ನಾಳೆ ಶುಕ್ರವಾರ ಪಿಸುಗುಟ್ಟಿದಳು ಶಾಲಿ...ಗೊತ್ತು ಅನ್ನುವಂತೆ ಕಣ್ಣು ಮಿನುಗಿಸಿ ತುಟಿಕಚ್ಚಿ ನಸುನಕ್ಕಳು ತನು.ಇಬ್ಬರೂ ಸೀನಿಯರ್ ಗಳ ಕಣ್ಣಿಗೆ ಬೀಳದಂತೆ ಕಾರ್ಯ ಸಾಧಿಸಬೇಕೆಂದು ಮೊದಲೇ ದಾರಿಯಲ್ಲಿ ಮಾತಾಡಿ ಕೊಂಡಿದ್ದರೂ ಮತ್ತೆ ಮತ್ತೆ ಅದೇ ಮಾತಾಡಿ ಕೊಳ್ಳುವ ಆಸೆ ಇದ್ದರೂ ಸೀನಿಯರ್ ನ ಕಿವಿಗೆ ಬೀಳುವ ಆತಂಕದಿಂದ ಬಾಯಿ ಮುಚ್ಚಿ ಕೊಂಡು ಮಲಗ ಬೇಕಾಯಿತು ಮತ್ತೊಮ್ಮೆ ಲಿಸ್ಟ್ ತನ್ನ ಬ್ಯಾಗ್ ನಲ್ಲೇ ಇದೆಯೇ ಅಂತ ಕನ್ ಫರ್ಮ್ ಮಾಡಿಕೊಂಡು ಬಂದು ಮಲಗಿದಳು ತನು
*********
ಬೆಳಗ್ಗೆ ಅಲಾರಾಂ ಗೆ ಎದ್ದವರು ಹಲ್ಲಿಗೆ ಬ್ರೆಶ್ಶು ತಾಕಿಸಿ ಕಾಫೀ ಕೂಡಾ ಕುಡಿಯದೇ ಕಾಫೀ ಕುಡಿಯಲ್ವಾಮ್ಮಾ ಅಂತ ಕೂಗುತ್ತಿದ್ದ ಅಡುಗೆ ಭಟ್ಟರ ದನಿಗೆ ಇಲ್ಲಾ ...ಅಂತೇನೋ ಒದರಿ ಓಡಿ ಬಿಟ್ಟರು ವಾಚ್ ಮೆನ್ ರಾಜೂಗೂ ಏನೋ ಹೇಳಿದ್ದಾಯ್ತು. ಅವನು ಗೊಣಗುತ್ತಾ ಗೇಟು ತೆಗೆದಾಕ್ಷಣ ಓಟ! ಹಂದೀಕೆರೆ ಹತ್ರ ಸಿಗುವ ಗಿಡದ ಎಲೆ ಹೇಗೆ ಕಾಣುತ್ತೆ ಅಂತ ರಂಜು ವಿವರವಾಗಿ ಹೇಳಿದ್ದನ್ನು ನೆನಪು ಮಾಡಿಕೊಳ್ಳುತ್ತಾ ಇಬ್ಬರೂ ಹುಡುಕ ತೊಡಗಿದರು ಸಿಕ್ತಾ ಸಿಕ್ತಾ ಅಂತ ಪದೇ ಪದೇ ತನು ಕೇಳಿದಾಗ ಶಾಲಿಗೆ ಕೋಪ ಬಂತು ಕೆನ್ನೆ ಉಬ್ಬಿಸಿ ತನುವನ್ನು ದುರು ದುರು ನೋಡಿದಳು ತನು ಶಾಲಿಯ ಕೋಪ ಕಳೆಯಲು "ಅಲ್ವೇ... ಈ ಜಾಗಕ್ಕೆ ಹಂದಿ ಕೆರೆ ಅಂತ ಯಾಕೆ ಹೆಸರಿಟ್ರೇ...ಹಂದಿಗಳೂ ಇಲ್ಲ ಕೆರೆಯೂ ಇಲ್ಲ..."ಅಂತ ರಾಗವಾಗಿ ಹೇಳಿದಾಗ"ಇಲ್ಲೊಂದು ಗುಂಡಿ ತೋಡಿ ಕೊಚ್ಚೆತುಂಬಿಸುತ್ತೀನಿ ನಿನ್ನ ಅಜಯನನ್ನು ಉರುಳಾಡಲು ಹೇಳು ಹೆಸರಿಗೆ ತಕ್ಕ ಹಾಗಿರುತ್ತೆ" ಅಂದು ಬಿಟ್ಟಳು ಶಾಲಿ ಅಜಯನ ಹೆಸರು ಕೇಳಿದ ಕೂಡಲೆ ತನುವಿನ ಕೆನ್ನೆಗೂ ಅವತ್ತಿನ ಆ ಬೆಳಗಿನ ಆಕಾಶಕ್ಕೂ ಏನೂ ವ್ಯತ್ಯಾಸವಿಲ್ಲದೇ ಹೋಯಿತು ನಿಂತಲ್ಲೇ ನಿಂತು ಬಿಟ್ಟಳು ಎಷ್ಟು ಹೊತ್ತು ನಿಂತಿರುತ್ತಿದ್ದಳೋ ಶಾಲಿ "ಇದೇ ಅಲ್ವಾ ಸಿಕ್ಕಿತು ನಡಿ" ಅಂತ ಅವಳನ್ನು ದಬ್ಬಿಕೊಂಡು ನಡೆಯುವವರಿಗೂ ನಿಂತೇ ಇದ್ದಳು
************
"ನೆಕ್ಸ್ಟ್ ಕಾಳಮ್ಮನ ಗುಡಿ ಅಲ್ವಾ..."ಬೇಗ ಬೇಗ ನಡೆಯುತ್ತಿದ್ದ ಶಾಲಿಯನ್ನು ಓಡೋಡುತ್ತಾ ತನು ಕೇಳಿದಾಗ ಶಾಲಿ ತಲೆ ಅಲ್ಲಾಡಿಸಿದಷ್ಟೇ.ಅವಳಿಗೆ ಎಷ್ಟು ಬೇಗ ಎಲ್ಲಾ ಐದು ಪಧಾರ್ಥಗಳನ್ನೂ ಒಟ್ಟು ಮಾಡುವೆನೋ ಎಂಬ ಆತಂಕ ಅಂತೂ ಕಾಳಮ್ಮನ ಗುಡಿ ತಲುಪಿದರು ಗುಡಿಯ ಪಕ್ಕದ್ದೇ ಪುಟ್ಟ ತೋಟ ಅಲ್ಲಿಂದ ಅವರು ಕಾಮಕಸ್ತೂರಿ ಎಲೆ ಕೀಳಬೇಕಿತ್ತು ಮೆಲ್ಲಗೆ ತೋಟದೊಳಗೆ ನುಸುಳಿ ಎಲೆಗಳನ್ನು ಬಿಡಿಸುತ್ತಿರುವಾಗ ಶಾಲಿಗೆ ತಾವು ಮಾಡುತ್ತಿರುವುದು ದೇವಸ್ಥಾನದಲ್ಲಿ ಕದಿಯುವ ಕೆಲಸ ಅನ್ನಿಸಿ ಅಳುಕಾಯಿತು ಅದನ್ನು ತನುವಿಗೆ ಹೇಳಿದ್ದಕ್ಕೆ ಅವಳು ಒಂದೇ ಮಾತಿನಲ್ಲಿ "ನಿಂಗೆ ಕಿರಣ ಬೇಕೋ ಬೇಡ್ವೋ.."ಅಂದು ಬಿಟ್ಟಳು
***************
ನಂತರದ್ದು ರಂಜು ಮನೆಯ ಮುಂದಿನ ಬೀದಿಯಲ್ಲಿನ ರಮಾಬಾಯಿ ಮನೆ "ಅದು ಭಾರೀ ಹುಷಾರಿನ ಮುದುಕಿ ಕಿವಿಯಂತೂ ಒಳ್ಳೇ ಹಿತ್ತಾಳೆದು ಅದಕ್ಕೇ ನಿದ್ದೇನೆ ಬರೋಲ್ವಂತೆ ಹಾಗಂತ ನಮ್ಮಮ್ಮನ ಹತ್ರ ಹೇಳ್ತಿರತ್ತೆ ಸೋ ವೆರಿ ಕೇರ್‍ಫುಲ್" ಅಂತ ರಂಜು ಹೇಳಿದ್ದನ್ನು ನೆನಪಿಸಿಕೊಂದು ಇಬ್ಬರೂ ಭಯ ಪಟ್ಟುಕೊಂಡರೂ ಮನದಲ್ಲಿ ಅದುಮಲಾರದ ಆಸೆ ಅಂತೂ ಕಾಂಪೌಂಡ್ ಹಾರುತ್ತಾ ರಾಯರನ್ನು ನೆನಪಿಸಿಕೊಳ್ಳುತ್ತಾ ಏನೊ ಪಿಟುಗುಟ್ಟಿಕೊಂಡಳು ತನು ಶಾಲಿಗೆ ಗಂಡು ದೇವರುಗಳು ಅಷ್ಟಕ್ಕಷ್ಟೇ ಅವಳು ಅವಳ ಮನೆದೇವರಾದ ಬನಶಂಕರಮ್ಮನನ್ನು ನೆನಸಿಕೊಳ್ಳುತ್ತಾ ಹರಕೆ ಕಟ್ಟಿಕೊಂಡಳು. ಕೈಯಲ್ಲಿ ಮಗುಗದ ಕೊನೆ ಹಿಡಿದು ಇಬ್ಬರೂ ಕಾಂಪೌಂಡ್ ಹಾರಿ ರಂಜು ಮನೆ ದಾರಿ ಹಿಡಿದಾಗ ಒಲಂಪಿಕ್ ಗೋಲ್ಡ್ ಗೆದ್ದವರಿಗಿಂತಾ ಖುಷಿಯಾಗಿದ್ದರು
************
ರಂಜು ಮನೆಕೆಲಸ ಸಲೀಸು ಬಾಗಿಲು ತೆಗೆದಿದ್ದು ರಂಜು ಅವರಪ್ಪ ಸ್ವ್ಲಲ್ಪ ಭಯವಾದರೂ ಅವರ ಹಿಂದೇನೇ ರಂಜು ಬಂದು ಬನ್ರೇ ಅಂತ ತನ್ನ ರೂಮಿಗೆ ಕರೆದು ಕೊಂಡು ಹೋದಳು ಇವರಿಬ್ಬರೂ ತಮ್ಮ ಸಾಹಸವನ್ನು ಪಿಸು ಮಾತಿನಲ್ಲಿ ವಿವರಿಸುತ್ತಾ ಬ್ಯಾಗಿನಿಂದ ತೆಗೆದು ತೋರಿಸುತ್ತಿರುವಾಗಲೇ ರಂಜು ಅಮ್ಮ ಕಾಫಿ ತೊಗೊಂಡು ಬಂದುಬಿಟ್ಟರು "ಇದೇನ್ರಮ್ಮ ಇವೆಲ್ಲಾ ಎಲೆಗಳು ಯಾತಕ್ಕೆ ಇವೆಲ್ಲಾ..."ಅಂತ ಅವರು ಕೇಳಿದಾಗ ಇವರಿಬ್ಬರೂ ತಡಬಡಾಯಿಸಿದರೆ ರಂಜು "ಅಮ್ಮಾ ಇವೆಲ್ಲಾ ಸೈನ್ಸ್ ಕ್ಲ್ಯಾಸ್ ಗಾಗಿ ನಿಂಗಿದೆಲ್ಲಾ ಗೊತ್ತಾಗಲ್ಲಾ ಬಿಡು" ಅಂತ ಹೇಳಿ ಅಮ್ಮನ ಬಾಯಿ ಮುಚ್ಚಿಸಿಬಿಟ್ಟಳು ಎಷ್ಟಾದರೂ ತಮಗಿಂತಾ ಅನುಭವಸ್ಥೆ ಅಂತಾ ಶಾಲಿ ತನುಗಳು ಮೆಚ್ಚುಗೆಯ ನೋಟ ಹರಿಸುತ್ತಿರುವಾಗ ನೋಡ್ ದ್ರಾ ಹೆಂಗೆ ಅನ್ನುವ ಭಾವ ರಂಜುವಿನ ಮೊಗದಲ್ಲಿ
ನಡಿರೇ...ಹೊತ್ತಾಗುತ್ತೆ ಅಂತ ಕಾಫೀಲೋಟ ಕುಕ್ಕಿ ಅವರನ್ನು ಹೊರಡಿಸಿಕೊಂಡು ಹಿತ್ತಲಿಗೆ ಬಂದ ರಂಜು ತಮ್ಮ ಮನೆಯ ನಿತ್ಯ ಮಲ್ಲಿಗೆ ಚಪ್ಪರದಿಂದ ಇಬ್ಬರಿಗೂ ಒಂದೊಂದು ಬೊಗಸೆ ಹೂ ಬಿಡಿಸಿ ಕೊಟ್ಟಳು ಇಬ್ಬರೂ ಹುಷಾರಾಗಿ ಬ್ಯಾಗ್ ನಲ್ಲಿ ಹಾಕಿಕೊಂಡರು ನಂತರ ಅಪ್ಪ ವಾಕಿಂಗ್ ಹೋಗಿದ್ದನ್ನು ಖಾತ್ರಿ ಮಾಡಿಕೊಂದು ಅಮ್ಮ ಸ್ನಾನಕ್ಕೆ ಹೋದರೇ ಅಂತ ಸದ್ದು ಕೇಳಿಕೊಂದು ಗಳು ತಂದು ಪಕ್ಕದ ಮನೆಯ ದಾಸವಾಳಗಿಡದಿಂದ ಇಬ್ಬರಿಗೂ ಎರಡೆರಡು ಬಿಳಿ ದಾಸುವಾಳ ಕಿತ್ತು ಕೊಟ್ಟಳು ಕ್ಲ್ಯಾಸಿಗೆ ಹೊತ್ತಾಗುತ್ತೆ ನಡೀರೆ ಅಂತ ರಂಜು ಅವರಿಬ್ಬರನ್ನೂ ದಬ್ಬದೇ ಹೋಗಿದ್ದರೆ ಅವಳಪ್ಪ ರಸ್ತೆ ಕೊನೆಯಲ್ಲಿ ಕಾಣದೇ ಹೋಗಿದ್ದಿದ್ದರೆ ಅದೆಷ್ಟು ಸಾವಿರ ಥ್ಯಾಂಕ್ಸು ಹೇಳುತ್ತಾ ಶಾಲಿ ತನು ಇಬ್ಬರೂ ಅಲ್ಲೇ ನಿಂತಿರುತ್ತಿದ್ದರೋ ಅಂತೂ ಹಾಸ್ಟೆಲ್ ಕಡೆಗೆ ಹೊರಟರು ಹೊರಡುವಾಗ ರಂಜುವಿಗೆ ಕೆಂಪು ಹಸುವಿನ ಹಾಲು ತರಲು ನೆನಪಿಸುವುದನ್ನು ಮರೆಯಲಿಲ್ಲ
*****************
ಓಡೋಡುತ್ತಾ ವಾಪಸು ಬರುವಾಗ ಶೆಟ್ಟಿ ಅಂಗಡಿಯಲ್ಲಿ ಅಕ್ಕಿ ಹಿಟ್ಟು ಕೊಳ್ಳಲು ನಿಂತಾಗ ಎಷ್ಟು ತೊಗೊಳ್ಳಬೇಕೆಂದು ಇಬ್ಬರಿಗೂ ಗೊತ್ತಾಗಲಿಲ್ಲ ಶೆಟ್ಟಿ ಪಾಪ ಅವರವರೇ ಮಾತಾಡಿಕೊಂಡು ಡಿಸೈಡ್ ಮಾಡುತ್ತಾರೆಂದು ಸುಮಾರು ಹೊತ್ತು ಕಾದ ಕೊನೆಗೂ ಶಾಲಿ ತನುಗಳ ಪಿಸುಗುಡುವಿಕೆ ನಿಲ್ಲಲೇ ಇಲ್ಲ ನಿಮ್ಮಮ್ಮ ಏನು ಹೇಳಿದ್ರಮ್ಮ.. ಅಂತ ಕೊನೆಗವನು ಶಾಲಿಯನ್ನು ಕೇಳಿದಾಗ ಅವಳು ಉಗುಳು ನುಂಗುತ್ತಾ ನಿಂತು ಬಿಟ್ಟಳು ಕೊನೆಗೆ ತನುವೇ ಧೈರ್ಯದಿಂದ ಎರಡು ರೊಟ್ಟಿಗಾಗುವಷ್ಟು ಹಿಟ್ಟು ಕೊಡ್ರೀ ಅಂತ ಕೇಳಿ ಕಟ್ಟಿಸಿಕೊಂಡಳು ಶೆಟ್ಟಿ ಏನೋ ಗೊಣಗುತ್ತಾ ಕಟ್ಟಿಕೊಟ್ಟ ಚಿಲ್ಲರೆಗೆ ಯಾವ ಚಾಕ್ಲೆಟ್ ಕೊಡಲೀ ಅಂತ ಶೆಟ್ಟಿ ಕೇಳಿದಾಗ ಇಬ್ಬರೂ ಮುಖ ನೋಡಿಕೊಂಡು ಚಾಕ್ಲೆಟ್ ಬೇಡ ಟೀಪುಡಿ ಕೊಡಿ ಅಂತ ಕೇಳಿಬಿಟ್ಟರು ಶೆಟ್ಟಿ ನಗುತ್ತಾ ಒಂದು ಸಣ್ಣ ಪೊಟ್ಟಣ ತ್ರೀರೋಸಸ್ ಕೊಟ್ಟು ಮತ್ತೆ ದುಡ್ಡು ವಸೂಲಿ ಮಾಡಿ ಮತ್ತೆ ಅದು ಚಾಕ್ಲೇಟ್ ಘಟ್ಟಕ್ಕೆ ಬಂದು...ಬೆಳಗ್ಗೆ ಬೆಳಗ್ಗೆ ಇಂಥಾ ಕೆಲಸಕ್ಕೆ ಹೊರಟಿರುವಾಗ ಚಾಕ್ಲೇಟ್ ತಿನ್ನುವುದು ಬೇಡಾ ಅಂತ ಶಾಲಿ ಹೇಳಿದಾಗ ತನುವಿಗೂ ಅದು ಸರಿ ಅನ್ನಿಸಿ ಇನ್ನೊಂದ್ ಸಲ ಬಂದಾಗ ಏನಾದ್ರೂ ತೊಗೋತೀವಿ ರೀ ಅಂತ ಹೇಳಿ ಓಡಿ ಬಂದು ಬಿಟ್ಟರು
****************
ಅವತ್ತೆಲ್ಲಾ ಶಾಲಿಗೂ ತನುಗೂ ಕ್ಲ್ಯಾಸಿನಲ್ಲಿ ಪಾಠ ಕೇಳಲೇ ಆಗಲಿಲ್ಲ ಬೆವರು ಒರೆಸಿಕೊಳ್ಳುವುದು ಟಾಯ್ಲೆಟ್ಗೆ ಹೋಗುವುದು ಮತ್ತು ನೀರು ಕುಡಿಯುವುದರಲ್ಲೇ ಕಳೆದುಹೋಯ್ತು ಸಂಜೆ ತಮ್ಮ ಎಂದಿನ ಮರದ ಕೆಳಗೆ ಕೂತಾಗ ಎದೆ ಬಡಿತ ಜೋರಾಗಿತ್ತು ಇಬ್ಬರಿಗೂ ರಂಜು ಕ್ಲ್ಯಾಸು ಬಿಡುವುದೇ ಕಾಯ್ತಾ ಕೂತಾಗ ಟೈಮ್ ಯಾಕೆ ಇಷ್ಟು ನಿಧಾನವಾಗಿ ಓಡುತ್ತಿದೆ ಅಂತ
ಅಂತೂ ರಂಜು ಬಂದಳು
ಹುರ್ರೇ ಅಂತ ಕೂಗೋಣವೇ ಅನ್ನಿಸಿತು ಶಾಲಿಗೆ ರಂಜು ಅವಳ ವಾಟರ್ ಬಾಟಲಲ್ಲಿ ತುಂಬಿಸಿ ತಂದಿದ್ದ ಹಾಲು ಸ್ವಲ್ಪ ಗಡ್ಡೆಗಡ್ಡೆಯಾಗಿದ್ದರೂ ಅವರಿಬ್ಬರೂ ತಲೆ ಕೆಡಿಸಿಕೊಳ್ಳಲಿಲ್ಲ ಕೆಂಪು ಹಸುದೇ ತಾನೇ ಅಂತ ಮಾತ್ರ ತಪ್ಪದೇ ಕೇಳಿಕೊಂಡರು ಅಷ್ಟೇ ರಂಜು ಗಾಡ್ ಪ್ರಾಮಿಸ್ ಕೆಂಪು ಹಸುದೇ ರಂಗಮ್ಮ ನನ್ ಮುಂದೇನೇ ಕರಕೊಟ್ಟಳು ಅಂತ ಪ್ರಾಮಿಸ್ ಮಾಡಿದ ಮೇಲೇನೇ ತನುಗೆ ಸಮಾಧಾನವಾಗಿದ್ದು ರಂಜು ಎಲ್ಲಾ ಎಲೆಗಳೂ ಬೇರ್ ಬೇರೆ ಜಾಗಗಳಿಂದ ಕಿತ್ತಿದ್ದೂ ತಾನೇ ಒಂದೇ ಮನೆ ಇಂದ ಅತ್ವಾಒಂದೇ ಜಾಗದಿಂದ ಕಿತ್ರೆ ಇಫೆಕ್ಟೇ ಇರಲ್ಲ ಅಂತ ಗದರಿಸಿ ಕೇಳಿದಾಗ ಹೌದೌದು ಅಂತ ಇಬ್ಬರೂ ತಲೆ ಹಾಕಿದರು
ರಂಜು ಮೊದಲೇ ಹೇಳಿಟ್ಟಿದ್ದಳು ಈ ಐದು ಪಧಾರ್ಥಗಳಲ್ಲಿ ಒಂದು ಬಯಲಿಂದ, ಒಂದು ದೇವಸ್ಥಾನದಿಂದ ಒಂದು ಎಲೆ ಒಂದು ಹೂ ಕದ್ದಿದ್ದು ಮತ್ತು ಒಂದು ಗೆಳತಿ ಕೊಟ್ಟಿದ್ದು ಆಗಿರಬೇಕು ಅಂತ .ಈಗ ಎಲ್ಲಾ ಸರಿ ಇದೆಯಾ ಅಂತ ಚೆಕ್ ಮಾಡಿಕೊಂಡಳು ಅಷ್ಟೇ...
ರಂಜುವಿನ ಟಿಫಿನ್ ಡಬ್ಬದಲ್ಲಿ ಕಲಸುವುದೋ ಅತ್ವಾ ಅವಳು ಇಸಕೊಂಡು ಬಂದಿದ್ದ ಪಮ್ಮಿಯ ಡಬ್ಬದಲ್ಲಿ ಕಲೆಸುವುದೋ ಅಂತ ಮಾತುಕಥೆಯಾಯಿತು ಅಂತೂ ಏನು ಮಾಡಿದರೂ ಎಷ್ಟೇ ಹೇಳಿದರೂ ಶಾಲಿ ಪಮ್ಮಿಯ ಡಬ್ಬದಲ್ಲಿ ಕಲೆಸಲು ಒಪ್ಪಲೇ ಇಲ್ಲ ಸರಿ ರಂಜುವಿನ ಡಬ್ಬದಲ್ಲೇ ಕಲೆಸಲು ತೀರ್ಮಾನಿಸಿದರು ಇಬ್ಬರದ್ದೂ ಒಟ್ಟಿಗೆ ಕಲಸುವುದೋ ಬೇರೆ ಬೇರೆಯೋ ಅಂತ ಇವರಿಬ್ಬರೂ ಚರ್ಚಿಸುತ್ತಿರುವಾಗ ರಂಜುವಿಗೆ ಇವರಿಬ್ಬರ ಚರ್ಚೆ ಬೇಜಾರಾಗಿ ಅತ್ಲಾಗೆ ಇದು ಮುಗಿದರೆ ಸಾಕು ಅನ್ನಿಸಿ ಒಟ್ಟಿಗೇನೆ ಇರಲಿ ಅಂತ ಅಂದು ಬಿಟ್ಟಳು ಶಾಲಿ ನಿನ್ ಬ್ಯಾಗ್ದೂ ಕೊಡಿಲ್ಲಿ ಅಂತ ತನುವಿನ ಬ್ಯಾಗ್ ಎಳೆದು ಎಲ್ಲಾ ಬೆರೆಸಲು ಹೋಗುವ ಕ್ಷಣ ಮೊದಲು ತಡಿ ಶಾಲೀ...ಬೇಡಾ ಅಂತ ತಡೆದ ತನು ಹೀಗೆ ಇಬ್ಬರದ್ದೂ ಒಟ್ಟಿಗೆ ಕಲೆಸಿಬಿಟ್ಟರೆ ಅಜಯಂಗೂ ಕಿರಣಂಗೂ confuse ಆಗಿ ಬಿಟ್ಟರೆ ಅಂದಾಗ ಶಾಲಿಗೆ ತನು ಹೇಳುವುದು ನಿಜ ಅಂತ ಅನ್ನಿಸಿ ಬಿಟ್ಟಿತು
ಇವರಿಬ್ಬರೂ ತಮ್ಮಷ್ಟಕ್ಕೆ ತಮಗೆ ಬೇಕಾದ್ದು ಮಾಡಿಕೊಳ್ಳುತ್ತಿದ್ದಾರೆ ಅಂತ ರಂಜುವಿಗೆ ಕೋಪ ಬಂದಿತಾದರೂ ಅವಳು ಏನೋ ಹೇಳದೇ ಬಿಸಿಲು ಹೋಗುವುದರೊಳಗಾಗಿ ಮುಗಿಸದೇ ಇದ್ದರೆ ಗೊತ್ತಲ್ಲ ಅಂತ ಬಾಣ ಬಿಟ್ಟಳು ಆಯ್ಯೋ ಬಿಸಿಲು ಹೋಗುವುದರೊಳಗಾಗಿ ಕೇಕ್ ಮಾಡದೇ ಹೋದರೆ ಇಫೆಕ್ಟ್ ಇರಲ್ಲಾ ಕಣೆ ಬೇಗ ಬೇಗ ಅಂತ ಒಬ್ಬಳು ಇನ್ನೊಬ್ಬಳಿಗೆ ಅವಸರ ಮಾಡಿದಳು ಅಂತೂ ಎಲ್ಲಾ ಎಲೆಗಳನ್ನೂ, ಹೂಗಳನ್ನೂ ಅಕ್ಕಿ ಹಿಟ್ಟನ್ನೂ ಕೆಂಪುಹಸುವಿನ ಹಾಲಿನಲ್ಲಿ ಕಲಸಿ ಪುಟಾಣಿ ಕೇಕ್ ನಂತೆ ತಟ್ಟಿ ಶಾಲಿ ತನ್ನ ಕೇಕ್ ಮೇಲೆ k ಅಂತಾನೂ ತನು A ಅಂತಾನೂ ಮರದ ಕೆಳಗೆ ಬಿದ್ದಿದ್ದ ಕಡ್ಡಿಯಲ್ಲಿ ಕೊರೆದು ಕೇಕ್ ನ ಹಿಂಭಾಗದಲ್ಲಿ ಮೂರು ಮುತ್ತು ಕೊಟ್ಟು ಸೈನ್ಸ್ ನೋಟ್ಸ್ ನಿಂದ ಕಿತ್ತ ಹೊಸ ಬಿಳಿಹಾಳೆಯಲ್ಲಿ ಸುತ್ತಿಕೊಂಡರು ನಂತರ ಎಡಗೈನಲ್ಲಿ ಕೇಕ್ ಹಿಡಿದು ಬಲಗೈನಲ್ಲಿ “Oh my love come to me" ಅಂತ ರಂಜು ಹೇಳಿಕೊಟ್ಟಿದ್ದನ್ನು ಗಾಳಿಯಲ್ಲಿ ಬರೆದು ಏಳು ಬಾರಿ ಊಫ್ ಉಫ್ ಅಂತ ಊದಿದ್ದೂ ಆಯಿತು ಐದು ಶುಕ್ರವಾರ ರಾತ್ರಿ ತಲೆ ದಿಂಬಿನಡಿ ಇರಿಸಿಕೊಂಡು ಮಲಗಿ ನಂತರ ಆರನೇ ಶುಕ್ರವಾರ ನೀರಿನಲ್ಲಿ ಬಿಟ್ಟು ಬಿಡಬೇಕು ಅಂತ ರಂಜು ಹೇಳಿದ್ದನ್ನು ಮನಸ್ಸಿನಲ್ಲಿ ಬಯ್ ಹರ್ಟ್ ಮಾಡಿಕೊಳ್ಳುತ್ತಾ ಇಬ್ಬರೂ ಹಾಸ್ಟೆಲ್ ಕಡೆ ಹೊರಟರು ಸಂಜೆಯ ಸೂರ್ಯ ಈ ಎರಡು ಹುಡುಗಿಯರನ್ನೂ ನೋಡಿ ನಕ್ಕುಮುಳುಗಿ ಮನೆಗೆ ಹೋದ