Wednesday, April 25, 2007

ಐಶ್ ಮದುವೆ

ಅಬ್ಬಾ.. ಅಂತೂ ಐಶ್ವರ್ಯ-ಅಭಿಷೇಕರ ಮದುವೆ ಮುಗಿಯಿತಲ್ಲಾ...'
ಎಲ್ಲರ ಬಾಯಿಂದ ಹೊರಡುತ್ತಿರುವ ಮಾತು!
ಮಾಧ್ಯಮಗಳು ಈ ಮದುವೆಗೆ ಕೊಟ್ಟ ಪ್ರಚಾರ ವಾಕರಿಕೆ ತರಿಸುವಂತಿತ್ತು. ಬೇರೆಲ್ಲಾ ಪ್ರಚಲಿತ ವಿಷಯಗಳನ್ನು ಕಡೆಗಣಿಸಿ ಸಿನಿಮಾನಟರ ವೈಯಕ್ತಿಕ ವಿಷಯಕ್ಕೆ ಇಷ್ಟು ಪ್ರಾಮುಖ್ಯತೆ ಕೊಡುವ ಅಗತ್ಯ ಖಂಡಿತಾ ಇರಲಿಲ್ಲ.ಇದು ನಮ್ಮ ಸಮಾಜದ ಯಾವ ಮಗ್ಗುಲನ್ನು ಎತ್ತಿ ತೋರಿಸುತ್ತದೆ ಅಂತ ಯೋಚಿಸಿದಾಗ ನಗಬೇಕೋ ಅಳಬೇಕೋ ತಿಳಿಯುವುದಿಲ್ಲ

***************
ಹೀಗೆಲ್ಲಾ ಬರೆದ ಮಾತ್ರಕ್ಕೆ ನಾನು ಐಶ್ಯರ್ಯ ದ್ವೇಷಿ ಅಂತ ನೀವೇನೂ ಯೋಚಿಸ ಬೇಕಿಲ್ಲ. ಐಶ್ ಕಂಡರೆ ಅವಳ ಸ್ನಿಗ್ಧ ಸೌಂದರ್ಯಕ್ಕಾಗಿ ನನಗೂ ಇಷ್ಟವೇ.ಒಂದು ಕಾಲದಲ್ಲಿ ವಿಪರೀತ ಅನ್ನಿಸುವಷ್ಟು ಇಷ್ಟ ಇದ್ದುದ್ದೂ ನಿಜ...
ಆ ಹಳೆ ಕಥೆಯನ್ನೇ ನಾನೀಗ ಹೇಳ ಹೊರಟಿರುವುದು

*************
ಐಶ್ ವಿಶ್ವ ಸುಂದರಿಯಾಗಿ ಆಯ್ಕೆಯಾದಾಗ ಅವಳ ಸರ್ ನೇಮ್ ಅನ್ನು `ರಾಯ್' ಅಂತ ತಪ್ಪಾಗಿ ವ್ಯಾಖ್ಯಾನಿಸಿ ಐಶ್ ಬೆಂಗಾಲಿ ಎಂಬ ಭ್ರಮೆ ಎಲ್ಲರಿಗೂ ಕೆಲಕಾಲ ಉಂಟಾಗಿತ್ತು ಉತ್ತರದವರು ಅದರಲ್ಲೂ ಬೆಂಗಾಲಿಗಳು ಮಾತ್ರ ಸುಂದರರು,ಬುದ್ದಿವಂತರು ಎಂಬ ಭ್ರಮೆ ಭಾರತದಲ್ಲಿ ವ್ಯಾಪಕವಾಗಿದೆ.(ಬಾಲಿವುಡ್ ನಲ್ಲಿ ಮೆರೆಯುವ ಸುಂದರಿಯರಲ್ಲಿ ಬಹುಪಾಲು ದಕ್ಷಿಣದವರೇ ಆಗಿದ್ದರೂ ದಕ್ಷಿಣದವರು ಎಂದರೆ ಕೆಟ್ಟ ತಮಿಳು ಶೈಲಿಯಲ್ಲಿ ಹಿಂದಿ ಮಾತಾಡುವ ಕಪ್ಪುಮುಖದವರು ಎಂಬುದು ಸಾಮಾನ್ಯ ನಂಬಿಕೆ!)ಆಗಿನ ಕೇಂದ್ರ ವಾರ್ತಾಮಂತ್ರಿಯಾಗಿದ್ದ ಕಲ್ಪನಾಥ್ ರಾಯ್ ಐಶ್ ಅನ್ನು ಅಭಿನಂದಿಸಿದ್ದೂ ಆದ ಮೇಲೆ ಈ ಸದರಿ `ರೈ 'ಮಂಗಳೂರಿನ ಬಂಟರ ಹುಡುಗಿ ಅಂತ ಗೊತ್ತಾಗಿದ್ದು ಮತ್ತು ವಿಶ್ವ ಸುಂದರಿ ಕನ್ನಡದವಳು ಅಂತಾ ನಮ್ಮಂಥಾ ಕನ್ನಡದ ಟೀನೇಜರ್ ಗಳಿಗೆ ಪುಳಕವಾಗಿ ಹೋಗಿದ್ದು!

***************
ಸರಿ ಶುರುವಾಯಿತಲ್ಲಾ ಐಶ್ಯರ್ಯಳ ಫೋಟೋಗಳನ್ನು ಕತ್ತರಿಸಿ ಇಟ್ಟುಕೊಳ್ಳುವುದೇನೂ, ಅವಳ ಲೇಟೇಸ್ಟ್ ಸಿನಿಮಾ ಬಗ್ಗೆ ವಿಶ್ಯ ಸಂಗ್ರಹಿಸುವುದೇನೂ ನಮ್ಮ(ಅಂದರೆ ನನ್ನ ಮತ್ತು ನನ್ನ ತಂಗಿಯ) ಗೆಳತಿಯರ ಗುಂಪಿನಲ್ಲಿ ಪೈಪೋಟಿ ಶುರುವಾಗಿ ಬಿಟ್ಟಿತು
ಐಶ್ ನಮ್ಮೆಲ್ಲರ ಆರಾಧ್ಯ ದೇವತೆಯಾಗಿ ಬಿಟ್ಟಳು.
ನಮ್ಮೆಲ್ಲಾ ಈ ಹುಚ್ಚಾಟಗಳನ್ನು ಕೊನೆಗಣ್ಣಿನಲ್ಲೇ ಗಮನಿಸುತ್ತಾ ಇರುತ್ತಿದ್ದ ಅಮ್ಮ ಸುಮ್ಮನೆ ಒಂದು ಕಿರುನಗು ನಕ್ಕು ಬಿಡುತ್ತಿದ್ದರು (ಈ ಕಿರು ನಗುವಿಗೆ ಕಾರಣ ನಂತರ ಹೇಳುವೆ)

*********
ಅದೇ ಸಮಯದಲ್ಲಿ ನನ್ನ ಅಕ್ಕ ತಿಪಟೂರಿನ ಪೋಸ್ಟಾಫೀಸಿನಲ್ಲಿ ಕೆಲಸ ಮಾಡುತ್ತಿದ್ದಳು ಮತ್ತು ದಿನವೂ ನಾವಿದ್ದ ತುಮಕೂರಿನಿಂದ ತಿಪಟೂರಿಗೆ ಅಪ್ ಅಂಡ್ ಡೌನ್ ಮಾಡುತ್ತಿದ್ದಳು
ನನ್ನಕ್ಕ ಗಂಭೀರ ವ್ಯಕ್ತಿತ್ವದವಳು ಮತ್ತು ಕೊಂಚ ಸಿಡುಕಿ ನನ್ನ ಮತ್ತು ನನ್ನ ತಂಗಿ ತರ ಹುಡುಗಾಟದ ಕಪಿ ಸ್ವಭಾವದವಳಲ್ಲ.ಇಂಥಾ ಅಕ್ಕ ಒಮ್ಮೆ ಸಂಜೆ ಮನೆಗೆ ಬಂದವಳು ನಮ್ಮಿಬ್ಬರಿಗೂ ರೋಮಾಂಚನವಾಗುವಂಥಾ ಸುದ್ದಿಯೊಂದನ್ನು ಹೇಳಿದಳು ನಮ್ಮ ದೇವತೆ ಐಶ್ವರ್ಯಳ ಚಿಕ್ಕಪ್ಪ ಅವಳ ಆಫೀಸಿಗೆ ವರ್ಗವಾಗಿ ಬಂದಿದ್ದರು!
*************
ನಾವಿಬ್ಬರೂ ಅವಳನ್ನು ವಿಚಾರಣೆ ಮಾಡಲು ಶುರು ಮಾಡಿದೆವು
ಎಷ್ಟು ದಿನವಾಯಿತು ಐಶ್ವರ್ಯ ಚಿಕ್ಕಪ್ಪ ನಿಮ್ಮ ಆಪೀಸಿಗೆ ಬಂದೂ?
ಹತ್ತತ್ರ ಒಂದು ತಿಂಗಳಾಗಿರಬೇಕು....
ಮತ್ತೆ ಈಗ ಹೇಳ್ತಿದೀಯಲ್ಲಾ...
(ನಮ್ಮಿಬ್ಬರಿಗೂ ಅಕ್ಕನ ಮೇಲೆ ಭಯಂಕರ ಕೋಪ ಬಂತು)
ನನಗೆ ಗೊತ್ತಾಗಿದ್ದೇ ಇವತ್ತು...ಯಾಕಂದ್ರೆ ಅವರು ಹೇಳಿದ್ದೇ ಇವತ್ತು...
ಅವರಿಗೆ ಅಷ್ಟೂ ಗೊತ್ತಾಗಲ್ವಾ ಒಂದು ತಿಂಗಳಿಗೆ ಇವತ್ತಾ ಹೇಳೋದೂ...
(ನಮ್ಮ ಭಯಂಕರ ಕೋಪ ಈಗ ಚಿಕ್ಕಪ್ಪನ ಕಡೆ ತಿರುಗಿತು!!)

************
ಅಂತೂ ನಾವಿಬ್ಬರೂ ದೊಡ್ಡ ಮನಸ್ಸು ಮಾಡಿ ನಮ್ಮಗಳ ಕೋಪ ನುಂಗಿಕೊಂಡು ಮುಂದುವರಿದೆವು
ಸರಿ ಅವರ ಹೆಸರೇನೂ..?
ಶೆಟ್ರೂ... ಅಂತಾ...
ಅವ್ರು ಐಶ್ಯರ್ಯ ರೈ ಗೆ ಹೇಗೆ ಚಿಕ್ಕಪ್ಪ?
ಶೆಟ್ರ ಹೆಂಡ್ತಿ ಐಶ್ವರ್ಯ ಚಿಕ್ಕಮ್ಮ...(ಐಶ್ಯರ್ಯಳ ಅಮ್ಮ ವೃಂದಾ ರೈ ತಂಗಿ)
ಹೀಗೇ ಇನ್ನೇನ್ನೇನು ಕೇಳಿದೆವೋ ಅಕ್ಕ ಏನೇನು ಹೇಳಿದಳೋ ಇಂದು ನೆನಪಿಲ್ಲ
ಅಂತೂ ನಮ್ಮ ಗೆಳತಿಯರ ಗುಂಪಿನಲ್ಲಿ ನಮ್ಮಿಬ್ಬರ ಸ್ಥಾನ ಬಲು ಮೇಲಕ್ಕೇರಿ ಬಿಟ್ಟಿತು

**************
ದಿನವೂ ಅವಳು ಆಫೀಸಿನಿಂದ ಮನೆಗೆ ಬರುವುದೇ ಕಾದಿದ್ದು ಅವಳನ್ನು ನಮ್ಮ ಪ್ರಶ್ಣೆಗಳ ಸುರಿಮಳೆಯಿಂದ ದಿಕ್ಕುಗೆಡಿಸುತ್ತಿದ್ದೆವು
ಪಾಪ... ಅವಳು `ಇವತ್ತು ಶೆಟ್ರು ಐಶ್ವರ್ಯ ಬಗ್ಗೆ ಏನೂ ಹೇಳಲಿಲ್ಲ ' ಎಂದರೆ ನಮಗೆ ಸಮಾಧಾನವೇ ಇಲ್ಲ
ಯಾಕೆ ಹೇಳಲಿಲ್ಲ ಅಂತ ಕೋಪ ಮಾಡಿಕೊಳ್ಳುತ್ತಿದ್ದೆವು

ಸಂಸಾರವಂದಿಗರಾದ ಜವಾಬ್ದಾರಿಯುತ ಮಧ್ಯವಯಸ್ಸಿನ ವ್ಯಕ್ತಿಯೊಬ್ಬರಿಗೆ ತಮ್ಮಹೆಂಡತಿಯ ಬಳಗದ `ವಿಶ್ವಸುಂದರಿಯ'
ಬಗ್ಗೆ ದಿನದಿನವೂ ಮಾತಾಡುವಂತದ್ದೇನಿರುತ್ತೆ ಎಂಬ ಸಿಂಪಲ್ ಸತ್ಯಾನೂ ಅರ್ಥ ಮಾಡಿಕೊಳ್ಳದಷ್ಟು ಅಂಧಾಭಿಮಾನಿಗಳಾಗಿ ಬಿಟ್ಟಿದ್ದೆವು!

***************
ಶೆಟ್ರು ಮಂಗಳೂರಿನ ಹತ್ರದ ತಮ್ಮಊರಲ್ಲಿ ದೊಡ್ಡ ಪೂಜೆ ಮಾಡಿಸಿದರಂತೆ ಅದಕ್ಕೆ ಐಶ್ವರ್ಯ ಬಂದಿದ್ದಳಂತೆ ಇವತ್ತು ಫೋಟೋಆಲ್ಬಂ ತಂದಿದ್ದರು ಅಂತ ಒಮ್ಮೆ ಅಕ್ಕ ಹೇಳಿದಳು(ಆಫೀಸಿನ ಯಾರ ಮನೆಯಲ್ಲಿ ಯಾವ ಸಮಾರಂಭವಾದರೂ ನಂತರ ಫೋಟೋಆಲ್ಬಂ ತೊಗೊಂಡು ಹೋಗಿ ತೋರಿಸುವುದು ಅಕ್ಕನ ಆಫೀಸಿನಲ್ಲಿದ್ದ ರೂಢಿ)
ನಾವು ನೋಡಲು ಯಾಕೆ ನೀನು ಆಲ್ಬಮ್ ತರಲಿಲ್ಲ ಅಂತ ನಾವುಗಳು ಮತ್ತೆ ಸಿಟ್ಟು ಮಾಡಿಕೊಂಡೆವು
ಆಗ ಅಕ್ಕ ಇನ್ನೊಂದು ವಿವರ ಹೇಳಿದಳು`ಶೆಟ್ಟರ ಮಗಳಿಗೆ ಐಶ್ವರ್ಯ ಐನೂರರ ನೋಟೊಂದನ್ನು ಕಾಣಿಕೆಯಾಗಿ ಕೊಟ್ಟಳಂತೆ'
(ಆಗ ಐನೂರು ರೂ ನೋಟು ಈಗಿನಂತೆ ಸಸ್ತಾ ಆಗಿರದೆ ಅಪರೂಪವಾಗಿತ್ತು)
ನನ್ನ ತಂಗಿಗೆ ಆಲ್ಬಂ ನೋಡಲಾಗಲಿಲ್ಲವಲ್ಲಾ ಎಂಬ ನಿರಾಸೆಯಿಂದುಂಟಾದ ಕೋಪ ಇನ್ನೂ ಇಳಿದಿರಲಿಲ್ಲ
`ಅಯ್ಯೋ... ವಿಶ್ವ ಸುಂದರಿಗೆ ವರ್ಷ ಪೂರ್ತಿ ವರ್ಲ್ಡ್ ಟೂರ್ ಅಲ್ಲದೇ ಸಾಕಷ್ಟು ಒಡವೆವಸ್ತ್ರಗಳು ಬಹುಮಾನವಾಗಿ ಸಿಗುತ್ತಂತೆತಂಗಿಯಾಗ ಬೇಕಾದವಳಿಗೆ ಬರೀ ಒಂದು ಐನೂರರ ನೋಟು ಹಿಡಿಸಿ ಮುಗಿಸಿ ಬಿಟ್ಟಳಾ ನಿಮ್ ಐಶ್ವರ್ಯ ರೈ... ತುಂಬಾ ಜಿಪುಣಿಯಪ್ಪಾ...' ಅಂದು ಎದ್ದು ಹೋದಳು
ಇವಳಿಗೇ ಏನೋ ನಷ್ಟವಾದವಳಂತೆ!

*******************
ಮುಂದೆ ನಾನು ಇಂಗ್ಲಿಷ್ ಎಮ್ಮೆ ಕಟ್ಟಿಕೊಂಡು ಹಾಸ್ಟೆಲ್ ಸೇರಿದೆ.
ಐಶ್ ಬಗ್ಗೆ ಅಭಿಮಾನ ಪಡಲು ಪುರುಸೊತ್ತು ಇರಲಿಲ್ಲ
ನಾನು ಹುಡುಗರಿಗೆ ಇಂಗ್ಲೀಶು ಕಲಿಸಲು ಪರದಾಡುತ್ತಿರುವಾಗ ತಂಗಿ ಎಂ.ಕಾಂ ಸೇರಿದ್ದಳು
ಅಕ್ಕನಿಗೆ ಮದುವೆಯಾಗಿ ತಿಪಟೂರು ಬಿಟ್ಟಿದ್ದಳು
ಮತ್ತು ನಮ್ಮಿಬ್ಬರಿಗೂ ಐಶ್ ಹುಚ್ಚು ಬಿಟ್ಟಿತ್ತು!

******************
ಒಂದು ಕೆ.ಜಿ.ಅಕ್ಕಿಗೆ ಎಷ್ಟು ರುಪಾಯಿ ಎಂದು ಗೊತ್ತಿರದ ವಯಸ್ಸಿನಲ್ಲಿ ನಮಗಿದ್ದ ಐಶ್ ಹುಚ್ಚಿನಂಥಾ ಯಾವುದೋ ಒಂದು ಹುಚ್ಚು ಸಾಮಾನ್ಯವಾಗಿ ಎಲ್ಲರಿಗೂ ಇರುತ್ತೆ
ಅಮ್ಮ ದಿನಕ್ಕೆ ಮೂರು ಹೊತ್ತು ಬಿಸಿಬಿಸಿಯಾಗಿ ಮಾಡಿ `ಆರಿ ಹೋಗುತ್ತೆ ಬಾರೇ...'ಅಂತ ಕರೀತಿರುವಾಗ ಅದರ ಬೆಲೆ ಗೊತ್ತಾಗುವುದಿಲ್ಲ!
ಕಾಲೇಜು,ಟ್ಯೂಶನ್ನು,ಹಾಸ್ಟೆಲ್ಲಿನ ಫೀಸು ಅಪ್ಪ ಎಷ್ಟು ಕಷ್ಟ ಪಟ್ಟು ಕಟ್ಟುತ್ತಿದ್ದಾರೆ ಎಂಬ ಯೋಚನೆ ಅಪ್ಪಿ ತಪ್ಪಿಯೂ ಹತ್ತಿರ ಸುಳಿಯುವುದಿಲ್ಲ

ಏಕೆಂದರೆ ಅದು ಹೂಮನಸ್ಸಿನ ಹುಡುಗಾಟದ ವಯಸ್ಸು!

************
ಈ ಹೂಮನಸ್ಸು,ಹುಡುಗಾಟ ಪ್ರತಿಯೊಬ್ಬರ ಜೀವನದಲ್ಲೂ ಬಂದು ಹೋಗುವಂಥದ್ದೇ
ಆದರೆ ಬಂದಿದ್ದು"ಹೋಗದೇ"ಅಲ್ಲೇ ಉಳಿದು ಬಿಟ್ಟರೆ ಮಾತ್ರ ಕಷ್ಟ ಕಷ್ಟ...
ಆಗ ಆ ಮನುಷ್ಯನೂ "ಅಲ್ಲೇ" ಉಳಿದು ಬಿಡುತ್ತಾನೆ.

ಮಾತ್ರವಲ್ಲ,ಮಿಕ್ಕವರಿಗೆ ತಲೆ ನೋವಾಗುತ್ತಾನೆ

***************
ಹದಿಹರೆಯದ,ಜೀವನದ ಅನುಭವವಿಲ್ಲದ ಕಾಲೇಜು ಹುಡುಗ ಹುಡುಗಿಯರಿಂದ ಇಂಥಾ ಅಪಕ್ವ ನಡವಳಿಕೆಯನ್ನು"ಕೆಲಕಾಲ" ಸಹಿಸಿಕೊಳ್ಳಬಹುದೇನೋ
ಕಾಲ,ಮುಂಬರುವ ಜೀವನದ ಕಷ್ಟನಷ್ಟಗಳು ಅವರಿಗೆ ಪಕ್ವತೆ ತಂದು ಕೊಡುತ್ತವೆ ಎಂದು ಆಶಿಸಬಹುದು

ಆದರೆ ಪ್ರಜಾಪ್ರಭುತ್ವದ ಜೀವನಾಡಿಗಳಲ್ಲೊಂದಾದ ಪತ್ರಿಕೋದ್ಯಮದಂಥಾ(ಮತ್ತು ಇತರ ಸುದ್ದಿ ಮಾದ್ಯಮಗಳು)ಜವಾಬ್ದಾರಿಯುತ ಮಾಧ್ಯಮದ ಅಪಕ್ವಬೇಜವಾಬ್ದಾರಿಯುತ ನಡವಳಿಕೆಯನ್ನು ಸಹಿಸಿಕೊಳ್ಳಲಾಗದು

ಐಶ್ ಮದುವೆಯಂಥಾ ಕ್ಷುಲ್ಲಕ ವಿಷಯದ ಬಗ್ಗೆ ಮಾಧ್ಯಮಗಳು ತೋರಿಸಿದ ಅನಗತ್ಯ ಉತ್ಸಾಹ ನೋಡಿದಾಗ ಖೇದವಾಗುತ್ತದೆ. ಇವರುಗಳ `ಮಚ್ಯೂರಿಟಿ'ಯ ಮಟ್ಟ ಇಷ್ಟೇನಾಅಂತ ಯೋಚನೆಯಾಗುತ್ತದೆ

ದುಡ್ಡು ದುಡಿವುದೊಂದೇ ಕಾರಣಕ್ಕಾಗಿ ಸುದ್ದಿ ಬರೆಯುವವರು,ಪ್ರಕಟಿಸುವವರು ಏನಾದ್ರೂ ಬರಕೊಂಡು ಹೋಗಲಿ
ಆದರೆ ನಮ್ಮ ಸಮಾಜ ಎತ್ತ ಸಾಗುತ್ತಿದೆ ಅಂತ ಯೋಚಿಸಿದಾಗ ಮಾತ್ರ ಗಾಭರಿಯಾಗುತ್ತದೆ...
______________________________________
ಟಿಪ್ಪಣಿ-
೧)ಈಗೊಂದೆರಡು ವರ್ಷಗಳ ಹಿಂದೆ ಒಂದು ದಿನ ನಾನೂ ಅಮ್ಮನೂ ಹಳೆಯ ಟ್ರಂಕು ತಡಕುವಾಗ ಅದರಲ್ಲಿ ಅಮ್ಮನ ಬಿ.ಎಸ್ಸಿ ಯ ನೋಟ್ಸು ಸಿಕ್ಕಿತು ಮುಖ ಪುಟಕ್ಕೆ ಅಮ್ಮಹಾಕಿದ್ದ `ರೊಟ್ಟಿ'ನಲ್ಲಿ ನಗುತ್ತಿದ್ದವಳು ಅಂದಿನ ಜನಪ್ರಿಯ ನಟಿ `ಸಾಧನಾ! ನಾನು `ಇದೇನಮ್ಮಾ' ಅಂತಾ ಆಚ್ಚರಿಯ ದನಿಯಲ್ಲಿ ರಾಗ ಎಳೆದಾಗ`ನೀವುಗಳು ಐಶ್ವರ್ಯ ರೈ ರೊಟ್ಟು ಹಾಕ್ಕೊತಿರ್ಲಿಲ್ವೇ...'ಅಂತ ಅಮ್ಮ ನಕ್ಕುಬಿಟ್ಟರು!

೨)ಐಶ್-ಅಭಿ ಜೀವನ ಸುಖಮಯವಾಗಲಿ

Wednesday, April 18, 2007

ಹೂವೂ ಚೆಲುವೆಲ್ಲಾ ನಂದೆಂದಿತು...


ಚೆರ್ರಿ ಬ್ಲಾಸಮ್ ಅಥವಾ ಚೆರ್ರಿ ಹೂಗಳು ನೋಡಲು ಬಹು ಸುಂದರ. ಬ್ಯಾಲೆ ನರ್ತಕಿಯೊಬ್ಬಳ ನವಿರಾದ ಲಂಗದಂತೆ,ನಸು ನಾಚಿದ ತರುಣಿಯ ಕೆಂಪಾದ ಕೆನ್ನೆಯಂತೆ,ಜಗತ್ತಿನ ಉತ್ಸಾಹವನ್ನೆಲ್ಲಾ ತನ್ನಲ್ಲಿ ತುಂಬಿಕೊಂಡು ನಗುವ ಮಗುವಿನ ಮುದ್ದು ತುಟಿಯಂತೆ ...ನೂರು ಭಾವಗಳನ್ನು ನೋಡುಗನ ಮನದಲ್ಲಿ ತುಂಬಿ ತುಳುಕಿಸುತ್ತವೆ
************
ಚೆರ್ರಿ ಬ್ಲಾಸಮ್ ಗಳಿಗೆ ಜಪಾನಿನ ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನವಿದೆ.ನಮ್ಮಲ್ಲಿ ಮಾವಿಗೆ ಇದ್ದಂತೆ
ಸಕೂರ ಎಂದು ಕರೆಯಲ್ಪಡುವ ಚೆರ್ರಿ ಮರಗಳಲ್ಲಿ ಜಪಾನೀಯರ ಪ್ರಕಾರ ಸುಗ್ಗಿ ದೇವತೆಗಳು ವಾಸಿಸುತ್ತಾರಂತೆ.
ಎತ್ತರದ ಪರ್ವತ ಪ್ರದೇಶಗಳಲ್ಲಿನ ಚೆರ್ರಿ ಮರಗಳಲ್ಲಿ ವಾಸಿಸುವ ಸುಗ್ಗಿ ದೇವತೆಗಳು ಭತ್ತದ ಹೊಲಗಳಿಗೆ ಇಳಿದು ಬಂದು
ಒಳ್ಳೆಯ ಫಸಲು ಬರಲೆಂದು ಹರಸುವರಂತೆ.
ವಸಂತದಲ್ಲಿ ಚೆರ್ರಿ ಮರಗಳು ಹೂಗಳಿಂದ ತುಂಬಿ ತುಳುಕಿದರೆ ಈ ವರ್ಷ ದೇವತೆಗಳು ಪ್ರಸನ್ನರಾಗಿ ಭತ್ತದ ಹೊಲಗಳನ್ನು ಹರಸಿದ್ದಾರೆಎಂದು ಜಪಾನೀಯರು ನಂಬುತ್ತಾರೆ
***************
ಚೆರ್ರಿ ಬ್ಲಾಸಮ್ ವ್ಯೂಯಿಂಗ್ ಅಂದರೆ ಚೆರ್ರಿ ಹೂಗಳನ್ನು ದರ್ಶಿಸುವುದು ಜಪಾನೀಯರ ಪುರಾತನ ಆಹ್ಲಾದಕರ ಸಂಪ್ರದಾಯ ೮೧೨ ಎ.ಡಿ ಯಷ್ಟು ಹಿಂದೆ ಪ್ರಾರಂಭವಾದ ಈ ಸಂಪ್ರದಾಯಕ್ಕೆ`ಹನೋಮಿ' ಅಂತ ಕರೆಯುತ್ತಾರೆ.ಚೆರ್ರಿ ಬ್ಲಾಸಮ್ ಗಳನ್ನು ನೋಡಲು ಬಂಧು-ಮಿತ್ರರನ್ನು ಔತಣಕ್ಕಾಗಿ ಅಹ್ವಾನಿಸುವುದು ಜಪಾನೀಯರ ವಸಂತ ಸಂಭ್ರಮಗಳಲ್ಲಿ ಮುಖ್ಯವಾದುದು
**********
ಚೆರ್ರಿ ಬ್ಲಾಸಮ್ ಗಳ ಚೆಲುವಿಗೆ ಮನಸೋತ ಜಪಾನೀ ಕವಿಗಳು ಈ ಸೊಬಗಿನ ಗಣಿಯ ಬಗ್ಗೆ ದಣಿವರಿಯದೆ ಸಾವಿರಾರು ಪದ್ಯಗಳನ್ನು ಕಟ್ಟಿ ಹಾಡಿದ್ದಾರೆ`ಸಕೂರ ಪದ್ಯ'ಗಳೆಂದೇ ಹೆಸರಾದ ಈ ಚೆರ್ರಿ ಹೂಗಳ ಕುರಿತಾದ ಪದ್ಯಗಳಲ್ಲಿ ಪ್ರೇಯಸಿಯ ನೆನಪಿನಂಥಾ ವಿಷಯಗಳಿಂದಾ ಹಿಡಿದು ಮಾನವಜೀವನದ ಕ್ಷಣಿಕತೆಯನ್ನು ಸಾರುವ ಪದ್ಯಗಳವರೆಗೂ ಏನೆಲ್ಲಾ ವೈವಿಧ್ಯಗಳಿವೆ ನೋಡಿ...
Trembling flower on a delicate branch.
Leaf tickling petal.
Brief breeze,
brief love.
-Genevieve Barr
**************
Looking at the Mountain Sakura in mist
I miss a person who looks at the Sakura
- Kino Tsurayuki
*****************
If there were no cherry blossoms in the world,
My mind would be peaceful.
- Fujiwara Norihira
****************
Trembling flower
Leaf tickling petal
My silent smile
-Genevieve Barr
*****************
Shining spring day
Falling cherry blossoms with my calm mind
- Kino Tomonari
*******************
Wishing to die under cherry blossoms in spring
Cherry blossom season in full moon time
- Saigyo
*******************
Sleeping under the trees on Yoshino mountain
The spring breeze wearing Cherry blossom petals
- Saigyo
*********************
ಚೆರ್ರಿಬ್ಲಾಸಮ್ ಜಪಾನೀ ಮನದಲ್ಲಿ ಅಚ್ಚಳಿಯದೇ ಕೂತಿರುವ ಪ್ರತಿಮೆ.
ಚೆಲುವು,ಆಧ್ಯಾತ್ಮ,ಪರಿಶುದ್ದತೆಗಳ ಸಂಗಮ .
ನಿರಂತರ ಹುಡುಕಾಟದ ಮನಸ್ಥಿತಿ ಬಿಂಬಿಸುವ ಸಮರ್ಥ ಸಂಕೇತ
ಜಪಾನೀಯರೇ ಕೆಲವೊಮ್ಮೆ ತಮಾಶೆಯಾಗಿ ಹೇಳುವಂತೆ ನೀವು ಜಗತ್ತಿನ ಯಾವ ವಸ್ತು/ವಿಷಯದ ಬಗ್ಗೆ ಮಾತಾಡಬೇಕೆಂದರೂ `ಇಟ್ಸ್ ಲೈಕ್ ಚೆರ್ರಿ ಬ್ಲಾಸಮ್....' ಅಂತ ಶುರು ಮಾಡಬಹುದು!

Thursday, April 12, 2007

ರಾಜಕುಮಾರಅವತ್ತೇಕೋ ಬೇಸರ... ಸೋಮಾರಿತನ... ಸೋಂಭೇರಿ ತರ ಹಾಸ್ಟೆಲ್ ರೂಮಿನ ಮಂಚದ ಮೇಲೆ ಬಿದ್ದುಕೊಂಡಿದ್ದೆ.ನೆಪ ಮಾತ್ರಕ್ಕೆ ಕೈಯಲ್ಲೊಂದು ಪುಸ್ತಕ ನಾಳೆ ನಾಡಿದ್ದರಲ್ಲಿ ಸಬ್ಮಿಟ್ ಮಾಡಬೇಕಾದ ಅಸೈನ್ಮೆಂಟುಗಳು ಏನೂ ಇಲ್ಲದ್ದರಿಂದ ಸೀರಿಯಸ್ಸಾಗಿ ಏನೂ ಓದಲೂ ಇರಲಿಲ್ಲ ಸಂಜೆಗೆಂಪಿನ ಸೂರ್ಯ ಕಿಟಕಿಯಿಂದ ಕಾಣುತ್ತಿದ್ದನಾನು ಆಕಳಿಸುತ್ತಾ ಕಿಟಕಿ ಪಕ್ಕದಲ್ಲಿದ್ದ ಮರದಲ್ಲಿನ ಕಪ್ಪು ಗೊದ್ದಗಳನ್ನು ತಪ್ಪು ತಪ್ಪಾಗಿ ಎಣಿಸುತ್ತಾ ಇದ್ದೆ
ಬಾಗಿಲು ತೆರೆದು ಬಂದ ಸಂಗೀತಾ `ಬಿಡುವಾಗಿದೀಯಾ ಮಾಲಾ...?' ಅಂತ ಕೇಳಿದಳು
ನಾನು `ಹುಂ.. ಉಹೂಂ..' ಮಧ್ಯದ ಯಾವುದೋ ರಾಗದಲ್ಲಿ ಏನೋ ಉತ್ತರಿಸಿ ಕವುಚಿ ಮಲಗಿಕೊಂಡೆ...
`ಅಣ್ಣಾವ್ರ ಮನೆಗೆ ಹೋಗ್ತಿದೀನಿ ಬರ್ತೀಯಾ...?' ಅಂದಳು
`ಇಲ್ಲಾ...' ನಾನು ಮಲಗಿಕೊಂಡೇ ಉತ್ತರಿಸಿದೆ
`ರಾಜ್ ಕುಮಾರ್ ಮನೆಗೆ ಕಣೇ...' ನಾನು ರಾಜ್ ಅಭಿಮಾನಿ ಎಂದು ಗೊತ್ತಿದ್ದ ಸಂಗೀತಾ ಸ್ಪಷ್ಟೀಕರಿಸಿದಳು
`ಇಲ್ಲಾ.. ನಾನು ಬರೋಲ್ಲ.. ಸೋಪನ್ನ ಕರಕೊಂಡು ಹೋಗು...'
ಅಂದು ಸಂಗೀತಾ ಸೋಪನ್ನು(ಸೋಫಿಯಾಳ ಮುದ್ದು ಹೆಸರು) ಕರಕೊಂಡು ರಾಜ್ ಮನೆಗೆ ಹೋದಳು
ನಮ್ಮ ಸೋಪಿಗೆ ಕನ್ನಡವೂ ಬಾರದು ರಾಜ್ ಚಿತ್ರಗಳ ಗಂಧ ಗಾಳಿಯೂ ಇಲ್ಲ
ಸದಾಶಿವ ನಗರದ ಮನೆಯಲ್ಲಿ ಆ ಸಂಜೆ ಪಿಳಿಪಿಳಿ ಕಣ್ನು ಬಿಡುತ್ತಾ ಕೂತಿದ್ದಿರಬೇಕು ಸೋಪು...
*****************
ಬಹುಶಃ ರಾಜ್ ಬ್ಯಾನರಿನ ಯಾವುದೋ ಹೊಸಚಿತ್ರಕ್ಕೆ ಸಂಗೀತಾ ಹಾಡುವವಳಿದ್ದಳು
ಆ ಸಂಭಂದವಾಗಿ ಮಾತಾಡಲು ಪಾರ್ವತಮ್ಮ ಸಂಗೀತಾನ್ನ ತಮ್ಮ ಸದಾಶಿವ ನಗರದ ಮನೆಗೆ ಬರಹೇಳಿದ್ದರು
ಸಂಗೀತಾ ಕಟ್ಟಿಯೊಂದಿಗೆ ನಾನು ಆಗಾಗ ಸಂಗೀತ ಸಂಜೆಗಳಿಗೆ,ಭಾವಗೀತೆಯ ಕಾರ್ಯಕ್ರಮಗಳಿಗೆ ಹೋಗುವುದಿತ್ತು.ಸಂಗೀತಾಗೆ ಜೊತೆ ಸಿಕ್ಕ ಹಾಗೂ ಆಯಿತು ನನಗೆ ಪುಕ್ಕಟ್ಟೆ ಪ್ರೋಗ್ರಾಂ ನೋಡಿದ ಖುಷಿ!
ಅಂದಿಗೆ ಭಾವಗೀತೆ ,ಕನ್ನಡ ಚಿತ್ರಗೀತೆಗಳ ಬಗ್ಗೆ ನಮ್ಮ ಹಾಸ್ಟೆಲ್ಲಿನಲ್ಲಿದ್ದ ಎಲ್ಲರಿಗಿಂತಾ ನನ್ನ ಜ್ಞಾನ ಚೆನ್ನಾಗಿತ್ತು
( ಹಾಳೂರಿಗೆ ಉಳಿದವನೇ ಗೌಡ!)
ಈ ಕಾರಣಕ್ಕಾಗೇ ಸಂಗೀತಾಗೆ ನನ್ನ ಕಂಡರೆ ಸ್ವಲ್ಪ ಇಷ್ಟ ಮತ್ತು ಅವತ್ತು ರಾಜ್ ಮನೆಗೆ ತನ್ನೊಂದಿಗೆ ಬಾ ಅಂತ ಕರೆದಿದ್ದು
************
ಅವತ್ತೇಕೆ ನಾನು ಸಂಗೀತಾ ಜೊತೆಗೆ ಹೋಗಲು ನಿರಾಕರಿಸಿದೆನೋ ಇಂದು ಸ್ಪಷ್ಟವಾಗಿ ನೆನಪಿಲ್ಲ
`ಅವರೆಲ್ಲಾ ದೊಡ್ಡ ಮನುಷ್ಯರಪ್ಪಾ ಯಾವುದೋ ಪ್ರೋಗ್ರ್ಯಾಂನಲ್ಲಿ ಅವರುಗಳು ಸ್ಟೇಜಿನ ಮೇಲಿರುವಾಗ ಹತ್ತರೊಳಗೊಬ್ಬಳಾಗಿ ನೋಡುವುದು ಬೇರೆ ಅವರ ಮನೆಗೇ ಹೋಗುವುದು ಬೇರೆ' ಅಂತೇನೋ ಅನ್ನಿಸಿದ್ದಿರಬೇಕು ನನಗೆ
ಸಂಗೀತಾ ಪಾರ್ವತಮ್ಮನವರೊಂದಿಗೆ ಖಾಸಗಿಯಾಗಿ ಮಾತಾಡುತ್ತಿರುವಾಗ ನಾನೊಬ್ಬಳೇ ಹಾಲ್ ನ ಸೋಫಾದಲ್ಲಿ ಕಣ್ ಕಣ್ ಬಿಡುತ್ತಾಕೂರುವುದು ಹೇಗೆ..? ಅಂತ ನಾನು ಅಂದು ಯೋಚಿಸಿದ್ದು ನೆನಪಿದೆ
ಅದೇನೋ ಅಂತೂ ನಾನು ಅವತ್ತು ರಾಜ್ ಮನೆಗೆ ಹೋಗಲಿಲ್ಲ
ಹೋಗಲಿಲ್ಲಾ ಅಂತ ಕಳೆದ ಹತ್ತು ವರ್ಷಗಳಲ್ಲಿ ಯಾವತ್ತೂ ಪರಿತಪಿಸಲಿಲ್ಲ ಪಶ್ಚಾತಾಪ ಪಡಲಿಲ್ಲ
************
ಕಳೆದ ವರ್ಷ ಏಪ್ರಿಲ್ ಮೊದಲ ವಾರದಲ್ಲಿ ದಟ್ಸ್ ಕನ್ನಡ ದಲ್ಲಿ ತಮ್ಮ ಮಗನ ಹೊಸ ಸಿನಿಮಾಕ್ಕೆ ಶುಭ ಹಾರೈಸಲು ಬಂದಿದ್ದ ರಾಜ್ ಪೋಟೋ ನೋಡಿದೆ ಎಷ್ಟು ಕಳೆ ಕಳೆ ಯಾಗಿ ಕಾಣುತ್ತಿದ್ದಾರಲ್ಲಾ ಅಂದುಕೊಂಡೆ.
ನಾಲ್ಕೈದು ದಿನಗಳ ನಂತರ ಒಂದು ಮಧ್ಯಾನ್ಹ ಹಾಗೇ ಹಾಸಿಗೆಯಲ್ಲಿ ಉರುಳಿಕೊಂಡು ನಮ್ಮಮ್ಮ ಕುಮಾರತ್ರಯರೆಂದು ಹೆಸರು ಪಡೆದಿದ್ದ ರಾಜ್ ಕುಮಾರ್,ಕಲ್ಯಾಣಕುಮಾರ್ ಮತ್ತು ಉದಯಕುಮಾರ್ ಬಗ್ಗೆ ಹೇಳುತ್ತಿದ್ದ ಅಭಿಮಾನದ ಮಾತುಗಳನ್ನು ನೆನಪಿಸಿಕೊಳ್ಳುತ್ತಾ ಎರಡು ಕುಮಾರ್ ಗಳು ಹೊರಟು ಹೋದರು ರಾಜ್ ಕುಮಾರ್ ಇನ್ನೂ ಹಲವು ವರ್ಷ ಚೆನ್ನಾಗಿರಲಪ್ಪಾ ಅಂದುಕೊಂಡೆ
ಸಂಜೆ ದಟ್ಸ್ ಕನ್ನಡ ನೋಡಿ ಎದೆ ಧಸಕ್ ಅಂದಿತು
ರಾಜ್ ಹೊರಟು ಹೋಗಿದ್ದರು...
**************
ರಾತ್ರಿ ಅರವಿಂದ ಮನೆಗೆ ಬಂದಾಗ ನಾನು ಮಂಕು ಹಿಡಿದವಳಂತೆ ಕೂತುಕೊಂಡಿದ್ದೆ
ಅರವಿಂದನಿಗೆ ಕನ್ನಡ ಬಾರದಿದ್ದರೂ ಅವನೂ ರಾಜ್ ಅಭಿಮಾನಿ
ರಾಜ್ ಸ್ಮರಣೆಯೋ ಎಂಬಂತೆ ತನ್ನ ಎಂದಿನ ಅಮೆರಿಕನ್ ಚಾನಲ್ಗಳನ್ನು ಬಿಟ್ಟು ರಾಜ್ ಅಭಿನಯದ ಹಾಡುಗಳ ವಿ.ಸಿ.ಡಿ ಹಾಕಿದ
ಟಿ.ವಿ ಪರದೆಯಲ್ಲಿ ರಾಜ್ ಹೊಸಬೆಳಕೂ ಅಂತ ಹಾಡುತ್ತಿದ್ದರೆ ನನಗೆ ಕಣ್ಣು ಕತ್ತಲಿಡುತ್ತಿತ್ತು
ಪ್ಲೀಸ್....ಟಿ.ವಿ ಆರಿಸುತ್ತೀಯಾ ಅಂತ ಕಿರುಚಿದೆ
ನಿನಗ್ಯಾಕೋ ಇವತ್ತು ಸರಿ ಇಲ್ಲಾ ಹೊರಗೆ ಸುತ್ತಾಡಿ ಬರುವ ಬಾ ಅಂತ ಕರಕೊಂಡು ಹೋದ
ಆಗ ಬಂತಲ್ಲಾ ಅಳು!`
"ಸಂಗೀತಾ ಅವತ್ತು ನನ್ನ ಕರೆದಾಗ ನಾನು ಹೋಗಬೇಕಾಗಿತ್ತು ಕಣೋ..ಹಾಗಂತ ಹತ್ತುವರ್ಷಗಳ ನಂತರ ಮೊದಲ ಬಾರಿಗೆ ಇವತ್ತು ಅನ್ನಿಸುತ್ತಿದೆ..."ಅಂತ ಹಲುಬಿದೆ
ಅರವಿಂದ ತಾನೇ ಏನು ಹೇಳುತ್ತಾನೆ? ಬರಿದೇ ತಲೆ ಆಡಿಸಿದ
ಒಂದೆರಡು ದಿನಗಳ ನಂತರ ಅವನು ತನ್ನ ಹೊಸ ಐಪಾಡ್ ನಲ್ಲಿ ಹಾಡಿಸಲೆತ್ನಿಸಿದ ರಾಜ್ ಹಾಡುಗಳಿಗೂ ಅದೇ ಗತಿಯಾಯಿತು
ರಾಜ್ ಹೊಸ ಬೆಳಕಿನ ಹಾಡು ಹಾಡುತ್ತಿದ್ದರೆ ನನಗೆ ಕಣ್ಣೀರ ಧಾರೆ...
ಅವರು `ಇದೇಕೆ ಇದೇಕೆ?' ಎಂದರೆ ನಾನು ಏನು ಹೇಳುವುದು?
ನಂತರದ ಆರು ತಿಂಗಳು ನಮ್ಮ ಮನೆಯಲ್ಲಿ ರಾಜ್ ಹಾಡುಗಳು ಹಾಕಲು ನಾನು ಬಿಡಲಿಲ್ಲ
********************
ಒಂದು ವಾರಾಂತ್ಯ ಅರವಿಂದ ಏಳೆಂಟು ರಾಜ್ ಅಭಿನಯದ ಚಿತ್ರಗಳ ವಿ.ಸಿ.ಡಿ.ತಂದು ಒಂದೊಂದೇ ಸಿನಿಮಾ ಹಾಕಿ ನೋಡಲಾರಂಭಿಸಿದ ನನ್ನನ್ನೂ ಬಾ ಅಂತ ಕರೆದು ಪಕ್ಕ ಕೂರಿಸಿಕೊಂಡ
ಹಾಗೆ ಇಡೀ ವಾರ `ಗಂಧದ ಗುಡಿ,ಪ್ರೇಮದ ಕಾಣಿಕೆ,ಹೊಸ ಬೆಳಕು,ಸಮಯದ ಗೊಂಬೆ,ರವಿಚಂದ್ರ ಮೊದಲಾದ ಚಿತ್ರಗನ್ನು ನೋಡಿದೆವು
ಆಗನ್ನಿಸಿತು....
ರಾಜ್ ಇಲ್ಲ ಮತ್ತು ರಾಜ್ ಇಲ್ಲೇ ಇದ್ದಾರೆ....
ಅದೇ ಭಾವವೇ ಮನದಲ್ಲಿ ಇಂದೂ ಇದೆ

Tuesday, April 10, 2007

ಜಾನಿ - ಜಂಪ್ - ಅಪ್ ಎಂಬ ನಗೆ ಹೂ


ಈ ಜಾನಿ-ಜಂಪ್ -ಅಪ್ ಹೂಗಳನ್ನು ನೋಡಿದಾಕ್ಷಣ ನನಗೆ ಕಿಸಕ್ ಅಂತ ನಗು ಬಂದು ಬಿಡುತ್ತೆ.
ತಲೆ ಮೇಲಿನ ಎರಡು ದಳದ ಟೋಪಿಯೋ, ಕಾರ್ಟೂನು ಚಿತ್ರಗಳ ಚೀನೀ ಮನುಷ್ಯನ ಕಣ್ಣುಗಳಂತಿರುವ ಗೆರೆಯ ಕಣ್ಣುಗಳೋ,ಮಾಯವೇ ಆಗಿ ಹೋಗಿರುವ ಬಾಯಿ ಮೇಲೊಂದು ಮೀಸೆ ಬೇರೆ ಕೇಡು ಎನ್ನಿಸುವ, ಮಗು ಬರೆದ ಚಿತ್ರದ ಪುರುಚಲು ಮೀಸೆಯಂತೆ ಕೆಳ ಬಗ್ಗಿರುವ ಮೀಸೆಯಂಥಾ ಮೂರು ಜೊತೆ ಗೆರೆಗಳೋ ,ಹಳದಿಯ ದಪ್ಪ ಮೂಗೋ ಯಾವುದು ನನಗೆ ನಗೆ ತರಿಸುವುದೂ...? ಗೊತ್ತಿಲ್ಲ
`ಅಯ್ಯೋ ನಿನ್ನ ಮಂಗನ ಮೂತಿ ಮೊದಲು ನೋಡಿಕೋ...ಆಮೇಲೆ ನನ್ನ ಮುಖ ನೋಡಿ ನಗೋವಂತೆ' ಅಂತ ಅವೂ ನನ್ನ ನೋಡಿ ನಗುತ್ತಿವೆಯೇನೋ ಅಂತಾನೂ ಮರು ಕ್ಷಣವೇ ಅನ್ನಿಸಿ ಬಿಡುತ್ತೆ!
ಎಂಥಾ ಆಕಾಶ ತಲೆ ಮೇಲೆ ಬೀಳೋವಷ್ಟು ಚಿಂತೆ ಸಂಕಟ ಇದ್ರೂ ಜಾನಿ -ಜಂಪ್-ಅಪ್ ನೋಡಿದಾಗ ನಾನು ನಗದೇ ಇರಲಾರೆ
*************
ಷೇಕ್ಸ್ ಪಿಯರನ `ಮಿಡ್ ಸಮ್ಮರ್ ನೈಟ್ಸ್ ಡ್ರೀಮ್' ನಲ್ಲಿ ಜಾನಿ-ಜಂಪ್-ಅಪ್ ಬಗೆಗಿನ ಒಂದು ತಮಾಶೆಯಾದ ವಿವರವಿದೆ.
ಅದು ಹೀಗೆ...
ಮಲಗಿರುವ ಯಾವುದೇ ಮನುಷ್ಯನ ಕಣ್ರೆಪ್ಪೆಗಳಿಗೆ ಜಾನಿ-ಜಂಪ್-ಅಪ್ ನ ರಸವನ್ನು ಲೇಪಿಸಿದರೆ ಆ ವ್ಯಕ್ತಿ ಎದ್ದಾಗ ಮೊದಲು ಯಾರನ್ನು ನೋಡುವನೋ,ಅದೊಂದು ಕತ್ತೆಯೇ ಆಗಿರಲೀ, ಗಾಢವಾಗಿ ಪ್ರೇಮಿಸಿ ಬಿಡುವನಂತೆ!
ಇಂಥದೊಂದು ವಿವರದೊಂದಿಗೆ ಸಮರ್ಥ ಲೇಖಕನೊಬ್ಬ ಎಂಥೆಂಥಾ ತರಲೆ ಪ್ರಸಂಗಗಳನ್ನು ಸೃಷ್ಟಿಸಬಹುದು ಯೋಚಿಸಿ...
*************
ನಾಳೆ (April 11) ಬೆಳಗ್ಗೆ 7.30 (PST) Sanfrancisco ಪ್ರದೇಶದಲ್ಲಿರುವ Stanford KZSU 90.1 ರೇಡಿಯೋ ಚಾನಲ್ ನಲ್ಲಿ ನಗು ಅರಳಿಸುವ ಕನ್ನಡ ಹಾಡುಗಳಿಂದ ಕೂಡಿದ ಕಾರ್ಯಕ್ರಮವಿದೆ (http://www.itsdiff.com/ ನಲ್ಲಿ ಕೂಡಾ ಇದು ಲಭ್ಯ)
ಕಾರ್ಯಕ್ರಮ ಯಶಸ್ವಿ ಯಾಗಲೀ
ನಿಮ್ಮೆಲ್ಲರ ಮೊಗದಲ್ಲಿ ಜಾನಿ-ಜಂಪ್ -ಅಪ್ ಅನ್ನು ಮೀರಿಸುವಂಥಾ ನಗೆ ಅರಳಲಿ ಅಂತ ಹಾರೈಕೆ

Friday, April 06, 2007

ಮರೆಯಾದ ತೇಜಸ್ಸು...


ಕನ್ನಡಲೋಕಕ್ಕೆ ಅಪರೂಪದ ಬೆಳದಿಂಗಳು ಸುರಿಸಿದ ತೇಜಸ್ಸಿನ ಗಣಿಯೊಂದು ಮರೆಯಾಗಿದೆ...
ಚಿತ್ರ-ದುರ್ಗದ ನಮನ...

Monday, April 02, 2007

ರೇನ್ ಲಿಲ್ಲಿ ತಂದ ನೆನಪು...ಕಳೆದ ವಾರದ ಪನ್ನೀರು ಚಿಮುಕಿಸಿದಂಥಾ ಮಳೆಗೆ ಪುಟಪುಟನೆ ಮೇಲೇಳುತ್ತಿವೆ ರೇನ್ ಲಿಲ್ಲಿಗಳು. ಪುಟಾಣಿ ಮೊಲದ ಮರಿಗಳಂತೆ...ನನ್ನ ಅಂಗಳದಲ್ಲೂ ಅಲ್ಲೊಂದು ಇಲ್ಲೊಂದು ನಕ್ಷತ್ರದಂತೆ ಈ ಮಿನಿ ಸ್ಕರ್ಟ್ ಲಿಲ್ಲಿ ಲಲನೆಯರು ನಸುಗುತ್ತಿದ್ದಾರೆ.
ರೇನ್ ಲಿಲ್ಲಿಯರಿಗೆ ದೇಶ-ಕಾಲದ ಬೇಧವೇನಿಲ್ಲ.ಸ್ವಲ್ಪ ಉಷ್ಣತೆ ಹೆಚ್ಚಾದ ದಿನಗಳಲ್ಲಿ ಪನ್ನೀರಿನಂತೆ ನಾಲ್ಕೆಂಟು ಹನಿ ಬಿದ್ದರೆ ಸಾಕು ಎರಡೇ ದಿನದಲ್ಲಿ ಅರಳಿ ನಕ್ಕುಬಿಡುತ್ತಾರೆ
ಬಹುಕಾಲದಿಂದ ಕಾದ ಇನಿಯ ಮಿಂಚಂತೆ ಬಂದು ಬರಸೆಳೆದಾಗ ಅವಳ ತುಟಿಯಲ್ಲಿ ಮೂಡುವ ನಗೆಮುತ್ತಿನಂತೆ...
ಬಹುಶಃ ಇಂಡಿಯಾದ ಅಮ್ಮನ ಮನೆಯಲ್ಲೂ ರೇನ್ ಲಿಲ್ಲಿ ನಕ್ಕಿರಬೇಕು ಇಷ್ಟೊತ್ತಿಗೆ...

***************
ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಇಂಗ್ಲಿಷ್ ಎಂ.ಎ ಗೆ ಸೇರಿದ ಹೊಸತು. ಬೆಂಗಳೂರು,ಬೆಂಗಳೂರಿನ ಜನಭರಿತ ರಸ್ತೆಗಳು,ಹಾಸ್ಟೆಲ್ಲು,ಹಾಸ್ಟೆಲ್ಲಿನ ಊಟ ,ರಾಗಿಂಗು ಇವೆಲ್ಲದರ ಮಧ್ಯೆಸಿಕ್ಕು ದಿಕ್ಕು ತಪ್ಪಿದ ತಬ್ಬಲಿಯಂತಾಗಿದ್ದೆ.
ಈ `ಇಂಗ್ಲೀಷಿನ ಎಮ್ಮೆ' ಕಟ್ಟುವುದೂ ಬೇಡಾ... ಹಾಸ್ಟೆಲ್ಲೂ ಬೇಡಾ... ನಮ್ಮೂರಿಗೆ ,ನಮ್ಮ ಮನೆಗೆ ಓಡಿಹೋಗಿ ಬಿಡೋಣಾ ಅಂತ ದಿನಕ್ಕೆ ಸಾವಿರ ಸಲ ಅನ್ನಿಸುತ್ತಿತ್ತು...

***************
ಶೇಷಾದ್ರಿ ಪುರಂ ಕಾಲೇಜಿಗೆ ಪಿ.ಜಿ ಸೆಂಟರ್ ಸಿಕ್ಕಿದ್ದು ಬಲು ಸಂಭ್ರಮದ ವಿಷಯ ಅಂತ ಪ್ರಿನ್ಸಿಪಾಲರಿಗೂ ಮ್ಯಾನೇಜ್ಮೆಂಟಿನವರಿಗೂ ಅನ್ನಿಸಿಬಿಟ್ಟಿತ್ತು.ಬೆಂಗಳೂರು ಯೂನಿವರ್ಸಿಟಿಯವರೇ ಕಾಮನ್ ಎಂಟ್ರೆಂನ್ಸ್ ನಲ್ಲಿ ಆರಿಸಿದ ವಿದ್ಯಾರ್ಥಿಗಳನ್ನು ಇವರಲ್ಲಿಗೆ ಕಳಿಸಿ ಕೊಡುತ್ತಿದ್ದುದರಿಂದ ಕಾಲೇಜಿಗೆ ನಮ್ಮಿಂದ ಪೈಸೆಯಷ್ಟೂ ಲಾಭವಿಲ್ಲದಿದ್ದರೂ ಹುರುಪಿನಿಂದ ಎಂ.ಎ ತರಗತಿಗಳನ್ನು ಶುರು ಮಾಡಿ ಬಿಟ್ಟಿದ್ದರು ಆಗ ಎರಡನೇ ಬ್ಯಾಚ್ ನಮ್ಮದು.

ಯೂನಿವರ್ಸಿಟಿ ವಿದ್ಯಾರ್ಥಿಗಳಿಗೆ ಇದ್ದಂಥಾ ಸುಸಜ್ಜಿತ ಲೈಬ್ರರಿಯಾಗಲೀ,ಅನುಭವಸ್ಥ ಅದ್ಯಾಪಕರುಗಳಾಗಲೀ ನಮಗೆ ಲಭ್ಯವಿರಲಿಲ್ಲ ಈ ಕೊರತೆಗಳನ್ನುತುಂಬಿಕೊಡಲು ನಮ್ಮ ಹತ್ತೇ ಜನ ವಿದ್ಯಾರ್ಥಿಗಳ ತರಗತಿಗೆ ಮೌಂಟ್ ಕಾರ್ಮಲ್,ಎಂ.ಇ.ಎಸ್ ನಂಥಾ ಬೆಂಗಳೂರಿನ ಪ್ರಮುಖ ಕಾಲೇಜುಗಳ ಹೆಸರಾಂತ ಅಧ್ಯಾಪಕರುಗಳು(ಸ್ನೇಹಪೂರ್ವಕವಾಗಿ) ನಮಗೆ ಪಾಠ ಮಾಡಲು ಒಪ್ಪಿಕೊಂಡರು.ಹಾಗೆ ನಮ್ಮಲ್ಲಿಗೆ ಒಪ್ಪಿಬಂದವರೇ ಮಲ್ಲೇಶ್ವರಂ ನ ಎಂ.ಇ.ಎಸ್ ಕಾಲೇಜಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಲಲಿತಾ ಮೂರ್ತಿಯವರು

****************
ಲಲಿತ ಮೂರ್ತಿಯವರದ್ದು ತೆಳ್ಳಗಿನ ಆಳ್ತನ.ಸಾಮಾನ್ಯವಾಗಿ ಕಾಟನ್ ಸೀರೆಗಳನ್ನೇ ಉಡುತ್ತಿದ್ದರು.ಗಂಭೀರ ಮುಖಭಾವ,ಅಲ್ಲಲ್ಲಿ ಇಣುಕುತ್ತಿದ್ದ ಬಿಳಿ ಕೂದಲು,ವಿಧ್ವತ್ತು ತುಂಬಿದ್ದ ಕಣ್ನುಗಳು.ಸರಸರನೆ ವೇಗವಾಗಿ ನಡೆಯುವ ಶೈಲಿ... ಮಾತು ,ಧ್ವನಿ ಎರಡೂ ಖಚಿತ.ಕ್ಲ್ಯಾಸಿನ ಒಳಗೂ ಹೊರಗೂ ಅನವಶ್ಯಕವಾದ ಒಂದೇ ಒಂದು ಪದವೂ ಇಲ್ಲ

ಮೊದಲ ವರ್ಷ ನಮಗೆ ರೊಮ್ಯಾಂಟಿಕ್ ಮಾರ್ಗದ ಕವಿಗಳಾದ ವರ್ಡ್ಸ್ ವರ್ತ್,ಕೋಲ್ ರಿಡ್ಜ್ ಬರೆದ ಕವಿತಾ ಭಾಗಗಳನ್ನೂ ಮತ್ತು ಕಾವ್ಯ ಸಂಹಿತೆಗಳನ್ನೂ ಪಾಠ ಮಾಡಿಸುತ್ತಿದ್ದರು
ಹೀಗೇ ಬಹುಶಃ ಅವತ್ತು ನಮ್ಮೊಂದಿಗೆ ಅವರ ಎರಡನೆಯ ಭೇಟಿಯೋ,ಮೂರನೆಯದೋ ಇರಬೇಕು.ಕೋಲ್ ರಿಡ್ಜ್ ನ ಕಬ್ಬಿಣದ ಕಡಲೆ `ಭಯಾಗ್ರಾಫಿಯಾ ಲಿಟರೇರಿಯಾ'ದ ಬಗ್ಗೆ ಉಪನ್ಯಾಸ ಕೊಡುತ್ತಿದ್ದರು.

ಮನಸ್ಸು ಯಾಕೋ ಅಂದು ರೋಸಿ ಹೋಗಿತ್ತು ...ಆಗಲೇ ನನ್ನ `ತಬ್ಬಲಿಮನಸ್ಥಿತಿಯ' ಬಗ್ಗೆ ಹೇಳಿದೆನಲ್ಲ... ಪಾಠ ನಡೆಯುತ್ತಿರುವಾಗ ಸ್ವಲ್ಪ ಮಿಸುಕಾಡಿರ ಬೇಕು ನಾನು...ಲಲಿತಾ ಮೂರ್ತಿಯವರ ಕಣ್ನು ನನ್ನ ಮೇಲೆ ಬಿತ್ತು! ಎಬ್ಬಿಸಿ ನಿಲ್ಲಿಸಿ ಒಂದು ದೊಡ್ಡ ಮಂಗಳಾರತಿ ಮಾಡಿದರು!

*****************
ನಮ್ಮ ತರಗತಿ ಮುಗಿಸಿ ಮಲ್ಲೇಶ್ವರಂ ನಲ್ಲಿದ್ದ ತಮ್ಮ ಕಾಲೇಜಿಗೆ ಓಡಬೇಕಾಗಿತ್ತು ಅವರು.ಕ್ಲಾಸ್ ರೂಮಿನಿಂದ ಹೊರ ಬಂದು ಎರಡು ಹೆಜ್ಜೆ ನಡೆದಿದ್ದವರು ಏನನ್ನೋ ನೆನೆಸಿಕೊಂಡು ಹಿಂದಿರುಗಿ ನೋಡಿ ನನ್ನನ್ನು ಕೈ ಸನ್ನೆಯಿಂದ ಕರೆದರು.ನಾನು ಹೆದರುತ್ತಾ ಇನ್ನೊಂದು ಸುತ್ತಿನ ಮಂಗಳಾರತಿಗೆ ಸಿದ್ಧವಾಗುತ್ತಾ ಅವರ ಬಳಿ ಹೋದೆ
ಲಲಿತಾ ಮೂರ್ತಿಯವರು ಸ್ನೇಹದಿಂದ ನನ್ನ ಹೆಗಲು ತಟ್ಟಿ ` ಈಸ್ ದೇರ್ ಎನಿ ಪ್ರಾಬ್ಲಂ ವಿದ್ ಯೂ ಚೈಲ್ಡ್?' ಅಂದರು!
ನಾನು ಚುಟುಕಾಗಿ ಅಂದಿನ ನನ್ನ ಮನಸ್ಥಿತಿ ವಿವರಿಸಿ ಕಣ್ಣಂಚಿನಲ್ಲಿ ಧುಮುಕಲು ರೆಡಿಯಾಗಿ ನಿಂತಿದ್ದ ಹನಿ ವರೆಸಿಕೊಳ್ಲುತ್ತಾ ನನ್ನ ಅವತ್ತಿನ ವರ್ತನೆಗಾಗಿ ಕ್ಷಮೆ ಬೇಡಿದೆ

`ಓ...ಫೀಲಿಂಗ್ ಹೋಮ್ ಸಿಕ್....' ಅವರು ವ್ಯಸನದಿಂದ ತಲೆ ಅಲುಗಿಸುತ್ತಾ ಹೇಳಿದರು `ಮೈ ಡೋರ್ಸ್ ಆರ್ ಆಲ್ವೇಸ್ ಓಪನ್ ಫಾರ್ ಯೂ.. ವೆನ್ ಎವರ್ ಯು ಫೀಲ್ ಹೋಮ್ ಸಿಕ್ ಕಮ್ ಹೋಮ್.. ಓಕೇ..." ಮತ್ತೊಮ್ಮೆ ನನ್ನ ಹೆಗಲು ತಟ್ಟಿ ತಮ್ಮ ಎಂದಿನ ಸರ ಸರ ನಡುಗೆ ಯಲ್ಲಿ ಹೊರಟೇ ಹೋದರು..

******************

ಮತ್ತೆಂದೂ ಲಲಿತ ಮೂರ್ತಿಯವರಿಂದ ಮಂಗಳಾರತಿ ಮಾಡಿಸಿಕೊಳ್ಳಲಿಲ್ಲ ನಾನು. ಹಾಸ್ಟೆಲ್ಲೂ, ಬೆಂಗಳೂರೂ ನಿಧಾನವಾಗಿ ಅಭ್ಯಾಸವಾಯಿತು ಲಲಿತ ಮೂರ್ತಿಯವರ ಅಗಾಧ ಪಾಂಡಿತ್ಯದ ಅರಿವಾಗಿ ಸಾಹಿತ್ಯದ ಅಭ್ಯಾಸದಲ್ಲಿ ರುಚಿ ಹತ್ತಿತು.

ಅವರು ವರ್ಡ್ಸ್ ವರ್ತ್ ನ `ಡ್ಯಾಫೊಡಿಲ್ಸ್' ವಿವರಿಸುವಾಗ ನನ್ನ ಮನದ ಪರದೆಯ ಮೇಲೆ ಆ ಹತ್ತು ಸಾವಿರ ಹೂಗಳೇ ನಲಿಯುತ್ತಿದ್ದವು

ನಾನೂ,ಲಲಿತ ಮೂರ್ತಿಯವರೂ, ವರ್ಡ್ಸ್ ವರ್ತೂ ಒಟ್ಟಾಗಿ `ಯಾರೋ' ನದಿ ತೀರಕ್ಕೆ ವಿಹಾರ ಹೋಗುತ್ತಿದ್ದೆವು

*******************
ಎಂ.ಎ ಎರಡನೇ ವರ್ಷದ ಅಂತಿಮ ಪರೀಕ್ಷೆಗೆ ತಯಾರಾಗುತ್ತಿದ್ದೆ ಮೇ ತಿಂಗಳ ಬಿರು ಬೇಸಿಗೆಯ ದಿನಗಳವು ಲಲಿತ ಮೂರ್ತಿಯವರ ಪಠ್ಯ ಭಾಗದಲ್ಲಿ ಯಾವುದೋ ಒಂದು ಸಂದೇಹ ಬಂತು ಅವರಿಗೆ ಹಾಸ್ಟೆಲ್ ಎದುರಿನ ಬೂತ್ ನಿಂದ ಫೋನ್ ಮಾಡಿದೆ ( ಆಗ ನಮ್ಮ ಎಲ್ಲಾ ಅಧ್ಯಾಪಕರುಗಳೂ ತಮ್ಮ ಮನೆ ಪೋನ್ ನಂಬರ್ ಗಳನ್ನು ನಮಗೆ ಕೊಟ್ಟಿರುತ್ತಿದ್ದರು) ಲಲಿತ ಮೂರ್ತಿ ಪೋನ್ ನಲ್ಲಿ ವಿವರಿಸಲು ಯತ್ನಿಸಿದವರು `ನೀನು ಕಾಲೇಜಿಗೆ ಬಾ ನಾನು ನಿಮ್ಮ ಡಿಪಾರ್ಟ್ ಮೆಂಟ್ ಹೆಡ್ ಗೆ ಪೋನ್ ಮಾಡಿ ಅವರಿಂದ ಜವಾನನಿಗೆ ಪೋನ್ ಮಾಡಿಸಿ ಡಿಪಾರ್ಟ್ ಮೆಂಟ್ ಬಾಗಿಲು ತೆಗೆದಿಟ್ಟಿರಲು ಹೇಳುತ್ತೇನೆ' ಅಂದು ಬಿಟ್ಟರು


ನಾನು ಬಸ್ಸು ಹಿಡಿದು ಕಾಲೇಜಿಗೆ ಹೋದೆ.ಹಾಗೆ ಹೋಗುವಾಗ ಹಿಂದಿನ ವಾರದ ಮಳೆಗೆ ಹಾಸ್ಟೆಲ್ಲಿನ ಹುಲ್ಲು ಹಾಸಿನ ನಡು ನಡುವೆ ಯಾರೂ ಬೆಳೆಸದೆಯೇ ಬೆಳೆದು,ಬಿಳಿ ತಾರೆಗಳಂತೆ ಅರಳಿ ನಗುತ್ತಿದ್ದ ಒಂದಿಷ್ಟು ರೇನ್ ಲಿಲ್ಲಿ ಗಳ ಕಿತ್ತು ಗುಚ್ಛ ಮಾಡಿಕೊಳ್ಳುತ್ತಾ ಹೋದೆ


ಇಡೀ ಕಾಲೇಜು ಭಣ ಗುಟ್ಟುತ್ತಿತ್ತು.ಡಿಪಾರ್ಟ್ ಮೆಂಟಿನ ರೂಮಿನಲ್ಲಿ ಲಲಿತ ಮೂರ್ತಿ ಒಬ್ಬರೇ ನನಗಾಗಿ ಕಾಯುತ್ತಾ ಕೂತಿದ್ದರುಸುಮಾರು ಎರಡು ಘಂಟೆಗಳ ಕಾಲ ಇಡೀ ಪಠ್ಯ ಭಾಗವನ್ನು ನನಗೆ ವಿವರಿಸಿದರು ನಿನಗೆ ಅರ್ಥ ವಾಯಿತೇ ಎಂದು ಪದೇ ಪದೇ ಕೇಳಿ ತಿಳಿದುಕೊಂಡರು

ಅವರು ವಾಪಸ್ಸು ಹೊರಟಾಗ `ವರ್ಡ್ಸ್ ವರ್ತ ನ ಡ್ಯಾಫೋಡಿಲ್ಸ್ ಅನ್ನು ಪಾಠ ಮಾಡುವ ಮ್ಯಾಮ್ ಗೆ ರೇನ್ ಲಿಲ್ಲಿಯ ಉಡುಗೊರೆ ' ಎಂದು ಹೇಳುತ್ತಾ ಅವರಿಗೆ ರೇನ್ ಲಿಲ್ಲಿಗಳ ಗುಚ್ಛ ಕೊಟ್ಟೆ
ಲಲಿತ ಮೂರ್ತಿಯವರ ಮುಖ ಆನಂದದಿಂದ ಬೆಳಗಿ ಹೋಯಿತು

*******************
ನಾನೇನೂ ತರಗತಿಯ ಅತಿ ಬುದ್ದಿವಂತ ವಿದ್ಯಾರ್ಥಿಯಾಗಿರಲಿಲ್ಲ.ನನ್ನಿಂದ ಕಾಲೇಜಿಗೆ ರಾಂಕ್ ಆಗಲೀ,ಚಿನ್ನದ ಪದಕವಾಗಲೀ ನಿರೀಕ್ಷಿಸುವಂತಿರಲಿಲ್ಲ.ಆದರೂ ನನಗಾಗಿ ಅಂದು ಆ ಬೇಸಿಗೆಯ ಮದ್ಯಾನ್ಹ ಮಧ್ಯ ವಯಸ್ಸು ದಾಟಿದ್ದ ಲಲಿತ ಮೂರ್ತಿಯವರು ಎರಡು ಘಂಟೆ ಕಾಲ ಶ್ರಮ ಪಟ್ಟಿದ್ದರು.ಹೇಳಿಕೊಳ್ಳಲು ಹೋದರೆ ಅಸಲಿಗೆ ನಾನು ಅವರ ಕಾಲೇಜಿನ ವಿದ್ಯಾರ್ಥಿಯೇ ಆಗಿರಲಿಲ್ಲ.

ಅಂದು ಶೇಷಾದ್ರಿ ಪುರಂ ಕಾಲೇಜಿಗೆ ಬಾಗಿಲು ತೆರೆಸಿಕೊಂಡು ಬಂದು ಎಂ .ಇ.ಎಸ್ ಕಾಲೇಜಿನ ಇಂಗ್ಲಿಷ್ ವಿಭಾಗ ಮುಖ್ಯಸ್ಥೆ ಯಾದ ಅವರು ಈ ಒಂದೇ ಒಂದು ವಿದ್ಯಾರ್ಥಿಗೆ ಪಾಠ ಹೇಳರದಿದ್ದಿದ್ದರೆ ಯಾರೂ ಅವರನ್ನು ಆಕ್ಷೇಪಿಸುತ್ತಿರಲಿಲ್ಲ ಅಥವಾ ಹೇಳಿದ್ದಕ್ಕೆ ಸನ್ಮಾನ ಮಾಡಲಿಲ್ಲ ಯಾರಿಗೂ ಹೇಳದೇ ಬಂದು ಯಾರಿಗೂ ಕಾಯದೇ ಒಂದೇ ದಿನ ಬೆಳಗಿ ತೆರೆ ಮರೆಗೆ ಸರಿವ ರೇನ್ ಲಿಲ್ಲಿಯಂತೆ ಅಂದು ಅವರು ತಾವು ಬಂದ ಕೆಲಸ ಮುಗಿಸಿ ಜವಾನನ ಕೈಗೆ ಬೀಗದ ಕೈ ಗೊಂಚಲು ಕೊಟ್ಟು ಆಟೋ ಏರಿ ಹೊರಟು ಹೋದರು

*********************
ಬಿರು ಬೇಸಿಗೆಯ ದಿನಗಳಲ್ಲಿ ನೆಲದೊಳಗಿಂದ ಧಿಡೀರನೆ ಒಂದು ದಿನ ತಲೆ ಎತ್ತಿ ನಗುವ ರೇನ್ ಲಿಲ್ಲಿ ತರುವ ಆಹ್ಲಾದದಂತೆ ಇಂಥಾ ಅನಿರೀಕ್ಷಿತ,ಅಪರೂಪದ ಪ್ರಸಂಗಗಳು ಮಾನವತೆಯ ಮೇಲೆ ನನಗಿರುವ ನಂಬಿಕೆಯನ್ನು ಬಲಗೊಳಿಸುತ್ತಾ ಬಂದಿವೆಪ್ರತಿ ವರ್ಷ ರೇನ್ ಲಿಲ್ಲಿ ಹೂ ನೋಡಿದಾಗ ಲಲಿತ ಮೂರ್ತಿ ಮತ್ತವರ ಶುಭ್ರ ಅಂತಃಕರಣ ನೆನಪಾಗುತ್ತದೆ....