Thursday, September 14, 2006

ಕವಡೆಯ ಕಥೆ



ನೆನಪಿದೆಯೇ ನಿನಗೆ

ನಾವಿಬ್ಬರೂ ಅಂದು

ಕೆರೆಯ ದಡದಲ್ಲಿ ಮಿಂದು

ಮರಳ ಮನೆಗಳ ಕಟ್ಟಿ

ಆಟವಾಡಿದ (?) ದಿವಸಾ...

ನೆನಪಿದೆಯೇ...ನಿನಗೇ...

ಎಂಬ ಹಾಡು ನೆನಪಾಗುತ್ತಿದೆ ನನಗೆ ನನಗೆ ಬಿಟ್ಟರೆ ಈ ಕವನವನ್ನು(ಮೂಲ ಕವಿಯ ಕ್ಷಮೆ ಕೋರಿ)

ನೆನಪಿದೆಯೇ ನಿನಗೇ

ನಾವೆಲ್ಲರೂ ಅಂದು

ನಮ್ಮ ಮನೆ ಅಂಗಳಕ್ಕೆ ಬಂದು

ಸೀಮೇ ಸುಣ್ಣದ ಗೆರೆಗಳ ಕೊರೆದು

ಚೌಕಾ ಬಾರವಾ ಆಡಿ

ನನ್ನ ಕಾಯಿ ನೀನು ಹೊಡೆದು

ನಿನ್ನ ಕಾಯಿ ನಾನು ಹೊಡೆದು

ನೀನೇ ಮೋಸಾ ಅಂತಾ ನಾನು

ಇಲ್ಲಾ ನೀನೇ ಮೋಸಾ ಅಂತಾ ನೀನು

ಜುಟ್ಟು-ಜುಟ್ಟು ಹಿಡಿದು ಹೊಡೆದಾಡಿದ ದಿವಸ...

ನೆನಪಿದೆಯೇ ನಿನಗೇ...

ಅಂತಾ ಬದಲಾಯಿಸಿ ನನ್ನ ಬಾಲ್ಯದ ಗೆಳತಿಯರಿಗೆ ಕೇಳುತ್ತೇನೆ!

ಬೇಸಿಗೆ ರಜದಲ್ಲಿ ಚೌಕಾಬಾರ ಆಡುವುದು ನಮ್ಮ ಅಚ್ಚು ಮೆಚ್ಚಿನ ಟೈಂಪಾಸ್ ಆಗಿತ್ತು.ಬೇಗ ಬೇಗ ಗರಗಳನ್ನು ಉರುಳಿಸಿ ನಮ್ಮನಮ್ಮ ಕಾಯಿಗಳನ್ನು ಹಣ್ಣು ಮಾಡುವ ಸಡಗರ. ನನ್ನ ಕಾಯಿ ಹೊಡೆದೆ ಅಲ್ವಾ ನೀನು ಬಾ..ಬಾ.. ನನ್ನ ಮನೆ ಹ್ಯಾಗೆ ದಾಟಿ ಹೋಗ್ತೀಯಾ ನೋಡ್ತೀನಿ ಎಂಬ ಸವಾಲುಗಳು ಜೋಡಿ ಮಾಡಿ ಬಿಟ್ಟರೆ ಯಾರೂ ಹೊಡೆಯಕ್ಕೆ ಆಗಲ್ಲಾ ಎಂಬ ಉಪಾಯ.ತನಗೆ ಇನ್ನೊಬ್ಬಳ ಕಾಯಿ ಹೊಡೆಯುವ ಚಾನ್ಸ್ ಸಿಕ್ಕರೂ ಬೇರೆ ಕಾಯಿ ನಡೆಸಿ ಗೆಳತಿಯ ಕಾಯಿಗೆ `ಜೀವದಾನ'ಮಾಡುವ ದೊಡ್ಡ ಮನಸ್ಸು. ಅಂಥಾ ದೊಡ್ಡ ಮನಸ್ಸು ತೋರಿಸಿದ ಗೆಳತಿಗೆ ಕಣ್ಣಲ್ಲೇ ಒಂದು ಥ್ಯಾಂಕ್ಸ್ ಹೇಳಿ ನಾನೂ ಸಮಯ ಬಂದಾಗ ನಿನ್ನ ಋಣ ತೀರಿಸುತ್ತೀನಿ ಎಂದು ಕೊಡುವ ಭರವಸೆಗಳು...ಎಷ್ಟೊಂದು ಚಿತ್ರಗಳು!

ಈ ಕವಡೆಗಳ ಪೂರ್ವಾಶ್ರಮದ ಬಗ್ಗೆ ಕೆದಕಿದಾಗ ಗೊತ್ತಾಗಿದ್ದಿಷ್ಟು...cypraeidae ವರ್ಗಕ್ಕೆ ಸೇರಿದ ಕವಡೆಗಳಲ್ಲಿ ಸುಮಾರು 200 ಜಾತಿಯಗಳಿವೆ ಈ ಎಲ್ಲವಕ್ಕೂ ಬೇಸಿಕ್ ಶೇಪ್ ಒಂದೇತರ ಇರುತ್ತೆ ಉಷ್ಣ ವಲಯದ ದೇಶಗಳಲ್ಲಿ ಕವಡೆಪ್ರಾಣಿಗಳು ಹೆಚ್ಚಾಗಿ ಕಂಡು ಬರುತ್ತವೆ.ಪುಟಾಣಿ ಕವಡೆಯೊಂದು 5ಮಿ ಮೀ ಇದ್ದರೆ ದೊಡ್ದದಾದ ಟೈಗರ್ ಕವಡೆ ‍ 15 ಸೆ.ಮೀ (ಆರು ಇಂಚು) ದೊಡ್ಡದಾಗಿರುತ್ತದೆ.ಹಿಂದಿನ ಕಾಲದಲ್ಲಿ ಕವಡೆಗಳನ್ನು ಆದಿವಾಸಿಗಳು ಅಲಂಕಾರವಾಗಿಯೂ,ಹಲವಾರು ನಾಗರೀಕತೆಗಳಲ್ಲಿ ಕರೆನ್ಸಿ ರೂಪದಲ್ಲೂ ಬಳಸುತ್ತಿದ್ದರು.

ಬೇರೆಲ್ಲಾ ಚಿಪ್ಪಿರುವ ಸಮುದ್ರ ಜೀವಿಗಳ ಚಿಪ್ಪಿನ ಒಳಭಾಗ ಹೊಳಪಿನ ಚಿತ್ತಾರಗಳಿಂದ ಕೂಡಿದ್ದರೆ ಕವಡೆಗಳ ಹೊರಮೈ ಹೊಳಪಾಗಿದ್ದು ಚಿತ್ರ ವಿಚಿತ್ರ ಚಿತ್ತಾರ ಹೊಂದಿದೆ ಬೇರೆಲ್ಲಾ ಇಂಥಾ ಚಿಪ್ಪಿನ ಜೀವಿಗಳು ಚಿಪ್ಪಿನೊಳಗೇ ಕೂತು ಜೊಲ್ಲುರಸ ಸುರಿಸಿದರೆ ಕವಡೆ ಜೀವಿಯ`ಮ್ಯಾಂಟಲ್' ಕವಡೆಯ ಬೆನ್ನ ಮೇಲೆ ಹರಡಿಕೊಂಡು ಜೊಲ್ಲು ಸುರಿಸಿ ಚಿತ್ತಾರ ಬರೆಯುವುದೇ ಇದಕ್ಕೆ ಕಾರಣ.ಕವಡೆಗಳ ಈ ನೈಸರ್ಗಿಕ ಹೊಳಪು,ಚಿತ್ತಾರದ ಕಾರಣಕ್ಕಾಗಿಯೇ ಇವು ಸಂಗ್ರಾಹಕರ ಅಚ್ಚುಮೆಚ್ಚು.

ಇತ್ತಿಚಿಗೆ ಇಲ್ಲಿನ ಗಿಫ್ಟ್ ಶಾಪ್ ಒಂದರಲ್ಲಿ ಈ ಕವಡೆಗಳನ್ನು ಕಂಡಾಗ ಹಳೆ ಗೆಳತಿಯರನ್ನು ಕಂಡಂತೆ ಆಯಿತು.ಮನೆಗೆ ಕರೆತಂದು ಅಂಗೈಯಲ್ಲಿ ಅವಿಚಿ ಹಿಡಿದುಕೊಂಡರೆ ಏನೆಲ್ಲಾ ನೆನಪುಗಳು!ಕವಡೆಯ ಬೆನ್ನ ಮೇಲಿನ ಚಿತ್ತಾರದಷ್ಟೇ ಮೋಹಕ ನೆನಪುಗಳು....


2 Comments:

Blogger Anveshi said...

ಮಾಲಾ ಅವರೆ,

ಮೊದಲ ಬಾರಿ ಬರ್ತಾ ಇದ್ದೇನೆ...

ಆದ್ರೆ ಕವಡೆ ಹಾಕ್ತಾ ಇದ್ದೀರಾ..!

ಕವಡೆ ಹಿಡ್ಕೊಂಡು ಹಳೇ ಮಕ್ಕಳಾಟಾನೆಲ್ಲಾ ನೆನಪಿಸಿಬಿಟ್ರಿ...

ಬ್ಲಾಗಿಸ್ತಾ ಇರಿ.

8:30 AM  
Blogger mala rao said...

ಅಸತ್ಯಾನ್ವೇಶಿ ಗಳಿಗೆ ದುರ್ಗಕ್ಕೆ ಸ್ವಾಗತ
ನಾನು ಹೂವು ಹಾಕುವಾ ಅಂತಾನೇ ಇದ್ದೆ
ನಮ್ಮಲ್ಲಿ ನೆಟ್ ಡೌನ್ ಆಗೋಗಿ ತಡವಾಯಿತು
ಬಹುಶಃ ನಿಮ್ ಲಕ್ ಅಷ್ಟೇ ಇತ್ತೇನೋ...
ಆಗಾಗ ಬರ್ತಾ ಇರಿ
ಏನೇನು ಹಾಕ್ತೀನಿ ಅಂತ `ಕಣ್ಣಾರೆ' ನೋಡಿ ಆನಂದಿಸಿ

12:19 PM  

Post a Comment

Subscribe to Post Comments [Atom]

<< Home