Thursday, December 07, 2006

`ಬೆಸ್ಟ್ ಆಫ್ ಸುನಂದಮ್ಮ'



ವೃಷಭ ವಾಹನದ ಹಾರನ್ ಕೇಳಿತು.ಒಳಗೆ ಬಂದಳು ಗೌರೀದೇವಿ. ನವಿರಾದ ಬೂದು ಬಣ್ಣದ ಸೀರೆಯುಟ್ಟು ಅದೇ ರಂಗಿನ ಕುಪ್ಪಸ ತೊಟ್ಟಿದ್ದಳು. ಕಿವಿಯಲ್ಲಿ ಬೆಳ್ಳಿಓಲೆ, ಕಲ್ಚರ್ಡ್ ಮುತ್ತಿನ ಕೆನ್ನೆಸರಪಳಿ, ಕೊರಳಲ್ಲಿ ಬೆಳ್ಳಿಹಾರ, ಕಾಲಿಗೆ ಬೆಳ್ಳಿಗೆಜ್ಜೆ, ಬಾಚಿ ಮೇಲೆತ್ತಿ ಕಟ್ಟಿದ ಮುಡಿಯೊಳಗೆ ಬೆಳ್ಳಿತಿರುಪಿನ ಹೂ,ಕೈಯಲ್ಲಿ ಬೂದುಬಣ್ಣದ ಚರ್ಮದ ಜಂಭದ ಚೀಲ...! ಶಿವ ಬೆಚ್ಚಿದ!
ಇವಳೇ ನನ್ನ ರಾಣಿ?ಕೈಲಾಸದರಸಿ ಶಿವೆ?

`ಪಾರ್ವತೀ... ಹಬ್ಬದ ದಿನ ಇದೇನು ನಿನ್ನ ವಿಚಿತ್ರ ವೇಷ? ನಾನು ಉಡುವ ಚರ್ಮವನ್ನು ನೀನೇಕೆ ಕೈಯಲ್ಲಿ ಹಿಡಿದಿರುವೆ?'

`ವಿಚಿತ್ರವೇನಿಲ್ಲಾ ಸ್ವಾಮೀ..ಇದು ಕಾಲಕ್ಕೆ ತಕ್ಕಂಥ ಉಡುಗೆ...ಇದು matching ಕೈಚೀಲ ನಾನುಟ್ಟಿರುವುದು ನೈಲಾನು...'

`ನೈಲಾನು? ಅದೇನು ಹಾಗೆಂದರೇ...?ನಿನಗೆ ಉಡಲು ಸೀರೆಯಿಲ್ಲವೇನು? ನಿನ್ನ ತಂದೆ ಪರ್ವತರಾಜ ಪೆಠಾರಿ ತುಂಬಾ ಹೊರಿಸಿ ಕಳಿಸಿದ ಚೀನಾಂಬರಗಳೆಲ್ಲಾ ಹರಿದು ಹೋದುವೇ? ಮದುವೆಯಲ್ಲಿ ನಾನು ತಂದಿರಿಸಿದ ಪಟ್ಟೆ ಬನಾರಸಿಯ ಕಟ್ಟುಗಳೆಲ್ಲಾ ಕಳೆದು ಹೋದುವೇನು?'

`ಎಲ್ಲಾ ಇವೆ, ಆದರೆ ಅವೆಲ್ಲಾ ಹಳೆಯ ಫ್ಯಾಷನ್ನು...ಯಾರು ಉಡುತ್ತಾರೆ? ಭೂಲೋಕದ ಲಲನಾಮಣಿಯರೆಲ್ಲಾ ಉಡುವುದೇ ಇದನ್ನು. ಇವನ್ನು ಒಗೆಯ ಬೇಕಾಗಿಲ್ಲ,ಒಗೆದರೂ ಹಿಂಡಬೇಕಾಗಿಲ್ಲ, ಇಸ್ತ್ರಿಯಂತೂ ಬೇಕೇ ಇಲ್ಲ- Dip-N-Dry ಅನ್ನುತ್ತಾರೆ ಇವುಗಳಿಗೆ. ಆರು ತಿಂಗಳಿಗೊಮ್ಮೆ ನೀರಿನಲ್ಲಿ ಅದ್ದಿ ಆರಿ ಹಾಕಿದರಾಯಿತು...ಇದೋ ನೋಡೀ...ನನ್ನ ಭಕ್ತೆಯರು ಇವತ್ತು ನನಗೆ ಅರ್ಪಿಸಿರುವ ರವಿಕೆಗಳು-ಟೆರಿಲಿನ್,ನೈಲಾನ್,ಆರ್ಲಾನ್,ಮಾರ್ಲಾನ್,ನೈಲೆಕ್ಸ್...!ಇದು ಕಪ್ಪು ಹಣದ ಬಂಡವಾಳಗಾರನ ಹೆಂಡತಿ (ಪಾಪ ಪರಿಹಾರಕ್ಕೆ) ಕೊಟ್ಟಿರುವ ಸೀರೆ-ಇದನ್ನು ಡ್ರೇಲಾನ್ ಅನ್ನುತ್ತಾರೆ....'

`ಛೀ! ಇದೇನು ಬಟ್ಟೆ? ಕತ್ತರಿಸಿ ಷಣ್ಮುಖ,ಗಣೇಶರ ಕೋಣೆಯ ಬಾಗಿಲಿಗೆ ಪರದೆ ಹಾಕು...ಅಥವಾ ಓದುವ ಮೇಜಿಗೆ ಹೊದಿಸು...ಹುಂ?ಈ ಬೆಳ್ಳಿ ಒಡವೆಗಳೇಕೆ?ಬಂಗಾರ ವಜ್ರ ವೈಢೂರ್ಯಗಳೇನಾದವು?ರಕ್ಕಸರೇನಾದರೂ ಅಪಹರಿಸಿದರೇನೂ?'

`ಇದೂ ಭೂಲೋಕದ ವ್ಯವಹಾರ.. ಬಂಗಾರ ವಜ್ರ ಕೆಂಪುಗಳನ್ನು ಲಾಕರಲ್ಲಿಟ್ಟು ಬಾಡಿಗೆ ತೆತ್ತು ಬೆಳ್ಳಿಯದೋ ,ಕೃತಕಾಭರಣಗಳನ್ನೋ ಧರಿಸುವುದೇ ಅಲ್ಲಿನ ವಿಚಾರ...'

`ಅದೆಲ್ಲಾ ಭೂಲೋಕದ ಮಾತಾಯ್ತು..ನಮಗೇಕೆ ಅವರ ಅಚಾರ ವ್ಯವಹಾರದ ಅನುಕರಣೆ?ನಮ್ಮ ಎತ್ತುಗಳಿಗೆ ಹಾಕುವ ಈ ಒಡವೆಗಳನ್ನುಮೊದಲು ತೆಗೆದು ಬಿಸಾಡು...ಗಾಳಿಗೆ ಹಾರಿ ಹೋಗುವ ಈ ಸೀರೆಯನ್ನು ಬದಲಿಸಿ, ನನಗಿಷ್ಟವಾದ ನವಿಲುರಂಗಿನ ಜರತಾರಿ ಸೀರೆಯುಟ್ಟು ಬಾ...'

ಪೂಜೆಯ ಧೂಪ ದೀಪದ ಕಾವೇರಿತ್ತೇನೋ...ಪಾರ್ವತಿ ದುರ್ಗೆಯಾದಳು... ಪರಮೇಶ್ವರನ ಮಾತಿಗೆ ಕಿವಿಗೊಡಲೇ ಇಲ್ಲ ಕೋಪದಿಂದ ಶಿವ, ಟಿಫಿನ್ ಕೂಡಾ ತಿನ್ನದೇ ತನ್ನ ಢಮರುಗ ಎತ್ತಿಕೊಂಡು ನೃತ್ಯಾಲಯದ ಕಡೆ ನಡೆದ.......

*********************************

ಕನ್ನಡ ಹಾಸ್ಯ ಸಾಹಿತ್ಯದ ಹಿರಿಯಜ್ಜಿ ಎಂದೇ ಹೆಸರಾದ ಟಿ.ಸುನಂದಮ್ಮನವರ `ಬೆಸ್ಟ್ ಆಫ್ ಸುನಂದಮ್ಮ' ಪುಸ್ತಕದ ಒಂದು ಸಣ್ಣ ಸ್ಯಾಂಪಲ್ ಇದು.ಇನ್ನೂರಕ್ಕೂ ಹೆಚ್ಚು ಪುಟಗಳ ಈ ಪುಸ್ತಕದಲ್ಲಿ ನಗೆ ಮಿಂಚು ಹರಿಸುವ ಹಲವಾರು ಲೇಖನಗಳಿವೆ ನೆನ್ನೆ ಮೊನ್ನೆ ನಾನು ಈ ಪುಸ್ತಕ ಓದುತ್ತಾ ನಕ್ಕೂ ನಕ್ಕೂ ಸುಸ್ತಾದೆ...

1 Comments:

Anonymous Anonymous said...

cool blog

3:56 PM  

Post a Comment

Subscribe to Post Comments [Atom]

<< Home