ದುರ್ಗದಲ್ಲಿ ಪ್ರೇಮೋತ್ಸವ
ಹೇಳು ಪ್ರೀತಿಗೆ ಯಾವ ಭಾಷೆ?
ಹೇಳು ಕನಸಿಗೆ ಎಂಥಾ ಭಾಷೆ?
ಎಂದೋ ಕೇಳಿದ ಹಾಡು ಇಂದು ನೆನಪಿಗೆ ಬರುತ್ತಿದೆ ...
ಪ್ರೀತಿಗೆ ಭಾಷೆ ಯಾಕೆ ಬೇಕು?
ಕಣ್ಣಿಂದ ಕಣ್ಣಿಗೆ ತೂಗುವ ಹೂನೋಟದ ಸೇತುವೆಯಲ್ಲಿ ಸಂದೇಶಗಳು ಪಯಣಿಸುವಾಗ....
ಹೃದಯದ ಭಾಷೆ ಯಾವುದು?
ಅದನ್ನು ಹೃದಯವೇ ಅರಿಯುವುದು!
ಆದರೆ ಈ ಮೌನ ಭಾಷೆ ರಿಲೆಯಬಲ್ಲಾ? ಯೋಚನೆ ಬಂತು
ಕಣ್ಣಿನ /ಹೃದಯದ ಭಾಷೆ ಅಷ್ಟೊಂದು ಪ್ರಾಕ್ಟಿಕಲ್ ಅಲ್ಲಾ ಅಲ್ವಾ? ಅನ್ನಿಸೋಕೆ ಶುರುವಾಯಿತು!
ಕಣ್ಣಿನ ಭಾಷೆ ಅರ್ಥವಾಗದ `ಜಾಣ ಜಾಣೆಯರೂ' ಇರುತ್ತಾರೆಂಬುದಕ್ಕೆ ನೆನಪಿನ ಕೋಶದಿಂದ ಹಲವಾರು ನಿದರ್ಶನಗಳು ಎದ್ದು ಬಂದು ಕಣ್ಮುಂದೆ ನಿಂತವು
ನಾನು ಹೀಗೆ ಕವಿಗಳ ಭಾಷೆಯಲ್ಲಿ ಹೇಳಿ ಸುಮ್ಮನಾಗಿ ಬಿಟ್ಟರೆ ನನ್ನ ತಮ್ಮ ತಂಗಿಯರು ಬೈದು ಕೊಳ್ಳೋಲ್ವೇ?ಅಂತಾನೂ ಅನ್ಸೋಕೆ ಶುರುವಾಯಿತು
ಎಲ್ಲರೂ ಕಣ್ಣಿನ /ಹೃದಯದ ಭಾಷೆಯ ಮೇಲೇ ಭಾರ ಹಾಕಿ `ಸುಮ್ಮನೆ ಕೈ ಕಟ್ಟಿ ಕೂತು ಬಿಟ್ಟರೆ' ಪ್ರೇಮ ನೌಕೆ ದಡ ಸೇರುವುದು ಹೇಗೆ?
**********
ಒಂದಿಷ್ಟು ಒಳ್ಳೇ ಪ್ರೇಮ ಕವನಗಳನ್ನಾಯ್ದು ಒಂದು `ಪ್ರೇಮ ಕವನ ಗುಚ್ಛ'ವನ್ನು ಕಟ್ಟಿಕೊಡಬಾರದೇಕೆ ಅಂತ ಯೋಚನೆ ಮಾಡಿದೆ...
ಪ್ರೇಮಿಗಳ ದಿನದಿಂದ ಶುರು ಮಾಡಿ ವಾರವೋ ಹತ್ತು ದಿನವೋ ಕವನ ಪ್ರಕಟಿಸುವಾ ಅಂತ ಮೊದಲು ಅಂದುಕೊಂಡೆ ಹಾಗೆ ಮಾಡಿದರೆ ಅದು ಉದ್ದೇಶಿತರಿಗೆ ಉಪಯೋಗವಾಗುವುದು ಮುಂದಿನ ವರ್ಷವೇ...(ಅದೂ ಹುಡುಗಿ ಕಾದೂ ಕಾದೂ ಸಾಕಾಗಿ ಕೈ ಕೊಟ್ಟು ಹೋದ ಮೇಲೇನೇ...) ಅಂತ ಕೀಟಲೆಯ ಕಮೆಂಟ್ ಬಂತು!
ಈ ಕವನ ಗುಚ್ಛಕ್ಕಾಗಿ ಒಂದೊಂದೇ ಅಪರೂಪದ ಹೂ ಆರಿಸಿ ಜೋಡಿಸಲು ಪ್ರಾರಂಭಿಸಿದ್ದೇನೆ
ಸದ್ಯದಲ್ಲೇ ಹಲವು ಬಣ್ಣಗಳ `ಸುಂದರ ಬೊಕೇ' ದುರ್ಗದಲ್ಲಿ ಕಂಗೊಳಿಸಲಿದೆ
ಈ ಬೊಕೆಯಿಂದ `ಅವಳಿಗೆ /ಅವನಿಗೆ ' ಇಷ್ಟವಾಗಬಹುದಾದ `ಬಿಡಿ ಹೂ' ಆರಿಸಿ ನಿಮ್ಮ ಮನದ ಮಾತು
ಹೇಳುವುದು ನಿಮ್ಮ ಕೆಲಸ!
***************
ಟಿಪ್ಪಣಿ-`ಇಹದ ಪರಿಮಳದ ಹಾದಿ' ಪ್ರೇಮೋತ್ಸವದ ನಂತರ ಮುಂದುವರೆಯಲಿದೆ