ಅವಳೊಬ್ಬ ಸಾಮಾನ್ಯ ಹುಡುಗಿ ಡಾಲರಿಗೆ ಈಗ ಎಷ್ಟು ರೂಪಾಯಿ ಎಂದು ಲೆಕ್ಕ ಹಾಕುತ್ತಾ, ಇಂಡಿಯಾಗೆ ಹೋದಾಗ ಅದು ತಿನ್ನಬೇಕು ಇದು ತಿನ್ನಬೇಕು ಎಂದು ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಾ,ಸಂಜೆ ಐದಾಗುತ್ತಿದ್ದ ಹೊತ್ತಿಗೆ ಗಂಡ ಎಷ್ಟೊತ್ತಿಗೆ ಮನೆಗೆ ಬರುತ್ತಾರೆಂದು ಚಡಪಡಿಸುತ್ತಿದ್ದ ನಮ್ಮ ನಿಮ್ಮಂಥ ನಸುಗಪ್ಪಿನ ಹುಡುಗಿ
ನನ್ನ ಸ್ನೇಹಿತೆಯ ಸ್ನೇಹಿತೆ.ಒಂದೆರಡು ಸಾರಿ ಸ್ನೇಹಿತೆಯ ಮನೆಯ ಪೂಜೆಯಲ್ಲಿ ಬರ್ತ್ ಡೇ ಪಾರ್ಟಿ ಗಳಲ್ಲಿ ಕಂಡಿದ್ದೆ ಅಷ್ಟೇ... ನಾನು ಅಮರ್ತ್ಯ ನಿಗೆ ಬಸುರಿದ್ದಾಗ ಅವಳೂ ಬಸುರಿ,ಬೆಳಗಿನ ವಾಂತಿ ,ಡಾಕ್ಟರ್ ವಿಸಿಟ್ಟು ,ಇನ್ನೂ ನಿರ್ಧರಿಸಲಾಗದ ಮಗುವಿನ ಹೆಸರಿನ ಬಗ್ಗೆಯೆಲ್ಲಾ ಸ್ನೇಹಿತೆಯ ಮನೆಯಲ್ಲಿನ ಪೂಜೆಯೊಂದರ ದಿನ ನಾವಿಬ್ಬರು ಮಾತಾಡಿದ್ದೆವು
*************
ಅಮರ್ತ್ಯ ತಿಂಗಳ ಮುಂಚೆ ಹುಟ್ಟಿದ ನಾವಿಬ್ಬರೇ ಹ್ಯಾಗೋ ಮ್ಯಾನೇಜ್ ಮಾಡುತ್ತಿದ್ದೆವು
ವಾರದಲ್ಲೇ ಅವಳಿಗೂ ಮಗುವಾಯಿತು
ಅವರೂ ಇಬ್ಬರೇ... ಅಂತ ಸ್ನೇಹಿತೆ ಹೇಳಿದಳು...ಅಯ್ಯೋ ಪಾಪ ...ಅಂದುಕೊಂಡೆ
*************
ನಂತರದ ದಿನಗಳು ಬೆಳೆವ ಅಮರ್ತ್ಯನನ್ನು ನೋಡುವ ಸುಖದಲ್ಲಿ ಹೇಗೆ ಹಾರಿ ಹೋಯಿತೋ ಗೊತ್ತಾಗಲೇ ಇಲ್ಲ ಅಮ್ಮು ನಸು ನಗೆ ನಕ್ಕು ಬೋರಲು ಬಿದ್ದು ಅಂಬೆಗಾಲಿಕ್ಕಿ ನಮ್ಮಿಬ್ಬರನ್ನೂ ಸಂಭ್ರಮದಲ್ಲಿ ಮುಳುಗಿಸಿದ ನನಗೆ ನನ್ನ ಸ್ನೇಹಿತೆಯ ಆ ಸ್ನೇಹಿತೆ ಇರಲಿ ಈ ಜಗತ್ತಿನ ನೆನಪೇ ಇರಲಿಲ್ಲ ನನ್ನ ಪುಟ್ಟಕೃಷ್ಣ ನ ಮಾಯಾಜಾಲದಲ್ಲಿ ಸಿಲುಕಿ ಪ್ರಪಂಚ ಮರೆತು ಬಿಟ್ಟಿದ್ದೆ ನಾನು
************
ಇಂಡಿಯಾಗೆ ಹೋಗಿ ಮಗು ತೋರಿಸಿಕೊಂಡು ಬಂದೆವು ಎಂಥಾ ಹೆಮ್ಮೆ!
************
ಅಮ್ಮು ತಪ್ಪು ಹೆಜ್ಜೆ ಹಾಕಿ ನಡೆಯುತ್ತಿದ್ದರೆ ನಮಗೆ ಖುಷಿಯ ಊಟೆ ಒಡೆಯುತ್ತಿತ್ತು
ಮೊದಲ ಹುಟ್ಟು ಹಬ್ಬ ಆಗಿ ಅವನೆಲ್ಲಾ ಪೋಕರಿ ತನಗಳನ್ನು ಬೈಯ್ಯುತ್ತಲೇ ಆಸ್ವಾದಿಲು ಶುರುಮಾಡಿಯೂ ಆಯಿತು ನನ್ನನ್ನು ಅಮ್ಮಿ ಅಮ್ಮ ಮಮ್ಮಾ ಮಾಮಾ ಎಂದೆಲ್ಲಾ ಕೂಗುವ ಅಪ್ಪ ಬಾರದಿದ್ದರೆ ನಿದ್ದೆ ಮಾಡೆನೆಂದು ಹಟ ಮಾಡುವ ಕಂದನ 'ಯಾಕೋ ನಾ ಬರ್ದೇ ಹೋದ್ರೆ ನೀನು ತಾಚಿ ಮಾಡಲ್ಲ ಅಮ್ಮ ಇದ್ದಾಳಲ್ಲೋ' ಅಂತ ಸುಳ್ಳು ಕೋಪದಲ್ಲಿ ಗದರಿಸುವ ಅಪ್ಪನನ್ನು ನೋಡುತ್ತಾ ಸಂಭ್ರಮ ಪಡುತ್ತಿರುವಾಗಲೇ ಸ್ನೇಹಿತೆಯಿಂದ ಈ ಸುದ್ದಿ ಗೊತ್ತಾಗಿದ್ದು
*************
ಅವಳ ಸ್ನೇಹಿತೆಯ ಮಗು ಅರಳದೇ ಮುದುಡಿ ಹೋಗಿತ್ತು
ದೇಹ ಪ್ರೋಟಿನ್ ಅನ್ನು ಹೀರಿಕೊಳ್ಳಲಾಗದೆ ಮಗು ಹುಟ್ಟಿದಷ್ಟೇ ತೂಕ ಇರುತ್ತೆ
ಆದರೆ ಬುದ್ದಿ ಶಕ್ತಿ ಬೆಳೆಯುತ್ತದಂತೆ
ಎಂಟು ಪೌಂಡಿನ ಮಗುವಿನ ದೇಹದಲ್ಲಿ ಹದಿನೆಂಟು ತಿಂಗಳ ಬುದ್ದಿ!
ಆ ಮಗುವಿಗೂ ಬೋರಲು ಬೀಳಬೇಕು,ಅಂಬೆಗಾಲಿಡಬೇಕು ತಪ್ಪು ಹೆಜ್ಜೆ ಹಾಕಬೇಕು ಅಂತಅನ್ನಿಸುತ್ತಿತ್ತಾ???
ತನಗನ್ನಿಸಿದ್ದನ್ನು ಮಾಡಲು ದೇಹ ಸಹಕರಿಸದೇ ಇದ್ದಾಗ ಎಂಥಾ ಅಸಹಾಯಕತೆ ಕಾಡಿರ ಬಹುದು ಆ ಕಂದನನ್ನು...?
ತನ್ನ ಮಗುವಿನ ಆ ಅಸಹಾಯಕತೆಯನ್ನು ತಾಯಿ ಕರುಳು ಹೇಗೆ ಸಹಿಸಿರಬೇಕು...?
ನನ್ನ ಅಮ್ಮುವಿನದೇ ವಯಸಿನ ಮಗು...ಅಮ್ಮು ನನಗೆ ಏನೆಲ್ಲಾ ಆನಂದ ಕೊಡುತ್ತಿದ್ದಾನೆ...
ಆ ಅನಂದದಿಂದೆಲ್ಲಾ ವಂಚಿತಳಾದೆಯೇ ಗೆಳತಿ..?
ಇಪ್ಪತ್ತು ತಿಂಗಳು ಪ್ರತಿ ದಿನವೂ ಆತಂಕದಿಂದ ಬದುಕುವುದು ಅಂದರೆ....
ಮಂಜು ಕಣ್ಣಿನಲ್ಲಿ ಎನೆಲ್ಲಾ ಯೋಚನೆಗಳು ಬರುತ್ತಿವೆ....
ಅರಳದೇ ಮುರುಟಿ ಹೋದ ನಾನೆಂದೂ ಕಾಣದ ಆ ಕಂದನ ನಿರ್ಗಮನ ನನಗೇ ಇಷ್ಟು ನೋವು ತರುತ್ತಿರುವಾಗ
ಆ ಹೆತ್ತಹೊಟ್ಟೆ ಈ ಸಂಕಟವನ್ನು ಹೇಗೆ ಸಹಿಸುತ್ತದೋ....
**************
ಮಾತುಗಳಿಗಿಲ್ಲಿ ಕೆಲಸವಿಲ್ಲ....