Monday, October 02, 2006

ನಿನ್ನ ನೆನಪು ಸ್ಪೂರ್ತಿ, ಹುರುಪು,ದೇಶೀಯತೆ ಕಂಪು....

ನೆನ್ನೆ ಮಧ್ಯರಾತ್ರಿಯ ತನಕ ಮೌಂಟನ್ ವ್ಯೂ ನಲ್ಲಿ ಶೆರ್ರಿಲ್ ಕ್ರೋ(Sheryl Crow) ಕಾನ್ಸಾರ್ಟ್ ಕೇಳುತ್ತಾ ಕೂತಿದ್ದೆ ಒಂಬತ್ತು ಬಾರಿ `ಗ್ರಾಮ್ಮಿ' ಗಳಿಸಿರುವ ಬ್ಲೂಸ್ ರಾಕ್ ಗಾಯಕಿ ಶೆರ್ರಿಲ್ ಕ್ರೋ ತನ್ನ ಜೇನಿನ ದನಿಯಲ್ಲಿ ಹಾಡುತ್ತಿದ್ದರೆ ನೆರೆದಿದ್ದ ಇಪ್ಪತೈದು ಸಾವಿರಕ್ಕೂ ಹೆಚ್ಚು ಜನ ಹುಚ್ಚೆದ್ದು ಕುಣಿಯುತ್ತಿದ್ದರು ಸುಮಾರು ಎರಡು ಲಾರಿ ತುಂಬಬಹುದಾದ ಸಾಮಾನುಗಳಿಂದ, ಅತ್ಯಾಧುನಿಕ ತಂತ್ರಜ್ಞಾನದಿಂದ ಸಿಂಗರಿಸಿದ್ದ ಸ್ಟೇಜು ಕ್ಷಣಕ್ಕೊಮ್ಮೆ ಕಾಮನಬಿಲ್ಲಿನ ಎಲ್ಲಾ ಬಣ್ಣಗಳನ್ನು ಎರಚುತ್ತಿತ್ತು ಶೆರ್ರಿಲ್ ಒಮ್ಮೆ ಕೋಗಿಲೆಯಂತೆ ,ಒಮ್ಮೆ ಗುಡುಗಿನಂತೆ ಎದೆತುಂಬಿ ಹಾಡುತ್ತಿದ್ದಳು.

ಹೀಗೆ ಹಾಡುತ್ತಾ ಇದ್ದ ಶೆರ್ರಿಲ್ ತನ್ನ ಬೋಸ್ನಿಯ ಬಗ್ಗೆ ಇರುವ ಹಾಡು ಹಾಡುವ ಮುಂಚೆ ಒಂದೆರಡು ಮಾತಾಡಿದಳು ತನ್ನ ಬೋಸ್ನಿಯ ಪ್ರವಾಸ ನೆನೆಸಿ ಕೊಳ್ಳುತ್ತಾ "ಜನ ಏಕೆ ಒಬ್ಬರನ್ನೊಬ್ಬರು ಕೊಲ್ಲುತ್ತಾರೆ?" ಅಂತ ವಿಷಾದದ ದನಿಯಲ್ಲಿ ಕೇಳಿದಳು ಈಗ ಜಗತ್ತಿಗೆ ಬೇಕಿರುವುದು ಶಾಂತಿ ಅಹಿಂಸೆ ಎನ್ನುತ್ತಾ ಶೆರ್ರಿಲ್ ನೆನಪಿಸಿ ಕೊಂಡಿದ್ದು ಮಹಾತ್ಮ ಗಾಂಧಿಯವರನ್ನು! ಅದೇ ಕ್ಷಣದಲ್ಲಿ ಮೈದಾನ ಪೂರ್ತಿ ಇರಿಸಿದ್ದ ಹಲವಾರು ಬೃಹತ್ ಪರದೆಗಳ ಮೇಲೆ ಮಹಾತ್ಮ ಗಾಂಧಿಯವರ ಮಾತುಗಳು ಮೂಡಿಬಂತು ನನಗನ್ನಿಸಿತು ನಿಜ `ಬಂದೇ ಮೇ ಥಾ ಧಮ್!

ಈಗ ದೇಶ ಪೂರ್ತಿ `ಬಂದೇ ಮೇ ಥಾ ಧಮ್' ಹೇಳುತ್ತಿದೆ ನಿಧಾನವಾಗಿಯಾದರೂ ನಮಗೆ ಬಾಪು ನೆನಪಾಗುತ್ತಿದ್ದಾರೆ ಬವಣೆ ಪಥದ ಹಾದಿಯಲ್ಲಿ ತೊಳಲಿ ಬಳಲಿ ಬೆಂದ ಮೇಲೆ ನಾವು ಹಿಡಿದಿರುವ ದಾರಿ ತಪ್ಪು ಅಂತ ನಮಗೆ ಗೊತ್ತಾಗುತ್ತಿದೆ`ಲೇಟ್ ಈಸ್ ಬೆಟರ್ ದ್ಯಾನ್ ನೆವರ್' ಅಂಥಾ ಸಂತೋಷ ಪಡಬೇಕಾ? ಗೊತ್ತಾಗುತ್ತಿಲ್ಲ

ಶಾಲೆಯಲ್ಲಿ ಓದಿದ `ತಟ್ಟು ಚಪ್ಪಾಳೆ ಪುಟ್ಟಮಗು ಗಾಂಧಿಗಿಂದು ಜನುಮದಿನ'ದಿಂದ ಹಿಡಿದು ಬಾಪು ಬಗ್ಗೆ ಇರುವ ಹಾಡುಗಳಿಗೆ ಲೆಕ್ಕವಿಲ್ಲ.ನನಗೆ ತುಂಬಾ ಹಿಡಿಸಿದ ಹಾಡು ದೊಡ್ಡರಂಗೇಗೌಡ ಅವರು ಬರೆದು ಶಿವಮೊಗ್ಗ ಸುಬ್ಬಣ್ಣ ಅವರು ಹಾಡಿರುವ "ಬಾಪೂ ಬಾಪು". ಸುಬ್ಬಣ್ಣನವರನ್ನು ಬಿಟ್ಟರೆ ಬೇರಾವ ಗಾಯಕರೂ ಈ ಹಾಡು ಹಾಡಿದ್ದು ನಾನು ಕೇಳಿಲ್ಲ ಬೆಂಗಳೂರು ಆಕಾಶವಾಣಿಯಲ್ಲಿ ಆಗಾಗ ಕೇಳಿ ಬರುವ ಈ ಹಾಡನ್ನು ಸಾಧ್ಯವಾದರೆ ಒಮ್ಮೆ ಕೇಳಿ ಗಾಂಧೀಜಿಯ ಆ ಭವ್ಯರೂಪು ನಿಮ್ಮ ಕಣ್ಣ ಮುಂದೆ ಮೂಡಿಬರುತ್ತದೆ ....

ದಾಸ್ಯ ತುಂಬಿದಾ ದೇಶದೊಳಗೆ
ಚಿಂತನೆ ಚೈತನ್ಯ ತಂದೆ ಬಾಪು,ಬಾಪೂ...
ಮೌಲ್ಯ ಮರೆತ ಮಂದಿ ನಡುವೆ
ಮಾನವೀಯ ತೇಜ ನಿನ್ನ ರೂಪು

ಮಂದಹಾಸ ಮೂರ್ತಿಯಾಗಿ ಜನಮಾನಸ ಮಿಡಿದೆ
ಶ್ರದ್ದೆಯೆಂಬ ಗದ್ದೆಯೊಳಗೆ ಸತ್ಯ ಬಿತ್ತಿ ಬೆಳೆದೆ
ಸ್ವಾತಂತ್ರ್ಯದ ಹೋರಾಟದಿ ಶಾಂತಿ ಮಂತ್ರ ಹಿಡಿದೆ
ಭಾರತೀಯ ಬದುಕಿಗೇನೆ ಕಾಯಕಲ್ಪ ಕಡೆದೆ

ನಿನ್ನ ಹಾದಿ ಮರೆತ ನಾವು ತೊಳಲಿ,ಬಳಲಿ,ಬೆಂದು
ಬವಣೆ ಪಥದ ಬೆಂಕಿಯಲ್ಲಿ ನಡೆದಿಹೆವು ಇಂದು
ನಿನ್ನ ನೆನಪು ಸ್ಪೂರ್ತಿ,ಹುರುಪು ದೇಶೀಯತೆ ಕಂಪು
ವಿಶ್ವಪ್ರೇಮ,ಸಹನೆ,ಕರುಣೆ ನಿನ್ನತನದ ಛಾಪು

ಸತ್ಯ ,ಅಹಿಂಸೆ ,ಶಾಂತಿಯ ಹರಿಕಾರ ಬಾಪೂ ನಿನಗೆ ನಮ್ಮ ನಮನ...

4 Comments:

Blogger Mahantesh said...

illi yaara jote gAndhi jayanti mattu dasara bagge mAtAdona aMta goMdaladalliruvaga,nimma blog adakoMdu dAri koTTitu... "taTTu chappaLe puTTa maguve" hadanna keLi sumAru dinagaLe agiddave...
dasarAda subhashagaLu...

12:15 PM  
Anonymous Anonymous said...

Good one

4:09 PM  
Blogger mala rao said...

ಮಹಂತೇಶರೇ
ಯಾಕೆ ಅಷ್ಟೊಂದು ಹೋಮ್ ಸಿಕ್ ಅನ್ನಿಸುತ್ತಿದೆಯಾ?
ನಿಮಗೂ ದಸರಾ ಶುಭಾಶಯಗಳು

6:34 AM  
Blogger mala rao said...

ಅನಾನಿಮಸರೇ,
ಮೆಚ್ಚುಗೆಗಾಗಿ ಧನ್ಯವಾದಗಳು

6:34 AM  

Post a Comment

Subscribe to Post Comments [Atom]

<< Home