Friday, September 29, 2006

ಹೇ ಹಂಸವಾಹಿನಿ ಜ್ಞಾನದಾಯಿನೀ...

ಇಂದು ಸರಸ್ವತಿ ಪೂಜೆ. ಜ್ಞಾನದ ಬೆಳಕು ಬೇಡಲು ಯಾರೂ ಮುಹೂರ್ತಕ್ಕಾಗಿ, ದಿನಕ್ಕಾಗಿ ಕಾಯಬೇಕಾಗಿಲ್ಲಾ ನಿಜ.ಆದರೆ ನಮ್ಮಲ್ಲಿನ `ತಿಳಿವು ಬೇಕು' ಎಂಬ ಹಂಬಲವನ್ನು, ಈ ದಿನನಿತ್ಯದ ಜಂಜಾಟದಲ್ಲಿ ಕಳೆದೇ ಹೋಗಿರುವ ಈ ಹಂಬಲವನ್ನು ಮತ್ತೆ ನೆನಪಿಸಿಕೊಳ್ಳಲು ಇದು ಸಕಾಲ.ಹಾಗೆ ನೆನಪಿಸಿಕೊಂಡು ವಾರದಲ್ಲಿ ತಿಂಗಳಲ್ಲಿ ಇಷ್ಟು ಕಾಲ `ನಾನು ತಿಳಿವಿನ ಮಹಾವೃಕ್ಷದ ಈ ಒಂದು ಕೊಂಬೆಯ ಹೂ ಹಣ್ಣುಗಳನ್ನು ಸವಿಯುವೆ' ಅಂತ ರೆಸೆಲ್ಯೂಶನ್ ಮಾಡಿಕೊಳ್ಳಲು ಸುದಿನ. ನೀವೇನೆನ್ನುತ್ತೀರಿ?

ವಿದ್ಯೆ,ಬುದ್ದಿ ಕೊಡು ಎಂದು ಸರಸ್ವತಿಯನ್ನು ಕೇಳಿಕೊಳ್ಳುವ ಹಲವಾರು ಹಾಡುಗಳೂ, ಶ್ಲೋಕಗಳೂ ಇವೆ `ಇವಳೇ ವೀಣಾಪಾಣಿ' ಯಂಥಾ ಭಕ್ತಿ ಗೀತೆಗಳೂ `ನಮಸ್ತೇ ಶಾರದಾದೇವಿ'ಯಂಥಾ ಶ್ಲೋಕಗಳೂ ಎಲ್ಲರಿಗೂ ಗೊತ್ತು. ನನ್ನ ಸ್ನೇಹಿತೆಯೊಬ್ಬಳು `ದಯಾಮಯಿ ಶಾರದಾ ಮಾಂ ಪಾಹೀ...' ಎಂಬ ಹಾಡು ತುಂಬಾ ಚೆನ್ನಾಗಿ ಹಾಡುತ್ತಿದ್ದಳು.`ಬೆಟ್ಟದಹೂ' ಸಿನಿಮಾದ `ತಾಯೆ ಶಾರದೆ' ಹಾಡಿನ ಈ ಸಾಲುಗಳು ನನಗೆ ತುಂಬಾ ಮನತಟ್ಟಿದ್ದು

ನಿನ್ನ ಮಡಿಲ ಮಕ್ಕಳಮ್ಮಾ
ನಿನ್ನ ನಂಬಿದ ಕಂದರಮ್ಮಾ
ನಿನ್ನ ಕರುಣೆಯ ಬೆಳಕಲೆಮ್ಮ
ಬಾಳನೂ ಬೆಳಗಮ್ಮಾ
ನಮ್ಮ ಕೋರಿಕೆ ಆಲಿಸಮ್ಮಾ

ನಾವು ಶಾಲೆಯಲ್ಲಿ `ಹೇ ಹಂಸವಾಹಿನಿ ಜ್ಞಾನದಾಯಿನಿ ಅಮ್ಮಾ ಕರುಣೆ ತೋರು' ಎಂಬ ಸುಂದರ ಹಾಡೊಂದನ್ನು ಹಾಡುತ್ತಿದ್ದೆವು ಆದರೆ ನನಗೀಗ ನೆನಪಿರುವುದು ಈ ಒಂದೇ ಒಂದು ಸಾಲು ಅಷ್ಟೇ ಏನಿವಳು ದಿನವೂ ತಾನು ಮರೆತ ಹಾಡೊಂದನ್ನು ನಮಗೆ ನೆನಪಿಸುತ್ತಿದ್ದಾಳಲ್ಲಾ ಅಂತ ನಿಮಗೀಗ ಅನ್ನಿಸುತ್ತಿದೆ ಅಂತ ನನಗೆ ಗೊತ್ತು.ಶಾಲೆಯಲ್ಲಿ ನಾನು ಕಲಿತಿದ್ದೆಲ್ಲಾ ಮರೆತಿದ್ದೇನೆ ಎಂದು ನೀವು ತೀರ್ಮಾನ ಮಾಡುವ ಮೊದಲು ನಾನು ಶಾಲೆಯಲ್ಲಿ ಕಲಿತ ಇನ್ನೂ ನೆನಪಿಟ್ಟುಕೊಂಡು ಆಗಾಗ ಹೇಳಿಕೊಳ್ಳುವ ಅಪರೂಪದ ಸರಸ್ವತಿ ಶ್ಲೋಕವೊಂದನ್ನು ಇಲ್ಲಿ ನಿಮಗಾಗಿ ಕೊಟ್ಟಿದ್ದೇನೆ

ದೌರ್ಭಿರ್ಯುಕ್ತ ಚತುರ್ಭಿಹಿ ಸ್ಪಟಿಕ ಮಣಿಮಯೀ

ಮಕ್ಷಮಾಲಾಂ ದದಾನ ಹಸ್ತೇನೈಕೇನ ಪದ್ಮಂ

ಸಿತಮಪಿಚ ಶುಕಂ ಪುಸ್ತಕಂ ಚಾಪರೇಣ

ಭಾಸಾ ಕುಂದೇಂದು ಶಂಖ ಸ್ಪಟಿಕ ಮಣಿನಿಭ

ಭಾಸಮಾನಾ ಸಮಾನ ಸಮೇ ವಾಗ್ದೇವತೇಯಂ

ನಿವಸತು ವದನೇ ಸರ್ವದಾ ಸುಪ್ರಸನ್ನಾ

ಅರ್ಥ-ತನ್ನ ನಾಲ್ಕು ಕೈಗಳಲ್ಲಿ ಕ್ರಮವಾಗಿ ಸ್ಪಟಿಕ ಮಣಿಯ ಅಕ್ಷಮಾಲೆ, ಅರಳಿದ ಕಮಲ (ಸಿತ ಪದ್ಮ), ಗಿಣಿ, ಪುಸ್ತಕವನ್ನು ಹಿಡಿದಿರುವ, ಮಲ್ಲಿಗೆ ಅರಳು (ಕುಂದ), ಚಂದ್ರ (ಇಂದು), ಶಂಖ, ಸ್ಪಟಿಕಮಣಿಗಳ ಸಮಾನವಾಗಿ ಹೊಳೆಯುವ (ಭಾಸ ಎಂದರೆ ಹೊಳೆಯುವುದು ಎಂದು ಅರ್ಥ) ಮುಖವುಳ್ಳ ವಾಗ್ದೇವತೆಯು ಸದಾಕಾಲವೂ ಸುಪ್ರಸನ್ನಳಾಗಿ ನನ್ನ ನಾಲಗೆಯ ಮೇಲೆ ನೆಲೆಸಿರಲಿ.

1 Comments:

Anonymous Anonymous said...

chennaagide

6:55 PM  

Post a Comment

Subscribe to Post Comments [Atom]

<< Home