Sunday, September 24, 2006

ಸುಂದರ ಸೂರ್ಯಾಸ್ತದ "ಇನ್ನೊಂದು ಮುಖ"

ನಮಗಿದ್ದುದು ಮಳೆ ನೀರನ್ನು ನಂಬಿರುವ ಬೆಟ್ಟು ಗದ್ದೆಗಳು. ಬೇಸಾಯ ಮಾಡುವುದು ಎಷ್ಟು ತ್ರಾಸದ ಕಾಯಕ ಎಂದು ಬೇಸಾಯ ಮಾಡಿದವರಿಗೆ,ಅದನ್ನು ಪ್ರತಿ ಹಂತದಲ್ಲೂ ಕಣ್ಣಾರೆ ಕಂಡವರಿಗೆ ಮಾತ್ರ ಗೊತ್ತು.ಅದು ಓದಿ ಕೇಳಿ ತಿಳಿಯುವಂಥದಲ್ಲ. ಅಂಥ ಬೆಳೆ ಸಮೃದ್ದವಾಗಿ ಬೆಳೆದು,ತೆನೆ ಬರುವ ಹೊತ್ತಿನಲ್ಲಿ ಮಳೆ ಮಾಯ! ಗದ್ದೆಯ ನೀರಿನ ಮಟ್ಟ ದಿನದಿಂದ ದಿನಕ್ಕೆ ಕೆಳ ಹೋಗುವುದನ್ನೂ ದಿನಾ ಹೋಗಿ ನೋಡುವಾಗ ಹೃದಯವೇ ಕುಸಿದಂಥಾಗುತ್ತದೆ.ತಂದೆ ಎಲ್ಲೋ ದೂರದ ಊರಿನಲ್ಲಿ.ದಿನಾ ಸಂಜೆ ಈ ದಿನವಾದರೂ ಮಳೆ ಬರುವುದೇನೋ ಎಂಬ ಆಸೆಯಿಂದ ಪಶ್ಚಿಮ ಆಕಾಶವನ್ನು ದಿಟ್ಟಿಸುವ ತಾಯಿ.ಪಶ್ಚಿಮ ದಿಗಂತದಲ್ಲಿ ಕ್ಷಣ ಕ್ಷಣಕ್ಕೂ ಹಳದಿ,ಕೆಂಪು ಬಣ್ಣದಿಂದ ಮನೋಹರವಾಗುವ ಮೋಡವನ್ನು ನೋಡುತ್ತಾ ತಾಯಿಯ ಎದೆಯಲ್ಲಿ ಹೆಚ್ಚುವ ದುಗುಡ ದಿನಗಳೆದಂತೆ ಗದ್ದೆಯ ನೀರು ಆರಿ,ಕೆಸರು ಆರಿ,ಗದ್ದೆಯ ಮಣ್ಣು ಒಣಗಿ ಸೀಳು ಸೀಳಾಗಿ ಭತ್ತದಗಿಡಗಳು ಒಣಗತೊಡಗಿದಾಗ ತಾಯಿಯ ಕಣ್ಣಂಚಿನಲ್ಲಿ ಕಾಣಿಸುವ ಕಣ್ಣೀರು... ದುಃಖ ಅದನ್ನು ಕಂಡು ನನ್ನ ಕಣ್ಣೀನಲ್ಲಿಯೂ ಕಣ್ಣೀರು.ದಿನದಿನಗಳ ಕಾಲ ದಿನವೂ ಸಂಜೆ ದಿಗಂತದಲ್ಲಿ ಕಪ್ಪು ಮೋಡಗಳು ಕಾಣಿಸದೆ,ಬೆಂಕಿಯಂಥ ಕೆಂಪು ಬಣ್ಣದರಾಶಿ ಕಾಣಿಸುವಾಗ ತಾಯಿಯ ಕರುಳಿನಲ್ಲಿ ಆಗುವ ಸಂಕಟ.ಇಂಥ ದಿನಗಳಲ್ಲಿ ಒಮ್ಮೊಮ್ಮೆ ತಂದೆ ಮನೆಯಲ್ಲಿರುವುದಿತ್ತು.ಆದರೆ ಆ ಸಂತಸವನ್ನು ಕೆಂಪು ಮೋಡ ಕಿತ್ತುಕೊಳ್ಳುತ್ತಿತ್ತು ಕವಿಗೆ,ಪ್ರವಾಸಿಗನಿಗೆ ಅದ್ಬುತ,ರಮ್ಯ,ಅಲೌಕಿಕ ಎಂದೆನಿಸುವ ಸೂರ್ಯಾಸ್ತಮಾನದ ದೃಶ್ಯವು ಕೂಡಾ ಇದೇ...ಉರಿಯುತ್ತಿರುವ ಬೆಳೆಯನ್ನು ನೋಡಿ ಸಹಿಸಲಾರದೆ ಕೈ ಚೆಲ್ಲಿ ಕೂತ ಅಪ್ಪ .ಅಮ್ಮನ ಮ್ಲಾನ ಮುಖಗಳ ನೆನಪು ಭತ್ತದ ಪೈರೆಲ್ಲಾ ಒಣಗಿದರೆ ಮುಂದೆ ಕಾದಿರುವ ಉಪವಾಸದ ದಿನಗಳ ನೆನಪು.ತೀರಾ ಅಸಹಾಯಕಳಾಗಿ `ದೇವರಿಲ್ಲಾ' ಎಂದು ತಾಯಿ ಕಣ್ಣೀರು ಮಿಡಿಯುತ್ತಿದ್ದ ನೆನಪು ದುಃಖವೆಂದರೇನೆಂದು ಸ್ಪಷ್ಟವಾಗುವ ಮೊದಲೇ ದುಃಖವನ್ನು ನಾನು ಕಂಡಿದ್ದು ಹೀಗೆ.

ಕನ್ನಡದ ಪ್ರಖ್ಯಾತ ಕಾದಂಬರಿಕಾರ ಕೆ.ಟಿ.ಗಟ್ಟಿಯವರು ತಮ್ಮ `ತೀರ' ಪುಸ್ತಕದಲ್ಲಿ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿ ಕೊಳ್ಳುವುದು ಹೀಗೆ.ಈ ಪುಸ್ತಕ ಓದಿದ ಮೇಲೆ ನಾನು ನೋಡುವ ಪ್ರತಿ ಮನೋಹರ ಸೂರ್ಯಾಸ್ತ ದಲ್ಲೂ ಗಟ್ಟಿಯವರ ತಾಯಿ ನೆನಪಾಗುತ್ತಾರೆ....ಕಣ್ಣುಗಳು ತುಂಬಿ ಬರುತ್ತವೆ...ಕವಿಗಳೂ,ರಸಿಕರೂ ಸವಿದು,ಹಾಡಿ ಹೊಗಳುವ ಸಂಜೆಯ ಬಂಗಾರ ಕೆಂಪಿನ ಸೂರ್ಯ, ಪುಟ್ಟ ಹುಡುಗನೊಬ್ಬನ ಕಣ್ಣಿನ ಕನಸುಗಳನ್ನೂ, ತಟ್ಟೆಯ ಅನ್ನವನ್ನೂ ಕಸಿದುಕೊಳ್ಳುತ್ತಾನಾ...ಎಂದು ಮತ್ತೆ ಮತ್ತೆ ಯೋಚಿಸುವಂತಾಗುತ್ತದೆ...

10 Comments:

Anonymous Anonymous said...

ಹೌದು ಮಾಲಾ, ಸುಂದರ ರೋಮಾಂಚಕ ಮುಸ್ಸಂಜೆಗಳೂ ಕರುಳು ಕತ್ತರಿಸುತ್ತವೆ ಕೆಲವೊಮ್ಮೆ. ಇದರ ಸತ್ಯ, ಶ್ರೀ ಗಟ್ಟಿಯವರಂತೆ ನಾನೂ ಕಂಡಿದ್ದೇನೆ. ಇಂಥದ್ದೇ ಸಂದರ್ಭ, ಅಮ್ಮನ ಜೊತೆಗೆ ಹಳ್ಳಿಯಲ್ಲಿ ನಾವು, ಅಪ್ಪ ದೂರದೂರಿನಲ್ಲಿ. ಆಗಿನ ತುಮುಲ, ಆತಂಕಗಳು.... ಈಗ ಸೂರ್ಯಾಸ್ತ ಹೇಗಿದ್ದರೂ ಒಂದೆಳೆ ವಿಷಾದದ ಛಾಯೆಯೂ ಸೇರಿರುವಂತೆ ಮಾಡಿವೆ. ವಿಪರ್ಯಾಸವೆ?

9:34 AM  
Blogger nishu mane said...

Mala, chennaagi bardideeya. Photo-noo chennaagide. Shraddheyinda dinaa bareetirOdu nODOke khushiyaagatte kaNe. Keep it up.

8:00 PM  
Blogger nishu mane said...

Mala, chennaagi bardideeya. Photo-noo chennaagide. Keep it up.

8:08 PM  
Anonymous Anonymous said...

ಸೂರ್ಯ+ಅಸ್ತ = ಸೂರ್ಯಾಸ್ತ (ಸವರ್ಣದೀರ್ಘಸಂಧಿ) ಸರಿಯಾದ ಪ್ರಯೋಗವಿರಬಹುದೆಂದುಕೊಂಡಿದ್ದೆ. ನೀವು ಎಲ್ಲ ಕಡೆಯೂ 'ಸೂರ್ಯಸ್ತ'ವನ್ನೇ ಬಳಸಿರುವುದು ನೋಡಿದರೆ ಬಹುಶಃ ಅದೇ ಸರಿಯೆಂದು ನೀವು ಗಟ್ಟಿಯಾಗಿ (ಅಥವಾ ಕೆ.ಟಿ.ಗಟ್ಟಿಯಾಗಿ?) ನಂಬಿರುವಂತಿದೆ. ದಯವಿಟ್ಟು ತಿಳಿಸುತ್ತೀರಾ?

- ಶ್ರೀವತ್ಸ ಜೋಶಿ

1:39 PM  
Blogger mala rao said...

ಜೋಶಿ ಮೇಷ್ಟ್ರಿಗೆ ದುರ್ಗ ಕ್ಕೆ ಸ್ವಾಗತ
ಕಮೆಂಟ್ಸ್ಗಾಗಿ ಥ್ಯಾಂಕ್ಸ್ ಕಾಗುಣಿತದ ತಪ್ಪು ಸರಿ ಪಡಿಸಿದ್ದೇನೆ
ಇದು ಗಟ್ಟಿಯವರ ತಪ್ಪಲ್ಲಾ... ತಪ್ಪೆಲ್ಲಾ ಈ "ಟೊಳ್ಳಿ"ನದೇ
ಆಗಾಗ ದುರ್ಗಕ್ಕೆ ಬರ್ತಾ ಇರಿ

3:38 PM  
Blogger mala rao said...

ಜ್ಯೋತಿ
ಗಟ್ಟಿಯವರ ಅನುಭವ ನಿಮ್ಮದೂ ಸಹ ಎಂದು ಓದಿ ವ್ಯಸನವಾಯಿತು.ಗಟ್ಟಿಯವರೂ ತಮ್ಮ ಕಥನ ಮುಂದುವರೆಸುತ್ತಾ
"ಈ ಅನುಭವ ನನ್ನೊಬ್ಬನದ್ದು ಮಾತ್ರವೇ? ಅಲ್ಲ..." ಎನ್ನುತ್ತಾ ಅದು ಆ ಕಾಲದಲ್ಲಿ ಬಹು ಜನರಿಗೆ ದಿಕ್ಕೆಡಿಸಿದ್ದ ಕಟು ವಾಸ್ತವ ಎನ್ನುತ್ತಾರೆ. ಆ ಬಹುಜನರಲ್ಲಿ ನನ್ನ ಸ್ನೇಹಿತೆಯಾದ
ನೀವೂ ಇದ್ದ ಸಂಗತಿ...ಮನಸ್ಸು ಭಾರವಾಗುತ್ತದೆ

3:47 PM  
Blogger mala rao said...

ಧನ್ಯವಾದಗಳು ಮೀರಾ

3:48 PM  
Blogger Anveshi said...

ಹೌದೌದು,

ಅವರವರ ಭಾವಕ್ಕೆ ತಕ್ಕಂತೆ ಯೋಚಿಸಬಹುದು.
ಮನಸ್ಸು ಉಲ್ಲಾಸಮಯವಾಗಿದ್ದರೆ ಈ ದಿಗಂತವೇ ನವ ಕಲ್ಪನೆಗೆ ಮೂಸೆಯಾಗುತ್ತದೆ.

ದುಗುಡ ತುಂಬಿದ್ದರೆ ವೇದನೆಯ ಬೆಂಕಿಗೆ ತುಪ್ಪವಾಗುತ್ತದೆ.

3:14 AM  
Blogger mala rao said...

ಹೌದು ಅನ್ವೇಶಿಗಳೇ
ನೀವು ಹೇಳಿದ್ದು ನಿಜ
ಸಿಟಿಯಲ್ಲಿ ಬೆಳೆದವರಿಗೆ ಗಟ್ಟಿಯವರು ಹೇಳುವ ಈ ಮುಖದ ಪರಿಚಯ ಸಾಮಾನ್ಯವಾಗಿ ಇರುವುದಿಲ್ಲಾ.

2:10 PM  
Blogger mala rao said...

ಹೌದು ಅನ್ವೇಶಿಗಳೇ
ನೀವು ಹೇಳಿದ್ದು ನಿಜ
ಸಿಟಿಯಲ್ಲಿ ಬೆಳೆದವರಿಗೆ ಗಟ್ಟಿಯವರು ಹೇಳುವ ಈ ಮುಖದ ಪರಿಚಯ ಸಾಮಾನ್ಯವಾಗಿ ಇರುವುದಿಲ್ಲಾ.

2:10 PM  

Post a Comment

Subscribe to Post Comments [Atom]

<< Home