ಮಿಸಳ್ ಪಾವ್
ಮಿಸಳ್ ಪಾವ್ ಪಕ್ಕಾ ಮಹಾರಾಷ್ಟ್ರಿಯನ್ ತಿನಿಸು. ಇದರ ಕಸಿನ್ ಪಾವ್ ಭಾಜಿ ಯಂತೆ ದೇಶಾದ್ಯಂತ ಇದು ಖ್ಯಾತಿ ಸಂಪಾದಿಸಿಲ್ಲವಾದರೂ ರುಚಿಯಲ್ಲಿ ಅದಕ್ಕಿಂಥ ಏನೂ ಕಡಿಮೆ ಇಲ್ಲ.ಸಾಮಾನ್ಯವಾಗಿ ಮಿಸಳ್ ಪಾವ್ ನ `ಉಸಳ್' ಮಾಡಲು `ಮಟ್ಕಿ' ಅಂತ ಕರೆಯಲ್ಪಡುವ ಒಣ ಬಟಾಣಿಯನ್ನು ನೀರಿನಲ್ಲಿ ನೆನೆಹಾಕಿ ಉಪಯೋಗಿಸುತ್ತಾರೆ ಜೊತೆಗೆ ಹುಳಿರುಚಿಗಾಗಿ ಪಕ್ಕಾಮರಾಠಿ ಕೋಕಮ್!
ನನಗೆ ಒಣ ಬಟಾಣಿ ಅಷ್ಟೇನೂ ಇಷ್ಟವಿಲ್ಲ ಹೊಟ್ಟೆ ಕೆಡುತ್ತೆ ಅಂಥ ನೆಪ ಹೇಳಿಕೊಂಡು ಬಟಾಣಿಯನ್ನು ಹೆಚ್ಚು ಆರೋಗ್ಯಕರವಾದ ಮೊಳಕೆಬರಿಸಿದ ಹೆಸರುಕಾಳಿನೊಂದಿಗೆ ರಿಪ್ಲೇಸ್ ಮಾಡಿಬಿಟ್ಟಿದ್ದೇನೆ ನಮ್ಮಮನೆಯಲ್ಲಿ.ಕೋಕಮ್ ಎಲ್ಲಾ ಜಾಗದಲ್ಲೂ ಸಿಗುವುದಿಲ್ಲವಾದ್ದರಿಂದ ನಮ್ಮ ಹುಣಸೆಯನ್ನೇ ಉಪಯೋಗಿಸುತ್ತೇನೆ ಸಾಮಾನ್ಯವಾಗಿ ಮಿಸಳ್ ನೊಂದಿಗೆ ಪೋಹಾ(ನೆನೆದ ಅವಲಕ್ಕಿಯ ತಯಾರಿಕೆ)/ ಬಟಾಟ ವಡಾ/ಚಿವ್ಡಾ/ಸಾಬೂದಾನ ವಡಾ(ಸಬ್ಬಕ್ಕಿ ವಡೆ) ಮಾಡುತ್ತಾರೆ. ನಾನು ಅಷ್ಟೆಲ್ಲಾ ತಲೆನೋವು ಮಾಡಿಕೊಳ್ಳೋದಿಲ್ಲ ಆದರೂ ನಮ್ಮನೇಲೆ ನನ್ನ simplified misal paav ಭಾರೀ Hit !
ನನ್ನ ಮಿಸಳ್ ಪಾವ್ ಸ್ವಂತ ವಿಧಾನ ಇಲ್ಲಿದೆ (ಸಾಂಪ್ರದಾಯಿಕ ರೆಸಿಪಿ ಗೂಗಲ್ಲಿನಲ್ಲಿ ಹುಡುಕಿದರೆ ಸಿಗುತ್ತೆ)
ಬೇಕಾಗುವ ಪದಾರ್ಥಗಳು-
ಉಸಳ್-
ಮೊಳಕೆ ಬರಿಸಿದ ಹೆಸರುಕಾಳು-2೦೦ ಗ್ರಾಂ
ಈರುಳ್ಳಿ-ಒಂದು (ದೊಡ್ಡದು)
ಬೆಳ್ಳುಳ್ಳಿ-3-4 ಹೆಳಕು (ಜಜ್ಜಿದ್ದು)
ಶುಂಠಿ-1 ಇಂಚು (ಜಜ್ಜಿದ್ದು)
ಗರಂ ಮಸಾಲ-1 ಚಮಚ
ಅಚ್ಚಮೆಣಸಿನ ಕಾಯಿ ಪುಡಿ-1 ಚಮಚ
ಹುಣಸೇ ಹಣ್ನು-ಗೋಲಿ ಗಾತ್ರ
ಉಪ್ಪು-ರುಚಿಗೆ
ಸಕ್ಕರೆ-1 ಚಮಚ
ಎಣ್ನೆ-1 ದೊಡ್ಡ ಚಮಚ
ಬೇಕಾಗುವ ಇತರ ಪದಾರ್ಥ-
ಸೇವ್-ನಿಮಗೆಷ್ಟು ಬೇಕೋ ಅಷ್ಟು!
ಕೊತ್ತಂಬರಿ ಸೊಪ್ಪು-(ತೊಳೆದದ್ದು)ಅಲಂಕರಿಸಲು
ಈರುಳ್ಳಿ- ಸಣ್ಣಗೆ ಕತ್ತರಿಸಿದ್ದು
ಮಿಸಳ್ ನೊಂದಿಗೆ ತಿನ್ನಲು ಪಾವ್!
ಮಾಡುವ ವಿಧಾನ-
ಮೊಳಕೆ ಬರಿಸಿದ ಹೆಸರು ಕಾಳನ್ನು ಅದು ಮುಳುಗುವಷ್ಟು ನೀರು ಹಾಕಿ ಕುಕ್ಕರಿನಲ್ಲಿ ಎರಡು ಕೂಗು ಕೂಗಿಸಿ. ಬಾಣಲೆಯಲ್ಲಿ ಎಣ್ಣೆ ಇಟ್ಟು ಜಜ್ಜಿದ ಬೆಳ್ಳುಳ್ಳಿ,ಶುಂಠಿ ಹಾಕಿ ನಂತರ ಈರುಳ್ಳಿ ಹಾಕಿಈರುಳ್ಳಿ ಸ್ವಲ್ಪ ಕಂದು ಬಣ್ಣ ಬಂದಾಗ ಬೆಂದ ಹೆಸರು ಕಾಳು ಹಾಕಿ. ಉಪ್ಪು , ಗರಂ ಮಸಾಲ, ಅಚ್ಚ ಮೆಣಸಿನಕಾಯಿ ಪುಡಿ, ಸಕ್ಕರೆ ಹಾಕಿ ಐದು ನಿಮಿಶ ಕುದಿಸಿ.ನಂತರ ಹುಣಸೆ ಕಿವುಚಿದ ನೀರು ಹಾಕಿ ಎರಡು ನಿಮಿಷ ಕುದಿಸಿ ಕೆಳಗಿಳಿಸಿ . ಈಗ ಉಸಳ್ ರೆಡಿ!
ಈ ಉಸಳ್ ಅನ್ನು ಮಿಸಳ್ ಆಗಿ ಪರಿವರ್ತಿಸುವುದು ಬಲು ಸುಲಭ
ಸಣ್ಣ(!) ಬಟ್ಟಲಲ್ಲಿ ಎರಡು ಸೌಟು ಉಸಳ್ ಬಡಿಸಿ ಸಣ್ಣಗೆ ಕತ್ತರಿಸಿದ ಈರುಳ್ಳಿ,ಕೊತ್ತಂಬರಿ ಸೊಪ್ಪು ಮತ್ತು ಸೇವ್ ನಿಂದ ಅಲಂಕರಿಸಿ `ಮಿಸಳ್ 'ತಯಾರ್!
ಪಾವ್ ಅನ್ನು ಮಧ್ಯೆ ಕತ್ತರಿಸಿ ಎರಡೂ ಬದಿ ಕಾಯಿಸಿ `ಮಿಸಳ್ 'ನೊಂದಿಗೆ ಬಡಿಸಿ
ಸಾಯಂಕಾಲದ ಉಪಹಾರಕ್ಕೆ ತಕ್ಕ ತಿನಿಸು ಇದು ಚಳಿಗಾಲದಲ್ಲಿ ಬಿಸಿ ಬಿಬಿ ಹಬೆಯಾಡುವ ಮಿಸಳ್ ಪಾವ್ ತಿನ್ನುವ ಸುಖ..ಆಹಾ! ಜೊತೆಗೆ `ಅದ್ರಕ್ ವಾಲ ಛಾಯ್' ಇದ್ದರೆ`ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ....'
4 Comments:
ಧನ್ಯವಾದಗಳು. ಒಮ್ಮೆ ಪ್ರಯತ್ನಿಸಿ ನೋಡ್ಬೇಕು (ಅಥವ ಅಮ್ಮನಿಗೆ ಮಾಡ್ಕೊಡಿ ಅಂತ ಕೇಳಿ ನೋಡ್ಬೇಕು).
ಏನೋ ಹೂವು ಹಣ್ಣಿನ ಬಗ್ಗೆ ಬರೀತೀರಾ ಅಂದ್‌ಕೊಂಡ್ರೆ ತಿಂಡಿ-ತೀರ್ಥದ ಬಗ್ಗೆ ಬರೆದು ಭಾರೀ ತೊಂದ್ರೆ ಕೊಡ್ತಾ ಇದೀರ್ ನೋಡ್ರೀ, ನಮಗಿದನ್ನ ಮಾಡೋಕೂ ಬರೋಲ್ಲ, ಮಾಡೋಕೂ ಇಷ್ಟಾ ಇಲ್ಲಾ ತಿಂದಾದ್ರೂ ಹೊಟ್ಟೇ ತುಂಬಿಸ್ಕೊಳ್ಳೋಣಾ ಅಂದ್ರೆ ಬರೀ ಚಿತ್ರಾನ್ ತೋರಿಸ್ತೀರಲ್ರೀ...ನೀವು ಖಂಡಿತ ಮನುಷ್ಯರಂತೂ ಅಲ್ಲ, ದೇವ್ರು! :-)
ಕನ್ನಡಿಗರಿಗೆ ದುರ್ಗಕ್ಕೆ ಸ್ವಾಗತ
ನನ್ನ ಮಿಸಳ್ ಪಾವ್ ರೆಸಿಪಿ ತುಂಬಾ ಸುಲಭವಾಗಿದೆ ನೀವೇ ಮಾಡಲು ಟ್ರೈ ಮಾಡಬಹುದು...
ಹೀಗೇ ಆಗಾಗ ಬರುತ್ತಿರಿ
ಕಾಳಣ್ಣೋರಿಗೆ ತಿಂಡಿ ತೀರ್ಥದ ಚಿತ್ರ ನೋಡಿದ್ರೇ ಹೊಟ್ಟೆ ಕೆಡುತ್ತಾ? ಬಲು ಸೂಕ್ಶ್ಮವಪ್ಪಾ...
ನೀವು ದೇವ್ರು ಅಂದಿದ್ದಕೆ ಭಯ ಆಗ್ತಿದೆ ನಾಳೆ ಎಲ್ಲಿ ದೆವ್ವಾ ಅಂತಾನೂ ಅಂದು ಬಿಡುತ್ತೀರೋ ಅಂತಾ...
Post a Comment
Subscribe to Post Comments [Atom]
<< Home