Wednesday, March 28, 2007

ಹಾದಿ ಬದಿಯ ಪುಟಾಣಿ ಹೂ...


A Silent Love
The lowest trees have tops, the ant her gall
The fly her spleen, the little spark his heat;
The slender hairs cast shadows, through but small,
And bees have stings, although they be not great;
Seas have their source, and so have shallow springs;
And love is love, in beggars and in kings.
Where waters smoothest run, there deepest are the fords,
The dial stirs, yet none perceives it move;
The firmest faith is found in fewest words,
The turtles do not sing, and yet they love;
True hearts have ears, and eyes, no tongues to speak;
They hear, and see, and sign, and then they break
-Sir Edward Dyer (1540 - 1607 )
*******************
ಯಾರೂ ತುಳಿಯದ ಹಾದಿಯ ಬದಿಯ ಪುಟಾಣಿ ಹೂವೊಂದು ಅಪ್ರತಿಮ ಸೌಂದರ್ಯವತಿ ಅಲ್ಲದಿರಬಹುದು.ದೂರದಿಂದಲೇ ಪಥಿಕರನ್ನು ಸೆಳೆಯುವ ಸುಗಂಧವತಿ ಅಲ್ಲದಿರಬಹುದು ಕಣ್ನು ಕೋರೈಸುವ ಬಣ್ಣವಾಗಲೀ,ಆಕಾರವಾಗಲೀ ಇಲ್ಲದ ಹೂವೂ ಹೂವೇ ಅಲ್ಲವೇ?

Tuesday, March 20, 2007

ಹೊನ್ನಸೀರೆಗೆ ಬೆಳ್ಳಿ ಅಂಚು



ವರ್ಷ ತೊಡಕು ಚಿಕ್ಕಂದಿನಲ್ಲಿ ನಾವುಗಳು ಬಲು ಭಯ ಪಡುತ್ತಿದ್ದ ಹಬ್ಬ! "ಇವತ್ತೇನು ಮಾಡ್ತೀವೋ ವರ್ಷ ಪೂರ್ತಿ ಅದೇ ಮಾಡ್ತೀವಂತೆ" ಅನ್ನೋ ನಂಬಿಕೇನೇ ಭಯಕ್ಕೆ ಕಾರಣ!ಬೆಳಗ್ಗೆ ಬೇಗ ಎದ್ದು ಸ್ನಾನ ಮುಗಿಸಿ ಯಾವುದೋ ಒಂದು ಪಾಠದ ಪುಸ್ತಕ ಹಿಡಿದುಕೊಂಡು ತೂಕಡಿಸುತ್ತಾ ಕೂತಿರುತ್ತಿದ್ದೆವು. ಅವತ್ತೆಲ್ಲಾ ಅಪ್ಪ ಅಮ್ಮನ ಹತ್ರ ಬೈಸಿ ಕೊಳ್ಳಬಾರದೆಂಬ ಕಟ್ಟೆಚ್ಚರ ಬೇರೇ...ಒಬ್ಬರಿಗೊಬ್ಬರು ಬೈಯದೆ ಜಗಳವಾಡದೆ ದಿನ ಕಳೆಯುವುದು ತುಂಬಾ ಕಷ್ಟವಾಗುತ್ತಿತ್ತು ! ಆದರೂ ಹೇಗೊ ಹಲ್ಲು ಕಚ್ಚಿಕೊಂಡು ಸಹಿಸಿಕೊಂಡಿರುತ್ತಿದ್ದೆವು(`ನಾಳೆ ನೋಡ್ಕೋತೀನಿ ನಿನ್ನ...' ಅಂತ ಗೊಣಗಿಕೊಂಡು)

ಅಮ್ಮ ಯುಗಾದಿಗಷ್ಟೇ ಅಲ್ಲದೆ ವರ್ಷ ತೊಡಕಿಗೂ ಹೊಸ ಬಟ್ಟೆ ಅಂತ ಎರಡೆರಡು ಹೊಸ ಬಟ್ಟೆ ಹೊಲೆಯುತ್ತಿದ್ದರು ಎರಡನೇ ಹೊಸಬಟ್ಟೆ ಸಿಕ್ಕಿದ್ದೊಂದೇಈ ಭಯಪಡಿಸುವ ಹಬ್ಬದಿಂದ ನಮ್ಮಗಳಿಗೆ ಆಗುತ್ತಿದ್ದ ಲಾಭ !

ದಿನವೆಲ್ಲಾ ಒಳ್ಳೆ ಮಕ್ಕಳಾಗಿ ರಾತ್ರಿ ಮಲಗುವ ವೇಳೆಗೆ `ಅಬ್ಬಾ ಅಂತೂ ಈ ದಿನ ಮುಗಿಯಿತಲ್ಲಾ ಇನ್ನು ಮುಂದಿನ ವರ್ಷದ ತನಕ (ಒಳ್ಳೆ ಹುಡುಗಿ ತರ ನಟಿಸುವ) ಚಿಂತೆಯಿಲ್ಲಾ...'ಎಂಬ ನಿರಾಳ ಭಾವ ಮನದಲ್ಲಿ ತುಂಬಿಕೊಂಡು ನಿದ್ದೆಗೆ ಜಾರುವುದು ಈ ಹಬ್ಬ ಕೊಡಮಾಡುತ್ತಿದ್ದ ಬೋನಸ್ಸು

ಮರುದಿನ ಯಥಾಪ್ರಕಾರ ಜುಟ್ಟು ಜುಟ್ಟು ಹಿಡಿದು ಜಗಳ, ಅಮ್ಮನ ಹತ್ತಿರ ಬೈಗುಳ ತಿನ್ನುವುದು ಸೇರಿಸಿ ನಮ್ಮ ಎಂದಿನ ಸಕಲ ಕೆಟ್ಟಬುದ್ದಿಗಳನ್ನೂ ಹೊಸ ವರ್ಷದಲ್ಲಿ ಹೊಸ ಹುಮ್ಮಸ್ಸಿನಿಂದ ಪ್ರಾರಂಭಿಸುತ್ತಿದ್ದೆವು!

***********

ಇದು ವರ್ಷತೊಡಕೋ ಅಥವಾ ವರ್ಷತೊಡಗೋ? ಬಹುಶಃ ಎರಡನೆಯದೇ ಇರಬೇಕು ಜನಸಾಮಾನ್ಯರ ಬಾಯಲ್ಲಿ ತೊಡಕಾಯಿತೋ ಏನೊ...

ಇವತ್ತಿಗೆ `ಕರಿ ಹಬ್ಬ' ಅಂತನೂ ಹೇಳುತ್ತಾರೆ. ಇಲ್ಲಿ ಕರಿ ಅಂದರೆ ಕಪ್ಪು ಬಣ್ಣವಲ್ಲ

`ಕರಿ'ಗೆ ಅಂಚು ಎಂಬ ಅರ್ಥವೂ ಇದೆ.

ಅಂದರೆ ನಾವು ಸೀರೆಯ ಅಂಚು ಕಟ್ಟುವಂತೆ ಇದು ವರ್ಷದ ಅಂಚು ಕಟ್ಟುವ ದಿನ!

ಕಳೆದ ವರ್ಷಕ್ಕೆ,ಕಳೆದ ವರ್ಷದ ವ್ಯವಹಾರಗಳಿಗೆ ಅಂಚು ಕಟ್ಟಿ ಭದ್ರ ಪಡಿಸಿ ಹೊಸ ವರ್ಷ ಪ್ರಾರಂಭಿಸುವ ದಿನ ಹಿಂದಿನ ಕಾಲದಲ್ಲಿ ನಿಖರವಾಗಿ ದಿನ ಲೆಕ್ಕ ಹಾಕಲು ಈಗಿನಂತೆ ಸಾಧನಗಳು ಅಷ್ಟಾಗಿ ಇಲ್ಲದಿದ್ದುದರಿಂದ,ಮತ್ತು ಬಾಯಿಲೆಕ್ಕ ಹಾಕುವಷ್ಟು ಚತುರತೆ ಎಲ್ಲರಿಗೂ ಸಾಧ್ಯವಾಗದ್ದಿರಿಂದ ಈ ಲೆಕ್ಕ ಹಾಕುವ ,ಲೆಕ್ಕ ಹಾಕಿ ವ್ಯವಹಾರ ಚುಕ್ತಾ ಗೊಳಿಸುವ ದಿನ ಜನ ಸಾಮಾನ್ಯರಿಗೆ ತಲೆನೋವಿನ ದಿನ ಅಥವಾ ತೊಡಕು ಅಂತಾನೂ ಅನ್ನಿಸಿರಬಹುದೇನೋ...

ನಮಗಂತೂ ಈ ಹಬ್ಬ ತೊಡಕು ಅನ್ನಿಸುತ್ತಿದ್ದದ್ದುದ್ದು ತರಲೆ ಮಾಡಲಾಗುವುದಿಲ್ಲವಲ್ಲಾ ಅಂತ...!

Monday, March 19, 2007

ಶುಭಾಶಯ...

ಯುಗಾದಿಯ ಶುಭಾಶಯಗಳು
ನಿಮ್ಮೆಲ್ಲರಿಗೂ ಹೊಸ ವರುಷ ಹರುಷ ತರಲಿ
ಸರ್ವಜಿತು ನಾಮ ಸಂವತ್ಸರ ಸರ್ವರಿಗೂ ಜಯ ತರಲಿ

Friday, March 16, 2007

ಅಮೃತ ಘಳಿಗೆ


Hesitation
In darkness you held my hand
You hesitated, nor did I move.
I said nothing,as words remained in my throat,
And a breeze made me shiver slightly.
A soft breath issued from our mouth;I felt
It pass through my body and my heart;
I yearned to keep that moment forever,
But it fled without a pause.
-Che'n meng-chia (1911- )
(from chinese)
******************
ಸಣ್ಣ ಕಲ್ಲು ಸಕ್ಕರೆ ಚೂರಿನಂತೆ ಮಧುರವಾದ ಈ ಕವಿತೆ ಏಕೋ ತುಂಬಾ ಆಪ್ತವೆನಿಸಿತು
ಬಹುದಿನ ನೆನಪಲ್ಲಿ ಉಳಿಯಿತು
ಅಂದ ಹಾಗೆ `ಆ ಅಮೃತ ಘಳಿಗೆ ' ಯಾವುದೆಂದು ನಿಮಗೆ ಗೊತ್ತಾಯಿತೇ?

Monday, March 12, 2007

ಮೊದಲ ಟುಲಿಪ್


ನನ್ನ ಅಂಗಳದಲ್ಲಿ ಈ ವರ್ಷದ ಮೊದಲ ಟುಲಿಪ್ ಅರಳಿದೆ
ನಿಮಗೆ ಸಾಂಪ್ರದಾಯಕ ಟುಲಿಪ್ ನಂತೆ ಇದು ಕಾಣಿಸದು
ನಮ್ಮ ಮನದಲ್ಲಿ ಸಾಮಾನ್ಯವಾಗಿ ಇರುವ ಟುಲಿಪ್ ಚಿತ್ರ ಸಿಂಗಲ್ ಟುಲಿಪ್ ನದ್ದು
ಒಂದೇ ಸುತ್ತಿನ ಆರು ದಳಗಳ ಟುಲಿಪ್ ಅದು
ನಮ್ಮನೆಯಲ್ಲಿ ಅರಳಿರುವ ಈ ಟುಲಿಪ್ ಡಬಲ್ ಟುಲಿಪ್
ಇದು ದೊಡ್ಡ ಗುಲಾಬಿಯಂತೆಯೋ ,ದಾಸವಾಳದಂತೆಯೋ ಕಾಣುತ್ತದೆ
ಟುಲಿಪ್ ಗಳಲ್ಲಿ ಅರ್ಲಿ,ಮಿಡ್ ಮತ್ತು ಲೇಟ್ ಎಂಬ ಮೂರು ಮುಖ್ಯ ಕೆಟಗರಿಗಳು.
ವಸಂತದಲ್ಲಿ ಆಯಾ ಟುಲಿಪ್ ಹೂ ಬಿಡುವ ಕಾಲವನ್ನು ಈ ತಲೆಬರಹಗಳು ಸೂಚಿಸುತ್ತವೆ
ಮಿಡ್ ಹೂ ಬಿಡಲು ಇನ್ನೂ ಒಂದು ತಿಂಗಳಾದರೂ ಬೇಕು
ಲೇಟ್ ಈಗಷ್ಟೇ ಬಾಲ್ಯಾವಸ್ತೆಯಲ್ಲಿದೆ!
ನಮ್ಮಲ್ಲಿ ಈಗಷ್ಟೇ ವಸಂತ ಮೊದಲ ಹೆಜ್ಜೆ ಇಟ್ಟಿದ್ದಾನೆ
ಅವನ ಸ್ವಾಗತಕ್ಕೆ ಅರಳಿರುವ ಅರ್ಲಿ ಟುಲಿಪ್ ಇದು...

Saturday, March 10, 2007

ಆಗುಂಬೆಯಾ ಪ್ರೇಮಸಂಜೆಯಾ...

Evening Song

Look off, dear Love, across the sallow sands,
And mark yon meeting of the sun and sea;
How long they kiss in sight of all the lands,
Ah! longer, longer we.
Now, in the sea's red vintage melts the sun
As Egypt's pearl dissolved in rosy wine
And Cleopatra night drinks all. 'Tis done,
Love, lay thine hand in mine.
Come forth, sweet stars, and comfort heaven's heart,
Glimmer, ye waves, 'round else unlighted sands;
Oh night! divorce our sun and sky apart
Never our lips, our hands.
- Sidney Lanier (1842-1881)
******************
ಸಂಜೆ ಕೆಂಪಿನ ಸೌಂದರ್ಯದ ಈ ಕವನ ಪ್ರೇಮದ ಸುಂದರ ಪ್ರತಿಮೆಯಂತಿದೆ.ಇದರಲ್ಲಿನ ಒಂದೊಂದು ರೂಪಕವೂ ಮುತ್ತಿನ ಕಾಂತಿಯನ್ನೂ,ಗುಲಾಬಿಬಣ್ಣದ ದ್ರಾಕ್ಷಾರಸದ ಮಾಧುರ್ಯವನ್ನೂ ಸೂಸುವಂತಿದೆ
ಒಮ್ಮೆ ಕಣ್ಮುಚ್ಚಿ ಸಾಗರ ಕಿನಾರೆಯ ರಮ್ಯ ಸಂಜೆಯ ಈ ಚಿತ್ರವನ್ನು ಮನದ ಪರದೆಯ ಮುಂದೆ ತಂದು ಕೊಳ್ಳಿ....
******************
ಅಮೆರಿಕ ನಿವಾಸಿ ಓದುಗರಿಗೆ ನೆನಪೋಲೆ-
ಕೆಲದಿನಗಳ ಹಿಂದೆ ದುರ್ಗದಲ್ಲಿ`ಡೇ ಲೈಟ್ ಸೇವಿಂಗ್ ಟೈಮ್ 'ಬಗ್ಗೆ ಬರೆದಿದ್ದೆ.ಈ ವರ್ಷ ಡೇ ಲೈಟ್ ಸೇವಿಂಗ್ ಮಾರ್ಚ್ ನಲ್ಲೇ ಶುರುವಾಗುತ್ತಿದೆ(ಭಾನುವಾರ ಬೆಳಗಿನ ಜಾವ ಎರಡು ಘಂಟೆಗೆ)
ಇವತ್ತು ಮಲಗುವ ಮುನ್ನ ನಿಮ್ಮನೆಯ ಗಡಿಯಾರಗಳನ್ನು ಒಂದು ಘಂಟೆ ಮುಂದೆ ಮಾಡುವುದು ಮರೆಯಬೇಡಿ

Thursday, March 08, 2007

ಬಾಡಿದ ಹೂ...


ನನ್ನ ತಂಗಿ ತುಮಕೂರಿನ ಸೋಮೇಶ್ವರ ಶಾಲೆಯಲ್ಲಿ ಓದುತ್ತಿದ್ದಾಗ ಅವಳ ಒಬ್ಬರು ಮಿಸ್ ಅವಳಿಗೂ ಅವಳ ಸ್ನೇಹಿತೆಯರಿಗೂ ಬಹು ಪ್ರಿಯವಾಗಿದ್ದರು.ಮಿಸ್ ನ ಬಗ್ಗೆ ದಿನವೂ ಮನೆಯಲ್ಲಿ ಬಂದು ವರದಿ ಒಪ್ಪಿಸುತ್ತಿದ್ದಳು.`ನಂ ಮಿಸ್ ಅಷ್ಟು ಒಳ್ಳೆಯವರು ಇಷ್ಟು ಒಳ್ಳೆಯವರು....,ಮಿಸ್ಸು ಎಷ್ಟು ಚೆನ್ನಾಗಿ ಪಾಠ ಮಾಡ್ತಾರೆ, ಮಿಸ್ಸಿಗೆ ಕೋಪಾನೇ ಬರಲ್ಲ... ಇವತ್ತು ಮಿಸ್ ಏನ್ ಹೇಳುದ್ರು ಗೊತ್ತಾ...,ಮಿಸ್ ನನ್ನ ಇವತ್ತು ಹೊಗಳುದ್ರು...,ಮಿಸ್ ಎಷ್ಟು ಚೆನ್ನಾಗಿದ್ದಾರೆ ..., ಮಿಸ್ ಇವತ್ತು ಹೊಸ ಸೀರೆ ಉಟ್ಟು ಬಂದಿದ್ರು... ಹೀಗೆ...
ಒಟ್ಟಿನಲ್ಲಿ ಅವರ್ಯಾರೋ ಮಿಸ್ಸು ತಮ್ಮ ವಿದ್ಯಾರ್ಥಿಗಳ ಮನದ ತುಂಬಾ ಆವರಿಸಿಕೊಂಡು ಬಿಟ್ಟಿದ್ದರು
ಹೀಗಿರುವಾಗ ಒಮ್ಮೆ `ನಂ ಮಿಸ್ಸಿಗೆ ಮದುವೆಯಂತೆ ಇನ್ನು ಒಂದು ತಿಂಗಳು ಅವರು ಸ್ಕೂಲಿಗೆ ಬರುವುದಿಲ್ಲವಂತೆ' ಅಂತ ತುಂಬಾ ಬೇಜಾರು ಮಾಡಿಕೊಂಡು ಹೇಳಿದಳು ಅವಳ ಬೇಜಾರು ನೋಡಿ `ಮದ್ವೆ ಮಾಡಿಕೊಂದು ವಾಪಸ್ಸು ಬರ್ತಾರೆ ಬಿಡು' ಅಂತ ಅವಳನ್ನು ಸಮಾಧಾನ ಮಾಡುವ ಹೊತ್ತಿಗೆ ಅಮ್ಮನಿಗೆ ಕಲಿತ ಬುದ್ದಿ ಎಲ್ಲಾ ಖರ್ಚಾಗಿತ್ತು
ಮಕ್ಕಳೆಲ್ಲಾ ಕಾದಿದ್ದೂ ಕಾದಿದ್ದೇ... ಮಿಸ್ ಯಾವಾಗ ವಾಪಸ್ಸು ಬರ್ತಾರೆ ಅಂತಾ...ಅಂತೂ ಮಿಸ್ಸು ವಾಪಸ್ಸು ಬಂದರು ನನ್ನ ಅಮ್ಮನನ್ನೂ ಸೇರಿಸಿ ತಂಗಿಯ ಸ್ನೇಹಿತೆಯ ಅಮ್ಮಂದಿರೆಲ್ಲಾ ಸಮಾಧಾನದ ಉಸಿರು ಬಿಟ್ಟರು!
********************
ನಂತರವೂ ಮಿಸ್ ನ ಬಗ್ಗೆ ತಂಗಿ ಆಗಾಗ ಹೇಳುತ್ತಿದ್ದಳಾದರೂ ಯಾಕೋ ಅದರಲ್ಲಿ ಉತ್ಸಾಹ ಇರುತ್ತಿರಲಿಲ್ಲ. ` ಮಿಸ್ ಯಾಕೋ ಸಪ್ಪಗಿದ್ರು...ಮಿಸ್ಸಿಗೆ ತಲೆನೋವು ಬಂದಿತ್ತು ಇವತ್ತು...ಅಂತೇನೋ ಒಂದೆರಡು ಬಾರಿ ಹೇಳಿದ ನೆನಪು `ಒಮ್ಮೆ ಮಿಸ್ ನ ಮುಖ ಕೈಯೆಲ್ಲಾ ಗಾಯ ಆಗಿಬಿಟ್ಟಿತ್ತಮ್ಮಾ'ಅಂತ ಆತಂಕದಿಂದ ಹೇಳಿದ್ದಳು
ಪರೀಕ್ಷೆ ಹತ್ತಿರ ಬರುತ್ತಿದ್ದುದರಿಂದ ಓದಿನಲ್ಲಿ ಸೀರಿಯಸ್ ಆಗಿ ಮಿಸ್ ಬಗ್ಗೆ ಮಾತಾಡುವುದು ಕಡಿಮೆ ಮಾಡಿದ್ದಾಳೆಂದುಕೊಂಡು ಅಮ್ಮ ಸುಮ್ಮನಾಗಿಬಿಟ್ಟರು ನಾವುಗಳೂ ನಂ ನಮ್ಮ ಪರೀಕ್ಷೆಗಳಿಗೆ ಓದುವ ಭರದಲ್ಲಿ ಅವಳ ಹತ್ತಿರ ಅವಳ ಮಿಸ್ ಬಗ್ಗೆ ಕೇಳಲು ಸಮಯ ಇರುತ್ತಿರಲಿಲ್ಲ
ಒಂದು ದಿನ ಬೆಳಗ್ಗೆ ಶಾಲೆಗೆ ಹೋದವಳು ಅರ್ಧಗಂಟೆಯಲ್ಲೇ ಅಳುತ್ತಾ ಮನೆಗೆ ಬಂದಳು. ಅಮ್ಮ`ಏನಾಯ್ತೇ..ಏನಾಯ್ತೇ...ಅಂತ ಕೇಳಿದರೆ ಬಿಕ್ಕಿ ಬಿಕ್ಕಿ ಅಳುತ್ತಾ `ನಂ ಮಿಸ್ಸು...ನಂ ಮಿಸ್ಸೂ.. ಅನ್ನುತ್ತಿದ್ದಳೇ ಹೊರತು ಬೇರೇನೂ ಹೇಳುತ್ತಿರಲಿಲ್ಲ. `ನಿಮ್ ಮಿಸ್ಸು ನಿಂಗೆ ಏನಾದ್ರೂ ಬೈದ್ರೇನೇ...ಹೊಡದ್ರ...ಅಮ್ಮ ಎಲ್ಲಾ ಕೇಳಿ ಆಯಿತು ಯಾವುದಕ್ಕೂ ಉತ್ತರವಿಲ್ಲ...
ಕೊನೆಗೆ ಪಕ್ಕದ ಮನೆಯರು ವಿಷಯ ತಿಳಿಸಿದರು` ವರದಕ್ಷಿಣೆ ಸಾಕಷ್ಟು ಕೊಡಲಿಲ್ಲ ಅಂತ ನಿಮ್ಮ ಮಗಳ ಸ್ಕೂಲಿನ ಮಿಸ್ಸನ್ನ ಅವರತ್ತೆ ಮನೆಯವರು ಸೀಮೆ ಎಣ್ನೆ ಹಾಕಿ ಸುಟ್ಟು ಬಿಟ್ಟರಂತೆ... ಇವತ್ತಿನ ಲೋಕಲ್ ಪೇಪರಲ್ಲಿ ಬಂದಿದೆ...'
***************
ರಾತ್ರಿ ಎಲ್ಲಾ ತಂಗಿಗೆ ಕೆಂಡದಂಥಾ ಜ್ವರ ಏನೇನೋ ಕನವರಿಸುತ್ತಿದ್ದಳು. ಅವಳು ಪೂರ್ತಿಯಾಗಿ ಹುಶಾರಾಗುವ ವರೆಗೂ ಶಾಲೆಗೆ ಕಳಿಸಲು ಆಗುವುದಿಲ್ಲಾ ಅಂತ ಹೆಡ್ಮಿಸ್ಸಿಗೆ ಹೇಳಲು ಅಮ್ಮ ಹೋದಾಗ `ತುಂಬಾ ಮಕ್ಕಳು ನಿಮ್ಮ ಮಗಳ ಹಾಗೇನೇ ಅಪ್ ಸೆಟ್ ಆಗಿಬಿಟ್ಟಿದ್ದಾರೆ ಆ ಮಿಸ್ಸು ಮಕ್ಕಳ ಫೇವರೆಟ್ ಆಗಿದ್ರು' ಅಂತ ಹೆಡ್ಮಿಸ್ಸು ಅಮ್ಮನಿಗೆ ಹೇಳಿದರಂತೆ
ಬೆಂಕಿ ,ಸೀಮೇ ಎಣ್ಣೆ, ಅಯ್ಯೊ ಸುಡ್ ಬೇಡೀ..' ಅಂತೆಲ್ಲಾ ಮಕ್ಕಳು ನಿದ್ದೆಯಲ್ಲೂ ಎಚ್ಚರದಲ್ಲೂ ಪದೇ ಪದೇ ಹೇಳುತ್ತಾ ಭಯ ಪಡುತ್ತಿದ್ದಾರೆಂದೂ ಅಮ್ಮಂದಿರು ಮಾತಾಡಿ ಕೊಳ್ಳುತ್ತಿದ್ದದ್ದು ನನಗೆ ನೆನಪಿದೆ
*****************
ನನ್ನ ತಂಗಿ ಪೂರ್ತಿಯಾಗಿ ಸಮಾಧಾನ ಮಾಡಿಕೊಳ್ಳಲು ಮೂರು-ನಾಲ್ಕು ತಿಂಗಳೇ ಹಿಡಿಯಿತು. ಅವಳ ಸ್ನೇಹಿತೆಯರಿಗೂ ಬಹುಶಃ ಅಷ್ಟೇ ಸಮಯ ಹಿಡಿದಿರಬೇಕು
*****************
ಈ ಎಲ್ಲಾ ಸಂಗತಿ ನಡೆದು ಹತ್ತಿರ ಹತ್ತಿರ ಇಪ್ಪತ್ತು ವರ್ಷಗಳಾಗುತ್ತಾ ಬಂತು
ಈ ಇಪ್ಪತ್ತು ವರ್ಷಗಳಲ್ಲಿ ಭಾರತದ ಚಿತ್ರ ಸಾಕಷ್ಟು ಬದಲಾಗಿದೆ
ವಿಜ್ಞಾನ ,ತಂತ್ರ ಜ್ಞಾನ,ಸಾಫ್ಟ್ ವೇರು,ಹಾರ್ಡ್ ವೇರು ಅಂತೆಲ್ಲಾ ಪ್ರಗತಿಗಳಾಗಿವೆ
2015 ರ ಹೊತ್ತಿಗೆ ಇಂಡಿಯಾನೇ ಸೂಪರ್ ಪವರ್ ಅಂತೆ ಅಂತ ಯಾರಾದರೂ ಹೇಳಿದಾಗ ಮನಸ್ಸು ಹೆಮ್ಮೆಯಿಂದ ಉಬ್ಬುತ್ತೆ
ಆದರೆ ನನ್ನ ತಂಗಿಯ ಮಿಸ್ಸಿನ ಕಥೆ ಇವತ್ತಿಗೂ ಮತ್ತೆ ಮತ್ತೆ ಮರುಕಳಿಸುತ್ತಿದೆ
********************************
ಎಲ್ಲಿ ಹೆಂಗಸರು ಪೂಜೆಗೊಳ್ಳುತ್ತಾರೋ ಅಲ್ಲಿ ದೇವತೆಗಳು ನೆಲೆಸುವರಂತೆ (ಯತ್ರ ನಾರ್ಯಾಸ್ತು ಪೂಜ್ಯಂತೆ ರಮಂತೇ ತತ್ರ ದೇವತಾ...)
ಎಲ್ಲಿ ಹೆಂಗಸರನ್ನು ಸುಡಲಾಗುತ್ತದೋ, ಹುಟ್ಟುವ ಮೊದಲೇ ಹೊಸಕಿ ಹಾಕಲಾಗುತ್ತದೋ ಅಲ್ಲಿ ಯಾರು ನೆಲೆಸುತ್ತಾರೆ???
********************************
ನಾನು ಕಾಣದೇ ಹೋದ ನನ್ನ ತಂಗಿಯ ಮಿಸ್ಸಿಗೆ,
ಮತ್ತು ಅಂಥಹ ನೂರಾರು ಸುಟ್ಟು ಕರಕಲಾದ ಹೂಗಳಿಗೆ,
ಪ್ರಪಂಚಕ್ಕೆ ಕಣ್ನು ಬಿಡುವ ಮೊದಲೇ ಹೊಸಕಲ್ಪಟ್ಟ ನೂರಾರು ಕಂದಮ್ಮಗಳಿಗೆ....

Monday, March 05, 2007

ನಾನೊಂದು ತೀರ...ನೀನೊಂದು ತೀರಾ...

When we two parted
In silence and tears,
Half broken-hearted,
To sever for years,
Pale grew thy cheek and cold,
Colder thy kiss;
Truly that hour foretold
Sorrow to this.

The dew of the morning
Sank chill on my brow -
It felt like the warning
Of what I feel now.
Thy vows are all broken,
And light is thy fame:
I hear thy name spoken,
And share in its shame.

They name thee before me,
A knell to mine ear;
A shudder comes o'er me -
Why wert thou so dear?
They know not I knew thee,
Who knew thee too well:
- Long, long shall I rue thee
Too deeply to tell.

In secret we met -
In silence I grieve
That thy heart could forget,
Thy spirit deceive.
If I should meet thee
After long years,
How should I greet thee?
- With silence and tears.

-Lord Byron
(1788-1824)

*******************
ಇಂಗ್ಲಿಷ್ ಸಾಹಿತ್ಯದ ರಮ್ಯಪಂಥವೆಂಬ ಆಗಸದಲ್ಲಿ ಮಿರುಗುವ ಚಿರತಾರೆ ಬೈರನ್. ಅವನ ಜೀವಿತ ಕಾಲದಲ್ಲಿ ಅವನು ಸಂಪಾದಿಸಿದ "ಖ್ಯಾತಿ"ಯ ಉಸಾಬರಿ ನಮಗೆ ಬೇಡ.ಬೈರನ್ ಎಲ್ಲಾ ಕಾಲಕ್ಕೂ ಪ್ರೇಮಿಗಳು ಮತ್ತು ಕಾವ್ಯಪ್ರೇಮಿಗಳು ಓದಿಕೊಂಡು ಮುದಗೊಳ್ಳುವಂಥ ಕವಿತೆಗಳನ್ನು ಬಿಟ್ಟು ಹೋಗಿದ್ದಾನೆ ಅದಕ್ಕಾಗಿ ನಾವು ಅವನನ್ನು ಅಭಿನಂದಿಸೋಣಾ...

When we two parted ಕಾವ್ಯಾಸಕ್ತರಿಗೂ,"ಹದಿಹರೆಯ-ಕುದಿ ಹೃದಯ"ಗಳಿಗೂ ಏಕಕಾಲಕ್ಕೆ ಇಷ್ಟವಾಗುವ ಕವನ. ಕಾವ್ಯಪ್ರೇಮಿಗಳಿಗೆ ಇದರ ಅಂತ್ಯ ಪ್ರಾಸ ಮತ್ತು ರೂಪಕಗಳು ಮೆಚ್ಚುಗೆಯಾಗುತ್ತದೆ
ಪ್ರೇಮಿಗಳಿಗೆ ಬೈರನ್ ಈ ಕವನವನ್ನು ನನಗಾಗಿಯೇ ಬರೆದನೇನೋ ಎಂಬ ಭಾವ ಮನ ತುಂಬಿ ಕಣ್ಣುಗಳು ಹನಿಗೂಡುತ್ತವೆ...

Thursday, March 01, 2007

ಬಾಳಕದ ಮೆಣಸಿನ ಕಾಯಿಯೂ,ಬೇಕಿಂಗ್ ಕಾಂಪಿಟಿಶನ್ನೂ...

No hard feelings please...' ಇದನ್ನು ಬರೆಯುವ ಮುಂಚೆನೇ ಹೇಳಿಬಿಡುತ್ತಿದ್ದೇನೆ
`am I opening can of worms?'ಎಂಬ ಯೋಚನೆ ಬರುತ್ತಿದ್ದರೂ ಬರೆಯದೇ ಇರಲಾಗುತ್ತಿಲ್ಲ
`ಇರಲಾರದೇ ಇರುವೆ ಬಿಟ್ಟು ಕೊಂಡರು' ಅಂತಾರಲ್ಲಾ ಹಾಗೇ...

******************
ಭಾನುವಾರ ಸಂಜೆ Food network ಷೋ ಒಂದರಲ್ಲಿ ಟೆಕ್ಸಾಸ್ ನಲ್ಲಿ ನಡೆದ ಕಂಟ್ರಿ ಫೇರ್ ಅನ್ನು ತೋರಿಸುತ್ತಿದ್ದರು ಅದೊಂದು ಕುಕಿಂಗ್ ಕಾಂಪಿಟಿಷನ್ ಅದರ ವೈಶಿಷ್ಯವೇನು ಅಂತ ಹೇಳಿಬಿಡುತ್ತೇನೆ `ನೂರು ನೂರೈವತ್ತು ವರುಷಗಳ ಹಿಂದಿನ ಅಮೆರಿಕನ್ ಅಡುಗೆಗಳನ್ನು ಅದೇ ಪುರಾತನ ಸೆಟಿಂಗ್ ನಲ್ಲಿ ,ಹಳೇ ಪಾತ್ರೆ ಪಡಗ ಉಪಯೋಗಿಸಿ ತಯಾರಿಸುವುದು!

*****************
1812ರ ಅಮೆರಿಕನ್ ಯುದ್ದದ ನಂತರ ಬಹಳಷ್ಟು ಜನ ಅಮೆರಿಕನ್ನರು ಹೊಸಜೀವನ ಅರಸಿ ಪೂರ್ವದಿಂದ ಪಶ್ಚಿಮದ ಕಡೆಗೆ ವಲಸೆ ಬಂದರು.ಹವಾಮಾನ ವೈಪರೀತ್ಯಗಳಲ್ಲದೇ, ಪ್ರಯಾಣಕ್ಕೆ ಆಧುನಿಕ ಸೌಲಭ್ಯ ಇಲ್ಲದ ಆ ದಿನಗಳಲ್ಲಿ ಈ ರೀತಿಯ ಸಾಹಸ ಸಾಕಷ್ಟು ರೋಮಾಂಚಕವಾಗಿತ್ತಾದರೂ,ಅಪಾಯಕಾರಿಯಾಗಿಯೂ ಇತ್ತು.
ಸಾವಿರಾರು ಜನ ಗುರಿ ತಲುಪುವ ಮುನ್ನವೇ ಪ್ರಾಣ ತೆತ್ತರು ಈ ರೀತಿ ಗುರಿ ತಲುಪಿದ ವೀರರ ಸಾಹಸ ನೆನೆದು ಸ್ಪೂರ್ತಿ ಪಡೆಯುವುದು,ಗುರಿ ತಲುಪದ ಅಮಾಯಕರ ತ್ಯಾಗವನ್ನು ಸ್ಮರಿಸುವುದು ಅಮೆರಿಕನ್ನರಿಗೆ ಯಾವತ್ತಿಗೂ ಪ್ರಿಯವಾದ ಕೆಲಸ.ಕೇವಲ ಮುನ್ನೂರು ಚಿಲ್ಲರೆ ವರ್ಷ ಇತಿಹಾಸ ಇರುವ ಇವರಿಗೆ ಅದೊಂದು ಅವಶ್ಯಕತೆಯೋ ಎಂಬಂತೆ ಆಗಿಬಿಟ್ಟಿರುವುದು ಸುಳ್ಳಲ್ಲ

*********************
ಪಶ್ಚಿಮಕ್ಕೆ ವಲಸೆ ಬಂದವರ ಕಾಲದ್ದೇ ಉಡುಗೆ ತೊಡುಗೆ ತೊಟ್ಟು ಬಯಲಲ್ಲಿ ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡಬೇಕಾದ್ದು ಸ್ಪರ್ಧೆಯ ನಿಯಮ.ನಮ್ಮ ಹಿಂದಿನವರು ಹೇಗಿದ್ದರು ಎಂದು ಇಂದಿನ ಮಕ್ಕಳಿಗೆ ತೋರಿಸುವುದೂ ಇದರ ಒಂದು ಉದ್ದೇಶ ಅದರಂತೆ ಸ್ಪರ್ಧಾಳುಗಳೆಲ್ಲಾ ಸಜ್ಜಾಗಿದ್ದರು.ಗಂಡಸರು ಕೌಬಾಯ್ ಹ್ಯಾಟ್ ಧರಿಸಿ ಒಲೆ ಉರಿಸುತ್ತಿದ್ದರು. ಹೆಂಗಸರು ಪಕ್ಕಾ ಹದಿನೆಂಟನೇ ಶತಮಾನದ ಬ್ರಿಟಿಶ್ ಹೆಂಗಸರಂತೆ ಲೇಸ್ ಗಳಿಂದ ಅಲಂಕೃತವಾದ ಲಂಗ ತೊಟ್ಟು ನವಿರಾದ ಕುಸುರಿ ಕೆಲಸದ ಹ್ಯಾಟ್ ತೊಟ್ಟು ಹಳೆ ಕಾಲದ ಕಬ್ಬಿಣದ ಪಾತ್ರೆಗಳಲ್ಲಿ ಅಡುಗೆ (ಮುಖ್ಯವಾಗಿ ಬೇಕ್ ) ಮಾಡುತ್ತಿದ್ದರು ಅವರುಗಳು ಎಷ್ಟು ಸುಂದರವಾಗಿ ಕಾಣುತ್ತಿದ್ದರೆಂದರೆ ಒಂದು ಕ್ಷಣ ನನಗೆ `ವಾವ್' ಅನ್ನಿಸಿದ್ದು ನಿಜ....

******************
ಆಯಿತು ...ಸ್ಪರ್ಧೆ ಮುಗಿಯಿತು...ಬಹುಮಾನ ಹಂಚಿ ಆಯಿತು...ಸಾರ್ವಜನಿಕರೆಲ್ಲಾ ತಿಂಡಿ ಪಧಾರ್ಥಗಳನ್ನು ಕೊಂಡು ತಿನ್ನಲಾರಂಭಿಸಿದರು ಟಿ.ವಿ ಚಾನಲ್ ನವರು ಸ್ಪರ್ಧಾಳುಗಳನ್ನೂ ತಿಂಡಿ ತಿನ್ನುತ್ತಿದ್ದ ಜನರನ್ನೂ ಮಾತಾಡಿಸಿದರು.ತಮ್ಮ ಮಕ್ಕಳನ್ನು ಕರೆತಂದ ಅಪ್ಪ ಅಮ್ಮಂದಿರು ಮಕ್ಕಳಿಗೆ ತುಂಬಾ ವಿಷಯಗಳು ತಿಳಿಸಿದಂತಾಯಿತು ಪುಸ್ತಕದಲ್ಲಿ ಓದುವುದಕ್ಕಿಂಥಾ ಕಣ್ಣಾರೆ ನೋಡಿಮಕ್ಕಳು ನಮ್ಮ ತಾತ ,ಮುತ್ತಾತಂದಿರ ಕಾಲದ ಜೀವನದ ಬಗ್ಗೆ ತಿಳಿದರು ಎಂದು ಮೆಚ್ಚುಗೆ ಸೂಚಿಸಿದರು. ಸ್ಪರ್ಧಾಳುಗಳು ನಮಗೆ ತುಂಬಾ ವಿನೂತನ ಅನುಭವ ಕ್ರೇಝಿ ಫೀಲಿಂಗ್...ಮುಂದಿನ ವರ್ಷವೂ ಈ ಅನುಭವಕ್ಕಾಗಿ ಇಲ್ಲಿಗೆ ಬರಲು ಪ್ರಯತ್ನಿಸುತ್ತೇವೆ ಎಂದರು

***********************
ನಮ್ಮ ದೇಶದಲ್ಲೂ ಹೀಗೆ ಸ್ಪರ್ಧೆ ಏರ್ಪಡಿಸಿದರೆ ಸಖತ್ತಾಗಿ ಇರುತ್ತಲ್ಲವಾ ಅಂತ ಯೋಚಿಸಲಾರಂಭಿಸಿದೆ .ಒಂದೇ ಒಂದು ನಿಮಿಷ ಹಾಗೆ ಯೋಚಿಸಿರಬೇಕು ನಾನು...
ಕುಪ್ಪಸವಿಲ್ಲದೆ (ಕುಪ್ಪಸ ತೊಡುವವರು ಗರತಿಯರಲ್ಲದ ಮಿಟಕಲಾಡಿ ಮೀನಾಕ್ಷಿಯರು ಎಂದು ಆಗಿನ ಕಾಲದ ಭಾವನೆ ಆಗಿತ್ತಂತೆ) ಸಾಂಪ್ರದಾಯಕ ಹದಿನೆಂಟು ಮೊಳದ ದಪ್ಪ ಸೀರೆಯನ್ನುಅದೇನೋ ಬಾಳೇಕಾಯಿ ಹಾಕಿಕೊಂಡು ಉಟ್ಟು ಬೀಸಿ,ಕೇರಿ,ಕುಟ್ಟಿ ಕಟ್ಟಿಗೆ ಒಲೆಯಲ್ಲಿ ನನಗೆ ಅಡುಗೆ ಮಾಡಲು ಆಗುತ್ತಾ ಅಂತ ಭಯ ಆಗಲು ಶುರು ಆಯಿತು!
ಅದೇನು ಪರವಾಗಿಲ್ಲ ಒಂದು ದಿನ ಯಾವುದೋ ನಾಟಕದ ಕಾಸ್ಟ್ಯೂಮ್ ಅಂದು ಕೊಳ್ಳಬಹುದು ಒಂದು ದಿನಕ್ಕೆ ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡುವುದೂ different experience ಅಂತ ಸಮಾಧಾನ ಮಾಡಿಕೊಳ್ಳ ತೊಡಗಿದೆ.


ನಿಧಾನವಾಗಿ ಇಂಥದೊಂದು ಸ್ಪರ್ಧೆ ಏರ್ಪಡಿಸಿದರೆ ಅದರ after effects ಏನಿರಬಹುದು ಅಂತ ಯೋಚನೆ ಬಂತು. (ಸ್ಪರ್ಧೆಗೆ ಮುನ್ನವೇ ) ಭಾರತೀಯ ಸಂಸ್ಕೃತಿಯನ್ನು ಉಳಿಸುತ್ತೀವೆಂದು ಬಾಯಿ ಬಡಿದು ಕೊಳ್ಳುವ ಸೋಕಾಲ್ಡ್ ಸನಾತನಿಗಳು ಮತ್ತು ಹೆಂಗಸರಿಗೆ ಮುಕ್ತಿ ದೊರಕಿಸುತ್ತೇವೆಂದು ಗುಟುರು ಹಾಕುವ ವುಮೆನ್ ಲಿಬ್ಬು ಗಳ ಪರಸ್ಪರ ಕೆಸರೆರೆಚಾಟ ಹೇಗಿರಬಹುದೆಂದು ಊಹೆ ಮಾಡಿಕೊಂಡಾಗ ಉಗುಳು ನುಂಗುವಂತಾಯಿತು ಎರಡೂ ಗುಂಪಿನವರದ್ದೂ ಒಂದೊಂದು ಅತಿರೇಕ!
ಒಟ್ಟಿನಲ್ಲಿ ಪೇಪರ್ ನವರಿಗೆ ಸುಗ್ಗಿ ಅಷ್ಟೇ...


ಅದಿರಲೀ.. ಮನೆಮನೆಯಲ್ಲಿ ಇಂಥದೊಂದು ಕಾರ್ಯಕ್ರಮಕ್ಕೆ ನೋಡಿ,ಕೇಳಿ,ಭೇಟಿ ಕೊಟ್ಟವರ ಅಭಿಪ್ರಾಯ ಏನಿರಬಹುದೆಂದು ಯೋಚಿಸತೊಡಗಿದೆ

`ಅಯ್ಯೋ...ಅದೆಲ್ಲಾ ಓಲ್ಡ್ ಫ್ಯಾಶನ್.. ಥೂ...' ಅಂಥಾ ಎಳೆ ನಿಂಬೆಗಳು ಮೂಗು ಮುರಿಯಬಹುದು

` ನೋಡಿ ನಮ್ ಹಿಂದಿನ ಕಾಲದರ್ವಿಗೆ ಗೊತ್ತಿಲ್ಲದ್ದು ಏನಾದ್ರೂ ಇತ್ತಾ... ಅವ್ರು ಎಷ್ಟೆಲ್ಲಾ ಬುದ್ದಿವಂತರಾಗಿದ್ರು ಅವರಿಗೆ "ಎಲ್ಲಾ" ಗೊತ್ತಿತ್ತು ಹಾಗೆಲ್ಲಾ ನ್ಯಾಚುರಲ್ಲಾಗಿ ಮಾಡಿ ತಿಂತಿದ್ದಿದ್ದಕ್ಕೇ ಅವರುಗಳು ಯಾವ ಕಾಯಿಲೇನೂ ಬಾರದೆ ಎಷ್ಟು ಗಟ್ಟಿ ಮುಟ್ಟಾಗಿರ್ತಿದ್ರು' ಅಂತ ಹಳೆತಲೆಗಳು ತಮಗೆ ತಿಳಿದಷ್ಟೇ ಅರ್ಧಸತ್ಯಾನ ಮೆಲಕು ಹಾಕಬಹುದು

`ಆಹಾ ಹದಿನೆಂಟು ಮೊಳದ ಸೀರೆ ಉಟ್ಟರೆ ಎಂಥಾ ಲಕ್ಷಣ ಈಗಿನ ಕಾಲದವೂ ಇವೆ...' ಅಂತ ಮೂಗು ಮುರಿಯಬಹುದು

`ಹೋಳಿಗೆ,ಕಜ್ಜಾಯ,ಮುರುಕು ಅಂಥಾವೆಲ್ಲಾ ಯಾರಾದ್ರೂ ಮಾಡಿಕೊಟ್ರೆ ತಿನ್ನಬಹುದು ರೇಜಿಗೆ ಕೆಲಸವಪ್ಪಾ ನಾನು ಮಾಡೋದು ಕಲೀಲಾರೆ' ಅಂತ ಹುಡುಗಿಯರು ಹುಬ್ಬು ಹಾರಿಸುತ್ತಾ ಹೇಳಿ`ಹೇಗೂ ಅಂಗಡಿಲೇ ಸಿಗುತ್ತಲ್ಲಾ' ಅಂತ ಸಮಜಾಯಿಷಿ ಕೊಡಬಹುದು

ಮೆಚ್ಚಿ ಮೆಚ್ಚಿ ಮದುವೆಯಾದ ಊರ್ವಶಿ ನಮ್ಮಜ್ಜಿ ತರ ಅಡುಗೆ ಮಾಡುವುದಿಲ್ಲವೆಂದು ಕೊರಗುವ ಹುಡುಗ ಕಮ್ ಗಂಡಸು `ನೋಡೇ... ನೀನೂ ಸ್ವಲ್ಪ ಕಲೀ...' ಅಂತ ಅವಳ ಮೂತಿ ತಿವಿಯಬಹುದು

ದೊಡ್ಡವನನ್ನು ಕಾಲೇಜಿಗೂ, ಚಿಕ್ಕವಳನ್ನು ಹೈಸ್ಕೂಲಿಗೂ ಹೊತ್ತೊತ್ತಿಗೆ ರೆಡಿ ಮಾಡಿ ಕಳಿಸಿ `ಯಜಮಾನರ' ಡಬ್ಬವನ್ನೂ ಕಟ್ಟಿ ಕರ್ಚೀಪು ಕೈಗಿಡುವಲ್ಲಿ ಸೊಂಟನೋವು ಮರೆಯಬೇಕಾದ ನಲವತ್ತು ತಲುಪುತ್ತಿರುವ ಹೆಂಗಸು `ಉಸ್ಸ್ಯಪ್ಪಾ' ಅಂತ ತಾನೇ ಅಮೃತಾಂಜನ ಹಚ್ಚಿಕೊಳ್ಳುತ್ತಿರುವಾಗ `ಇನ್ ಮೇಲೆ ಒರಳಲ್ಲಿ ರುಬ್ಬಿ ಮಾಡು ರುಚಿಯಾಗಿರುತ್ತೆ... ನಮ್ಮಮ್ಮ ಮಾಡ್ತಿದ್ದ ರುಚೀ... ಆ ನಿನ್ ಮಿಕ್ಸಿ ಮೂಲೆಗಿಡು...'ಅಂತ ಯಜಮಾನರು ಅಪ್ಪಣೆ ಕೊಡಿಸಿದಾಗ ರೇಗ ಬಾರದಾ....?

********************
ಒಟ್ಟಿನಲ್ಲಿ ನಮ್ಮ ಸಮಾಜ ಒಂದು ಸಂಕ್ರಮಣ ಸ್ಥಿತಿಯಲ್ಲಿದೆಯಾ ಅಂತ ಅನುಮಾನ. ಹಳೆ ತಲೆಗಳಿಗೆ ಹಿಂದಿನದ್ದೇ ಕನವರಿಕೆ ನಮ್ ತರಾನೇ ಈಗಿನವರೂ ಮಾಡಲೀ ಎಂಬ ಹಟ. ನಾವೆಷ್ಟು ಕಷ್ಟ ಪಟ್ಟೆವು ಇವರುಗಳು ಎಷ್ಟು ಆರಾಮವಾಗಿದ್ದರಲ್ಲಾ ಎಂಬ ಸಂಕಟನಾ ಇವರಿಗೇ ಅಂತ ಕೆಲವೊಮ್ಮೆ ಅನ್ನಿಸದೇ ಇರುವುದಿಲ್ಲ

ಯಾವುದೇ ಜ್ಞಾನ ವಾಗಲೀ ಅದು ನಮ್ಮ ಮುಂದಿನವರಿಗೆ ಕಾಪಿಡಬೇಕಾದ ಆಸ್ತಿ ಎಂಬ ಸಣ್ಣ ತಿಳುವಳಿಕೆಯೂ ಇಲ್ಲದೆ, ತಾವೂ ಮಾಡದೆ ಅಕಸ್ಮಾತ್ ಮಾಡುವವರನ್ನೂ ಹಂಗಿಸುವ `ಚುರುಕು ಮತಿಯ'ಹೊಸ ಯುಗದ ಇಂದಿನವರು!
ಯಾರು ಹಿತವರು ಈ ಈರ್ವರೊಳಗೆ ???

**********************
ಕಳೆದ ವಾರದ ಒಂದು ಮಧ್ಯಾನ್ಹ ಇದ್ದಕ್ಕಿದ್ದ ಹಾಗೆ ಬಾಳಕದ (ಉಪ್ಪು)ಮೆಣಸಿನ ಕಾಯಿ ತಿನ್ನಬೇಕೆಂದು ನನಗೆ ಬಯಕೆಯಾಗಿಬಿಟ್ಟಿತು
ಸಣ್ಣ ಯೋಚನೆಯಂತೆ ಶುರುವಾದ ಅದು ಸಂಜೆ ಯಾಗುವಷ್ಟರಲ್ಲಿ ಬೃಹದಾಕಾರವಾಗಿ ಬೆಳೆದು ಕಚ್ಚಿ ಕೊರೆಯತೊಡಗಿತು ಹೊರಗೆ ಆಕಾಶದ ತುಂಬಾ ಮೇಘಮಾಲೆ ಮಳೆ ಬರ್ಲಾ ಬರ್ಲಾ ಅಂತಿತ್ತು
ಸರಿ ಇಂಡಿಯನ್ ಸ್ಟೋರ್ ನಲ್ಲಿ ಮೆಣಸಿನ ಕಾಯಿ ಹುಡುಕಿಕೊಂಡು ಹೊರಟೆ ಪುಣ್ಯಕ್ಕೆ ತಕ್ಕ ಮೆಣಸಿನಕಾಯಿ ಸಿಕ್ಕಿಯೂ ಬಿಟ್ಟಿತು ಮರುದಿನ ಕೂತು ಬಾಳಕದ ಮೆಣಸಿನ ಕಾಯಿ ಮಾಡಿ ಮುಗಿಸಿದೆ

ನನ್ನ ಆತುರಕ್ಕೆ ಬಿಸಿಲು ಬರಬೇಕಲ್ಲಾ...
ವಾರಾಂತ್ಯ ಧಾರಾಕಾರ ಮಳೆ
ವಿಧಿ ಇಲ್ಲದೇ ಈಗ ಮನೆಯೊಳಗೆ ಮೆಣಸಿನ ಕಾಯಿ ಒಣಗಿಸುತ್ತಿದ್ದೇನೆ
ಮನೆ ತುಂಬಾ ಹಸಿ ಮೆಣಸಿನ ಘಾಟು,ಜೀರಿಗೆ ಧನಿಯಗಳ ಘಮ್ ಘಮ ಒಂಥರಾ ಚೆನ್ನಾಗಿದೆ
ಆದರೆ ಸ್ವಲ್ಪ ಮೂಗು ಹಿಡೀತಾ ಇದೆ

*************************
ಮೊನ್ನೆ ನಮ್ಮ ಸ್ನೇಹಿತ ದಂಪತಿಗಳು ನಮ್ಮ ಮನೆಗೆ ಬಂದರು ನನ್ನ ಸ್ನೇಹಿತೆ ಮೊದಲು ಒಳಗೆ ಬಂದವಳು ಒಮ್ಮೆ ಜೋರಾಗಿ ಉಸಿರು ತೆಗೆದುಕೊಂಡು`ಏನೇ ಇದೂ ಹಳೇ ಕಾಲದ ಗೌರಮ್ಮನ ತರಾ...ಬಾಳಕ ಮಾಡ್ಕೊಂಡು... ಒಳ್ಳೇ ಅಜ್ಜಿ ನೀನೂ...ನೋಡೂ ಹೇಳ್ತಿದೀನಿ...ಈ ಗಂಡಸರಿಗೆ ಇದೆಲ್ಲಾ ಮಾಡಿಕೊಟ್ಟು ಕಲಿಸ ಬಾರದು ಆಮೇಲೆ ಅದೂ ಮಾಡೂ ಇದೂ ಮಾಡು ಅಂತ ತಲೆ ಮೇಲೇ ಕೂತ್ಕೋತಾರೆ' ಅಂದಳು

`ಅಮ್ಮಾ ತಾಯೀ.. ಬಾಳಕ ಮಾಡು ಅಂತ ಯಾರೂ ನನ್ನ ತಲೆ ಮೇಲೆ ಕೂತಿರಲಿಲ್ಲ ನಾನು ಹಾಗೆ ಕೂರಿಸಿ ಕೊಳ್ಳುವವಳೂ ಅಲ್ಲ ನನಗೇ ತಿನ್ನಬೇಕೂ ಅನ್ನಿಸಿದ್ದರಿಂದ ಮಾಡಿದ್ದು ಅಷ್ಟೇ..' ಅಂತ ನಾನು ಹೇಳುತ್ತಿರುವಾಗಲೇ ಮನೆಯೊಳಗೆ ಬಂದ ಅವಳ ಪತಿ ಮಹಾಶಯರು` ಹೇಯ್.. ಬಾಳಕದ ಮೆಣಸಿನ ಕಾಯಿ.. ಯಾವ ಕಾಲವಾಯಿತೂ ತಿಂದು.. ನಮ್ಮ ಅಮ್ಮ ಮಾಡ್ತಿದ್ದರು ಈಗಿನ ಕಾಲದವರಿಗೆ ನಮ್ಮದು ಸಂಪ್ರದಾಯ,ಸಂಸ್ಕೃತಿ ಏನೂ ಬೇಡಾ...ಇವಳೂ ಇದಾಳೆ...ನೋಡೂ ಸ್ವಲ್ಪ ಕಲೀ...'ಅಂತ ಉಪದೇಶಾಮೃತ ಶುರು ಮಾಡಿ ಬಿಟ್ಟರು!

ಹಳೆ ಕಾಲದ ಒಳ್ಳೆ ಮೌಲ್ಯಗಳನ್ನು ಉಳಿಸುವುದು (ಅದು ಬರೀ ಅಡುಗೆಗೇ ಸೀಮಿತ ಅಲ್ಲವಲ್ಲ) ಬರೀ ಹೆಂಗಸರ ಗುತ್ತಿಗೇನಾ... ಅದಕ್ಕೆ ನಿಮ್ಮ ಕೊಡುಗೆ ಏನು ಅಂತ ಆ ಪುಣ್ಯಾತ್ಮರನ್ನು ಕೇಳ ಬೇಕೆನ್ನಿಸಿತು
***********************