Tuesday, December 19, 2006

ಇವಳೆ ಇವಳೆ....



ಕಳೆದ ವಾರವೆಲ್ಲಾ ಮನೆ ತುಂಬಾ ಹರಟೆ,ನಗು, ಕೀಟಲೆ ,ಕಿತಾಪತಿಗಳದ್ದೇ ಸಾಮ್ರಾಜ್ಯ. ದೂರದೂರಿಂದ ನಮ್ಮ ಕಸಿನ್ನೂ, ಅವನ ಹೆಂಡತಿಯೂ ಪುಟ್ಟ ಮಗುವಿನೊಂದಿಗೆ ಬಂದಿದ್ದರು
ನಮ್ಮಗಳ ಬಾಲ್ಯದ ದಿನಗಳ ಅವಲೋಕನ ಮಾಡಿ ಒಬ್ಬರ ಕಾಲು ಇನ್ನೊಬ್ಬರು ಸಖತ್ತಾಗಿ ಎಳೆದಾಡಿ ಕೊಂಡೆವು ಮನೆಯಲ್ಲಿ ಒಂಥರಾ ನಗೆ ಹಬ್ಬ...ಬೇರೆಲ್ಲಾ ಕೆಲಸ ಬದಿಗಿಟ್ಟು ಹರಟೆಯಲ್ಲೇ ಕಾಲ ಕಳೆದೆವು
ಇಂಥದೊಂದು ಸಂಜೆ ಕಸಿನ್ ಅವನ ಹೆಂಡತಿಗೆ ಮೆಲುದನಿಯಲ್ಲಿ ಏನೋ ಹೇಳುತ್ತಿದ್ದ. ಅವಳು ಆಗಾಗ ಕೆಂಪಾಗುತ್ತಾ,ಮೆತ್ತಗೆ ಗುರ್ ಗುರ್ ಅನ್ನುತ್ತಾ, ಸ್ವಲ್ಪ ಕೋಪ ಕೊಂಚ ನಗುತೋರಿಸುತ್ತಾ ಒಳ್ಳೆ ಏಳು ಬಣ್ಣದ ಕಾಮನ ಬಿಲ್ಲಿನ ಮುಖ ಮಾಡಿಕೊಳ್ಳುತ್ತಿದ್ದಳು. ಅಷ್ಟೊತ್ತಿಗೆ ಟೀ ತರುತ್ತಾ ಇದ್ದ ನಾನು `ಏನಪ್ಪಾ ಸಮಾಚಾರ?'ಅಂತ ಹುಬ್ಬು ಹಾರಿಸಿದೆ .ಅರವಿಂದನ ಮುಖದಲ್ಲೂ ಪ್ರಶ್ನೆ ಅವಳು ಕಣ್ನು ದೊಡ್ಡದು ಮಾಡಿ,(ನಮಗೆ ಕಾಣದಂತೆ!)ಮೊಣಕೈನಿಂದ ತಿವಿಯುತ್ತಿದ್ದುದನ್ನೂ ಗಮನಿಸಿದರೂ ಗಮನಿಸದೆ ಪ್ರಾರಂಭಿಸಿಬಿಟ್ಟ

`ಎಲ್ಲೆಲ್ಲಿ ನೋಡಲೀ ನಿನ್ ಬಟ್ಟೆ ಕಾಣುವೇ
ಮನೆಯನ್ನು ಕೊಳಕ್ ಮಾಡೀ ಹೀಗೇಕೆ ಓಡಾಡುವೇ...

ಆ ಕೆಂಪು ದಾವಣಿ ಅಲ್ಲೇಕೆ ಬಿದ್ದಿದೇ...
ನಿನ್ ಹಳ್ ದಿ ಟೀಶರ್ಟು ಕಾಲ್ ಕಾಲ್ಗೆ ಸಿಗ್ತಿದೆ...
ಯುಗಗಳು ಜಾರಿ ಉರುಳಿದರೇನೂ
ಬ್ಯಾಂಗಲ್ ಸೆಟ್ಟು, ಲಿಪ್ಪು ಸ್ಟಿಕ್ಕು
ಪಾಪು ಬಟ್ಟೆ ಇಲ್ಲೆ ಬಿದ್ದಿದೇ...

ಹೀಗೆ ತನ್ನ ಗಾರ್ಧಭ ಗಾಯನ ಮುಗಿಸಿ `ಹೆಂಗೆ?' ಅಂತ ಹುಬ್ಬು ಹಾರಿಸಿದ!
ಮನೆಯನ್ನ ಒಪ್ಪ ಮಾಡೋದು ಬರೀ ಹೆಂಗಸರ ಗುತ್ತಿಗೇನೇ? ನಂಗೂ ಸ್ವಲ್ಪ ಸಿಟ್ಟು ಬಂತು `ನೀನೇ ಒಂಚೂರು ಎತ್ತಿಡು.. ಕೈಯೇನೂ ಸವೆದು ಹೋಗಲ್ಲಾ..'ಅಂದೆ
ಅದಕ್ಕುತ್ತರವಾಗಿ ಅವನೇನೋ ಹೇಳುವಷ್ಟರಲ್ಲಿ ಅರವಿಂದ `ಏಯ್ ನನ್ನ ಹಾಡು ಕೇಳಿ ಇಲ್ಲಿ' ಅಂತ ಶುರು ಮಾಡಿದ

ಆಕಾಶದಿಂದ ತಲೆ ಮೇಲಿಳಿದ ರಂಭೆ...
ಇವಳೆ ಇವಳೆ....

ಈಗ ದೊಡ್ಡ ಕಣ್ಣು ಬಿಡುವುದು ನನ್ನ ಸರದಿ!ನನ್ನ ಚಿಕ್ಕ ಚಿಕ್ಕ ಕಣ್ಣುಗಳನ್ನೇ ಆದಷ್ಟೂ ದೊಡ್ಡದಾಗಿ ಬಿಟ್ಟೆ
ಆಗವನು ಸ್ವಲ್ಪ ತಡವರಿಸುತ್ತಾ `ಚಂದನದ ಗೊಂಬೆ...' ಅಂತ ಅವಸರವಾಗಿ ಮುಗಿಸಿ ಬಿಟ್ಟ

ಇಷ್ಟೆಲ್ಲಾ ಆದ ಮೇಲೆ ನಾವಿಬ್ಬರು ಹೆಂಗಸರು ಸುಮ್ಮನಿರಲು ಸಾಧ್ಯವೇ? ಸರಿ ಸುರು ಮಾಡಿದೆವು

ಯಾರಿವನೂ ಈ ಮಣ್ ಮೆತ್ತನೂ
ಧೀರರಲ್ಲಿ ಧೀರ ಬಂದ ನಮ್ಮ ಶೂರ
ತಲೆಭಾ....ರ!

ಅದಕ್ಕುತ್ತರವಾಗಿ ಬಂದ ಬುಲೆಟ್ಟು,


`ಎಲ್ಲಿರುವೇ ಮನೆಯ ಕಾಯುವ ಪ್ರೇಯಸಿಯೇ...'

ಹೀಗೇ ಸ್ವಲ್ಪ ಸಮಯ ನಡೆದ ನಂತರ ಕುರುಕಲು ಸಮಾರಾಧನೆ ಶುರುವಾದ್ದ ಪ್ರಯುಕ್ತ ಕದನ ವಿರಾಮ ಘೋಷಿಸಲಾಯಿತು

************************
ಇಂಥಾ ನಗೆ ಬುಗ್ಗೆಗಳು ಆತ್ಮೀಯರು ಸೇರಿದಲ್ಲೆಲ್ಲಾ ಚಿಮ್ಮುತ್ತಿರುತ್ತವೆ.ಸದಾ ಟೆನ್ಶನ್ನಿನ ಇವತ್ತಿನ ಜೀವನದಲ್ಲಿ ನಮ್ಮ ಆರೋಗ್ಯ ,ಉತ್ಸಾಹ ಜೀವಂತ ವಾಗಿರಿಸಲು ಇಂಥವು ಬೇಕೇ ಬೇಕು ನಿಮ್ಮಗಳ ನೆನಪಿನ ದೋಣಿಯಲ್ಲಿ ಇಂಥ ಹಾಡುಗಳಿದ್ದರೆ ದುರ್ಗದಲ್ಲಿ ಹಂಚಿ ಕೊಳ್ಳಿ.ಇತರರಿಗೆ ಮುಜುಗರ ತರಿಸದ,ನೋವು ಮಾಡದ ತಿಳಿ ಹಾಸ್ಯ ಚಿಮ್ಮುವ ಹಾಡು ಹಾಡಿ....

5 Comments:

Anonymous Anonymous said...

ಚೆನ್ನಾಗಿದೆ ಮಾಲಾ ನಿಮ್ಮ ಹಾಡುಗಳು. ನಮ್ಮನೆಯಲ್ಲಿ ನಾವು "ಯುಗಯುಗಗಳೇ ಸಾಗಲಿ ನಮ್ಮ ಜಗಳ ಶಾಶ್ವತ" ಎಂದು ಆಗಾಗ ಹಾಡಿಕೊಳ್ಳುವುದುಂಟು :-)

12:11 PM  
Blogger mala rao said...

ಧನ್ಯವಾದಗಳು ಶ್ರೀತ್ರೀ
ನಿಮ್ ಹಾಡೂ ಚೆನ್ನಾಗಿದೆ. ನಮ್ಮೂರಲ್ಲಿ ಚುನಾವಣೆ ಸಮಯದಲ್ಲಿ
ಈ ನಿಮ್ ಹಾಡು ಕೇಳಿದ್ದು `ಯುಗಯುಗಗಳೆ ಸಾಗಲೀ ನಮ್ಮ ಕಾಂಗ್ರೆಸ್ ಶಾಶ್ವತ...' ಅಂತ ಆಟೋದಲ್ಲಿ ಹಾಡುತ್ತಾ
ಪ್ರಚಾರ ಮಾಡುತ್ತಿದ್ದದ್ದು ಒಂದೆರಡು ವಾರದ ನಂತರ ಯಾಕೋ ಅದೇ ಅಟೋ ದವನು ಪಾರ್ಟಿ ಚೇಂಜಿಸಿ `ಬಿ.ಜೆ.ಪಿ ಶಾಶ್ವತಾ..' ಅಂತ ಹಾಡೋಕ್ಕೆ ಶುರು ಮಾಡಿಬಿಟ್ಟ!
ಬಣ್ಣಬಣ್ಣದ ಪಾಂಪ್ಲೆಟ್ ಕಲೆಕ್ಟ್ ಮಾಡುತ್ತಿದ್ದ ನಾವೆಲ್ಲಾ ಕಕ್ಕಾ ಬಿಕ್ಕಿ ಆಗಿದ್ದೆವು (ವೋಟು ಮಾಡಲು ರೈಟ್ ಇಲ್ದಿದಿದ್ರೂ..!)

2:52 PM  
Anonymous Anonymous said...

ಎಲ್ಲೋ ಓದಿದ್ದು:
'ಪೂಜಿಸಲೆಂದೇ ಹೂಗಳ ತಂದೆ.....' ಹಾಡನ್ನು ಅಣಕ ಮಾಡಿ ಬರೆದದ್ದು:

'ಬೋಳಿಸಲೆಂದೇ ನಿನ್ನಲಿ ಬಂದೆ
ಶೇವನು ಕೋರಿ ನಾ ನಿಂದೆ
ಕೆರೆಯೋ ದಾಡಿಯನು.. ಮುನ್ಸಾಮಿ'

ಸ್ವಲ್ಪ over ಅಂತ ಅನ್ನಿಸಿದರೂ ಕೆಟ್ಟಾಕೊಳಕ double meaning ಜೋಕುಗಳಿಗಿಂತ ಉತ್ತಮವಾಗಿದೆಯಲ್ಲವೇ?

8:57 PM  
Blogger mala rao said...

dhanyavaadagaLu sushruta avarE,
nimma I haaDu Odi tuMbaa nagu baMtu
durgakke swaagata
hIgE aagaaga baruttiri

10:58 AM  
Blogger mala rao said...

ನಮ್ಮನೆಯಲ್ಲಿ ನಾವು "ಯುಗಯುಗಗಳೇ ಸಾಗಲಿ ನಮ್ಮ ಜಗಳ ಶಾಶ್ವತ" ಎಂದು ಆಗಾಗ ಹಾಡಿಕೊಳ್ಳುವುದುಂಟು
ಶ್ರೀ ತ್ರೀ ,

ಊಟಕ್ಕೆ ಉಪ್ಪಿನ ಕಾಯಿಯಂತೆ ಆಗಾಗ ನಡೆವ ಜಗಳಗಳು
ಲೈಫ್ನ ರುಚಿ ಹೆಚ್ಚಿಸುತ್ತವೆ ಅಂತ ಎಲ್ಲೋ ಓದಿದ ನೆನಪು
ಹೌದೇ?

11:08 AM  

Post a Comment

Subscribe to Post Comments [Atom]

<< Home