Wednesday, November 29, 2006

ಬೇಡ ಅಂದ್ರೆ ಹೇಗೆ?

ಕಪ್ಪು ಬಿಳುಪು ಬಣ್ಣ ಹೇಗೋ

ಹಗಲು ರಾತ್ರಿ ಹಾಗೇ...

ನಗುವೂ ಅಳುವೂ ಎರಡೂ ಉಂಟು

ಬೇಡ ಅಂದ್ರೆ ಹೇಗೆ?

ಬಂದಾಗ ನಗುವೇ

ಹೋದಾಗ ಮಾತ್ರ ಕಣ್ಣೀರೇಕೋ ಕಾಣೆ

ಕಸಿದು ಕೊಳ್ಳುವ ಹಕ್ಕೂ ಎಂದೂ

ಕೊಟ್ಟೋನ್ ಗೇನೇ ತಾನೇ?

Tuesday, November 28, 2006

ಬ್ರಹ್ಮಾ ಜೀ ಕಾ ದರ್ಶನ್ ಹೋಗಯಾ


ಜೂಜುಕೋರ ನಗರಿ ಲಾಸ್ ವೇಗಸ್ ನಲ್ಲಿ ಈ ಬ್ರಹ್ಮನ ದೇಗುಲ ಕಂಡಾಗ ಒಂದು ಕ್ಷಣ ದಂಗಾಗಿ ನಿಂತು ಬಿಟ್ಟಿದ್ದೆ. ಎಲ್ಲಿಯ ಲಾಸ್ ವೇಗಸ್ ಎಲ್ಲಿಯ ಬ್ರಹ್ಮ?

ಲಾಸ್ ವೇಗಸ್ ಹೇಳಿ ಕೇಳಿ ಸುಖವಿಲಾಸಕ್ಕೆಂದೇ ಕಟ್ಟಿದ ಭೋಗನಗರಿ. ಜೂಜೂ, ಮದಿರೆಯೂ ಮಾನಿನಿಯರೂ ಆಳುವ ರಾಜ್ಯ. ನಮ್ಮಂಥ ಸಾಮಾನ್ಯ ಜನ ಇಪ್ಪತೈದು ಪೈಸೆಯ (ಸೆಂಟಿನ) ಸ್ಲಾಟ್ ಮಿಶಿನ್ನಿನಲ್ಲಿ ಅಬ್ಬಬ್ಬ ಅಂದ್ರೆ ಐವತ್ತು ಡಾಲರ್ ಕಳೆದು ಕೊಂಡೋ,ಐದು ಡಾಲರ್ ಗೆದ್ದುಕೊಂಡೋ ಎದ್ದು ಹೊರಗೆ ಬಂದು ಬಿಡುತ್ತೀವಿ ದೊಡ್ಡ ಮೊತ್ತದ ಟಿಕೆಟ್ಟಿನ` ರೋಮಾಂಚಕ' ಷೋ ನೋಡಲು ಧೈರ್ಯ ಸಾಲದೇ ಕ್ಯಸಿನೋ ಗಳ ಮುಂದೆ ತೋರಿಸುವ ಬಣ್ಣದ ಕಾರಂಜಿ,ನಕಲಿ ಜ್ವಾಲಾಮುಖಿ ನೋಡಿಕೊಂಡು ರಾತ್ರಿ ಕಷ್ಟ ಪಟ್ಟಾದರೂ ಇಂಡಿಯನ್ ಹೋಟೆಲ್ ಹುಡುಕಿ, ಅನ್ನ ತಿಂದು ಹೋಟೆಲ್ ರೂಮು ಸೇರಿ ಬಿಡುತ್ತೇವೆ.ವೇಗಸ್ಸನ್ನು ಬಲ್ಲ ರಸಿಕರು `ಹನ್ನೆರಡರ ಮೇಲೇ ನಿಜವಾದ ವೇಗಸ್ ನೋಡಲು ಸಿಗುವುದು' ಅಂತ ಪಿಸುಗುಟ್ಟುತ್ತಾರೆ...`ಹೆಂಡ್ತಿ ,ಮಕ್ಳನ್ನ ಕರಕೊಂಡು ವೇಗಸ್ ಗೆ ಹೋಗುವುದೇ...ಅಂತ ಮೂಗು ಮುರಿಯುತ್ತಾರೆ
ಇಂಥಾ ಜೋಬಿಗೆ ಬರೀ ಲಾಸ್ ಮಾಡುವ ವೇಗಸ್ಸಿನಲ್ಲಿ ನಮ್ಮ ಬ್ರಹ್ಮ ದೇವರು ಕಾಣಿಸಿ ಬಿಟ್ಟರೆ....ನಾನು ಮೂರ್ಛೆ ಬೀಳದೇ ಹೋಗಿದ್ದೇ ಆಶ್ಚರ್ಯ!

ವೇಗಸ್ ನ ಪ್ರಖ್ಯಾತ ಕ್ಯಸಿನೋಗಳಲ್ಲೊಂದಾದ `ಸೀಸರ್ಸ್ ಪ್ಯಾಲೇಸ್' ನ ಉತ್ತರ ಬದಿಯ ಹುಲ್ಲು ಹಾಸಿನ ಬಳಿ ಪ್ರತಿಷ್ಟಾಪಿತನಾಗಿದ್ದಾನೆ ಈ ಬ್ರಹ್ಮದೇವ.ಸೀಸರ್ಸ್ ಪ್ಯಾಲೇಸ್ ನ ಒಡೆಯರಿಗೆ ಥೈಲ್ಯಾಂಡ್ ದೇಶದ newspaper tycoon Kamphol Vacharaphol and his wife Praneetslipa ಮತ್ತು Mr. Yip Hon, a leading citizen of Hong Kong ಗಳ ಜಂಟಿ ಕೊಡುಗೆಯಂತೆ ಹದಿನಾಲ್ಕು ಅಡಿ ಎತ್ತರವಿರುವ ಈ ಬ್ರಹ್ಮ ಪುತ್ತಳಿ ಥೈಲ್ಯಾಂಡ್ ನಲ್ಲಿ ನಿರ್ಮಿಸಿದ ಮೂರ್ತಿಯನ್ನು ವೇಗಸ್ಸಿನಲ್ಲಿ ತಂದು ಜೋಡಿಸಿ 1984ರಲ್ಲಿ ವೈಭವಯುತವಾದ ಪ್ರತಿಷ್ಟಾಪನಾ ಮಹೋತ್ಸವ ನಡೆಸಿ ಮೂರ್ತಿ ಸ್ಥಾಪನೆ ಮಾಡಿದರಂತೆ 800 ಪೌಂಡ್ ತೂಕದ ಕಂಚಿನ ಪ್ರತಿಮೆಗೆ ಬಂಗಾರದ ಪ್ಲೇಟಿಂಗ್ ಮಾಡಿದ್ದಾರೆ.
ಥಾಯ್ ಜನ ಬ್ರಹ್ಮನ ಮೂರ್ತಿಯನ್ನು good fortune ಮತ್ತು prosperity ಯ ಶುಭ ಸಂಕೇತವಾಗಿ ನಂಬುತ್ತಾರೆ.ಸೀಸರ್ಸ್ ನ ಒಡೆಯರಿಗೂ ಬ್ರಹ್ಮ ಸಾಕಷ್ಟು ಯಶಸ್ಸು ತಂದು ಕೊಟ್ಟಿರುವುದಕ್ಕೆ ಬೇಕಾದಷ್ಟು ನಿದರ್ಶನಗಳು ಕಂಡವು!

ಅಗರಬತ್ತಿಯ ಸುವಾಸನೆಯ ಮಧ್ಯೆ ಹೂಗಳಿಂದ ಅಲಂಕೃತನಾಗಿ ವಿರಾಜಮಾನನಾಗಿದ್ದ ಬ್ರಹ್ಮದೇವನಿಗೆ ಒಂದು ನಮಸ್ಕಾರ ಹಾಕಿ ಮುಂದೆ ನಡೆದಾಗ ಯಾಕೋ `ಇದು ಎಂಥಾ ಲೋಕವಯ್ಯಾ' ಹಾಡು ನೆನಪಿಗೆ ಬಂತು...


ಟಿಪ್ಪಣಿ-ಚಂದ್ರಶೇಖರ ಆಲೂರರು ತಮ್ಮ ಅಮೆರಿಕ ಪ್ರವಾಸ ಕಥನದಲ್ಲಿ `ಬ್ರಹ್ಮಾ ಜೀ ಕಾ ದರ್ಶನ್ ಹೋಗಯಾ' ಎಂದು ತಾವು ಈ ಬ್ರಹ್ಮ ಪುತ್ತಳಿ ನೋಡುವಾಗ ಉತ್ತರ ಭಾರತದ ವೃದ್ದ ದಂಪತಿಗಳು ಉದ್ಗರಿಸಿದ ಪ್ರಸಂಗವನ್ನು ಸೊಗಸಾಗಿ ವರ್ಣಿಸಿದ್ದಾರೆ ಲಾಸ್ ವೇಗಸ್ ನಿಂದ ಹಿಂದಿರುಗಿದ ನಂತರ ನಾನು ಆಲೂರರ ಪುಸ್ತಕ ಓದಿದೆ.....

Monday, November 27, 2006

Nov, 27...

Now you will feel no rain,
For each of you will be shelter to the other.

Now you feel no cold,
For each of you will be warmth to the other.

Now there is no more loneliness,
For each of you will be companian to the other.

Now you are two bodies,
But there is only one life before you.

Go now to your dwelling place
To enter into days of your togetherness
And may your days be good and long upon
The Earth

-Traditional Apache Wedding Prayer

******************************************
ಆಶೀರ್ವಾದಗಳು ಯಾವ ಭಾಷೆಯಲ್ಲಿದ್ದರೇನು? ಅವುಗಳ ಹಿಂದಿರುವ ಆಶಯ,ಭಾವ ಒಂದೇ...
ಅದು ನಮ್ಮ ಸಂಸ್ಕೃತವಾಗಲೀ ಅಥವಾ ಅಪಾಚಿ ಗಳ ಭಾಷೆಯಾಗಿರಲೀ...

Does it make any difference?
ನನಗಂತೂ ವ್ಯತ್ಯಾಸವೇನೂ ತೋರುವುದಿಲ್ಲ

ಇವತ್ತಿಗೆ ವರುಷಗಳ ಹಿಂದೆ ನಮಗೆ ಇಂಥ ಆಶೀರ್ವಾದಗಳು ನಮ್ಮ ನೆಲದಲ್ಲಿ ದೊರಕಿದ್ದವು
ಪುಣ್ಯ ವಿಶೇಷದಂತೆ ಅಚಾನಕ್ಕಾಗಿ ಇಂದು ಈ ಆಶೀರ್ವಚನ ಯಾವುದೋ ಹಳೆಯ ಪುಸ್ತಕದಲ್ಲಿ ಸಿಕ್ಕಿತು
And it made `Our' day....

Saturday, November 25, 2006

ಯಾರೇ ನೀನು ಚೆಲುವೇ...


ಯಾರೇ ನೀನು ಚೆಲುವೇ...ನಿನ್ನಷ್ಟಕ್ಕೆ ನೀನೇ ಏಕೆ ನಗುವೇ...?' ಅಂತ ಅಂಗಳದ ಬಂಗಾರದ ತಿಳಿ ಬಣ್ಣದ ಸೂರ್ಯನ ಬೆಳಕಲ್ಲಿ ನಗುತ್ತಿರುವ ಈ ಚೆಲುವೆಯನ್ನು ಕೇಳಿದೆ ಅದು ಸುಮ್ಮನೆ ನಕ್ಕು ತಲೆ ಅಲುಗಿಸಿತು ಎಂಥಾ ಚೆಲುವು! ಮನ ತುಂಬಿ ಬಂತು....

ಈ ವಾರವೆಲ್ಲಾ ನಾನು ಟುಲಿಪ್ ಹೂಗಳ ಮಾಲೆ ಪೋಣಿಸಿದ್ದು ನಿಮ್ಮ ಗಮನಕ್ಕೆ ಬಂದಿರಬೇಕು (ನೆನ್ನೆ Thanks giving shopping ಲ್ಲಿ busy ಆಗಿದ್ದರಿಂದ ಆಗಲಿಲ್ಲ sorryಅದಕ್ಕೆ ಎರಡು ಕಾರಣವಿದೆ ನೀವುಗಳು ಅಮಿತಾಭ್,ರೇಖಾ ಅಭಿನಯದ` ದೇಖಾ ಏಕ್ ಕ್ವಾಬ್...'ಎಂಬ ಸಿಲ್ ಸಿಲಾ ಸಿನಿಮಾದ ಹಾಡಿನಲ್ಲಿ ಟುಲಿಪ್ ಫೀಲ್ಡ್ ನೋಡೇ ಇರುತ್ತೀರಾ...ಆದ್ದರಿಂದ ನಿಮಗೆ ಬಿಡಿ ಹೂವಿನ ಸೊಬಗು ತೋರಿಸುವಾ ಅಂತ ನನಗನ್ನಿಸಿತು....

ಇದ್ಯಾವ ಟುಲಿಪ್ ಮೇನಿಯಾ ಇವಳಿಗೆ ಹಿಡಿಯಿತಪ್ಪಾ ಅಂಥ ನೀವು ಯೋಚಿಸಿರಬೇಕು( ಈ classic Tulip mania ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ) ನನಗೆ ಟುಲಿಪ್ ಹುಚ್ಚು ಹಿಡಿದು ಕೆಲವು ವರ್ಷಗಳೇ ಆದವು. ವಾರಪೂರ್ತಿ ನೀವು ನೋಡಿದ ಎಲ್ಲಾ ಚಿತ್ರಗಳ ಟುಲಿಪ್ ಗಳೂ ನನ್ನ ಅಂಗಳದಲ್ಲಿ ನಾನು ಕೈಯ್ಯಾರ ಬೆಳೆಸಿದವು ಪ್ರತಿಯೊಂದು ಗಿಡದ,ಹೂವಿನ ಜಾತಕ ,ನಕ್ಷತ್ರ ನನಗೆ ಗೊತ್ತು!

ಟುಲಿಪ್ ಗಳು ನೋಡಲು ಸುಂದರವಾದರೂ ಅವುಗಳನ್ನು ಬೆಳೆಸುವುದು ಅಷ್ಟು ಸುಲಭವಲ್ಲ...ಸ್ವಲ್ಪ ಮೈ ಕೈ ನೋವು ಮಾಡಿಕೊಳ್ಳಬೇಕುನೀವು ಯೋಚಿಸಿದ್ದು ಹಂಡ್ರೆಡ್ ಪರ್ಸೆಂಟ್ ಸರಿ ಈ ಮೈಕೈನೋವಿನ part ಅಂದ್ರೆ ನನಗೆ ಸ್ವಲ್ಪ ಉತ್ಸಾಹ ಕಡಿಮೆ ಬಾಯಿ ಮೊಸರಾಗಬೇಕು ಅಂದ್ರೆ ಹೇಗೆ ಕೈ ಕೆಸರು ಮಾಡಿಕೊಳ್ಳಲೇ ಬೇಕೋ ಸೇಮ್ ಅದೇ ತರ ಸುಂದರ ಟುಲಿಪ್ ನೋಡಬೇಕೂ ಮತ್ತು ನಿಮಗೆಲ್ಲ ತೋರಿಸಬೇಕೂ ಅಂದ್ರೆ ಸ್ವಲ್ಪ ಮೈನೋವು ಮಾಡಿಕೊಳ್ಳಬೇಕು!

ಆದರೆ ಈ ಕೆಲಸಕ್ಕೆ ಸ್ವಲ್ಪ ಸ್ಪೂರ್ತಿ ಬೇಕಲ್ಲಾ ಅಂತ ನನಗೆ ಒಂದಿಷ್ಟು `Enthu'ಬರಿಸಿ ಕೊಳ್ಳೋಣ ವೆಂದು 2006 ವಸಂತದಲ್ಲಿ ನಮ್ಮ ಅಂಗಳದಲ್ಲಿ ಅರಳಿದ ಹೂಗಳ ಫೋಟೋ ನೋಡುತ್ತಿದ್ದೆ ಮತ್ತು ನಿಮಗೂ ತೋರಿಸಿದೆ ಇದು ಈ ಟುಲಿಪ್ ವೀಕ್ ಮಾಡಲು ಮೊದಲ ಮತ್ತು ಮುಖ್ಯವಾದ ಕಾರಣ!

ಸಾಮಾನ್ಯವಾಗಿ ಪ್ರತೀ ವರ್ಷ ನಾನು Thanks giving week end ನನ್ನ Fall planting(ಮುಖ್ಯವಾಗಿ Tulips ಮತ್ತು Daffodils) ಶುರು ಮಾಡುತ್ತೇನೆ ಈ ವರ್ಷವೂ ಈಗ ಪ್ರಾರಂಭಿಸ ಬೇಕಿದೆ...

Thanks giving ಅಂತ ನಾವು ಭಾರತೀಯರು Traditional ಆಗಿ Turky ತಿನ್ನುವುದಿಲ್ಲವಾದರೂ ಇಲ್ಲಿ ಎಲ್ಲರ ಮನೆಯಲ್ಲೂ ಮಸಾಲೆ ದೋಸೆಯೋ ಇನ್ನೇನೋ ವಿಶೇಷವೋ ನಡೆದೇ ಇರುತ್ತೆ ಜೊತೆಗೆ ಸಖತ್ತು Thanks giving shopping!
ನನ್ನಂಥಾ ಹೂವು ಪ್ರೇಮಿಗಳಿಗೆ additional ಸಂಭ್ರಮ ಈ Tulip planting

So happy Thanks giving

and happy Fall planting!

Thursday, November 23, 2006

ಅವಳ ನೆನಪು ತಂದ ಹೂವು...


ಎಲ್ಲೆಡೆ ಹಸಿರು ಚಿಗುರು... ಸಾಲು ಸಾಲು ಬಣ್ಣದ ಹೂಗಳು...ಹಿತವಾಗಿ ಬೀಸುತ್ತಿರುವ ಗಾಳಿ... ಭೂಮಿ ಗೆ ಹೊಸ ಹರೆಯ ಬಂದಂತೆ... ಈ ಕಡುಗೆಂಪು ಹೂಗಳನ್ನು ನೋಡಿ ಅವನ ನೊಂದ ಮನ ಏನನ್ನೋ ನೆನೆದು ಹೀಗೆ ನಿಟ್ಟುಸಿರಾಗುತ್ತದೆ...

ಮಧು ಪಾತ್ರೆಯ ಮೈಮಾಟ
ಹೊಂದಿರುವ
ಕೆಂಪು ಹೂವೇ
ಅವಳ
ತುಟಿಗಳ
ನೆನಪು ತಂದು
ಕೆಂಡದಂತೆ
ನನ್ನನ್ನೇಕೆ ಸುಡುವೆ?

ಟಿಪ್ಪಣಿ-ಈ ಹೂವುಗಳೊಂದಿಗೆ ಹಾಕೋಣವೆಂದರೆ ನನಗೆ ಯಾವ ಹಾಡೂ ನೆನಪಿಗೆ ಬರಲಿಲ್ಲ
ಹಾಡು ಹುಡುಕುವುದಕ್ಕಿಂಥಾ ಹಾಡು ಬರೆಯುವುದೇ ಕಮ್ಮಿ ಸಮಯ ಹಿಡಿಯುತ್ತದೆಂದು ತೋರಿತು
ನೀವೀಗ ಓದಿದ್ದು `ಸಂತೆ ಹೊತ್ತಿಗೆ ಮೂರು ಮೊಳ ನೇಯುವುದು' ಅಂತಾರಲ್ಲಾ ಹಾಗೆ ಈಗಷ್ಟೇ (ಫಾರ್ಸಿ ಕವಿತೆಗಳ ಪ್ರಭಾವದಿಂದ) ನಾನು ಬರೆದ ಅತಿ ಫ್ರೆಶ್ ಹರುಕು ಮುರುಕು ಕವಿತೆ! ಹೇಗಿದೆ?

ಈ ವಾರದ ಪೋಸ್ಟಿಂಗ್ ಗಳಲ್ಲಿರುವ ಒಂದು ವಿಶೇಷವನ್ನು ನಿಮ್ಮಲ್ಲಿ ಎಷ್ಟು ಜನ ಗಮನಿಸಿದಿರಿ?

Wednesday, November 22, 2006

ಚಿಟ್ಟೆಗೆ ಬಣ್ಣವ ಕಲಿಸುವ ಹೂವೇ...


ಚಿಟ್ಟೆಗೆ ಬಣ್ಣವ ಕಲಿಸುವ ಹೂವೇ
ಕಲಿಸು ಕಲಿಸು ಗೊಂಚಲೊಳೇ ಬಿಡುವೆ
ಹಾಡಿಗಿಂತಲೂ ಮೌನವೇ ಸವಿಯಿನೆ
ದುಂಬಿಯ ತಂಗಿಸಿದೆಯ ಮೊಲ್ಲೆನೆನೆ
- ಪು.ತಿ.ನ

Tuesday, November 21, 2006

ಸಂಜೆ ಬಾನ ಬಣ್ಣ ಕಂಡೆ ಕೆನ್ನೇಲಿ...


ಸಂಜೆ ಬಾನ ಬಣ್ಣ ಕಂಡೆ ಕೆನ್ನೇಲಿ
ಕಂಡೆ ಚಂದ್ರ ತಂದ ಕಾಂತಿ ನಿನ್ನ ಕಣ್ಣಲ್ಲಿ

ಸಂಜೆ ಬಾನ ಬಣ್ಣ ಕಂಡೆ ಕೆನ್ನೇಲಿ
ಕಂಡೆ ಚಂದ್ರ ತಂದ ಕಾಂತಿ ನಿನ್ನ ಕಣ್ಣಲ್ಲಿ

ನೀ ನುಡಿದರು ಸೊಗಸು
ಮೌನವು ಸೊಗಸು
ಎಲ್ಲ ಸಂಗೀತವೇ...

Monday, November 20, 2006

ಚಂದ್ರಮುಖಿ


ಚಂದ್ರನ ಚೆಲುವಿಗೆ ಚಂದ್ರನೆ ಸಾಟಿ
ಹೋಲಿಸಲಾರಿಲ್ಲಾ......

ಸರೀನೇ.....

ಆದರೆ ನಿನ್ನ ನೋಡಿದಾಗ ನನಗೆ ಚಂದ್ರನ ನೆನಪಾಯಿತಲ್ಲಾ ಚಂದ್ರಮುಖೀ...

Friday, November 17, 2006

ಅನುಪಮ ಚೆಲುವು ಮಿನುಗಿ ...

ಅನುಪಮ ಚೆಲುವು ಮಿನುಗಿ ಬೆರಗಾದೆ

ತೇಲಿ ಬಂದ ನಿನ್ನ ಅಂದ

ತೇಲಿ ಬಂದ ನಿನ್ನ ಅಂದ

ಇಂದೆ ಕಂಡೆ ಸೆರೆಯಾದೆ

Thursday, November 16, 2006

ಇಟ್ಸಿ ಬಿಟ್ಸಿ ಸ್ಪೈಡರ್

ನನಗೊಂದು ಚಿತ್ರ ಬರ್ಕೊಡ್ತೀಯಾ?
`ya....'
`ಯಾವ ಚಿ.....' ನಾನಿನ್ನೂ ಮಾತು ಮುಗಿಸಿರಲಿಲ್ಲ
`I'm going to draw a spider for you...' ಅನೀಶ್ ಅದಾಗಲೇ ನಿರ್ಧರಿಸಿ ಆಗಿತ್ತು! ಹೂವೋ, ಸೂರ್ಯಾನೋ , ಹಕ್ಕಿಗಳೋ expect ಮಾಡಿ ಅವನ ಮನೆಗೆ ಹೋದ ನನಗೆ 3ರ ಚಿಲ್ಟು ಅನೀಶ್ ಒಂದು ಸಣ್ಣ ಷಾಕ್ ಕೊಟ್ಟಿದ್ದು ಹೀಗೆ!

ಅನೀಶ್ ಗೆ ಅವನಿಗೆ ಲೈಫ್ನಲ್ಲಿ ಏನು ಬೇಕೆಂದು ಚೆನ್ನಾಗಿ ಗೊತ್ತು ಅವನಿಗೆ ಇಷ್ಟ ಆಗಿದ್ದನ್ನು `I like that' ಅಂತ ತನ್ನ ಮೆಚ್ಚುಗೆ ಹೇಳುತ್ತಾನೆ ತನಗೆ ಹಿಡಿಸದ್ದನ್ನು ಜಪ್ಪಯ್ಯಾ ಅಂದ್ರೂ ಒಪ್ಪುವುದಿಲ್ಲ `I don't like that' ಅಂತ ಧೃಡವಾಗಿ ಹೇಳಿಬಿಡುತ್ತಾನೆ confusion ಗೆ ಜಾಗವೇ ಇಲ್ಲ! ಅವನಿಗೆ ಹಿಡಿಸದ್ದನ್ನು ಬಲವಂತವಾಗಿ ಅವನಿಂದ ಮಾಡಿಸಲು ಯತ್ನಿಸಿದರೆ`It won't work that way...' ಅಂತ ಕೈಆಡಿಸಿ ಬಿಡುತ್ತಾನೆ

ಅನೀಶ್ ಗೆ `ಮಮ್ ಮಮ್ ಅಂಗಡಿ' ಗೆ ಹೋಗೋದು ತುಂಬಾ ಇಷ್ಟ.`ಅಲ್ವೋ ನಿಮ್ಮಮ್ಮನೇ ಅಷ್ಟು ಚೆನ್ನಾಗಿ ಮಾಡಿ ಕೊಡ್ತಾಳಲ್ಲೋ' ಅಂತ ನಾನು ಅಂದಾಗ `But i like "AngaDi mum mum" mala aunty...' ಅಂತಾ ಬದಲು ಹೇಳಿದ !


ಅನೀಶ್ ನನಗೆ ಬರೆದು ಕೊಟ್ಟ Spider ಸಂಸಾರದ ಚಿತ್ರ ನೋಡುತ್ತಾ ಕೇಳಿದೆ
Have you seen spider?
`Ya....'
`Where ...?'
`On the ಗೋಡೇ...' ಅವನ `ಗೋಡೆ ಪ್ರಯೋಗ' ಕೇಳಿ ನನಗೆ ನಗು ಬಂತು... ತಡೆದುಕೊಂಡು ಕೇಳಿದೆ
'`Do you like spiders?
`ya....'
`Ooooo....really....?
`But I'm scared too...' ಬಾಲಂಗೋಚಿ ಸೇರಿಸಿದ
`Do you catch them? ಕುತೂಹಲ ನಟಿಸುತ್ತಾ ಕೇಳಿದೆ
`No....Appa catches them... and puts in the.....' ತನ್ನ ಎರಡೂ ಕೈಗಳಿಂದ ಅಭಿನಯಿಸುತ್ತಾ `then I flush them.....' ಅಂದ!

The Itsy Bitsy Spider

The itsy bitsy spider
Climbed up the waterspout.
Down came the rain
And washed the spider out.
Out came the sun
And dried up all the rain.
And the itsy bitsy spider
Climbed up the spout again.


ಅನೀಶ್ ಗೆ ಪುಸ್ತಕಗಳು ಮತ್ತು ಚಕ್ಕುಲಿ,ಕೋಡು ಬಳೆ ಅಂದ್ರೆ ಪಂಚ ಪ್ರಾಣ.ಅವರ ಮನೆಗೆ ಹೋದವರೆಲ್ಲಾ ಅವನಿಗೆ ಒಂದೆರಡು ಪುಸ್ತಕಗಳನ್ನು ಓದಲೇ ಬೇಕು ಎಂಬುದು ಅವನ ರೂಲ್ಸು! ನಾವುಗಳೇನಾದ್ರೂ ಸೋಮಾರಿತನ ಮಾಡಿ ಪುಟ ಹಾರಿಸಿದ್ರೆ ಅವನಿಗೆ ತಕ್ಷಣ ಗೊತ್ತಾಗಿಬಿಡುತ್ತೆ! ಪನಿಶ್ಮೆಂಟ್ ಥರಾ ಮತ್ತೆ ಮೊದಲಿಂದ ಓದಿಸುತ್ತಾನೆ!

ಒಂದು ಸಂಜೆ ಅನೀಶ್ ಜೊತೆ ಮೆಟ್ಟಿಲ ಮೇಲೆ ಕೂತಿದ್ದೆ.ಅವನ ಅಜ್ಜಿ ಹತ್ರ ಎಷ್ಟು ಚಕ್ಕುಲಿ ವಸೂಲು ಮಾಡಿ ತಿಂದೆ ಅಂತ ನನಗೆ ವಿವರಿಸುತ್ತಿದ್ದ ಆಗ ಅಲ್ಲಿಗೊಂದು ಬೆಕ್ಕು ಮಿಯಾವ್ ಗುಟ್ಟುತ್ತಾ ಬಂತು `ಮಾಲಾ ಆಂಟಿ...ಮಿಯಾವ್..' ಅಂತ ತೋರಿಸಿದ.`ಹೌದು..' ಅಂತ ತಲೆ ಆಡಿಸಿದೆ ನಂತರ ಬೆಕ್ಕು ಎಲ್ಲೋ ಓಡಿಹೋಯಿತು....
`ಮಿಯಾವ್ ಎಲ್ಲಿ ಹೋಯ್ತು ಅನೀಶ್..?' ಕೇಳಿದೆ
ಅನೀಶ್ ಒಂದೆರಡು ಕ್ಷಣ ಯೋಚಿಸಿ ನಿಧಾನವಾಗಿ ಹೇಳಿದ `ಮಿಯಾವ್ ಆಫೀಸ್ ಗೆ ಹೋಯ್ತು.......'

ಚಿಣ್ಣರ ವಿಶೇಷಕ್ಕೆ ಚಿತ್ರ ಬರೆದು ಕೊಟ್ಟ ಅನೀಶ್ ಗೆ ಬರೆಯಿಸಿ ಕೊಟ್ಟ ಅವನ ಅಮ್ಮ ಶುಭಾ ಗೆ ಥ್ಯಾಂಕ್ಸ್

ಚಿಣ್ಣರ ದಿನ ವಿಶೇಷ-3

Wednesday, November 15, 2006

ಒಂದಿಷ್ಟು ಮುತ್ತು ನುಡಿಗಳು



ಕಣ್ಣು ಅರಳಿಸಿ ನಗುತ್ತಿದ್ದ ಮಗುವನ್ನು ಕೇಳಿದೆ`ಯಾರೇ ನೀನು?
'ನಾನ...? ನಮ್ಮನೆ ರೌಡಿ...' ಪಟ್ ಅಂತ ಹೇಳಿತು ತುಂಟಿ!
ಆ ತುಂಟಿಗೆ ಅವಳ ಹುಟ್ಟು ಹಬ್ಬಕ್ಕೆಂದು ಈ ಚೆಂದದ ಫ್ರಾಕ್ ಸೆಟ್ ಹೆಣೆದು ಕಳಿಸಿಕೊಟ್ಟು ಇದನ್ನ ಹಾಕಿಕೊಂಡಾಗ ಮಗು ಹೇಗೆ ಕಾಣಬಹುದೆಂದು ಕಣ್ಣಲ್ಲೇ ಕಲ್ಪಿಸಿಕೊಂಡು ಖುಶಿ ಪಟ್ಟೆ
***********************
ಅಕ್ಕನ ಮಗು ಶ್ರೀನಿಧಿಯನ್ನು ಆಡಿಸುತ್ತಿದ್ದೆ`ಚಿತ್ತಿ...ಢಾಗೆ' ಅಂದ ನನಗೇನೂ ಅರ್ಥವಾಗಲಿಲ್ಲ
ಚಿತ್ತಿಯ ಪೆದ್ದುತನಕ್ಕೆ ಮರುಕ ಪಡುತ್ತಾ `ಢಾಗೆ ಢಾಯ್ ಢಾಯ್ ಅನ್ನುತ್ತೆ' ಅಂತ ವಿವರಿಸಿದ ನನ್ನ ಕನ್ಫ್ಯೂಶನ್ ಜಾಸ್ತಿ ಆಯ್ತು!`ಡಪ್ಪುದು...' ವರ್ಣಿಸಿದ ನಾನು ತುಟಿ ಮುಂದೆ ಮಾಡಿ ಅಡ್ಡಡ್ಡ ತಲೆ ಆಡಿಸಿದೆ ಅವನು ಲಕ್ಷ್ಯ ಕೊಡದೆ ಮುಂದುವರೆಸಿದ...`ಪೋಪ್ ಬೇತಾ ಅಂದೆ...' ನನ್ನ ತಲೆ ಪೂರ್ತಿ ಕೆಟ್ಟು ಹೋಯಿತು!

`ನಿನ್ನ ಮಗ ಮಾತಾಡುವ ಗ್ರೀಕ್ ಅಂಡ್ ಲ್ಯಾಟಿನ್ ನನಗರ್ಥ ಆಗಲ್ಲ ಕಣೆ' ಎಂದೆ ಅಕ್ಕನಿಗೆ.`ಅವನು ಚಿತ್ತಿ ಅಂದಾಗಲೇ ನಿನಗೆ ಅರ್ಥ ಆಗುತ್ತೆ ಅಂದ್ಕೊಂಡೆ ಗೊತ್ತಾಗಲಿಲ್ವಾ ದಡ್ಡಿ ನೀನು..' ಅಂತ ತನ್ನ ಮಗನನ್ನು ವಹಿಸಿಕೊಂಡು ನನ್ನನ್ನೇ ದಡ್ಡಿ ಮಾಡಿದಳು ನನ್ನ ಅಕ್ಕ!

ನಂತರ ತನ್ನ ಮಗರಾಯನ ಮುತ್ತು ನುಡಿಗಳನ್ನು ನನಗರ್ಥವಾಗುವ ಕನ್ನಡದಲ್ಲಿ ಹೇಳಿದಳು``ಚಿತ್ತಿ ಅನ್ನುವುದು ಚಿಕ್ಕಿಯನ್ನು(ಚಿಕ್ಕಮ್ಮನ ಶಾರ್ಟ್ ಫಾರ್ಮ್!) ಅವನು ಹೇಳುವ ರೀತಿ ಅವನಿಗೆ `ಕ' ಅಕ್ಷರ ಬರುವುದಿಲ್ಲ ಅಂತ ತಿಳೀಲಿಲ್ವೇ...' ಮತ್ತೆ ಢಾಗೆ?' ಅಂದೆ ಒಂದು ಸಣ್ಣ ರೂಲು ನೆನಪಿಟ್ಕೋ`ಪದದ ಮೊದಲಲ್ಲಿ ಕ ಬಂದ್ರೆ ಅದನ್ನ `ಡ' ನಿಂದ ರೀಪ್ಲೇಸ್ ಮಾಡ್ತಾನೆ ಕೊನೆಯಲ್ಲಿ ಬಂದ್ರೆ `ತ' ನಿಂದ...'
ತಲೆ ಅಲ್ಲಾಡಿಸಿದೆ `ಅವನಿಗೆ `ಸ' ಕೂಡಾ ಬರುವುದಿಲ್ಲ ಸೋ `ಸ' ಅಕ್ಷರವನ್ನ `ಪ'ದಿಂದ ರಿಪ್ಲೇಸ್ ಮಾಡ್ತಾನೆ `ಓಹೋ...ವ್ಯಾಟಿಕನ್ನಿನ ಪೋಪ್ ನಿಮ್ಮನೇಲಿ ಲಕ್ಸ್ ಸೋಪಲ್ಲಿ ಸ್ನಾನ ಮಾಡ್ತಾರೆ ಹಾಗಾದ್ರೆ...' ಅಂದೆ `ಅಯ್ಯೋ ಪೋಪ್ ಗಲ್ವೇ ಸ್ನಾನ ಮಾಡ್ತೀಯಾ ಅಂತ ಅವ್ನು ಕೇಳಿದ್ದು....ಕಪ್ಪು ಕಾಗೆಗೆ....' ಅಂದಳು! ಅಂತೂ `ಡಪ್ಪು ಢಾಗೆಯ' ಅರ್ಥ ಗೊತ್ತಾಯಿತು ಕೆಲವು ಸಾರಿ ನನ್ನ ಮಗ `ವ' ಜಾಗದಲ್ಲಿ ಯ' ಹೇಳ್ತಾನೆ...' ಮುಂದುವರೆಸಿದಳು... ನನ್ನ ತಲೆ ಕೆಟ್ಟು ಮೊಸರಾಗಿ `ಇದ್ಯಾವುದೋ ನನಗೆ ಬಾರದ `ಹೊಸ ಕನ್ನಡ' ಅಂತ ಮನದಟ್ಟಾಯಿತು...

******************************

ನಮ್ಮ ಬಳಗದ ಪುಟಾಣಿ ಚಿದಂಬರನಿಗೆ `ರ' ಅಕ್ಷರ ಹೇಳಲು ಬರುವುದಿಲ್ಲ ಮತ್ತು ಅದು ಅವನಿಗೆ ಗೊತ್ತು!ನಿನ್ ಹೆಸರೇನೋ ಮರಿ?' ಅಂತ ಯಾರಾದ್ರೂ ಅವನನ್ನ ಕೇಳದ್ರೆ`ನನ್ ಹೆಸ್ಲು ಚಿದಂಬವ ಆದ್ಲೆ ನಂಗೆ `ವ' ಹೇಳಕ್ಕೆ ಬಲಲ್ಲ' ಅಂತ ಅಂದು ಬಿಡುತ್ತಾನೆ!

*******************************
ನನ್ನ ಸ್ನೇಹಿತೆಯ ಅಣ್ಣನ ಮಗಳು ಪ್ರಿಯಾ .ಪ್ರಿಯಾಗೆ ಎದುರು ಮನೆಯಲ್ಲಿನ ಲೋಕೇಶ ಸ್ಕೂಲ್ ಮೇಟ್ ಕಂ ಪ್ಲೇ ಮೇಟ್.ಲೋಕೇಶ ಪ್ರಿಯಾಳನ್ನು `ಪಿಯಾ' ಅಂತಾನೂ ಪ್ರಿಯಾ, ಲೋಕೇಶನನ್ನು `ಲೋತೆಕ' ಅಂತಾನೂ ಕರೆದು ಕೊಳ್ಳುತ್ತಾರೆ.ಇಬ್ಬರೂ ಒಟ್ಟಿಗೆ ಆಡುತ್ತಾರೆ,ಸ್ಕೂಲ್ ಗೆ ಹೋಗುತ್ತಾರೆ

ಒಂದು ದಿನ ಪ್ರಿಯಾ ಮನೆ ಮುಂದೆ ಹಸುವೊಂದು ಸಗಣಿ ಹಾಕಿ ಹೋಯಿತು ಅವರ ಮನೆಗೆ ಆಡಲು ಬಂದ ಲೋಕೇಶ ಪ್ರಿಯಾನ್ನ ಕೇಳಿದ
ಪಿಯಾ...ಇದು ಯಾಲು ಮಾಡಿದ್ದು ಹೇಲು...?
`ಇದು ಹೇಲಲ್ಲ ಲೋತೆಕಾ...ಇದು ಅಂಬಕಕ್ಕ...'ಪ್ರಿಯಾ ಹೇಳಿದಳು
ಲೋಕೇಶ ಪಟ್ಟು ಬಿಡದೆ `ಇದು.. ಯಾಲು.. ಮಾಡಿದ್ದು.. ಹೇಲೂ..?' ಎಂದು ಪ್ರತಿ ಪದವನ್ನು ಒತ್ತೊತ್ತಿ ಹೇಳುತ್ತಾ ಮತ್ತೆ ಮತ್ತೆ ಕೇಳುತ್ತಿದ್ದ
ಪ್ರಿಯಾ ಕೂಡಾ ಅದೇ `ಇದು ಹೇಲಲ್ಲ...ಅಂಬ ಕಕ್ಕ'ಎಂಬ ಉತ್ತರವನ್ನ ಮತ್ತೆ ಮತ್ತೆ ಹೇಳುತ್ತಿದ್ದಳು
ಕೇಳಿಸಿ ಕೊಳ್ಳಕ್ಕೆ ತಮಾಶೆ ಯಾಗಿತ್ತು ಅಂತ ನನ್ನ ಸ್ನೇಹಿತೆ ನನಗೆ ಈ ಸಂಗತಿನ್ನ ಹೇಳಿದಳು
*********************************
ನನ್ನ ಇದೇ ಸ್ನೇಹಿತೆ ಒಂದು ಬೆಳಗ್ಗೆ ಪ್ರಿಯಾ ಮತ್ತು ಲೋಕೇಶ ಇಬ್ಬರನ್ನೂ ಶಾಲೆಗೆ ಬಿಡಲು ಕರೆದು ಕೊಂಡು ಹೋಗುತ್ತಿದ್ದಳು ಇಬ್ಬರೂ ಮೆಲ್ಲಮೆಲ್ಲಗೆ ಹೆಜ್ಜೆ ಹಾಕುತ್ತಾ ದಾರಿಯಲ್ಲಿ ಕಾಣುವ ನೂರೊಂದು ನೋಟಗಳಿಗೆ ತಮ್ಮದೇ ವಿವರಣೆ ಕೊಡುತ್ತಾ ನಡೆಯುತ್ತಿದ್ದರು
ಲೋಕೇಶ ಕೈ ತೋರಿಸಿ ಹೇಳಿದ `ನೋಡು ಪಿಯಾ...ಲಾಲಿ...' ಪ್ರಿಯಾ ತನ್ನ ಪುಟ್ಟ ಕೈಗಳಿಂದ ದೊಡ್ಡವರ ಸ್ಟೈಲ್ನಲ್ಲಿ ಹಣೆ ಚಚ್ಚಿಕೊಳ್ಳುತ್ತಾ ಹೇಳಿದಳು`ಅಯ್ಯೋ ಅದು ಲಾಲಿ ಅಲ್ಲ ಲೋತೆಕಾ...ಅದು ಲಾಡೀ...'
ಶಾಲೆಗೆ ತಡವಾಗುತ್ತಿದೆ ಎಂಬ ಗಮನವೇ ಇಲ್ಲದೇ ಲಾಲಿ/ಲಾಡಿಯ ಚರ್ಚೆ ಮಾಡುತ್ತಿದ್ದ ಇಬ್ಬರನ್ನೂ `ಅದು ಲಾಲೀನೂ ಅಲ್ಲ ಲಾಡೀನೂ ಅಲ್ಲ... ಲಾರಿ... ನಡೀರಿ ಇನ್ನ' ಅಂತ ಗದರಿಸಿ ನನ್ನ ಸ್ನೇಹಿತೆ ಶಾಲೆ ಕಡೆಗೆ ಎಳೆದುಕೊಂಡು ಹೋದಳು....

ಚಿಣ್ಣರದಿನ ವಿಶೇಷ-2

Tuesday, November 14, 2006

ಬೆಳ್ ಬೆಳಕಿನ ಮಲ್ಲಿಗೆ



ನೋಡಮ್ಮಾ ಮುಗಿಲ ತುಂಬ ಬೆಳ್ ಬೆಳಕಿನ ಮಲ್ಲಿಗೆ

ಹಾರಿ ಹೋಗಿ ಕಿತ್ತು ತಂದು ಮುಡಿಸಲೇನು ತುರುಬಿಗೆ

ನಮ್ಮ ಮನೆಯ ಅಂಗಳದಲಿ

ಅರಳಿ ನಗುವ ಹೂವಿಗಿಂಥ

ದೊಡ್ಡವೇನೆ ಅವುಗಳು?

ಹಸಿರು ನೆಲದ ಮೇಲೆ ಅರಳಿ

ನಗುವ ಬದಲು ಅಷ್ಟು ಮೇಲೆ

ಹೋದವೇಕೆ ಅವುಗಳು?

ನಾನೆ ದೇವರಾಗಿದ್ದರೆ

ಚುಕ್ಕಿ ಎಲ್ಲ ನಮ್ಮೂರಿನ

ಮನೆಮನೆಯ ಅಂಗಳದಲಿ

ಅರಳುವಂತೆ ಸೃಷ್ಟಿ ಮಾಡುತಿದ್ದೆನು

ಅಷ್ಟು ತಿಳಿಯಲಿಲ್ಲವೇನೆ

ಜಗವ ಮಾಡಿದಂಥ ದೇವ,

ನಿಜವಾಗಿಯು ದಡ್ಡನು

-ರಾಷ್ಟ್ರ ಕವಿ ಜಿ.ಎಸ್.ಶಿವರುದ್ರಪ್ಪ

ಇವತ್ತಿನ ಪೋಸ್ಟಿಂಗ್ ಗಾಗಿ ವಿಶೇಷವಾಗಿ ಚಿತ್ರ ಬರೆದು ಕೊಟ್ಟಿದ್ದು 5 ವರ್ಷದ ಸಾತ್ವಿಕ್.ನಮ್ಮೂರು ಸನ್ನಿವೇಲ್ ನ Startford ಶಾಲೆಯಲ್ಲಿ pre-K ಓದುತ್ತಿರುವ ಸಾತ್ವಿಕ್ ಗೆ Thomas train ಅಂದ್ರೆ ಪಂಚ ಪ್ರಾಣ.ಈಗ್ಗೆ ಕೆಲವು ದಿನಗಳ ಹಿಂದೆ Thomas train ನ ಯಾವ ಯಾವ friend trainಗಳನ್ನ ಕ್ರಿಸ್ಮಸ್ಸು,ಅವರಪ್ಪ ಊರಿಗೆ ಹೋಗಿದ್ದಾಗ ಅವನು ಗುಡ್ ಬಾಯ್ ತರ ಇದ್ದದ್ದಕ್ಕೆ,ಅವನ ಬರ್ತ್ ಡೇ ಗೆ ಅಂತೆಲ್ಲಾ ಹೇಳಿ ತನ್ನ ಅಪ್ಪ ಅಮ್ಮನ ಹತ್ರ ವಸೂಲು ಮಾಡುತ್ತೀನಿ ಅಂತ ಮುಂದಿನ ಮೂರು ವರ್ಷಕ್ಕೆ ಅವನು ಮಾಡಿಟ್ಟಿರುವ plan ನನಗೆ ಹೇಳಿದ ! ಕೇಳಿ ನಾನು ದಂಗು ಬಡಿದು ಹೋದೆ!

ಸಾತ್ವಿಕ್ ತುಂಬಾ ಹೆಲ್ತ್ ಕಾನ್ಶಿಯಸ್ಸು! ನಾವುಗಳೆಲ್ಲಾ ಬುಫೆ ಊಟದಲ್ಲಿ pizza ಅದೂ ಇದೂ ಅಂತ hi-calorie ಹಾಳು ಮೂಳು ತಿನ್ನುತ್ತಿರುವಾಗ ಅವನಿಗೆ ಯಾರೂ ಹೇಳದೆಯೇ ತಾಜಾ ತರಕಾರಿಗಳ ಹಸಿರು ಸಾಲಡ್ ತಿನ್ನುತ್ತಿರುತ್ತಾನೆ ಮತ್ತು Broccoli ಅವನ ಫೇವರೆಟ್ (Seinfeld ನೆನಪಿಗೆ ಬಂತೇ...?) ಅವನ ಬಗ್ಗೆ ಇರುವ ಒಂದೇ ಒಂದು ಕಂಪ್ಲೇಂಟ್ ಅಂದ್ರೆ ಅವನು ಅಮ್ಮಕೂಚಿ ಮತ್ತು ಮೂಡಿ!

ಈಗ ಕೆಲವು ದಿನಗಳಿಂದ ರಾಮಾಯಣದ ವಿ.ಸಿ.ಡಿ ಪ್ರಭಾವದಿಂದ ಆಟದ ಪ್ಲ್ಯಾಸ್ಟಿಕ್ ಕಡ್ಡಿಗಳಿಂದ ತಾನೇ ಬಿಲ್ಲು ಬಾಣ ಮಾಡಿ ಕೊಂಡಿದ್ದಾನೆ.ಅಥವಾ ತಾನು ಮಾಡಿಕೊಂಡಿರುವುದನ್ನು ಬಿಲ್ಲು ಬಾಣ ಅಂತ ನಂಬಿಕೊಂಡಿದ್ದಾನೆ ಮತ್ತು ಅವರ ಮನೆಗೆ ಹೋದವರಿಗೆಲ್ಲಾ ಹಾಗಂತ ಹೇಳಿ ಅದನ್ನ ತೋರಿಸುತ್ತಾನೆ.ಕೆಲವು ಸಲ ತಾನು ರಾಮ ಎಂದೂ,ಕೆಲವು ಸಲ ಲಕ್ಷ್ಮಣ ಎಂದೂ ಮತ್ತು ಸಾಮಾನ್ಯವಾಗಿ ತಾನು ಹನುಮಂತ ಎಂದು ಹೇಳಿ ಕೊಳ್ಳುತ್ತಿರುತ್ತಾನೆ

ಇವತ್ತಿನ `ಚಿಣ್ಣರ ದಿನ ವಿಶೇಷ'ಕ್ಕಾಗಿ ಚಿತ್ರ ಬರೆದು ಕೊಟ್ಟ ಸಾತ್ವಿಕ್ ಗೆ ಮತ್ತು ಬರೆಯಿಸಿ ಕೊಟ್ಟ ಅವನ ಅಮ್ಮ ರಶ್ಮಿಗೆ ಥ್ಯಾಂಕ್ಸ್

Monday, November 13, 2006

ಕನ್ನಡ ರಾಜ್ಯೋತ್ಸವ ಮತ್ತು ಕ್ಯಾರೆಟ್ ಹಲ್ವ


ಈ ಸಲದ ರಾಜ್ಯೋತ್ಸವ ಐವತ್ತನೇದಂತೆ ನಿನ್ನ ಬ್ಲಾಗ್ ನಲ್ಲಿ ಸ್ಪೆಷಲ್ ಏನು ಮಾಡ್ತಿದೀಯಾ...?
ಭೂತದ ಹಬ್ಬದ ಸಂಜೆ ಅರವಿಂದ ಕೇಳಿದ ನಾನು ...ಕೆ.ಎಸ್.ನರಸಿಂಹ ಸ್ವಾಮಿ ಅಂತ ಒಬ್ಬರು ಕನ್ನಡದ ಹೆಸರುವಾಸಿ ಕವಿ...ಅವರ ಒಂದು ಸೊಗಸಾದ ಕವನ ತಕ್ಕೊಂಡು....ಅದಕ್ಕೆ ನಾನು ಆರಿಸಿಟ್ಟಿರುವ ಚಿತ್ರಗಳೂ...ಅಂತೆಲ್ಲಾ ಹೇಳಿದೆ
ಅದಕ್ಕವನು ಮೂತಿ ಸೊಟ್ಟ ಮಾಡಿ ಹೇಳಿದ `ಫೇಮಸ್ ಕವಿಯೊಬ್ಬರ ಒಂದು ಪೊಯಮ್ ತಗೊಂಡು ಮೈಸೂರು ಪಾಕನ್ನು ತುಂಡು ಮಾಡಿದ ತರ ತುಂಡು ತುಂಡು ಮಾಡಿ ಒಳ್ಳೇ ಡಯಟ್ ಮಾಡಿಸಿದಂತೆ ದಿನಾ ಒಂದೊಂದು ತುಂಡು ಹಾಕಿಬಿಟ್ಟರೆ ಅದೆಂಥಾ ವಿಶೇಷ? ಕರ್ನಾಟಕ ಗೌರ್ನಮೆಂಟಿನ ಯಾವುದೋ ಪೋಪಟ್ ಪ್ಲ್ಯಾನ್ ತರ ಇದೆ...' ಅಂದು ಬಿಟ್ಟ ನನಗೆ ಭಯಂಕರ ಸಿಟ್ಟು ರೇಗಿತು...ಗುರ್ ಗುರ್ ಅಂದೆ
`ಸರ ಸರಿ...ನೀನುಂಟು ನಿನ್ನ ಬ್ಲಾಗ್ ಉಂಟು ಏನಾದ್ರೂ ಮಾಡ್ಕೋ...ಕಿಚನ್ನಲ್ಲಿ ಏನು ಮಾಡ್ತಿದೀಯಾ ಅದನ್ನ ಹೇಳೂ...' ಅಂದ ನಾನು ಯಾವಾಗಲೋ ಬಾಯಿತಪ್ಪಿ`ನಮ್ಮಮ್ಮ ಪ್ರತಿವರ್ಷ ಆಗಸ್ಟ್ ಹದಿನೈದಕ್ಕೆ,ಜನವರಿ ಇಪ್ಪತ್ತಾರಕ್ಕೆ ಮತ್ತು ನವಂಬರ್ ಒಂದಕ್ಕೆ ತಪ್ಪದೆ ಸಿಹಿ ಮಾಡುತ್ತಿದ್ರೂ ಗೊತ್ತಾ...' ಅಂತ ಕೊಚ್ಚಿಕೊಂಡಿದ್ದನ್ನು ನೆನಪಿಟ್ಟುಕೊಂಡು ನನ್ನ ಮೇಲೇ ಬಾಣ ಬಿಡುತ್ತಾನೆಂದು ಒಂದಿಷ್ಟೂ ನಿರೀಕ್ಷಿಸಿರಲಿಲ್ಲ
ನಾನು ಒಂದಿಷ್ಟೂ ಯೋಚಿಸದೇ (ಆಸ್ ಯುಶುಯಲ್) ಬೀಸೊ ದೊಣ್ಣೆ ತಪ್ಪಿಸಿಕೊಳ್ಳುವ ಆತುರದಲ್ಲಿ ಯಾವುದೋ ಬಾಯಿಗೆ ಬಂದ ಸ್ವೀಟು...ಅಂದ್ಕೊಂಡು `ಕ್ಯಾರೆಟ್ ಹಲ್ವಾ' ಅಂದುಬಿಟ್ಟೆ ಮತ್ತು ನಾನು ಹೇಳಿದ್ದನ್ನು ಅವನು ಮರೆತು ಬಿಡಲಿ ಭುವನೇಶ್ವರೀ ಅಂತ ತಕ್ಷಣ ಪ್ರೇ ಮಾಡ್ಕೊಂಡೆ
ಮಾರನೇ ದಿನ ಬೆಳಗ್ಗೆ ಎದ್ದು ಎಂದಿನಂತೆ ಕಾರ್ನ್ ಹೊಟ್ಟು ತಿಂದು ಆಫೀಸಿಗೆ ಹೋದವನನ್ನು ನೋಡಿ `ಅಬ್ಬಾ..ಸದ್ಯ..ಕ್ಯಾರೆಟ್ ಹಲ್ವ ಮರೆತು ಬಿಟ್ಟಿದ್ದಾನೆ ಗುಡ್..ಗುಡ್ ' ಅಂದು ಕೊಂಡೆ.. ಅದೇ ತಪ್ಪಾಯಿತು ನೋಡೀ...ಮಟ ಮಟ ಮದ್ಯಾನ್ಹಕ್ಕೆ ಕಾಲ್ ಬಂತು `ಹ್ಯಾಪ್ಪಿ ಕನ್ನಡ ರಾಜ್ಯೋತ್ಸವ ಡೇ...ಗಾಜರ್ ಕಾ ಹಲ್ವಾ ರೆಡಿಯಾ...' ಅಂತಾ!
`ವೋ... ಬುವನೇಸ್ವರಮ್ಮನಿಗೆ ನನ್ನ ಮೇಲ್ಯಾಕೋ ಕ್ವಾಪ ಬಂದೈತೆ' ಅಂತ ಅಂದು ಕೊಳ್ಳುತ್ತಾ ಹಲ್ವಾ ಮಾಡಿ ಮುಗಿಸಿದೆ ರೆಸಿಪಿ ಇಲ್ಲಿ ನಿಮಗೆ ಕೊಟ್ಟಿದ್ದೇನೆ

ಕ್ಯಾರೆಟ್ ಹಲ್ವ

ತಾಜಾ ಕ್ಯಾರೆಟ್ -ಅರ್ಧ ಕೆ.ಜಿ
ಕೆನೆ ತೆಗೆಯದ ಹಾಲು-ಅರ್ಧ ಲೀಟರ್
ಸಕ್ಕರೆ- ಮುನ್ನೂರು ಗ್ರ್ಯಾಂ
ತುಪ್ಪ-ಮೂರು ದೊಡ್ಡ ಚಮಚ
ಒಣ ದ್ರಾಕ್ಷಿ,ಗೋಡಂಬಿ -ಒಂದು ಹಿಡಿ(ಹಲ್ವಾ ಮಾಡುತ್ತಾ ನಿಮಗೆ ಬಾಯಾಡುವ ಅಭ್ಯಾಸವಿದ್ದರೆ(ನನ್ನ ಥರ!)ಒಂದು ಬೊಗಸೆ!)

ಕ್ಯಾರೆಟ್ ಅನ್ನು ಕೈಯಲ್ಲೋ ಮಿಕ್ಸಿ ಯಲ್ಲೋ ತುರಿದುಕೊಳ್ಳಿ ಅದಕ್ಕೂ ಮುಂಚೆ ಕ್ಯಾರೆಟ್ ನ ಚೆನ್ನಾಗಿ ತೊಳೆಯುವುದು ಮರೆಯಬೇಡಿ ದಪ್ಪ ತಳದ ಪಾತ್ರೆಯಲ್ಲಿ ಕ್ಯಾರೆಟ್ ತುರಿ, ಹಾಲು ಹಾಕಿ ಮೀಡಿಯಂ ಗಿಂತಾ ಕೊಂಚ ಕಡಿಮೆ ಉರಿಯಲ್ಲಿ ಒಲೆಯ ಮೇಲಿಟ್ಟು ಬೇಕಾದ್ರೆ ನಿಮ್ಮ ಮೆಚ್ಚಿನ ಕಣ್ಣೀರ್ ಧಾರವಾಹಿಯೋ/Friends ನೋಡಿ.ADs ಬಂದಾಗ ಸ್ವಲ್ಪ ಎದ್ದು ಬಂದು ತಿರುಗಿಸದಿದ್ದರೆ ಹಲ್ವಾ ಹಾಳಾಗಿ
ಹೋಗತ್ತೆ.ಹಾಲೆಲ್ಲ ಇಂಗಿದ ಮೇಲೆ ಸಕ್ಕರೆ ಹಾಕಿ.ಇಷ್ಟು ಹೊತ್ತು ಇಂಗಿಸಿದ್ದೆಲ್ಲ ವೇಷ್ಟು ಆನ್ನು ವಂತೆ ಸಕ್ಕರೆ ಹಾಕಿದ ತಕ್ಷಣ ಹಲ್ವಾ ನೀರು ಬಿಟ್ಟು ಕೊಂಡು ಬಿಡುತ್ತೆ! ಈಗ ನಿಮಗೆ ನಿಜವಾದ ಛಾಲೆಂಜು! ಟಿ.ವಿ ಆರಿಸಿ ಹಲ್ವ/ಒಲೆ ಮುಂದೆಯೇ ನಿಂತು ಕೈಯಾಡಿಸಲು ಶುರುಮಾಡಿ (ಭರತ ನಾಟ್ಯವಲ್ಲಾ!) ಹಲ್ವಾನ ದೊಡ್ಡ ಚಮಚ ಒಂದರಿಂದ ಸತತವಾಗಿ ಮಗುಚಿ ಸಾಕು!ಸುಮಾರು ಅರ್ಧ ಘಂಟೆ ಹೀಗೆ ಮಾಡಿದ ಮೇಲೆ (ನೀವು ನನ್ನನ್ನು ಬೈದು ಕೊಳ್ಳುವ ಹೊತ್ತಿಗೆ) ಹಲ್ವ ಗಟ್ಟಿಯಾಗಲು ಶುರುವಾಗುತ್ತೆ ಈಗ ತುಪ್ಪ ಸುರಿಯಿರಿ ದ್ರಾಕ್ಷಿ ಮತ್ತು ಗೋಡಂಬಿ ಹಾಕಿ (ಉಳಿದಿದ್ದರೆ!) ಒಲೆಯಿಂದ ಕೆಳಗಿಳಿಸಿ ಆರಿದ ಮೇಲೆ ರುಚಿ ನೋಡಿ
ರಾಜ್ಯೋತ್ಸವಕ್ಕೆಂದು ಮಾಡಿದ ಸಿಹಿ ಫ್ರಿಜ್ ನಲ್ಲಿಟ್ಟಿದ್ದು microwaveನಲ್ಲಿ 20 second ಬಿಸಿ ಮಾಡಿ ಕೊಟ್ಟಿದ್ದೇನೆ ಫ್ರೆಶ್ ಆಗಿದೆ ತಿನ್ನಿ...

Tuesday, November 07, 2006

ಕನಸು ಕೈ ಬೀಸಿ ಕರೆಯುತ್ತಿರಲು...

ನಕ್ಷತ್ರಲೋಕ ಕನಸಾಗಿ ಹೊಳೆದು

ಕೈ ಬೀಸಿ ಕರೆಯುತಿಹುದೋ

ಗುರಿಯಿರದ ಪಯಣ ಕೊನೆಯಿರದ ದಾರಿ

ನಾ ಪಡೆದ ಭಾಗ್ಯವೆಂದು,

ಹೆಜ್ಜೆ ನೊಂದರೂ ಎಲ್ಲಿ ಹರುಷ

ಬೆನ್ನಟ್ಟಿ ನಡೆಸುತಿಹುದೋ,

-ಹೋಗಬೇಕು ನಾನಲ್ಲಿಗೆ!

ನಕ್ಷತ್ರ ಲೋಕ ಕನಸಾಗಿ ಹೊಳೆದು... ಎಷ್ಟು ಅರ್ಥಪೂರ್ಣವಾದ ಸಾಲುಗಳು! ಬದುಕಿಗೊಂದು ಗುರಿ, ಅರ್ಥ ಕೊಡುವ ಕನಸು ಕೈಬೀಸಿ ಕರೆಯುತ್ತಿರುವಾಗ ಹೆಜ್ಜೆ ನೊಂದರೂ ಹರುಷವೇ...`ಹಿರಿಯರೊಬ್ಬರು ಹೇಳಿದಂತೆ `ಬೆಳಕಿಲ್ಲದ ದಾರಿಯಲ್ಲಿ ನಡೆಯ ಬಹುದು...ಆದರೆ ಕನಸಿಲ್ಲದ ದಾರಿಯಲ್ಲಿ ನಡೆಯುವುದು ಹೇಗೆ...?

'ಕೊನೆಯಿರದ ಹಾದಿಯಲ್ಲಿ ನಡೆಯುವುದು ನಾವೆಲ್ಲಾ ಪಡೆದ ಭಾಗ್ಯವೇ ಇರಬಹುದು.ಆದರೆ ಹೆಜ್ಜೆ ನೋಯುವ ಈ ಹಾದಿಯಲ್ಲಿ ನಡೆಯುವವ ಒಂದಿಷ್ಟು ಹಗುರ ಮನಸ್ಸು, ತಿಳಿಯಾದ ದೃಷ್ಟಿ ಇರಿಸಿಕೊಂಡರೆ ಹಾದಿ ಬದಿಯ ಹೂಗಳ ಸುವಾಸನೆ ,ಸೊಬಗು ಪಯಣವನ್ನು ಒಂದಷ್ಟು ಉಲ್ಲಸಿತವಾಗಿಸೀತು...

ರಾಜ್ಯೋತ್ಸವ ವಿಶೇಷ-ಕೆ.ಎಸ್.ನ ಅವರ ಹೋಗಬೇಕು ನಾನಲ್ಲಿಗೆ-5

ಇವತ್ತಿಗೆ ಈ ವಿಶೇಷ ಮಾಲಿಕೆ ಮುಗಿಯುತ್ತಿದೆ.ಈ ಪ್ರಯತ್ನ ನಿಮಗೆ ಹೇಗನ್ನಿಸಿತು? ಇದೇ ರೀತಿ ಇನ್ನೊಂದು ಕವನಕ್ಕೆ `ಚಿತ್ರಪ್ರಯೋಗ' ಮಾಡಿದರೆ ನಿಮಗೆ ಇಷ್ಟವಾಗುತ್ತಾ? ಮುಂದಿನ ಇಂಥ ಪ್ರಯತ್ನದಲ್ಲಿ ಏನೇನು ಸುಧಾರಣೆ ಮಾಡಬಹುದು?ನಿಮ್ಮ ಐಡಿಯಾಗಳೇನಾದರೂ ಇದ್ದರೆ
ನನಗೆ ತಿಳಿಸುತ್ತೀರಾ?

Saturday, November 04, 2006

ನನ್ನ ಜೊತೆಗೆ ಇನ್ನೊಂದು ಜೀವ ನಡೆದು...


ಒಬ್ಬಂಟಿಯಾಗಿ ಈ ನನ್ನ ಜೊತೆಗೆ
ಇನ್ನೊಂದು ಜೀವ ನಡೆದು,
ಅದರಾಚೆಗೀಚೆಗೇನಿರದ ಬಳಿಗೆ
ನನ್ನನ್ನು ಕರೆಯುತಿಹುದೋ,
ಅರಳುತ್ತ ಮೊಗ್ಗು,ಹಾಡುತ್ತ ಹಕ್ಕಿ
ನಾನಾಗಿ ಬದುಕುತಿಹೆನೋ,
-ಹೋಗಬೇಕು ನಾನಲ್ಲಿಗೆ!

ಜೀವನ ಹೂವಾಗಿ ಅರಳಿ,ಮಧುರ ಹಾಡಾಗಲು `ಅದರಾಚೆಗೀಚೆಗೇನಿರದ' ಅನಂತಕ್ಕೆ ಕರೆದೊಯ್ಯಲು ಒಬ್ಬಂಟಿ ಜೀವಕ್ಕೆ ಇನ್ನೊಂದು ಜೀವದ ಅವಶ್ಯಕತೆಯನ್ನು ಈ ಪ್ರೇಮಕವಿಯಲ್ಲದೇ ಇನ್ನಾರು ಇಷ್ಟು ಸೊಗಸಾಗಿ ಹೇಳಬಲ್ಲರು?

ರಾಜ್ಯೋತ್ಸವ ವಿಶೇಷ- ಕೆ.ಎಸ್ ನ. ಅವರ ಹೋಗಬೇಕು ನಾನಲ್ಲಿಗೆ-4

Friday, November 03, 2006

ನೋವಿನ ನಡುವಿನ ಹೊಸದನಿ...

ಹೊನ್ನಾದ ಬದುಕು ಭರವಸೆಯನಿತ್ತು
ಎಲ್ಲರನು ಸಲಹುತಿಹುದೋ
ಕಾಳ್ಗಿಚ್ಚಿನಿಂದ ಸುಟ್ಟಿರುವ ಕಾಡು
ಹಾಡಾಗಿ ಮೆರೆಯುತಿಹುದೋ
ಎಲ್ಲಿಲ್ಲಿ ನೋವು ಅಲ್ಲಲ್ಲಿಗೋಡಿ
ಹೊಸದನಿಯು ಮೂಡುತಿಹುದೋ
-ಹೋಗಬೇಕು ನಾನಲ್ಲಿಗೆ!

ಕಾಳ್ಗಿಚ್ಚಿನಿಂದ ಸುಟ್ಟಿರುವ ಕಾಡಿಗೆ, ಒಡಲು ಬರಿದಾಗಿ ನಿಂತ ಮರಗಳಿಗೆ ತಿಳಿನೀಲಿ ಬಾನು ಸಮಾಧಾನ ಹೇಳುವಂತಿದೆ...ನೋವು ತಿಂದ ಜೀವಗಳಿಗೆ ಹೊನ್ನಿನ ಬದುಕಿನ ಭರವಸೆಯನಿತ್ತು ಸಲಹಲು ಮೋಡಗಳು ಅಗೋ... ತಾ ಬಂದಿವೆ...ಹೊಸದನಿಯಲ್ಲಿ ಹೊಸಹಾಡು ಮೆರೆಸಲು ಮರಗಳು ಮನಸ್ಸು ಮಾಡಬೇಕಷ್ಟೇ....

ಜೀವನದ ಹಲವು ತಿರುವುಗಳಲ್ಲಿ ನಿರೀಕ್ಷಿಸದ ರೀತಿಯಲ್ಲಿ ಪೆಟ್ಟು ತಿನ್ನುವ, ಕಣ್ತುಂಬ ನೀರು ತುಂಬಿಸುವ ಪರಿಸ್ಥಿತಿಗಳಿಗೆ ಸಿಲುಕದೇ ಉಳಿದವರು ಯಾರು? ಕಣ್ಣೀರಿನಿಂದ ದೃಷ್ಟಿ ಮಂಜಾದ ಸಮಯದಲ್ಲಿ ನಮಗೆ ಹೊಸಭರವಸೆಯನ್ನಿತ್ತು ಸಲಹಲು ಬಂದ `ಮೋಡಗಳೆಡೆಗೆ' ನಮ್ಮ ನೋಟ ಕುರುಡಾಗದಿರಲಿ....

ರಾಜ್ಯೋತ್ಸವ ವಿಶೇಷ- ಹೋಗಬೇಕು ನಾನಲ್ಲಿಗೆ-3

Thursday, November 02, 2006

ಎಲ್ಲಿ ಬೆಳ್ದಿಂಗಳಿಳಿದು...



ಎಲ್ಲಿ ದುಂಬಿ ಬಿರಿಮೊಗ್ಗ ತೆರೆದು
ಝೇಂಕರಿಸಿ ಕರೆಯುತಿಹುದೋ,
ನೋವಿನಾಚೆ ನಲಿವಿಹುದು ಎಂದು
ಕೋಗಿಲೆಯು ಹಾಡುತಿಹುದೋ,
ಎಲ್ಲಿ ಉರಿಬಿಸಿಲು ಮುಗಿದು ಬೆಳ್ದಿಂಗಳಿಳಿದು
ಸಂತಸವು ಉಕ್ಕುತಿಹುದೋ ,
-ಹೋಗಬೇಕು ನಾನಲ್ಲಿಗೆ !

ಬೆಳದಿಂಗಳು ಉಕ್ಕಿಸುವಂತೆ ಬೆಳಗುತ್ತಿರುವ ಈ ಗುಲಾಬಿಯಲ್ಲಿ ಝೇಂಕರಿಸುತ್ತಿರುವುದು ದುಂ`ಬಿ'ಯಲ್ಲ... ಹನಿ `ಬೀ'ಕೋಗಿಲೆಯು ದೂರದಲ್ಲೆಲ್ಲೋ ಹಾಡುತ್ತಿದೆ ಅಂದುಕೊಳ್ಳೋಣಾ! ಕಷ್ಟಗಳೆಂಬ ಕಲ್ಲುಗಳ ನಡುವಲ್ಲಿ ಅರಳಿದ ಹೂವು ಉರಿಬಿಸಿಲಿಂದ ಬೆಳದಿಂಗಳಿಗೆ, ಸಂತಸಕ್ಕೆ, ಕರೆದೊಯ್ಯುವ ಸಂಕೇತವಲ್ಲದೇ ಮತ್ತೇನು?

ರಾಜ್ಯೋತ್ಸವ ವಿಶೇಷ-ಹೋಗಬೇಕು ನಾನಲ್ಲಿಗೆ-2

Wednesday, November 01, 2006

ಹೋಗಬೇಕು ನಾನಲ್ಲಿಗೆ...!


ಎಲ್ಲಿ ಹೂವರಳಿ ಮಾತಾಡುವುದೋ,
ಎಲ್ಲಿ ಹಕ್ಕಿ ಹಾಡಾಗಿ ಮುಗಿಯುವುದೋ,
ಎಲ್ಲಿ ಚೆಲುವು ಒಲವಾಗಿ ಫಲಿಸುವುದೋ,
ಹೊಳೆಯ ನೀರು ಥಳಥಳಿಸಿ ಹೊಳೆಯುವುದೋ,
-ಹೋಗಬೇಕು ನಾನಲ್ಲಿಗೆ...!

`ಹೋಗಬೇಕು ನಾನಲ್ಲಿಗೆ' ಕೆ.ಎಸ್.ನರಸಿಂಹ ಸ್ವಾಮಿಯವರ ಸೊಗಸಾದ ಕವನಗಳಲ್ಲೊಂದು.ಪ್ರತಿ ದಿನವೂ ಈ ಕವನದ ಒಂದು ಚರಣವನ್ನು ತೆಗೆದುಕೊಂಡು ಅದಕ್ಕೆ `ಆದಷ್ಟೂ'ಸರಿಹೊಂದುವ ಚಿತ್ರವೊಂದರ ಜೊತೆ ದುರ್ಗದಲ್ಲಿ ಹಾಕಬೇಕು ಎಂಬುದು ನನ್ನ ಯೋಚನೆ.ಇದು ನಿಮಗೆ `ರಾಜ್ಯೋತ್ಸವದ' ಕಾಣಿಕೆ
ನೋಡಿ... ಹೊಳೆಯ ನೀರು ಥಳಥಳಿಸುತ್ತಿರುವಲ್ಲಿ ಚೆಲುವಾಗಿ, ಒಲವಾಗಿ, ಅರಳಿರುವ ಈ ತಾವರೆ ಹಕ್ಕಿಯ ಹಾಡಿಗೆ ನಗುತ್ತಿರುವಂತಿದೆ...


ಹೊಸ ಪ್ರಯೋಗ ಮಾಡುವಾಗ ಒಂದಿಷ್ಟು ಕುಂದು ಕೊರತೆಗಳು ಕಾಣುವುದು ಸಹಜ.ಸಹೃದಯಿ ಕನ್ನಡಿಗರು ಅಂಥ ಕೊರತೆಗಳನ್ನು ಉದಾರತೆಯಿಂದ ನೋಡುತ್ತೀರೆಂದು ನಂಬುವೆ

ನಿಮಗೆಲ್ಲಾ ಚಿನ್ನದ ಕನ್ನಡ ರಾಜ್ಯೋತ್ಸವದ ಶುಭಾಶಯಗಳು