ್ದಿವಂತರಾದ ನಿಮಗೆ ಇಷ್ಟು ಕ್ಲೂ ಸಾಕು ಅಂದ್ಕೋತೀನಿ
ಮು.ಮ ಖುರ್ಚಿಗೆ ಪೈಪೋಟಿ ಯಾರು ಯಾರಲ್ಲಿ ಇತ್ತು ಅಂತ ನಂಗೂ ಕುತೂಹಲವೇ.ಆದರೆ ಡಬ್ಬಾ ಪ್ರಜೆಗಳು ಇದು ನಮ್ಮ ನಾಡಿವ ಆಂತರಿಕ ಗೋಪ್ಯತೆಯ ವಿಶ್ಯ ಹಾಗೆಲ್ಲಾ ಹೇಳೋಕಾಗಲ್ಲಾ ಅಂದುಬಿಟ್ಟರು.ಸೋ ನಂಗೂ ಗೊತ್ತಿಲ್ಲಾ
ಹೆಸರಿಸಲಾಗದ ಮೂಲಗಳಿಂದ ಕಂಡು ಹಿಡಿಯಲು ಯತ್ನಿಸುವೆ ನನಗೆ ಗೊತ್ತಾದಾಗ ನಿಮಗೂ ತಿಳಿಸುತ್ತೇನೆ.
ಯಾರ್ಯಾರ ಮುಸುಡಿ ಏನಾಗುತ್ತೆ ಅನ್ನುವುದು ಅವರವರ
ಕೈಯಲ್ಲೇ ಇದೆ! ಅದರಲ್ಲಿ ಸಿಹಿ ಹಂಚುವವರೂ.ಉಪ್ಪು ಹಂಚುವವರೂ.ಹುಳಿ ಹಂಚುವವರೂ ಅಂತೆಲ್ಲಾ ಭೇಧವಿಲ್ಲದ
ಮಾದರಿ ಸಂಸ್ಥಾನ ನಮ್ಮದು

8:40 PM  
Blogger Satish said...

ಓಹ್, ಗೊತ್ತಾಯ್ತು ಬಿಡಿ! ನಂಬ್ತೀರೋ ಬಿಡ್ತೀರೋ ನಾನು ಅವರ ಫ್ಯಾನ್ ಕೂಡಾ!!

ಯಾರಿಗೆ ಬೇಕಾದರೂ ಮು.ಮ. ಸ್ಥಾನ ಕೊಡಿ, 'ಕಾಳು' ಮೆಣಸಿನ ಡಬ್ಬವೊಂದನ್ನು ಬಿಟ್ಟು.

7:33 PM  
Blogger mala rao said...

ಹಾಗೆಲ್ಲಾ ನಾನು ಯಾರಿಗೆ ಬೇಕೋ ಅವರನ್ನು ಮು.ಮ
ಮಾಡಲು ಇದೇನು `ಕೈ ಪಾರ್ಟಿ' ಅಂದ್ಕೊಂಡ್ರಾ...
ಅಷ್ಟಕ್ಕೂ ಕಾಳು ಮೆಣಸು ಕುಮಾರ್ ಅವರು ಮು.ಮ ಆದರೆ
ನಿಮಗೇಕೆ ಅಷ್ಟು ಸಂಕಟವಾಗುತ್ತೋ ನನಗೆ ತಿಳಿಯುತ್ತಿಲ್ಲಾ...

9:28 PM  

Post a Comment

Subscribe to Post Comments [Atom]

<< Home