Tuesday, October 31, 2006

BOO.......


Monday, October 30, 2006

ದೀಪಾವಳಿ ಕ್ಯಾಕ್ಟಸ್


Christmas cactus ಅಥ್ವಾ Zygo cactus ಅಂತ ಕರೆಸಿಕೊಳ್ಳುವ ಈ Epiphyte ಜಾತಿಯ ಗಿಡವನ್ನು ಈಗೆರಡು ವರ್ಷದ ಹಿಂದೆ Christmas ಸಮಯದಲ್ಲಿ ಕೊಂಡಿದ್ದು.ಪ್ರತಿವರ್ಷ ಕ್ರಿಸ್ತನ ಹುಟ್ಟುಹಬ್ಬದ ಹೊತ್ತಿಗೆ ಎಲ್ಲರ ಮನೆಯಲ್ಲೂ ಇವು ಹೂ ಸುರಿಸಿ ಮೆರೆಯುತ್ತಿರುತ್ತವೆ.ಮಂಕು ಕವಿದ ಬೆಳಗುಗಳ,ನೀರಸ ಮಧ್ಯಾಹ್ನದ ,ಸಂಜೆ ಐದಕ್ಕೇ ಕತ್ತಲಾಗುವ ಕಡು ಚಳಿಯ ಡಿಸೆಂಬರ್ ಅನ್ನು Zygo ದ ಚೆಲುವು ಒಂದಿಷ್ಟು ಸಹ್ಯವಾಗಿಸುತ್ತದೆ

ಕಳೆದ ವರ್ಷ Christmas ಹೊತ್ತಿಗೇ ಹೂ ಬಿಟ್ಟಿದ್ದ ನಮ್ಮನೆಯ Zygo ಈ ವರ್ಷ, ದಿನಾ ನಮ್ಮನೆ ಸಾರಿನ ವಾಸನೆ ಕುಡಿದೋ ಏನೋ ದೀಪಾವಳಿಗೇ ಹೂ ಬಿಟ್ಟುಬಿಟ್ಟಿದೆ! ನಮ್ಮಮ್ಮನ ಸಾರು ಪುಡಿಗೇ ಜೈ!!

ಅಂದ ಹಾಗೆ ಇದು central ಮತ್ತು south americaವಾಸಿ. ನೈಸರ್ಗಿಕವಾಗಿ ಅಲ್ಲಿ ಅದು ಯಾವ ಕಾಲದಲ್ಲಿ ಹೂ ಬಿಡುತ್ತೋ,ಇಲ್ಲಿನ ಹೈ-ಟೆಕ್ ತೋಟಗಾರರು artificial green house ನಲ್ಲಿಟ್ಟು ಇದನ್ನ Christmas ಹೊತ್ತಿಗೆ ಹೂ ಬಿಡುವಂತೆ ಮಾಡಿ christmas cactus ಅಂತ ಜನಕ್ಕೆ ಟೋಪಿ ಹಾಕುತ್ತಿರಬೇಕು ಎಂದೆಲ್ಲಾ ಯೋಚಿಸಿದೆ ವಾತಾವಣದ ಉಷ್ಣತೆಯ ಸೂಕ್ಶ್ಮ ಏರಿಳಿತಗಳು,ಕೊಡುವ ನೀರಿನ ಪ್ರಮಾಣ,ಗಿಡಕ್ಕೆ ಸಿಗುವ ಬೆಳಕಿನ ಕ್ವಾಲಿಟಿ ಇವೆಲ್ಲಾ ಗಿಡವೊಂದು ಹೂ ಬಿಡುವಸಮಯವನ್ನು ನಿರ್ಧರಿಸುವ ಮಾನದಂಡಗಳು ಎಂದು ನನಗೆ ಗೊತ್ತಿಲ್ಲದೇ ಏನಿಲ್ಲ...

ಆದರೂ ನಮ್ಮ ಹಬ್ಬ ದೀಪಾವಳಿಗೆ ಹೂ ಬಿಟ್ಟ zygo ಬಗ್ಗೆ ಮೆಚ್ಚುಗೆ ಮೂಡಿತು ಈಗ ಇದನ್ನು ನಮ್ಮನೇಲಿ DeepaavaLi Cactus ಅಂತ ಕರೆಯಲು ಶುರು ಮಾಡಿದ್ದೇವೆ!

Saturday, October 28, 2006

ಜಿಪುಣಾ ಅಂದ್ರೆ ಜಿಪುಣಾ ಈ ಕಾಲಾ...


ಜಿಪುಣಾ ಅಂದ್ರೆ ಜಿಪುಣಾ ಈ ಕಾಲಾ...
ಏನೇ ಗಿರವೀ ಇಟ್ಟು ಎಷ್ಟೇ ಬಡ್ಡಿ ಕೊಟ್ಟ್ರು
ಹುಟ್ಟೋದಿಲ್ಲಾ ಒಂದು ಘಳಿಗೆ ಸಾಲ!
ಎಂದು ಹಾಡಿದ್ದಾರೆ ಕವಿ ಬಿ.ಆರ್‍.ಲಕ್ಷ್ಮಣ ರಾಯರು.ಜಿಪುಣನಾದ ಕಾಲನನ್ನು ಘಂಟೆ ಬಡಿಯುವ ,ಕನ್ನಡಿ ಹಿಡಿಯುವ, ಬೆನ್ನು ಹತ್ತಿದ ಬೇತಾಳ ಎನ್ನುತ್ತಾರೆ ಅವರು.ನಮಗೆಲ್ಲರಿಗೂ ಅನುಭವ ವೇದ್ಯವಾದ ಈ ಸತ್ಯವನ್ನು ಕವಿ ಎಷ್ಟು ಚೆನ್ನಾಗಿ ಹೇಳಿದ್ದಾರೆ ನೋಡಿ....
ಹೌದು...ಸಮಸ್ಯೆ ಏನೋ ಎಲ್ಲರಿಗೂ ಗೊತ್ತಿರುವುದೇ...ಅದಕ್ಕೆ ಪರಿಹಾರವೇನಾದರೂ ಇದೆಯೋ...? ಎಂದು ನೀವು ಕೇಳುತ್ತೀರಿ ಅಂತಾನೂ ಅವರಿಗೆ ಗೊತ್ತು! ಅದಕ್ಕೇ ಮುಂದುವರೆದು
ಹೇಳುತ್ತಾರೆ...

ಮೀರುವುದೊಂದೇ ಇವನನು ಗೆಲ್ಲುವ ದಾರೀ...
ಸಿಕ್ಕದೆ ರೂಢಿಯ ಕೈಲಿ,ಕಲ್ಪಿಸಿ ಹೊಸ ಹೊಸ ಶೈಲಿ
ಧಿಕ್ಕರಿಸೋಣಾ ಲೆಕ್ಕಾಚಾರದ ಕಾಲಾ...

ಅಂಥದ್ದೊಂದು,ತೀರಾ ಹೊಸದಲ್ಲದಿದ್ದರೂ `ನಮಗೆ' ಹೊಸದೆಂದು ತೋರಬಹುದಾದ `ಶೈಲಿ'ಯೊಂದರ ಬಗ್ಗೆ ಕೊರೆಯಲೆಂದೇ ನಾನು ಇಷ್ಟೊತ್ತು ಪೀಠಿಕೆ ಹಾಕಿದ್ದು!
ಅದೇ Daylight Saving Time ಅಥ್ವಾ (DST).
Daylight saving time (DST), also known as summer time or,daylight savings
time, is a widely used system of adjusting the official local time forward,
usually by one hour from its official standard time, for the spring, summer,
and early autumn periods ಇದು DST ಗೆ Wikipedia ದ ಡೆಫಿನಿಶನ್ನು

Spring forward... Fall back....ಇದು DST ಮಂತ್ರ.ವಸಂತದಲ್ಲಿ ಎಲ್ಲರೂ ತಮ್ಮ ಗಡಿಯಾರಗಳನ್ನು ಒಂದು ಘಂಟೆ ಮುಂದಿಟ್ಟರೆ ಎಲೆ ಉದುರುವ ಶಿಶಿರದಲ್ಲಿ ಒಂದು ಘಂಟೆ ಹಿಂದಿಟ್ಟು ವಾಪಸು ಬರುತ್ತಾರೆ ಅಮೆರಿಕದಲ್ಲಿ ಸಾಮಾನ್ಯವಾಗಿ (ಈಚಿನ ವರ್ಷಗಳಲ್ಲಿ)ಏಪ್ರಿಲ್ ನ ಮೊದಲ ಭಾನುವಾರ ಸುರುವಾಗುವ DST ಅಕ್ಟೋಬರ್ ಕೊನೆಯ ಭಾನುವಾರ ಮಧ್ಯರಾತ್ರಿ ಎರಡಕ್ಕೆ ಮುಗಿಯುತ್ತೆ ಈ ವರ್ಷ
ಏಪ್ರಿಲ್ 2ರಂದು ಸುರುವಾಗಿದ್ದು ಇವತ್ತು ರಾತ್ರಿ( 29)ಮುಗಿಯಲಿದೆ Energy ಉಳಿಸಲು,ಸಾರ್ವಜನಿಕ ಸುರಕ್ಷತೆ ಹೆಚ್ಚಿಸಲು, ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಈ DST ಸಹಾಯ ಆಗುತ್ತೆ ಅಂತ ಅಂಕಿ ಅಂಶಗಳು ಹೇಳುತ್ತವೆ
ಮುಂದಿನ ವರ್ಷವೇನೋ ಮಾರ್ಚ್ ನಲ್ಲೇ DST ಸುರುವಾಗಿ ನವಂಬರ್ ಕೊನೆವಾರದ ತನಕ ಇರುತ್ತಂತೆ.ಮುಂದಿನ ವರ್ಷಕ್ಕಿನ್ನೂ ಬೇಕಾದಷ್ಟು ಟೈಮ್ ಇದೆ ನಾಳೆ ಚೆನ್ನಾಗಿ ನಿದ್ದೆ ಮಾಡೋಣಾ ಏನಂತೀರಿ?

Friday, October 27, 2006

ಎಮಿಲಿಯ ಪದ್ಯದ ನಾಲ್ಕು ಸಾಲುಗಳು


LOOK back on time with kindly eyes,
She doubtless did her best;
How softly sinks the trembling sun
In human nature’s west!

ಅಮೆರಿಕದ ಅತ್ಯುತ್ತಮ ಕವಿಗಳಲೊಬ್ಬಳಾದ Emily Dickinson ಳ ಕವನವೊಂದರ ಸಾಲುಗಳಿವು
ತೀರಾ ಪರಿಚಿತ ಸನ್ನಿವೇಶದಲ್ಲಿ ಹೊಸ ಅರ್ಥವನ್ನು ಹೊಳೆಯಿಸುವುದು ಎಮಿಲಿಯ ಪದ್ಯದ ವೈಶಿಷ್ಯಗಳಲ್ಲೊಂದು.ಎಮಿಲಿ ಉಪಯೋಗಿಸುವ ನಿಸರ್ಗದ ಪ್ರತಿಮೆಗಳು ಕಣ್ಣಿಗೆ ಕಟ್ಟಿದಂತಿರುತ್ತವೆ
ಈ ಕಾರಣಗಳಿಗಾಗಿಯೇ Emily Dickinson ನನ್ನ ಅಚ್ಚು ಮೆಚ್ಚಿನ ಕವಿಗಳಲ್ಲೊಬ್ಬಳು

Thursday, October 26, 2006

ಕಾಗದ ಬಂದಿದೆ......ಕರಡಿ ಮರಿಯಿಂದ...

ಕ ಕಾರ ಪ್ರಿಯ ಕರಡಿಮರಿಯೊಂದು ದುರ್ಗಕ್ಕೆ ಪತ್ರ ಬರೆದಿದೆ ಈ ಕಾಗದದಲ್ಲಿ ಕರುಣಾಜನಕವಾದ ತನ್ನ ಕಥಾನಕವನ್ನು ಕರಳು ಕಿವಿಚುವಂತೆ ವರ್ಣಿಸಿದೆ.ಈ ಕಾಗದವನ್ನೂ ಚಿತ್ರವನ್ನೂ ಇಲ್ಲಿ ಪ್ರಕಟಿಸಿದ್ದೇನೆ.

* * * * * * * *

ದುರ್ಗಕ್ಕೆ ಭೇಟಿ ಕೊಡುವ ಎಲ್ಲಾ ಮಹನೀಯರೇ ಮತ್ತು ಮಹಿಳೆಯರೇ,

ನಾನೊಂದು ಪುಟ್ಟ ಕರಡಿಮರಿ .ಚಳಿಯಲ್ಲಿ ನಡುಗುತ್ತಿದ್ದೇನೆ ಕಾಡಿನ ಕೊಳೆತ ಹಣ್ಣುಗಳನ್ನು ತಿಂದೂ ತಿಂದೂ ಸಾಕಾಗಿದೆ.ಊರಿಗೆ ಬರೋಣವೆಂದರೆ ಕೈಯಲ್ಲಿ ಕಾಸಿಲ್ಲಾ ಕಣ್ಣಲ್ಲಿ ಕನಸು ಇದೆ ಹೊಟ್ಟೆಗೆ ಕವಳವಿಲ್ಲಾ ಒಟ್ಟಿನಲ್ಲಿ `ಚಳಿ ಚಳಿ ತಾಳೆನು ಈ ಚಳಿಯಾ' ಎಂದು ಹಾಡುತ್ತಿರುವ ನನ್ನ ಸ್ಥಿತಿ ಕಳವಳಕಾರಿಯಾಗಿದೆ
ನಿಮ್ಮಗಳೆಲ್ಲರ ಅವಗಾಹನೆಗಾಗಿ ನನ್ನ ಚಿತ್ರವನ್ನೂ ಕಳಿಸಿರುವೆ

ಈ ದುರ್ಗಕ್ಕೆ ದೇಶ ವಿದೇಶಗಳಿಂದ ಹಲವಾರು ಜನ ಭೇಟಿ ಕೋಡುವುದನ್ನು ನೋಡಿ ನಿಮ್ಮೆಲ್ಲರ ಸಹಾಯ ಯಾಚಿಸಿ ಇಲ್ಲಿಗೆ ಈ ಕಾಗದ ಕಳಿಸುತ್ತಿರುವೆ.

ದುರ್ಗಕ್ಕೆ ತೆಂಗಿನತೋಟ,ಮಾವಿನತೋಟ ,ಹಲಸಿನ ತೋಟ ಮುಂತಾಗಿ ತೋಟಗಳನ್ನು ಹೊಂದಿರುವ ಮಹನೀಯರೂ, ಸುಗಂಧ ಬೀರುವ ಕಾಡುಗಳನ್ನು ಹೊಂದಿರುವ ಮಹಿಳೆಯರೂ ಭೇಟಿ ನೀಡುವುದು ನನಗೆ ಗೊತ್ತು.ಅನೇಕ ಅನ್ವೇಶಕರೂ, ಪ್ರಭಾವಶಾಲಿ ದಾದಗಳೂ, ದೆಹಲಿ ಚಳಿ ಕಂಡವರೂ ಇಲ್ಲಿಗೆ ತಪ್ಪದೇ ಬರುತ್ತಾರೆಂದು ಕೇಳಿಬಲ್ಲೆ.ತಮಗೊಂದು,ಮಗನಿಗೊಂದು ಎಂದು ಎರಡೆರಡು ಮನೆ ಕಟ್ಟಿರುವ ಶ್ರೀಮಂತರೂ ದಿನವೂ ಭೇಟಿ ನೀಡುತ್ತಾರೆ.ಅಲ್ಲದೇ ಜ್ಯೋತಿ ಬೆಳಗುವ ಸಹೃದಯರೂ, ಥಾಟಿಗೆ ಅರ್ಥಾತ್
`thought ಗೆ 'ಮೇವು ಹಾಕುವವರೂ ದುರ್ಗದ ಬೆಂಬಲಕ್ಕಿದ್ದಾರೆ.ಇದಲ್ಲದೇ ಭಾರತ, ಕೆನಡಾ, ಫ್ರ್ಯಾನ್ಸ್,ಇರಾನ್, ಯು.ಕೆ ಮುಂತಾದ ದೇಶಗಳಿಂದಲೂ,ಅಮೇರಿಕಾದ ಪೂರ್ವ-ಪಶ್ಚಿಮ ತೀರಗಳಿಂದಲೂ ಹಲವಾರು ಅನಾನಿಮಸ ಬೆಂಬಲಿಗರು ದುರ್ಗಕ್ಕೆ ಬರುವರು

ಈ ಎಲ್ಲಾ ಮಹನೀಯರೂ, ಮಹಿಳೆಯರೂ ನನಗೆ ಉದಾರವಾಗಿ ಸಹಾಯ ಮಾಡಬೇಕೆಂದು ಕಳಕಳಿಯ ಮನವಿ ನನಗೆ ನೀವು ಕೋಟುಗಳನ್ನೂ, ಕ್ಯಾನ್ಡ್ ಫುಡ್ ಕ್ಯಾನ್ ಗಳನ್ನೂ,ಕ್ಯಾಶ್ ಅನ್ನೂ(ಡಾಲರ್,ಯೂರೋ,ರಿಂಗೆಟ್ಸ್,ದಿರ್ ಹಮ್,ಸಿಂಗ್/ಕೆನಡಿಯನ್ ಡಾಲರ್ ಯಾವುದಾದರೂ ಸರಿ) ಕಳಿಸಬಹುದು
[ ನಿಮ್ಮ ಇಂಡಿಯನ್ `ಕರಿ ' ತುಂಬಾ ಕಾರವಾದ್ದರಿಂದ ಮನೆಯಲ್ಲಿ ಮಾಡಿದ ಅಡುಗೆ ಖಂಡಿತಾ ಕಳಿಸಬೇಡಿ (ನಾನು` ಕ ಕಾರ' ಪ್ರಿಯ ನಾದರೂ ಕಾರಪ್ರಿಯನಲ್ಲ ಮತ್ತು ನನ್ನ ನಾಲಿಗೆ ಅಬ್ಬಿ ಆಗುತ್ತೆ ನಿಮ್ಮ ಕರಿ ತಿಂದ್ರೆ...) ]

ಪುಟ್ಟ ಕರಡಿ ಮರಿಯನ್ನು ರಕ್ಷಿಸಿ!!!
ದಯವಿಟ್ಟು ಉದಾರವಾಗಿ ನೆರವಾಗಿ!!!
ನೆನಪಿಡಿ ಕೋಟು,ಕ್ಯಾನ್ಡ್ ಫುಡ್,ಮತ್ತು ಕ್ಯಾಶ್ ಓನ್ಲಿ!!!

-ಇತಿ ನಿಮ್ಮ
ಕೊಡುಗೆಗಳಿಗಾಗಿ
ಕಾಯುತ್ತಿರುವ
ಕರಡಿ ಮರಿ

* * * * * * * *

ಈ ಪುಟಾಣಿ ಕರಡಿಮರಿ ದುರ್ಗದ ಅಭಿಮಾನಿಗಳಲ್ಲಿ ಇಟ್ಟಿರುವ ನಂಬಿಕೆಯನ್ನು ನೀವು ಸುಳ್ಳು ಮಾಡುವುದಿಲ್ಲಎಂಬ ಭರವಸೆ ನನಗಿದೆ.ಪ್ರತಿಯೊಬ್ಬರೂ ತಮ್ಮ ತನುಮನ ಮನೆಗಳಿಂದ ನಿಮ್ಮ `ಧನವನ್ನು' ಕಳಿಸುತ್ತೀರೆಂದು ನಂಬುವೆ.ಪ್ರತಿದಾನಿಯ ಕೊಡುಗೆಯ ವಿವರವನ್ನೂ ದುರ್ಗದ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು.ಅತ್ಯಂತ ಪಾರಾದರ್ಶಕವಾದ ಈ ವ್ಯವಸ್ಥೆಯನ್ನು ನೀವು ಖಂಡಿತಾ ನಂಬಬಹುದು


ಟಿಪ್ಪಣಿ-
`ಚಿತ್ರ-ದುರ್ಗ'ದಲ್ಲಿ ದುರ್ಗದ ಹಿತೈಷಿಗಳ ಬ್ಲಾಗ್ ನ ಲಿಂಕ್ ಹಾಕಲು ಕೆಲವು ದಿನಗಳ ಹಿಂದೆ ನಿಮ್ಮೆಲ್ಲರ ಅನುಮತಿ ಕೇಳಿದ್ದೆ.ನೀವುಗಳೆಲ್ಲರೂ ದೊಡ್ಡ ಮನಸ್ಸಿನಿಂದ ನನಗೆ ಅನುಮತಿಯನ್ನೂ,ಪುಟಾಣಿ ಕರಡಿಮರಿಗೆ ಕೊಡುಗೆಗಳನ್ನೂ ನೀಡುತ್ತೀರೆಂದು ನಂಬಲೇ?

Wednesday, October 25, 2006

ಕೆಂಪು ಗುಲಾಬಿ?


ಹೇಗಿದೆ ಈ ಕೆಂಪು ಗುಲಾಬಿ?
ಬಹುಶಃ Robert Burns ಇದನ್ನು ನೋಡಿಯೇ My love is like a red red rose
ಅಂತ ಹಾಡಿದನೇನೋ ಅಲ್ವಾ?
Sorry ಇದು ಗುಲಾಬಿಯಲ್ಲ!

ಮೊನ್ನಿನ ಪೋಸ್ಟ್ ನಲ್ಲಿ ತಪ್ಪು ಹುಡುಕುವಿರಾ ಎಂದು ನಿಮ್ಮನ್ನು ಕೇಳಿದ್ದೆ.`ಏನ್ರೀ ಗುಲಾಬಿ ಚಿತ್ರ ಹಾಕಿ ಮಲ್ಲಿಗೆ ಅಂತೀರಲ್ಲಾ' ಅಂತ ನೀವೆಲ್ಲರೂ ನನ್ನ ಕಿಚಾಯಿಸಿದಿರಿ.ನೀವು ಹಾಗೆ ಕಿಚಾಯಿಸುತ್ತೀರೆಂದು ನಾನು
ನಿರೀಕ್ಷಿಸಿಯೇ ಇದ್ದೆ! ಇವತ್ತು ಬೆಳಗ್ಗೆ ಸಹಾ ಸ್ನೇಹಿತರೊಬ್ಬರು ಕಾಲ್ ಮಾಡಿ `ಏನು ಗುಲಾಬಿಯನ್ನು ಮಲ್ಲಿಗೆ ಅಂತಿದೀಯಲ್ಲಾ' ಎಂದರು. ಕೆಲವರು ಇದು ಹಳದಿ ಗುಲಾಬಿ ಅಂದರು! ನಾನು ಚಿತ್ರ ತೆಗೆದ ಜಾಗದಲ್ಲಿ ಬೆಳಕು ಕಡಿಮೆ ಇದ್ದಿದ್ದಕ್ಕೋ ಏನೋ ಫೋಟೋದಲ್ಲಿ ಸ್ವಲ್ಪ ಹಳದಿ ಛಾಯೆ ಇದ್ದದ್ದು ನಿಜ.ನೀವೆಲ್ಲರೂ ಬೇಸ್ತು ಬಿದ್ದೆವೆಂದು ಬೇಜಾರು ಮಾಡಿಕೊಳ್ಳುವುದೇನೂ ಬೇಡಾ ಏಕೆಂದರೆ ನಿಮ್ಮೆಲ್ಲರಿಗಿಂಥಾ ಮೊದಲು ಹಳ್ಳಕ್ಕೆ ಬಿದ್ದಿದ್ದು ನಾನು! ಹಳ್ಳಕ್ಕೆ ಬೀಳಿಸಿದ್ದು ಈ Camellia ಎಂಬ ಸುಂದರಿ!

ಏಳು ಸುತ್ತಿನ ಮಲ್ಲಿಗೆಯ ಸೈಜೇ ಇದ್ದ ಬಿಳಿ Camellia ವನ್ನು ನಾನು ಮಲ್ಲಿಗೆ ಎಂದೇ ತಿಳಿದಿದ್ದೆ.ಮತ್ತು ಬಣ್ಣದಲ್ಲೂ ಸೈಜಿನಲ್ಲೂ ಥೇಟ್ ಗುಲಾಬಿ ಹೂವನ್ನು ಹೋಲುತ್ತಿದ್ದ ಕಡುಕೆಂಪು Camellia ದ ಕಟಿಂಗ್ ತಂದು ಮನೆಯಲ್ಲಿ ನೆಡುವಾ ಅಂತಿದ್ದೆ!(ಕಟಿಂಗ್ ನಿಂದ ಈ ಗಿಡ ಬರುವುದಿಲ್ಲಾ ಅಂತ ನಂತರ ಗೊತ್ತಾಯಿತು) ತಮಾಶೆ ಎಂದರೆ ಆ `ಮಲ್ಲಿಗೆಯೂ' ಈ`ಗುಲಾಬಿಯೂ' ಒಂದೇ ಜಾತಿಗೆ ಸೇರಿದ ಬೇರೆ ಬಣ್ಣದ ಹೂ ಬಿಡುವ ಗಿಡ ಎಂದು ತಿಳಿಯದೇ ಮೋಸ ಹೋಗಿದ್ದೆ!

Camellia ಚೀನಾ ಸಂಜಾತೆ.ಹೆಬ್ಬೆರಳ ಗಾತ್ರದಿಂದ ಹಿಡಿದು ಬೊಗಸೆ ಗಾತ್ರದ ವರೆಗೆ ಎಲ್ಲ ಸೈಜುಗಳ ಹೂ ಬಿಡುತ್ತಾಳೆ.ಒಂದು ಸುತ್ತಿನದು.ಎರಡು ಸುತ್ತಿನದ್ದು,ಜೋಡಿಸಿಟ್ಟ ಹಾಗೆ ದಳಗಳಿರುವುದು,ಅಸಮಜೋಡಣೆಯ ದಳದ್ದು ಹೀಗೆ ಹಲವಾರು ಅವತಾರಗಳಲ್ಲಿ ಲಭ್ಯ. ಇವತ್ತಿನ ಚಿತ್ರದಲ್ಲಿರುವಂಥಾ ಅಚ್ಚ ಕೆಂಪಿನಿಂದ ಹಿಡಿದು ಶುಭ್ರ ಬಿಳಿಯ ನಡುವಿನ ಎಲ್ಲಾ ಛಾಯೆಗಳಲ್ಲೂ ಅರಳಿ ನಗುತ್ತಾಳೆ.
ಕೆಲವು ದಿನಗಳ ಹಿಂದೆ `ಚೆಲುವೆಯೇ ನಿನ್ನ ನೋಡಲು' ಎಂಬ ಶೀರ್ಷಿಕೆಯಲ್ಲಿ ಕಂಗೊಳಿಸಿದ್ದು
Once again ಇದೇ Camellia!

Tuesday, October 24, 2006

ಧಾರವಾಡದ ದತ್ತೂ ಮಾಸ್ತರ

`ಅಯ್ಯೋ...ಏಳ್ರೀ..ಘಾತ ಆಗೇದ...ನನ್ನ ಗಿಳಿ ಹಾರಿ ಹೋಗೇದ...' ದತ್ತೂ ಮಾಸ್ತರ ಬೆಚ್ಚಿ ಎದ್ದು ಕೂತರು.ಕೂಸು ಹತ್ತು ತಿಂಗಳು ಹೆತ್ತ ಕರಳುಗಳಿಗೆ ಖುಷಿ ಕೊಟ್ಟು ಗಿಳಿಯಂತೆ ಬಾಗಿಲು ತೆರೆದ ಪಂಜರದೊಳಗಿಂದ ಹಾರಿ ಹೋಗಿದ್ದ...

`ಅಣ್ಣಾ, ನೀವು ಮನೆಯೊಳಗ ಇರ್ರಿ ಸುಮ್ಮನೆ ಯಾಕ ಬರ್ತೀರಿ?' ಕಿರಿಯ ಮಿತ್ರರು ಹೇಳಿದರು `ಬರ್ತೇನ್ರಪ್ಪಾ, ಬರ್ರ್ತೀನಿ...ಇಲ್ಲದಿದ್ದರೆ ಋಣಸಂದಾಯ ಆಗೋದಿಲ್ಲ. ಬರ್ತೀನಿ...' ಎಂದು ಮಗುವಿನ ಮೆಚ್ಚುಗೆಯ ಮಫ್ಲರ್ ಹೊಚ್ಚುತ್ತಾ `ಆತನ ಪ್ರೀತಿಯ ಮಫ್ಲರ್ ಇದು ಬಹಳಾ ಪ್ರೀತಿಯಿಂದ ಹೊತ್ತುಕೊಳ್ಳುತ್ತಿದ್ದ' ಎಂದಾಗ ಯಾರೂ ಮಾತಾಡಲಿಲ್ಲ
ಪ್ರಮೋದಾನಂದ ತನ್ನ ಅಗಲಿಕೆಯಿಂದ ಒಂದು ಕವಿತೆಯಾಗಿ ಪುನರ್ಜನ್ಮ ತಾಳಿದ್ದ
ನೀನೊಂದೆ ಬಂದೆ ಬಂದಂದಿನಂದೆ,ಒಂದೊಂದೆ ಚೆಂದ
ಬಿಸವಂದಾ/ ಪ್ರಮೋದಾ/
ನಿನ್ನೊಡನೆ ಭೋಗ,ನಿನ್ನೊಡನೆ ರೋಗ,ನಿನ್ನೊಡನೆ ಯೋಗ
ಎಲೆ ಕಂದಾ/ ಆನಂದಾ/
ಎಂದು ಬರೆಯಿಸಿಕೊಂದ ಮಸಣ ಗೀತ ಮುಂದರಿಯುತ್ತಾ-

ಮಾತಾಯಿ ಕೃಪೆಯು ಸಿರಿಗುರುವಿನರುಳು ಕರುಳಾಗಿ ಪೂರೆಗೆ
ದಯೆಯಿಂದ ಪ್ರಮೋದಾ/
ಈ ಚರಮ ಗೀತವೆ ಪರಮ ಗೀತ ಪ್ರಾಥನೆಯ ರೂಪ
ನನ್ನಿಂದ/ ಆನಂದಾ/...

ಎಂದು ಸಾಗುತ್ತಾ ಮಸಣ ಗೀತ ಮಣ್ಣಿನೊಡನೆ ಮುಕ್ತಾಯಗೊಂಡಿತ್ತು...

ಅಂದು ಸಂಜೆ ಶ್ರೀರಾಮ ಯಾಕೋ ಚಳಿ ಚಳಿ ಎಂದು ಹೊದ್ದುಕೊಂಡು ಮಲಗಿಬಿಟ್ಟಿದ್ದ...`ಅಣ್ಣಾ,ಗಾಭರಿ ಆಗಬ್ಯಾಡ್ರೀ,ನನ್ನದು ತಪ್ಪಗೆದಾ' ಎಂದು ಶ್ರೀರಾಮ ಕೈಜೋಡಿಸಿದಾಗ ತಂದೆಯ ಹೃದಯ ಕಲ್ಲುಸಕ್ಕರೆಯಂತೆ ಕರಗಿ ಹೋಗಿತ್ತು... ಜ್ವರ ತರಿಸಿಕೊಂಡಿದ್ದೇ ತನ್ನ ತಪ್ಪು ಎಂದು ರಾಮ ಮಾತಾಡಿದ್ದನ್ನು ತಡೆದುಕೊಳ್ಳಲಿಕ್ಕೆ ಅಣ್ಣಾ ಅವರಿಗೆ ಸಾದ್ಯವಾಗಲಿಲ್ಲಾ...

ಎರಡು ವಾರ ಪೂರಾ ದಾಟಿರಲಿಲ್ಲಾ ಒಂದು ನಸುಕಿನಲ್ಲಿ ಆಕಾಶದಲ್ಲಿ ಶುಕ್ರ ಕಾಣಿಸಿಕೊಳ್ಳುತ್ತಿದ್ದಂತೆ, ಕವಿತಂದೆಯ `ಗಂಗಾವತರಣದ' ಪ್ರೆಸ್ ಕಾಪಿ ತಯಾರಿಸಿಟ್ಟಿದ್ದ ಈ ಪ್ರತಿಭಾಂಕುರವು ಆ ಶುಕ್ರನತ್ತ ಧಾವಿಸಿತ್ತು!ರಾಮನೂ ಕೆಲವು ಕವಿತೆಗಳನ್ನು ರಚಿಸಿ ತಂದೆಯ ಶಭಾಸ್ ಗಿರಿ ಪಡೆದು ತಂದೆಗೇ ಅವನ್ನು ಅರ್ಪಿಸಿ ತೆರಳಿದ್ದ!

ಈ ಸಲ ಮಸಣದ ಮೆರವಣಿಗೆ ದೊಡ್ಡಪ್ರಮಾಣದ ಮೇಲೆ ನಡೆದಿತ್ತು.ದಾರಿಯಲ್ಲಿ ಪರಿಚಿತರೊಬ್ಬರು ದತ್ತೂ ಮಾಸ್ತರರನ್ನು ಕಂಡು ಬೆರಗುಪಟ್ಟು ಮಾತಾಡಿಸಿದಾಗ `ಹೂಂ..ಮೊನ್ನೆ ಎಲ್ಲಾರೂ ಸಣ್ಣವನನ್ನು ಮಣ್ಣು ಮಾಡಲು ಹೋಗಿದ್ವಿ..ಇವತ್ತ ಈ ಹಿರೇಮಗನ್ನ ಅವನ ಜೋಡಿ ಮಾಡಿಟ್ಟು ಬರಲಿಕ್ಕೆ ಹೊರಟೀವಿ ಇಬ್ಬರೂ ಒಬ್ಬರಿಗೊಬ್ಬರು ಭಾಳ ಜೀವ! ಅವ ಭೂಮ್ಯಾಗ,ಇವಾ ಬೂದ್ಯಾಗ' ಎಂದು ಒರಟ ಶಬ್ದಗಳಲ್ಲಿ ಹೊರಟ ಆ
ಮಾತುಗಳು ಕವಿಹೃದಯವೇ ಒಂದು ಜ್ವಾಲಾಮುಖಿಯಾಗಿತ್ತೆಂಬುದನ್ನು ಹೇಳುವಂತಿದ್ದವು...ಮನೆಯೇ ಮಸಣದ ಆವರಣ ಹೊದ್ದುಕೊಂಡಿತ್ತು ಮನೆ ಯಾವುದು ಮಸಣ ಯಾವುದು ತಿಳಿಯದಂತಾಗಿತ್ತು....

ಎನ್ಕೆ ಅವರು ಕನ್ನಡದ ವರಕವಿ ದ.ರಾ.ಬೇಂದ್ರೆ ಯವರ ಬಗ್ಗೆ ಬರೆದಿರುವ ಕಾದಂಬರಿ `ಧಾರವಾಡದ ದತ್ತೂ ಮಾಸ್ತರ' ಪುಸ್ತಕವನ್ನು ನೆನ್ನೆ ಕೈಗೆತ್ತಿಕೊಂಡಿದ್ದು ಮುಗಿಸದೇ ಕೆಳಗಿಡಲಾಗಲಿಲ್ಲ.ಸರಿರಾತ್ರಿಗೆ ಓದಿಮುಗಿಸಿ ಮಲಗಿದಾಗ ಕಣ್ಣಿಗೆ ನಿದ್ದೆ ಹತ್ತಲಿಲ್ಲ...

Monday, October 23, 2006

ನೋಡಿದೋ ಇಲ್ಲರಳಿ ನಗುತಿದೆ ಏಳು ಸುತ್ತಿನ ಮಲ್ಲಿಗೆ...


ನೋಡಿದೋ ಇಲ್ಲರಳಿ ನಗುತಿದೆ
ಏಳು ಸುತ್ತಿನ ಮಲ್ಲಿಗೆ
ಎಷ್ಟು ಹಚ್ಚನೆ ಹಸಿರು ಗಿಡದಿ
ಎಂತು ಮೂಡಿತೋ ಬೆಳ್ಳಗೆ...

ತತ್ವಶೀಲನ ಧ್ಯಾನ ಮೌನವೆ
ಅರಳಿ ಬಂದೊಲು ತೋರಿದೆ
ಒಲವು ತುಂಬಿದ ಮುಗುದೆ
ಎದೆಯಿಂ ಒಗೆದ ನಲ್ನುಡಿಯಂತಿದೆ...

ಇವತ್ತಿನ ಪೋಸ್ಟಿಂಗ್ ನಲ್ಲಿ ಇರುವ ತಪ್ಪು ಕಂಡು ಹಿಡಿಯುವಿರಾ?

Saturday, October 21, 2006

ಹೀಗೊಂದು ಪ್ರಶ್ನೆ....



ಈ ಚಿತ್ರವನ್ನು ಇಂದು ನಿಮಗೆ ತೋರಿಸೋಣ ಅಂತ ನನ್ನ ಚಿತ್ರಗಳ ರಾಶಿಯಿಂದ ಇದನ್ನು ಆರಿಸಿ,ಏನು ಬರೆಯುವುದೆಂದು ಒಂದು ಕ್ಷಣ ಯೋಚಿಸಿದಾಗ ಒಂದು ಪ್ರಶ್ನೆ ಮನದಲ್ಲಿ ಮೂಡಿತು ಹೌದಲ್ಲಾ...ಈ ಪ್ರಶ್ನೆಗೆ ಉತ್ತರವೇನು? ಅಂತ ಗಹನವಾಗಿ ಯೋಚಿಸ ತೊಡಗಿದೆ.ಚಿತ್ರವನ್ನು ತಿರುಗಿಸಿ ,ಮುರುಗಿಸಿ ಬಾರಿ ಬಾರಿ ನೋಡಿದೆ ಮನಸ್ಸಿಗೆ ಬಂದ ಮೂರ್ನಾಲ್ಕು ಉತ್ತರಗಳಲ್ಲಿ ಯಾವುದೂ ಸರಿ ಇಲ್ಲಾ ಅನ್ನಿಸಿತು ಕಣ್ಣು ಪಿಳುಕಿಸುತ್ತಾ,ತಲೆ ಕೆರೆದು ಕೊಳ್ಳುತ್ತಾ ಯೋಚಿಸತೊಡಗಿದೆ ಯೋಚಿಸಿದಷ್ಟೂ ಉತ್ತರ ದೊರಕುವುದು ಹೆಚ್ಚೆಚ್ಚು ಕಠಿನವೆನ್ನಿಸ ತೊಡಗಿತು.

ಒಂದೆರಡರ ಪುಟ್ಟ ಮಗು ಅಪ್ಪ ಅಮ್ಮನೊಂದಿಗೆ ಅವರ ಯಾವುದೋ ಸ್ನೇಹಿತರ ಮನೆಗೆ ಹೋಗಿದೆ. ಅಪ್ಪ ಅಮ್ಮನ ಮಾತು-ಕಥೆ ಊಟ ನೋಟವೆಲ್ಲ ಮುಗಿದು ಇನ್ನೇನು ಮನೆಗೆ ಹೊರಡುವ ಘಳಿಗೆ ಹತ್ತಿರ ಬಂದಿದೆ. ಮಗುವಿಗೂ ಅತ್ಲಾಗೆ ನಮ್ಮನೇಗೆ ಯಾವಾಗ ಹೋದೇನಪ್ಪಾ ಅನ್ನಿಸಿಬಿಟ್ಟಿದೆ.ಅಪ್ಪ ಅಮ್ಮನಿಗಿಂಥಾ ಮೊದಲು ಚಪ್ಪಲಿ ಮೆಟ್ಟಿಕೊಂಡು ಜೋರುದನಿಯಲ್ಲಿ `ಬಾಯ್...ಬಾಯ್' ಅನ್ನುತ್ತಿದೆ. ಸ್ವಲ್ಪ ಕೀಟಲೆ ಮನಸ್ಸಿನ ಆತಿಥೇಯರು ಮಗುವಿಗೆ ಅದು ಜೀವನದಲ್ಲಿ ಈವರೆಗೆ ಕೇಳಿರುವುದರಲ್ಲೆಲ್ಲಾ ಅತ್ಯಂತ ಕಷ್ಟಕರವಾದ ಪ್ರಶ್ನೆ ಕೇಳಿ ಬಿಡುತ್ತಾರೆ.

ಮಗು ಅಮ್ಮನ ಕಡೆಗೊಮ್ಮೆ,ಅಪ್ಪನ ಕಡೆಗೊಮ್ಮೆ ನೋಡುತ್ತದೆ.ತನ್ನೆಲ್ಲಾ ಚಿಕ್ಕ ಚಿಕ್ಕ ನೋವಿಗೂ ಓಡಿಬಂದು `ನೋವಾಯ್ತಾ ಪುಟ್ಟಾ...' ಅಂತ ಮುದ್ದುಮಾಡಿ ಸಮಾಧಾನಿಸುವ ಅಪ್ಪ ಅಮ್ಮ ಇಂದೇಕೋ ಅದರ ಕೈ ಬಿಟ್ಟು ಬಿಟ್ಟಿದ್ದಾರೆ.ಇಬ್ಬರೂ ನಸುನಗುತ್ತಾ ಆ ಕಠಿಣ ಮನಸ್ಸಿನ ,ಬುದ್ದಿಗೇಡಿ ಪ್ರಶ್ನೆ ಕೇಳಿದ `ಆಂಟಿ/ಅಂಕಲ್ ಪಕ್ಷ ಸೇರಿ ಬಿಟ್ಟಿದ್ದಾರೆ.ಮಗುವಿನ ಕಣ್ಣಲ್ಲಿ ನಿಧಾನವಾಗಿ ಕಂಬನಿ ತುಂಬಿ ಕೊನೆಗೆ `ಇನ್ನು ತಡಕೊಳ್ಳಲಾರೆ'ಅಂತ ಮಗು ಜೋರಾಗಿ ಅಳಲು ಶುರು ಮಾಡುತ್ತೆ.ಆಗ ಅಮ್ಮ ಅಪ್ಪ ಮಗುವನ್ನೆತ್ತಿಕೊಡು ಸಮಾಧಾನ ಮಾಡುತ್ತಾರೆ ಅಂಥಾದೊಂದು ಅರ್ಥಹೀನ ಪ್ರಶ್ನೆ ಕೇಳಿದ ಹಿರಿಯರ ಮುಖದಲ್ಲೊಂದು ನಗೆ ಮೂಡುತ್ತದೆ ಅಟ್ ದ ಕಾಸ್ಟ್ ಆಫ್ ಮಗುವಿನ ಅಳು!

ಅಷ್ಟಕ್ಕೂ ಅವರು ಮಗುವನ್ನು ಕೇಳಿದ ಪ್ರಶ್ನೆಯಾದರೂ ಏನು? " ನಿಂಗೆ ಅಮ್ಮ ಬೇಕೋ ಅಪ್ಪ ಬೇಕೋ...ಅಮ್ಮ ಬೇಕಾದ್ರೆ ಅಪ್ಪನ್ನ ನಾವೇ ಇಟ್ಟಕೊಂಡು ಬಿಡ್ತೀವಿ...ಅಪ್ಪ ಬೇಕಾದ್ರೆ ಅಮ್ಮ ಇಲ್ಲೇ ಉಳೀತಾಳೆ ನೀನು ನಿಮ್ಮಪ್ಪನ ಜೊತೆ ಮನೆಗೆ ಹೋಗು....ಹೇಳು ನಿಂಗೆ ಇವರಿಬ್ಬರಲ್ಲಿ ಯಾರನ್ನ ಕಂಡ್ರೆ ಇಷ್ಟಾ...?" ಪಾಪದ ಮಗು ಯಾರನ್ನ ಅಂಥಾ ಆರಿಸುತ್ತೇ?ಏನೂ ಉತ್ತರ ಹೇಳಲಾರದೇ ಮಗು ಅಳುತ್ತೇ ಅಂತ ಇಂಥಾ ಘನಂದಾರಿ ಪ್ರಶ್ನೆ ಕೇಳಿದ ಪುಣ್ಯಾತ್ಮರಿಗೂ ಗೊತ್ತು ಮತ್ತು ಅವರಿಗೆ ಬೇಕಾಗಿರುವುದೂ ಅದೇ !

ಇಂಥಾ ಅರ್ಥವೇ ಇಲ್ಲದ, ಮಗುವನ್ನು ಅಳಿಸುವುದನ್ನು ಬಿಟ್ಟು ಬೇರೆ ಯಾವ ಉಪಯೋಗವೂ ಇಲ್ಲದ ಪ್ರಶ್ನೆಗಳಿಂದ ಆಗುವ ಉಪಯೋಗವಾದರೂ ಏನು? ನಾವುಗಳು ಜೀವನದಲ್ಲಿ ನಮಗೆ ನಾವು ಹಾಕಿಕೊಳ್ಳುವ ,ಅಥ್ವಾ ಬೇರೆಯವರು ನಮಗೆ ಹಾಕಿದಾಗ ಉತ್ತರ ತಿಳಿಯದೆ ತೊಳಲಾಡುವ ಪ್ರಶ್ನೆಗಳಲ್ಲಿ ಬಹುಪಾಲು ಇದೇ ಕೆಟಗರಿಯವು.ನಮ್ಮ್ನನ್ನು ಉತ್ತಮತೆಯ ಕಡೆಗೆ ಕರೆದುಕೊಂಡು ಹೋಗುವಪ್ರಶ್ನೆಗಳನ್ನು ಕಡೆಗಣಿಸಿ ಇಂಥಾ ಕೆಲಸಕ್ಕೆ ಬಾರದ ಪ್ರಶ್ನೆಗಳಿಗೆ ಉತ್ತರ ಹುಡುಕುವುದರಲ್ಲೇ ಜೀವನ ಕಳೆದು ಬಿಡುತ್ತೀವಿ ನಾವು.

ಅಷ್ಟಕ್ಕೂ ಈ ಮೊದಲು ನನ್ನ ತಲೆ ಅಂಡ್ ಸಮಯ ತಿಂದ ಮಹಾನ್ ಪ್ರಶ್ನೆ ಏನು ಗೊತ್ತಾ? `ಈ ಚಿತ್ರದಲ್ಲಿ ಹಸಿರು ಚೆನ್ನಾಗಿದೆಯೋ ಅಥ್ವಾ ನೀಲಿಯೋ?' ಎಂಬುದು!

`ಹಸಿರೂ ಚೆನ್ನಾಗಿದೆ ನೀಲಿಯೂ ಚೆನ್ನಾಗಿದೆ ಒಂದಕ್ಕೊಂದು ಪೂರಕವಾಗಿ ಎರಡೂ ಚೆನ್ನಾಗಿವೆ ಹಸಿರು ನೀಲಿಯ ಬಗ್ಗೆ ಪ್ರಶ್ನೆ ಕೇಳಿಕೊಳ್ಳುವುದನ್ನು ಬಿಟ್ಟು ಅವುಗಳ ಒಟ್ಟು ಸೌಂದರ್ಯವನ್ನು ನೋಡಿ ಸಂತೋಷ ಪಡುವುದನ್ನು ಕಲಿ ಮೊದಲು ಮಂಕುತಿಮ್ಮೀ...' ಅಂತ ನನಗೆ ನಾನು ಹೇಳಿ ಕೊಳ್ಳಲು ಒಂದಷ್ಟು ಸಮಯ ಹಿಡಿಯಿತು. ಆದರೆ ಹಾಗೆ ಹೇಳಿಕೊಂಡ ಮೇಲೆ ನೋಡಿದರೆ ಈ ಚಿತ್ರ ಮೊದಲಿಗಿಂತಾ ಇನ್ನೂ ಹೆಚ್ಚು ಅಂದವಾಗಿ ಕಾಣಿಸಿತು!

Thursday, October 19, 2006

ಯಾರಿಟ್ಟರೀ ಚುಕ್ಕೀ...

ಯಾರಿಟ್ಟರೀ ಚುಕ್ಕೀ...
ಯಾಕಿಟ್ಟರೀ ಚುಕ್ಕೀ...
ಚುಕ್ಕಿ...ಗಲ್ಲದ ಚುಕ್ಕಿ ಚುಕ್ಕೀ...
ಚುಕ್ಕೀ...ಗಲ್ಲದಾ ಅಂದದಾ ಚುಕ್ಕೀ...

Wednesday, October 18, 2006

ಚಿನ್ನದ ಟೋಪಿ... ಬಣ್ಣದ ಟೋಪಿ.....


ಕಳೆದ ವಾರಾಂತ್ಯ ಗೆಳತಿಯೊಬ್ಬಳ ಮನೆಗೆ ರಾತ್ರಿ ಅಲ್ಲೇ ಉಳಿಯುವ ಪ್ರೋಗ್ರಾಂ ನೊಂದಿಗೆ ಹೊರಟು ನಿಂತಾಗ ಕೊನೆಗಳಿಗೆಯಲ್ಲಿ `ಯಾವುದಕ್ಕೂ ಟೈಂ ಪಾಸ್ ಗೆ ಇರಲಿ' ಎರಡು ಉಂಡೆ ಉಲನ್ ಅನ್ನೂ ಕ್ರೋಶೆ ಯನ್ನೂ ಚೀಲಕ್ಕೆ ಸೇರಿಸಿದ್ದೆ ಸುಮಾರು ಎರಡು ಘಂಟೆಗಳ ಡ್ರೈವ್ ನಂತರ ಅವಳ ಮನೆ ತಲುಪಿದಾಗ ಆಕಾಶ ಕೆಂಪು ಕೆಂಪಾಗುತ್ತಿದ್ದ ಹೊತ್ತು.ಕಾಫಿ ತಿಂಡಿಯೊಂದಿಗೆ ಆರಂಭವಾದ ಗಲ ಗಲ ಎಂಬ ಮಾತು ನಗೆಗಳ ಅಲೆಗಳು ಮನೆ ತುಂಬಾ ತುಂಬಿ ಬ್ಯಾಕ್ ಯಾರ್ಡ್ ಗೂ ಹರಿದವು.

ಮಾತುಕಥೆ ಬೆಂಗಳೂರಿನ ಸೈಟುಗಳ ಭಯಂಕರ ರೇಟು,ಬುಶ್ಶಣ್ಣನ ಇರಾಕ್ ವಾರು,ಕರ್ನಾಟಕದಲ್ಲಿ ಕುಮಾರಣ್ಣನ ದರ್ಬಾರು,ಸ್ಪಿನಾಚ್ ನ ಇ-ಕೊಲಿ ಗಳಂಥ ಜನರಲ್ ಟಾಪಿಕ್ ಗಳ ಕಡೆಗೆ ತಿರುಗಿದಾಗ ನಾನು ಮೆಲ್ಲಗೆ ಕ್ರೋಶ ಮತ್ತು ಉಲನ್ ಗಳ ಸರಸಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.ಕೈ ಬೆರಳು ಗಳಿಗೆ ಉಲನ್ ,ಕ್ರೋಶಾದೊಂದಿಗೆ ಡ್ಯಾನ್ಸ್ ಮಾಡಲು ಬಿಟ್ಟು ,ಬಾಯಲ್ಲಿ ಪ್ರಪಂಚದೆಲ್ಲ ವಿಷಯ ಮಾತಾಡುತ್ತಿದ್ದರೂ ನನ್ನ ಮನದ ಅಂಗಳದಲ್ಲ ಮೂಡುತ್ತಿದ್ದ ಚಿತ್ರವೇ ಬೇರೆ...
ಶಾಲೆಯ ಮಕ್ಕಳು ವೃತ್ತಕಾರವಾಗಿ ನೆಲದ ಮೇಲೆ ಕೂತಿದ್ದಾರೆ.ಅವರಲ್ಲೊಂದು ಹುಡುಗ ಖಾಲಿ ಚೀಲವನ್ನೋ,ಕರ್ಛೀಪ್ ಅನ್ನೋ ಹಿಡಿದುವೃತ್ತದ ಸುತ್ತ ಗುಂಡಗೆ ಸುತ್ತು ಹಾಕಲಾರಂಭಿಸುತ್ತಾ ಹಾಡುತ್ತಾನೆ.ಕುಳಿತ ಮಕ್ಕಳು ಒಕ್ಕೊರಲಿನಿಂದ ಉತ್ತರ ಕೊಡುತ್ತಾರೆ
ಟೋಪಿ ಬೇಕೆ ಟೋಪಿ...?
ಎಂಥಾ ಟೋಪಿ...?
ಚಿನ್ನದ /ಬಣ್ಣದ ಟೋಪಿ....
ಎಷ್ಟು ರುಪಾಯೀ...?
ಸಾವಿರ ರೂಪಾಯಿ....

ಎಲ್ಲಾ ಮಕ್ಕಳೂ `ನಂಗೇ... ನಂಗೇ' ಅಂತ ಕೂಗಿದಾಗ ಎಲ್ಲರಿಗೂ ಬೆನ್ನು ಬಗ್ಗಿಸಿ ತಲೆಯನ್ನು ನೆಲಕ್ಕಿಡಲು ಸೂಚಿಸುತ್ತಾನೆ. ನಂತರ ಯಾರಾದರೊಬ್ಬರ ಮೇಲೆ ತನ್ನ ಕೈಲಿದ್ದ ಚೀಲವನ್ನು ಹಾಕಿ ಓಡುತ್ತಾನೆ . ಹೀಗೆ ಟೋಪಿ ಪಡೆದುಕೊಂಡವನು ಅದನ್ನು ಹಿಡಿದು ತನಗೆ ಟೋಪಿ ಹಾಕಿದವನ ಹಿಂದೆ ಓಡಿ ಮೊದಲನೆಯವ ಇವನ ಜಾಗದಲ್ಲಿ ಕೂರುವ ಮುನ್ನ ಅವನನ್ನು ಮುಟ್ಟಿಸಬೇಕು.ಹಾಗೆ ಮುಟ್ಟಿಸಲಾಗದಿದ್ದರೆ ಹೊಸ ಹುಡುಗನೊಂದಿಗೆ `ಟೋಪಿ ಬೇಕೆ ಟೋಪಿ ...' ಅಂತ ಆಟ ಮೊದಲಿಂದ ಶುರುವಾಗುತ್ತದೆ ಚಿಕ್ಕಂದಿನಲ್ಲಿ ನಾವುಗಳು ಗಂಟಾನುಗಟ್ಟಲೆ ಆಡುತ್ತಿದ್ದ ಬೇಜಾರೇ ಬರದ ಸಖತ್ತು ಖುಶಿಯ ಆಟ ಇದು...

ಬಾಲ್ಯದ ಈ ಸವಿನೆನಪಿನಿಂದ ಮನಸ್ಸು ಮುದಗೊಂಡಿದ್ದ ಸಮಯದಲ್ಲಿ ಹೊಟ್ಟೆ ಸೇರಿದ ಮೃದುವಾದ ಮಲ್ಲಿಗೆ ಇಡ್ಲಿಗಳ ಲೆಕ್ಕ ಸಿಗಲಿಲ್ಲ.ಹರಟೆಗೊಂದು ಅರ್ಧವಿರಾಮ ಹಾಕಿ `ಹನ್ನೊಂದಾಯಿತು ಇನ್ನು ಮಲಗುವಾ'ಎಂದು ಒಬ್ಬರಿಗೊಬ್ಬರು ಹೇಳಿಕೊಳ್ಳುವ ಹೊತ್ತಿಗೆ ಗೆಳತಿಯ ಪುಟ್ಟ ಮಗನಿಗೆ ಕೆಂಪು ಗುಲಾಬಿ ಹೂವಂತಿದ್ದ ಈ ಸುಂದರ ಟೋಪಿ ತಯಾರಾಗಿತ್ತು....


ಧನ್ಯವಾದ-ನನಗೆ ಅರ್ಧಂಬರ್ದ ನೆನಪಿದ್ದ `ಟೋಪಿ ಹಾಡಿಗೆ' fill in the blanks ಮಾಡಿದ ಮೀರಾಗೆ ಥ್ಯಾಂಕ್ಸ್

Tuesday, October 17, 2006

ರಾಣಿ ಹೂ

ಕದ್ದ ಹೂವಲ್ಲ ಬಿದ್ದ ಹೂವಲ್ಲ
ಮುದ್ದುಬಳ್ಳಿಯಲ್ಲಿದ್ದ ಹೂ
ಚೆಂಡು ಹೂವಲ್ಲ ಬೆಂಡು ಹೂವಲ್ಲ
ಮುಳ್ಳುಹೂವಲ್ಲ ದುಂಡುಹೂ

ಕಿತ್ತ ಹೂವಲ್ಲ ಅತ್ತ ಹೂವಲ್ಲ
ಇತ್ತ ಬಾ ಎಂದ ಹೂ
ನನ್ನಲಿಲ್ಲವು ಮಿಕ್ಕಹೂ
ಒಂದೆ ಒಂದಿದೆ ದೀಪ ಹೂ
-ಕೆ. ಎಸ್ .ನ

ಕೋರಿಕೆ- ದುರ್ಗದ ಹಿತೈಷಿಗಳೆಲ್ಲರ ಬ್ಲಾಗ್ ನ ಲಿಂಕ್ ಅನ್ನು ಚಿತ್ರ-ದುರ್ಗದಲ್ಲಿ ಹಾಕಲು ಈ ಮೂಲಕ ಅನುಮತಿ ಕೋರುತ್ತಿರುವೆ. ನೀವುಗಳೆಲ್ಲರೂ ಒಪ್ಪಿಗೆ ಕೊಡುವಿರೆಂದು ನಂಬಲೇ...?

Monday, October 16, 2006

ಲಾಸ್ ವೆಗಸ್ ಬಣ್ಣದ ಬೆಡಗು

ಕ್ಯಸಿನೋಗಳಿಂದಾಗಿ ವಿಶ್ವ ವಿಖ್ಯಾತಿ ಪಡೆದಿರುವ ಲಾಸ್ ವೆಗಸ್ ನ `ರಿಯೋ ಗ್ರ್ಯಾಂಡ್' ಕ್ಯಸಿನೋ ದ ಶೋ ಒಂದರಲ್ಲಿ ತೆಗೆದ ಚಿತ್ರ ಇದು.ನರಪಿಳ್ಳೆ ಯೂ ವಾಸಿಸದ ಮರಳು ಕಾಡಿನಲ್ಲಿ ಈ ಚಮಕ್ ಚಮಕ್ ಸಿಟಿ ಕಟ್ಟಿ ಡಾಲರ್ ಕೊಳ್ಳೆ ಹೊಡೆಯುವ ಅಮೆರಿಕನ್ನರ ವ್ಯವಹಾರ ಚಾತುರ್ಯ ಎಂತವರನ್ನೂ ಮರಳು ಮಾಡುತ್ತದೆ.ಬರಿಯ ಸ್ಲಾಟ್ ಮೆಶಿನ್ ಗಳೆ ಅಲ್ಲದೇ ಪ್ರವಾಸಿಗರಿಗೆ ಮನರಂಜನೆ ಒದಗಿಸುವುದೂ ಲಾಸ್ ವೆಗಸ್ ನವೈಶಿಷ್ಯ.ಇಲ್ಲಿನ ವಿವಿಧ ಥೀಮ್ ಕ್ಯಸಿನೋಗಳ ವೈಭವವನ್ನೂ ನೋಡಿಯೇ ಆನಂದಿಸಬೇಕು!

Saturday, October 14, 2006

ನಗೂ... ಎಂದಿದೇ ಮಂಜಿನಾ ಬಿಂದೂ...

`ನಗೂ ಎಂದಿದೆ ಮಂಜಿನಾ ಬಿಂದು...
ನಲೀ ಎಂದಿದೇ ಗಾಳಿ ಇಂದು...'
ಜಾನಕಿಯವರು ಹಾಡಿರುವ ಪಲ್ಲವಿ ಅನುಪಲ್ಲವಿ ಚಿತ್ರದ ಸುಂದರ ಹಾಡು.ಸುಪ್ರಸಿದ್ದ ನಿರ್ದೇಶಕ ಮಣಿರತ್ನಂ ಅವರ ಮೊದಲ ಚಿತ್ರ ಇದು.ಈ ಚಿತ್ರಕ್ಕೆ ಆಗ (1983ರಲ್ಲಿ) ಮೂರನೇ ಅತ್ಯುತ್ತಮ ಚಿತ್ರ ಎಂದು ಕರ್ನಾಟಕ ರಾಜ್ಯ ಪ್ರಶಸ್ತಿ ಕೂಡಾ ಬಂದಿತ್ತು ಎಂದು ಎಲ್ಲೋ ಓದಿದ ನೆನಪು R.N.ಜಯಗೋಪಾಲ್ ಬರೆದಿರುವ ಸುಂದರ ಗೀತೆಗಳಿಗೆ ಇಳೆಯರಾಜಾ ಅತ್ಯುತ್ತಮ ಸಂಗೀತ ನೀಡಿದ್ದಾರೆ ಬಾಲುಮಹೇಂದ್ರ ಅವರ ಕಣ್ ಸೆಳೆವ ಸಿನಿಮ್ಯಾಟೋಗ್ರಫಿ ಚಿತ್ರದ ಪ್ಲಸ್ ಪಾಯಿಂಟ್

ಹಮಾರೆ ತುಮಾರೆ (ಒಂದು ಸಣ್ಣ ಪಾತ್ರ),ವೋ ಸಾತ್ ದಿನ ಎಂಬ ಎರಡೇ ಎರಡು
ಹಿಂದಿ ಚಿತ್ರಗಳನ್ನೂ,ಒಂದು ತೆಲುಗು ಚಿತ್ರವನ್ನೂ ಮಾಡಿ ಸುಮ್ಮನೆ ಕೂತಿದ್ದ ಅನಿಲ್ ಕಪೂರ್ ಗೆ ನಿಜವಾದ ಬ್ರೇಕ್ ಕೊಟ್ಟಿದ್ದು ಪಲ್ಲವಿಅನುಪಲ್ಲವಿ.ನಂತರ ಅನಿಲ್ `ಮೇರಿ ಜಂಗ್'`ಕರ್ಮ'ದಂತಾ ಹಿಟ್ ಚಿತ್ರಗಳಲ್ಲಿ ನಟಿಸಿ ಹಿಂದಿಯಲ್ಲಿ ಬೆಳೆದರೂ ತಾವು ನಟಿಸಿದ ಈ ಕನ್ನಡ ಚಿತ್ರವನ್ನು ಮರೆಯಲಿಲ್ಲ
ಈಗ ಮಣಿರತ್ನಂ ಪ್ರಸಿದ್ದ ನಿರ್ದೇಶಕರಾಗಿರುವುದರಿಂದ ಅನಿಲ್ `ಪಲ್ಲವಿ ಅನುಪಲ್ಲವಿ'ಯನ್ನು ನೆನಪಿಸಿಕೊಳ್ಳುತ್ತಾರೆ ಅಂತ ಕೊಂಕು ತೆಗೆಯಬಹುದಾದರೂ ರಾಷ್ಟ್ರೀಯ ವಾಹಿನಿಯ ಸಂದರ್ಶನವೊಂದರಲ್ಲಿ ಹಿಂದಿ ನಟನೊಬ್ಬ "ಕನ್ನಡದ" ಚಿತ್ರವನ್ನು ನೆನಪಿಸಿ ಕೊಂಡಿದ್ದಕ್ಕೆ ನನಗಂತೂ ಖುಶಿಯಾಗಿತ್ತು. ತಾರೆ ಲಕ್ಷ್ಮೀ ಚಿತ್ರದ ನಾಯಕಿಯಾಗಿದ್ದರೆ ಹಿಂದಿಯ ಕಿರಣ್ ವ್ಯಾಲರಿ ಎರಡನೇ ನಾಯಕಿ.ಈ ಕಿರಣ್ ಕಮಲಹಾಸನ್ ರೊಂದಿಗೆ ಸಾಗರ್ ನಲ್ಲಿ ಕುಣಿದಿರುವ ಅದೇ `ಓ ಮಾರಿಯಾ...'

2001ರಲ್ಲಿ ನಾವು ಲಂಡನ್ ನಿಂದ ಬಾಂಬೆಗೆ ಹೋಗುವಾಗ ಅನಿಲ್ ಕಪೂರ್ ನಾವಿದ್ದ ವಿಮಾನದಲ್ಲೇ ಪಯಣಿಸಿದರು.ಕಡು ನೀಲಿ ಜೀನ್ಸ್ ಮತ್ತು ಡೆನಿಮ್ ಜ್ಯಾಕೆಟ್ ನಲ್ಲಿ ಸೊಗಸಾಗಿ ಕಾಣುತ್ತಿದ್ದ ಅನಿಲ್ ಕಪೂರ್ ತಾನು`ಸ್ಟಾರ್ 'ಎಂಬ ಬಿಂಕವೇನೂ ತೋರದೆ ನಸು ನಗುತ್ತಾ ಎಲ್ಲರನ್ನೂ ಮಾತಾಡಿಸುತ್ತಿದ್ದರು ನನ್ನ ಹತ್ರ ಆಗ ಕ್ಯಾಮರಾ ಇರಲಿಲ್ಲವಾದ್ದರಿಂದ ಅವರ ಫೋಟೋ ತೆಗೆಯಲು ಆಗಲಿಲ್ಲ ಮತ್ತು ನಾನು`ಪಲ್ಲವಿ ಅನುಪಲ್ಲವಿ 'ನೋಡಿರಲಿಲ್ಲವಾದ್ದರಿಂದ ಅದರ ಬಗ್ಗೆ ಅವರೊಡನೆ ಮಾತಾಡಲಾಗಲಿಲ್ಲ!

ಬಾಂಬೆ ಏರ್ ಪೋರ್ಟ್ ನಲ್ಲಿ ನಾವುಗಳು ಮಿಸ್ಸಿಂಗ್ ಆದ ನಮ್ಮ ಸೂಟ್ ಕೇಸ್ ಗೋಸ್ಕರ ಪರದಾಡುತ್ತಿರುವಾಗ ಅನಿಲ್ ಕಪೂರ್ ತಮ್ಮ ಡ್ರೈವರ್ ನೊಂದಿಗೆ ನಗುತ್ತಾ ಹರಟುತ್ತಾ ಹೋಗುತ್ತಿದ್ದದು ಕಾಣಿಸಿತು.ಮತ್ತರ್ಧ ಘಂಟೆಯಲ್ಲಿ `ಮುಂದಿನವಾರ ಬನ್ನೀ' ಅಂತ ಹೇಳಿಸಿಕೊಂಡು ಮುಖ ಸಪ್ಪೆ
ಮಾಡಿಕೊಂಡು ಮಾತುಂಗಾಕ್ಕೆ ಹೋಗುವಾಗ `ಈ ಸಾರಿ ಪಲ್ಲವಿ ಅನುಪಲ್ಲವಿ ನೋಡ್ ಬೇಕು'ಅಂತ ನಾವಿಬ್ಬರೂ ಆಡಿಕೊಂಡ ಮಾತಿಗೆ ಐದು ವರ್ಷಗಳಾದರೂ ಅದ್ಯಾಕೋ ಇನ್ನೂ `ಪಲ್ಲವಿ ಅನುಪಲ್ಲವಿ 'ಯನ್ನು ನೋಡಲು ಆಗಿಯೇ ಇಲ್ಲ....

Friday, October 13, 2006

ಮೆರ್ಸೆಡ್ ಮಡಿಲ ಇಬ್ಬರು ಲಿಲಿಪುಟ್ ಸ್ನೇಹಿತರ ಎರಡು ಚಿತ್ರಗಳು




ಈಗೆರಡು ವರುಷಗಳ ಹಿಂದೆ ಯೋಸಿಮಿಟಿಯ Sentinel Bridge ಮೇಲೆ ನಿಂತು ಎಲ್ಲರೂ ಆಹಾ!ಬೃಹದಾಕಾರವಾದ`ಹಾಫ್ ಡೂಮ್(Half Dome)' ಮರ್ಸೆಡ್ ನಲ್ಲಿ ಪ್ರತಿಫಲಿತವಾಗಿ ಎಷ್ಟ್ ಚೆನ್ನಾಗಿ ಕಾಣ್ತಾ ಇದೆ ಅಂತ ಅನ್ತಿದ್ರೆ ನನ್ನ ಕಣ್ಣು ಸೆಳೆದಿದ್ದು ಮಾತ್ರ ಬ್ರಿಡ್ಜ್ ನ ತಳದಲ್ಲಿ ನೆತ್ತಿಯ ಮೇಲೆ ಮಂಜಿನ Cap ತೊಟ್ಟು ನೀರಲ್ಲಿ ನಿಂತಿದ್ದ ಈ ಮೋಟು ಮರದ ಬೊಡ್ಡೆಗಳು!

ಮೊನ್ನಿನ ಭೇಟಿಯಲ್ಲಿ ಮರ್ಸೆಡ್ ನ ಮಡಿಲಲ್ಲಿ ಈ ನನ್ನ ಲಿಲಿಪುಟ್ ಸ್ನೇಹಿತರು ಕಾಣುತ್ತಾರಾ ಅಂತ ಹುಡುಕಿದೆ ಸಿಕ್ಕರು! ಈ ಬಾರಿ Cap ಏನೂ ಇಲ್ಲದೇ ಹಾಯಾಗಿ ತಂಗಾಳಿ ಕುಡಿಯುತ್ತಾ ನಿಂತಿದ್ದರು ನನಗ್ಯಾಕೋ ನಾವು ಚಿಕ್ಕಂದಿನಲ್ಲಿ ಹೇಳುತ್ತಿದ್ದ ಹಾಡೊಂದರ `ನೀರಲ್ಲಿ ನೆಂದು...ಬೆಂಕೀಲಿ ಬೆಂದು...' ಎಂಬ ಸಾಲು ನೆನಪಾಯಿತು ಸದಾಕಾಲ ನೀರಲ್ಲಿ ನೆನೆಯುತ್ತಾ, ಬಿರು ಬೇಸಿಗೆಯ ದಿನಗಳಲ್ಲಿ ಬಿಸಿಲ ಬೆಂಕಿಯಲ್ಲಿ ಬೇಯುತ್ತಾ,ಕಡುಚಳಿಯ ರಾತ್ರಿಗಳಲ್ಲಿ ಕೊರೆವ ಮಂಜಿನಲ್ಲಿನಡುಗುತ್ತಾ ನಿಂತ ಈ ಲಿಲಿಪುಟ್ಟರ ಸಹನೆಯಲ್ಲಿ ಕೊಂಚವಾದರೂ ನನಗೆ ಬರಲಿ ಅಂತ ಆಶಿಸಿದೆ

Merced & it's Many Moods-5

Thursday, October 12, 2006

ಚುಮು ಚುಮು ನಸುಕಿನ ಹೊಸ್ತಿಲಲೀ...

ಘಮ ಘಮ ಮಲ್ಲಿಗೆ ಬನವಾಗಿದೆ ಈ ಇಳೆ
ಚುಮು ಚುಮು ನಸುಕಿನ ಹೊಸ್ತಿಲಲೀ...

ಘಮ ಘಮ ಮಲ್ಲಿಗೆ ಬನ ಅಲ್ಲಿರಲಿಲ್ಲ...ಅಲ್ಲಿದ್ದುದು ಬ್ಲ್ಯಾಕ್ ಓಕ್, ಪೈನ್, ಸಿಡರ್ ಮತ್ತು ದೈತ್ಯ ಸಿಕೋಯಾಗಳ ಬನ.ಇವುಗಳಿಗೂ ಅವುಗಳದ್ದೇ ಆದ ವಿಶಿಷ್ಟ ವಾಸನೆ ಇರುವುದಾದರೂ ಅದನ್ನು `ಘಮ ಘಮ 'ಎನ್ನಲಾಗದು ಅಷ್ಟೇ...
ಇನ್ನು ಚುಮು ಚುಮು ನಸುಕು? ಎಸ್,ಅದು ಇತ್ತು!
ಇದು ಚುಮು ಚುಮು ನಸುಕಿನಲ್ಲಿ ಮೆರ್ಸೆಡ್ ನ ಚಿತ್ರ.
ಆಫ್ ಕೋರ್ಸ್,ನಮ್ಮ ಕ್ಯಾಮರಣ್ಣನ ಕೊಂಚ ಸ್ಪೆಶಲ್ ಎಫೆಕ್ಟ್ ನಲ್ಲಿ
Merced & it's Many Moods-4

Wednesday, October 11, 2006

ಸರಳ ಸುಂದರಿ


ಕಪ್ಪು-ಬಿಳುಪು ಚಿತ್ರಗಳು ಬಣ್ಣದ ಫೋಟೋಗಳಷ್ಟು ಆಕರ್ಷಕವಾಗಿರುವುದಿಲ್ಲ ನಿಜ.ಆದರೆ ಈ ಕಪ್ಪು ಬಿಳುಪು ಚಿತ್ರಗಳು ನೋಡುಗನಲ್ಲಿಒಂದು ರೀತಿಯ ಆತ್ಮೀಯತೆ ತೋರಿ ಹತ್ತಿರವಾಗುತ್ತವೆ ಅಂತ ನನಗನ್ನಿಸುತ್ತೆ.
image ಗಳಲ್ಲಿನ ಸರಳತೆಯೇ ಇದಕ್ಕೆ ಕಾರಣ.ಕಪ್ಪು-ಬಿಳುಪು ಫೋಟೋಗಳು ನೋಡುಗನನ್ನು ಅನಗತ್ಯವಾಗಿ distract ಮಾಡುವುದಿಲ್ಲ.ನೆರಳು-ಬೆಳಕಿನ ವಿನ್ಯಾಸವನ್ನುBlack & White ಫೋಟೋಗಳು ಅನುಪಮವಾಗಿ ಸಾಧಿಸುತ್ತವೆ.ಕಪ್ಪು-ಬಿಳುಪು ಚಿತ್ರಗಳಲ್ಲಿನ Depth ಬಣ್ಣದ ಚಿತ್ರಗಳಲ್ಲಿ ಕಾಣದು
ಯಾವುದೇ ಬಣ್ಣದ ಬೆಡಗಿಲ್ಲದೇ `ಮರ್ಸೆಡ್' ಸರಳ ಸುಂದರಿಯಾಗಿ ಈ ಚಿತ್ರದಲ್ಲಿ ಕಂಗೊಳಿಸುತ್ತಿದ್ದಾಳೆ ಅಂತ ನಿಮಗನ್ನಿಸುವುದಿಲ್ಲವೇ?
Merced & it's Many Moods-3

Tuesday, October 10, 2006

ಮಂಜು ಮಣಿಗಳ ಮುಡಿದು ಮೆಲ್ಲನೆ ನಡೆವವಳ್ಯಾರ...


2004ರ ಡಿಸೆಂಬರ್ ಕೊನೆವಾರದಲ್ಲಿ ಯೋಸಿಮಿಟಿಯಲ್ಲಿ ಮಂಜು ಬೀಳುತ್ತಿತ್ತು ತಂಪು ತಂಪು ಗಾಳಿಯದೇ ಸಾಮ್ರಾಜ್ಯ ಮಂಜಿನ ಮೇಲ್ಸೆರಗು ಹೊದ್ದು, ಮಂಜು ಮಣಿಗಳ ಮುಡಿದು ಮರ್ಸೆಡ್ ಮೆಲ್ಲ ಮೆಲ್ಲನೆ ನಡು ನಡುಗುತ್ತಾ ನಡೆಯುತ್ತಿದ್ದಳು

ತಂಪಿನ ತುಟಿಯಾ ತೋರಿ
ಮಂಜು ಮಣಿ ಮುಡಿದುಕೊಂಡು
ಮಲ್ಲಗೆ ಹರಿವವಳ್ಯಾರಾ
ಮರ್ಸೆಡ್ ಏನಾ?

ಅಂತ ಗುನುಗಿಕೊಂಡೆ....

Merced & it's Many Moods-2

Monday, October 09, 2006

Merced & it's Many Moods

ನೆನ್ನೆ ಯೊಸಿಮಿಟಿಯ ಮರ್ಸೆಡ್ ನದಿಯ ಸೌಂದರ್ಯ ಸವಿಯುತ್ತಿದ್ದಾಗ ಈ ಯೋಚನೆ ಬಂದಿದ್ದು
ವಿವಿಧ ಋತುಗಳಲ್ಲಿಮರ್ಸೆಡ್ ನ ವಿವಿಧ ಹಾವಭಾವಗಳನ್ನು ಸೆರೆಹಿಡಿದು ನಿಮಗೆ ತೋರಿಸುವುದು
ನೆನ್ನೆ ನಾನು ಸೆರೆಹಿಡಿದ ಫೋಟೋಗಳಲ್ಲದೇ ನನ್ನ ಪೋಟೋಕಣಜವನ್ನು ಕೆದಕಿದಾಗ ಮರ್ಸೆಡ್
ನೂರು ರೂಪಗಳಲ್ಲಿ, ನೂರು ಭಾವಗಳಲ್ಲಿ ನನ್ನ ಮುಂದೆ ಅರಳಿ ನಿಂತಳು!
ಆ ರಾಶಿಯಿಂದ ಆರಿಸಿದ ಚಿತ್ರಗಳನ್ನು ಪೋಣಿಸಿದ ಚಿತ್ರಮಾಲೆ `Merced & it's Many Moods'
ಇಂದಿನಿಂದ ಪ್ರಾರಂಭ.
ನನ್ನ , ನಿಮ್ಮ ಅನುಕೂಲಕ್ಕಾಗಿ ಒಂದೇ ಸ್ಥಳದಲ್ಲಿ ತೆಗೆದ ಫೋಟೋಗಳನ್ನೇ ಆರಿಸಿರುವೆ
ಸ್ನೇಹದಿಂದಲೋ ಎಂಬಂತೆ ನದಿಯೆಡೆಗೆ ಬಾಗಿರುವ ಮರವೇ ನನಗೆ ನಿಮಗೆ ಗುರುತು..

Saturday, October 07, 2006

ಜಾತ್ರೆಯಲ್ಲಿ...



ಆಗಷ್ಟೇ ಅರಳುತ್ತಿರುವ ಪುಟ್ಟ ಮೊಗ್ಗಿನಂಥಾ ಮುದ್ದು ಹುಡುಗನೊಬ್ಬ ಜಾತ್ರೆಗೆ ಬಂದಿದ್ದಾನೆ

ಅದೂ ಇದೂ ಅಂತೆಲ್ಲಾ ನೋಡಿದ ಮೇಲೆ ಅವನಿಗೆ `ಮೆರ್ರಿ-ಗೋ-ರೌಂಡ್' ನಲ್ಲಿ ಕೂರುವ ಆಸೆಯಾಗಿದೆ ಯಾವುದೇ ಆರೇಳರ ಹುಡುಗನಿಗಿರಬಹುದಾದ ತೀರಾ ಸಾಮಾನ್ಯ ಆಸೆ ಅದು ಆದರೆ ಅವನಿಗೇನೋ ಸಂಕೋಚ,ಹಿಂಜರಿಕೆ..."ಅದಕ್ಕಿಂಥಾ ಹೆಚ್ಚಾಗಿ ನಾನೆಲ್ಲಿ ಕೂರಲೀ" ಎಂಬ ದೊಡ್ಡ ಪ್ರಶ್ನೆ ಭಾದಿಸುತ್ತಿದೆ ಏಕೆಂದರೆ ಅವನೊಬ್ಬ ಕಪ್ಪು ಹುಡುಗ! ಆ ಕಪ್ಪು ಪುಟಾಣಿಗೆ ತುಂಬಾ ಯೋಚನೆಯಾಗಿ ಹೀಗೆ ಕೇಳುತ್ತಾನೆ....

ಈ ಮೆರ್ರಿ-ಗೋ-ರೌಂಡ್ ನಲ್ಲಿ `ಜಿಮ್ ಕ್ರೋ'ವಿಭಾಗ ಎಲ್ಲಿದೆ ಮಹನೀಯರೇ...

ಏಕೆಂದರೆ ನನಗೆ ಇದರಲ್ಲೊಂದು ಸುತ್ತು ಸವಾರಿ ಮಾಡಬೇಕೆಂದು ಆಸೆಯಾಗುತ್ತಿದೆ

ನಮ್ಮ ದಕ್ಷಿಣದಲ್ಲಿ ಹಾಗೆಲ್ಲಾ ಬಿಳಿಯರ ಪಕ್ಕ ಕರಿಯನಾದ ನಾನು ಕೂರುವಂತಿಲ್ಲಾ

`ಜಿಮ್ ಕ್ರೋ'ಬೋಗಿಗಳೆಂದೇ ದಕ್ಷಿಣದ ರೈಲುಗಳಲ್ಲಿ ನಮಗೆ ಬೇರೆ ಬೋಗಿಗಳಿವೆ

ಬಸ್ಸಿನಲ್ಲಿ ಸಹ ನಮ್ಮನ್ನು ಬೇರೆಯಾಗಿ ಹಿಂದೆ ಕೂರಿಸುತ್ತಾರೆ

ಆದರೆ ಈ ಮೆರ್ರಿ-ಗೋ-ರೌಂಡ್ ನಲ್ಲಿ ನನಗೆ ಹಿಂದೆ ಯಾವುದು ಮುಂದೆ ಯಾವುದುಅಂತ ಗೊತ್ತಾಗುತ್ತಿಲ್ಲಾ....

ಇಲ್ಲಿ ಕಪ್ಪು ಹುಡುಗನಿಗೋಸ್ಕರ ಇರುವ ಕುದುರೆಯಾವುದು? ಅಂತ ಸ್ವಲ್ಪ ಹೇಳ್ತೀರಾ.....

ಲಾಂಗ್ಸ್ಟನ್ ಹ್ಯೂಗ್ಸ್ ಬರೆದಿರುವ "ಜಾತ್ರೆಯಲ್ಲಿ ಕಪ್ಪುಹುಡುಗ" ಕವನ ಓದಿದಾಗ ಗಂಟಲು ಬಿಗಿದು ಹೋಯಿತು.ಕಣ್ಣು ಮಂಜಾದವು ಮೈಯ ರಕ್ತವೆಲ್ಲಾ ಕುದ್ದು ಹೋಯಿತು

ನಿಮಗಾಗಿ ಈ ಕವನ...
Merry-Go-Round by Langston Hughes

COLORED CHILD AT CARNIVAL

Where is the Jim Crow section

On this merry-go-round,

Mister, cause I want to ride?

Down South where I come from

White and colored

Can't sit side by side.

Down South on the train

There's a Jim Crow car.

On the bus we're put in the back

—But there ain't no back

To a merry-go-round!

Where's the horse

For a kid that's black?

ಅಯ್ಯೋ.. ಈ ಬಿಳಿಯರು ಮಾಡಿರುವ ಕೆಟ್ಟ ಬುದ್ದಿಗೆ ಕೊನೆ ಮೊದಲೇ ಇಲ್ಲಾತುಂಬಾ ಕ್ರೂರಿಗಳಪ್ಪಾ...

ಅಂಥಾ ಉದ್ಗಾರ ತೆಗೆಯುತ್ತೀವಿ ನಾವು....

ಹುಡುಗಿ ಕಪ್ಪು ನಮಗೆ ಬೇಡಾ...,ಮಗು ಬಣ್ಣ ಕಡಿಮೆ....,ಅವನಾ ತೊಳೆದ ಕೆಂಡ...ಏಯ್ ಕರಿ ಕಪ್ಪೇ..ಬಾರೋ ಇಲ್ಲೀ...,ನಿಮ್ಮ ಮಗಳು ಬೆಳ್ಳಗಿಲ್ಲಾ ವರದಕ್ಷಿಣೆಗೆ ದುಡ್ಡು ಕೂಡಿಸಲು ಈಗಿಂದಾನೇ ಶುರು ಮಾಡಿ...,ನೋಡೂ ಕಪ್ಪಗಿರೋ ಹುಡುಗೀರೂ ಯಾವ ಹುಡುಗ ಸಿಕ್ಕಿದರೂ ಸುಮ್ನೆ ಒಪ್ಕೊಂಡು ಮಾಡ್ಕೋಬೇಕು.... ಈ ಎಲ್ಲಾ ಮುತ್ತು ಉದುರಿಸುವವರು ಬಿಳಿಯರಲ್ಲಾ....ನಾವೇ
ಈಗ ಹೇಳಿ ನಮಗೂ ಬಿಳಿಯರಿಗೂ ಏನು ವ್ಯತ್ಯಾಸ?????

ಟಿಪ್ಪಣಿ-೧೮೬೦ ರ ದಶಕ ಅಮೆರಿಕನ್ ಸಿವಿಲ್ ವಾರ್ ನ ನಂತರ ಅಮೆರಿಕದ ದಕ್ಷಿಣ ಭಾಗದ ಬಹುಪಾಲು ರಾಜ್ಯಗಳು `ಜಿಮ್ ಕ್ರೋ'ಲಾ ಗಳನ್ನು ಜಾರಿಗೆ ತಂದವು.ಈ ಲಾ ಗಳ ಪ್ರಕಾರ ಸಾರ್ವಜನಿಕ ಸ್ಥಳಗಳಾದ ಶಾಲೆ,ಹೋಟೆಲ್,ಸಿನಿಮಾ,ನಾಟಕ ಮಂದಿರ,ಆಟದ ಮೈದಾನ ಮುಂತಾದುವುಗಳಲ್ಲಿ ಕರಿಯರ ಪ್ರವೇಶಕ್ಕೆಕಟ್ಟುಪಾಡು ವಿಧಿಸಲಾಯಿತು.ಸಾರ್ವಜನಿಕ ಬಸ್ಸುಗಳಲ್ಲಿ ಕರಿಯರ ಆಸನಗಳು ಬಿಳಿಯರ ಆಸನಗಳು ಎಂದು ನಿಗದಿಮಾಡಲಾಗಿತ್ತು.ಟ್ರೇನು ಗಳಲ್ಲೂ ಕರಿಯರಿಗೆ ಬೇರೆ ಡಬ್ಬಿಗಳಿರುತ್ತಿದ್ದವು.

`ಜಿಮ್ ಕ್ರೋ'೧೮೨೦ ರಲ್ಲಿ ಪ್ರಚಲಿತವಿದ್ದ ಹಾಡಿನಲ್ಲಿನ ಒಂದು ಕರಿಯನೊಬ್ಬನ ಪಾತ್ರ.

Friday, October 06, 2006

O ಫಾರ್ 'ಒರಾಕಲ್'


ಒರಾಕಲ್ ನ (oracle) ಹೆಸರು ಇತ್ತೀಚಿನ ದಿನಗಳಲ್ಲಿ ಕೇಳದವರು ಅಪರೂಪ.ಸಾಫ್ಟ್ ವೇರ್ ದೈತ್ಯನೆಂದೇ ಹೆಸರಾದ ಒರಾಕಲ್ ನ ಮುಖ್ಯ ಕಛೇರಿ ಬೇಏರಿಯಾದ ಬೆಲ್ಮಾಂಟ್ ಸಮೀಪದ "ರೆಡ್ ವುಡ್ ಶೋರ್ಸ್"ನಲ್ಲಿದೆ. ತಿಳಿನೀಲಿ ಆಗಸಕ್ಕೆ ಸ್ಪರ್ಧೆಯೊಡ್ಡುವಂತೆ ಕಾಣುವ Database-symbol style ಆಕಾರದಲ್ಲಿರುವ ಆರು ಆಫೀಸ್ ಕಟ್ಟಡಗಳು ತಲಾ 8 ರಿಂದ 16 ಸ್ಟೋರಿಗಳನ್ನು ಹೊಂದಿದೆ.ತಲಾ 5 ಸ್ಟೋರಿ ಹೊಂದಿರುವ ನಾಲ್ಕು ಕಟ್ಟಡಗಳಲ್ಲಿ ಪಾರ್ಕಿಂಗ್ ಲಾಟ್ ಬಿಟ್ಟರೆ ಬೇರೆ ಏನೂ ಇಲ್ಲ! ಅತ್ಯಾಧುನಿಕ ಫಿಟ್ ನೆಸ್ ಸೆಂಟರ್ ಮತ್ತು ವಿಶಾಲವಾದ ಕಾನ್ ಫ್ರೆ ನ್ಸ್ ರೂಂ ಗಳನ್ನು ಹೊಂದಿರುವ ಒರಾಕಲ್ ಸಮುಚ್ಚಯದ ಒಟ್ಟು ವಿಸ್ತೀರ್ಣ 2,97,900 ಚದರ ಅಡಿಗಳು. Oracle Openworld 2006 ಈ ತಿಂಗಳ 21 ರಿಂದ 26 ವರೆಗೆ San Francisco Moscone Center ನಲ್ಲಿ ನಡೆಯಲಿದೆ

ಒರಾಕಲ್ ಅನ್ನು `ಒರಳುಕಲ್ಲು' ಅಂತ ನಾನು ತಮಾಶೆ ಮಾಡ್ತಿರ್ತೀನಿ.ಈ ಕಟ್ಟಡಗಳು ಒರಳುಕಲ್ಲಿನ ರುಬ್ಬುಗುಂಡಿನ ತರ ಕಾಣೋಲ್ವೇ? ಜೊತೆಗೆ ಇನ್ನೊಂದು ಕಾರಣವೂ ಇದೆ.ಒರಾಕಲ್ ಅಪ್ಲಿಕೇಶನ್ ಮೇಲೆ ಕೆಲಸ ಮಾಡುವವರ ನೆತ್ತಿ`O' ಆಕಾರದಲ್ಲಿ ರುಬ್ಬುಗುಂಡಿನ ತರಾನೇ ನುಣ್ಣಗಾಗಿ ಬಿಡುತ್ತೆ!

Thursday, October 05, 2006

ಚೆಲುವೆಯೇ ನಿನ್ನ ನೋಡಲು...



ಚೆಲುವೆಯೇ ನಿನ್ನ ನೋಡಲು

ಮಾತುಗಳೂ ಬರದವನು

ಬರೆಯುತಾ ಹೊಸ ಕವಿತೆಯಾ

ಹಾಡುವ ನೋಡಿ ಅಂದವನು...

Wednesday, October 04, 2006

ಮೊದಲ ಮಳೆ



ಇಲ್ಲಿನವರು ಇದಕ್ಕೆ ಮುಂಗಾರು ಅಂತಾರೋ,ಹಿಂಗಾರು ಅಂತಾರೋ ಅಥ್ವಾ ಸುಮ್ನೆ `ರೇನ್' ಅಂದು ಬಿಟ್ಟು ಸುಮ್ಮನಾಗುತ್ತಾರೋ ಗೊತ್ತಿಲ್ಲ ನನಗೆ. ಭಾನುವಾರ ನಿಧಾನವಾಗಿ ಬೇ ಏರಿಯಾದ ಬಾನಿನಲ್ಲಿ ಮೋಡಗಳು ಒಟ್ಟಾಗುತ್ತಿದ್ದರೆ ನನಗೆ ಆತಂಕವೂ ಜಾಸ್ತಿಯಾಗುತ್ತಿತ್ತು.ಈ ಸೀಸನ್ನಿನ ಮೊದಲ ಮಳೆ `ಬರ್ಲಾ...ಬರ್ಲಾ' ಅಂತ ಕೇಳುತ್ತಿದ್ದರೆ `ರೇನ್ ರೇನ್ ಗೋ ಅವೇ... ಕಮ್ ಅಗೈನ್ ಅನದರ್ ಡೇ..' ಅಂತ ಮಕ್ಕಳ ರೈಮ್ಸ್ ಹೇಳುವ ಮನಸ್ಸಾಗುತ್ತಿತ್ತು. ನಾನೇನೂ `ಲಿಟ್ಲ್' ಆಗೂ ಇಲ್ಲ.ಮತ್ತು ಆಡಬೇಕಾಗೂ ಇರಲಿಲ್ಲ ಮತ್ತೇನು ಇವಳ ತಕರಾರು? ಅಂದಿರಾ...

ಮಧ್ಯಾನ್ಹ ಅ.ರಾ.ಮಿತ್ರ ಅವರಿಗೂ ಸಂಜೆ ಶೆರಿಲ್ ಕ್ರೋ ಗೂ ಅಪಾಯಿಂಟ್ಮೆಂಟ್ ಕೊಟ್ಟು ಬಿಟ್ಟಿದ್ದೆ! ಈ ರೇನ್ ನನ್ನ ಪ್ರೋಗ್ರಾಂ ಎಲ್ಲಾ ಹಾಳು ಮಾಡಲು ಪ್ರೋಗ್ರಾಂ ಹಾಕಿದರೆ... ಕೋಪ ಬರೊಲ್ಲವಾ ನನಗೆ! ನಾನೆಷ್ಟು ಬೇಡಿಕೊಂಡರೂ ಕೇರ್ ಮಾಡದೇ ಅಂತೂ ಮಧ್ಯಾಹ್ನ ಮಳೆ ಸುರಿದೇ ಬಿಟ್ಟಿತು.ಮೊದಲ ಮಳೆ ಆಹಾಹಾ...ಊಹೂಹೂ...ಅನ್ನುವ ಕವಿ ಹೃದಯವೇನಿಲ್ಲಾ ನನಗೆ. ಅಥವಾ ಬೈಚಾನ್ಸ್ ಎಲ್ಲೋ ಅಲ್ಪ ಸ್ವಲ್ಪ ಕ.ಹೃ ಇದ್ದರೂ ಅದನ್ನು ಬೇಕಂತ್ಲೇ ದೂರವಿಟ್ಟು ಮಳೆಯನ್ನೂ,`ಮಳೆ ಬಂದ್ರೆ ಕೇಡೇ,ಮಗ ಉಂಡ್ರೆ ಕೇಡೇ...' ಎಂಬ ಗಾದೆಯನ್ನೂ ,ಆ ಗಾದೆ ಮಾಡಿದವರನ್ನೂ ಸೇರಿಸಿ ಶಪಿಸಿದೆ

ಅ.ರಾ.ಮಿತ್ರ ಅವರು ಸುರಿಸಿದ ಹಾಸ್ಯದ ಮಳೆಯಲ್ಲಿ ನೆನೆಯುತ್ತಾ ಕೂತಾಗ ನಿಜವಾದ ಮಳೆಯ ನೆನಪೂ ಬರಲಿಲ್ಲ.ಸಂಜೆಗೆ ಶೆರಿಲ್ ಕ್ರೋ ಗೆ `ನೀನು ಜೇನಿನಮಳೆ ಸುರಿಸಮ್ಮಾ' ಅಂತ ಹೇಳಿ ಮಳೆ ಪಾಪ ತಾನು ಹಿಂದೆ ಸರಿಯಿತು

ಶೆರಿಲ್ ಕಾನ್ಸಾರ್ಟ್ ಮುಗಿಸಿ ಮನೆಗೆ ಬರುವಾಗ ಪಾಪ ಮೊದಲ ಮಳೆಗೆ ಬೈದು ಬಿಟ್ಟೆನಲ್ಲಾ ಅಂತ ನನಗೆ ನಿಜವಾಗಿಯೂ ಬೇಜಾರಾಯಿತು.`ಸಾರಿ ಮಳೆ ಪ್ಲೀಸ್ ಈಗ ಬಾ' ಅಂದೆ. ಅದಕ್ಕೇನೋ ಬಿಂಕ! ಬರಲಿಲ್ಲ ನಾನದಕ್ಕೆ ಅನಂತ್ ನಾಗ್ `ಪ್ರೇಮಾಯಣ'ದಲ್ಲಿ ಆರತಿಗೆ ಹೇಳಿದ ಸ್ಟೈಲ್ ನಲ್ಲಿ

ಹೋದರೆ ಹೋಗು ಎಲ್ಲೊಗ್ತೀಯಾ

ಈ ಹೊತ್ತಲ್ಲಾ ನಾಳೆ ಬರ್ತೀ...

ಊರಲ್ಲೆಲ್ಲಾ ಒಬ್ಳೇ ಅಲ್ಲಾ

ನಿನ್ನಂಥೋರು ಬಹಳಾ ಬಹಳಾ...

ಅಂತ ಅಂದು ಬಿಟ್ಟೆ. ಮಳೆ ಮುನಿಸಿಕೊಂಡಿತು.ಮಳೆಗೆ ಕೋಪ ಬಂದಿದೆ ಅಂತ ನಂಗೊತ್ತು.ಮಳೆ `ತಣ್ಣಗಾಗೋಕ್ಕೆ' ತುಂಬಾ ಸಮಯ ಬೇಡಾ ಅಂತಾನೂ ಗೊತ್ತು ಅದಕ್ಕೇ ಕಾಯ್ತಾ ಇದೀನಿ `ಮುತ್ತು ಮುತ್ತು ನೀರ ಹನಿಯ ತಾಂ ತನನ' ಯಾವಾಗ ಕೇಳುತ್ತೇ ಅಂತ...

Tuesday, October 03, 2006

ಗೆಲುವಾಗೆಲೆ ಮನ...



ನಿರ್ಮಲವಾದ ತಿಳಿನೀರಿನಲ್ಲಿ ಆನಂದದಿಂದ ವಿಹರಿಸುತ್ತಿರುವ ಈ ಶುಭ್ರ ಶ್ವೇತ ಪಕ್ಷಿಗಳನ್ನು ನೋಡಿ ಎಷ್ಟು ಹಗುರವಾಗಿ ತೇಲುತ್ತಿರುವ ಇವುಗಳನ್ನು ಕಂಡು ಪ್ರಪಂಚದ ಭಾರವೆಲ್ಲಾ ನಾನೇ ಹೊತ್ತಿದ್ದೇನೆ ಅಂತ ಸುಮ್ ಸುಮ್ನೆ ಆದಿಶೇಷನ ಪೋಸು ಕೊಡುವ ನಾವುಗಳು ಕಲಿಯ ಬೇಕಾದ್ದು ಇದೆ ಅಂತ ಅನ್ನಿಸುವುದಿಲ್ಲವೇ?

ಇವುಗಳು` ಲಘುವಾಗೆಲೆ ಮನ ಗೆಲವಾಗೆಲೆ ಮನ' ಎನ್ನುತ್ತಾ ಹಗುರವಾಗಿ` ಹಾರಿ ಹರಿಯನ್ನು ಮುಟ್ಟುತ್ತಿರುವಾಗ' ಸೋಕಾಲ್ಡ್ ಬುದ್ದಿವಂತ ಮಾನವರಾದ ನಾವು `ಹರಳೆಣ್ಣೆ ಮುಖ' ಮಾಡಿಕೊಂಡು ಕೂರೋದ್ರಲ್ಲಿ ಅರ್ಥವಿದೆಯೇ?

ಎಲ್ಲಿ ಚಿಯರ್ ಅಪ್....ಹಾಗೇ....

Monday, October 02, 2006

ನಿನ್ನ ನೆನಪು ಸ್ಪೂರ್ತಿ, ಹುರುಪು,ದೇಶೀಯತೆ ಕಂಪು....

ನೆನ್ನೆ ಮಧ್ಯರಾತ್ರಿಯ ತನಕ ಮೌಂಟನ್ ವ್ಯೂ ನಲ್ಲಿ ಶೆರ್ರಿಲ್ ಕ್ರೋ(Sheryl Crow) ಕಾನ್ಸಾರ್ಟ್ ಕೇಳುತ್ತಾ ಕೂತಿದ್ದೆ ಒಂಬತ್ತು ಬಾರಿ `ಗ್ರಾಮ್ಮಿ' ಗಳಿಸಿರುವ ಬ್ಲೂಸ್ ರಾಕ್ ಗಾಯಕಿ ಶೆರ್ರಿಲ್ ಕ್ರೋ ತನ್ನ ಜೇನಿನ ದನಿಯಲ್ಲಿ ಹಾಡುತ್ತಿದ್ದರೆ ನೆರೆದಿದ್ದ ಇಪ್ಪತೈದು ಸಾವಿರಕ್ಕೂ ಹೆಚ್ಚು ಜನ ಹುಚ್ಚೆದ್ದು ಕುಣಿಯುತ್ತಿದ್ದರು ಸುಮಾರು ಎರಡು ಲಾರಿ ತುಂಬಬಹುದಾದ ಸಾಮಾನುಗಳಿಂದ, ಅತ್ಯಾಧುನಿಕ ತಂತ್ರಜ್ಞಾನದಿಂದ ಸಿಂಗರಿಸಿದ್ದ ಸ್ಟೇಜು ಕ್ಷಣಕ್ಕೊಮ್ಮೆ ಕಾಮನಬಿಲ್ಲಿನ ಎಲ್ಲಾ ಬಣ್ಣಗಳನ್ನು ಎರಚುತ್ತಿತ್ತು ಶೆರ್ರಿಲ್ ಒಮ್ಮೆ ಕೋಗಿಲೆಯಂತೆ ,ಒಮ್ಮೆ ಗುಡುಗಿನಂತೆ ಎದೆತುಂಬಿ ಹಾಡುತ್ತಿದ್ದಳು.

ಹೀಗೆ ಹಾಡುತ್ತಾ ಇದ್ದ ಶೆರ್ರಿಲ್ ತನ್ನ ಬೋಸ್ನಿಯ ಬಗ್ಗೆ ಇರುವ ಹಾಡು ಹಾಡುವ ಮುಂಚೆ ಒಂದೆರಡು ಮಾತಾಡಿದಳು ತನ್ನ ಬೋಸ್ನಿಯ ಪ್ರವಾಸ ನೆನೆಸಿ ಕೊಳ್ಳುತ್ತಾ "ಜನ ಏಕೆ ಒಬ್ಬರನ್ನೊಬ್ಬರು ಕೊಲ್ಲುತ್ತಾರೆ?" ಅಂತ ವಿಷಾದದ ದನಿಯಲ್ಲಿ ಕೇಳಿದಳು ಈಗ ಜಗತ್ತಿಗೆ ಬೇಕಿರುವುದು ಶಾಂತಿ ಅಹಿಂಸೆ ಎನ್ನುತ್ತಾ ಶೆರ್ರಿಲ್ ನೆನಪಿಸಿ ಕೊಂಡಿದ್ದು ಮಹಾತ್ಮ ಗಾಂಧಿಯವರನ್ನು! ಅದೇ ಕ್ಷಣದಲ್ಲಿ ಮೈದಾನ ಪೂರ್ತಿ ಇರಿಸಿದ್ದ ಹಲವಾರು ಬೃಹತ್ ಪರದೆಗಳ ಮೇಲೆ ಮಹಾತ್ಮ ಗಾಂಧಿಯವರ ಮಾತುಗಳು ಮೂಡಿಬಂತು ನನಗನ್ನಿಸಿತು ನಿಜ `ಬಂದೇ ಮೇ ಥಾ ಧಮ್!

ಈಗ ದೇಶ ಪೂರ್ತಿ `ಬಂದೇ ಮೇ ಥಾ ಧಮ್' ಹೇಳುತ್ತಿದೆ ನಿಧಾನವಾಗಿಯಾದರೂ ನಮಗೆ ಬಾಪು ನೆನಪಾಗುತ್ತಿದ್ದಾರೆ ಬವಣೆ ಪಥದ ಹಾದಿಯಲ್ಲಿ ತೊಳಲಿ ಬಳಲಿ ಬೆಂದ ಮೇಲೆ ನಾವು ಹಿಡಿದಿರುವ ದಾರಿ ತಪ್ಪು ಅಂತ ನಮಗೆ ಗೊತ್ತಾಗುತ್ತಿದೆ`ಲೇಟ್ ಈಸ್ ಬೆಟರ್ ದ್ಯಾನ್ ನೆವರ್' ಅಂಥಾ ಸಂತೋಷ ಪಡಬೇಕಾ? ಗೊತ್ತಾಗುತ್ತಿಲ್ಲ

ಶಾಲೆಯಲ್ಲಿ ಓದಿದ `ತಟ್ಟು ಚಪ್ಪಾಳೆ ಪುಟ್ಟಮಗು ಗಾಂಧಿಗಿಂದು ಜನುಮದಿನ'ದಿಂದ ಹಿಡಿದು ಬಾಪು ಬಗ್ಗೆ ಇರುವ ಹಾಡುಗಳಿಗೆ ಲೆಕ್ಕವಿಲ್ಲ.ನನಗೆ ತುಂಬಾ ಹಿಡಿಸಿದ ಹಾಡು ದೊಡ್ಡರಂಗೇಗೌಡ ಅವರು ಬರೆದು ಶಿವಮೊಗ್ಗ ಸುಬ್ಬಣ್ಣ ಅವರು ಹಾಡಿರುವ "ಬಾಪೂ ಬಾಪು". ಸುಬ್ಬಣ್ಣನವರನ್ನು ಬಿಟ್ಟರೆ ಬೇರಾವ ಗಾಯಕರೂ ಈ ಹಾಡು ಹಾಡಿದ್ದು ನಾನು ಕೇಳಿಲ್ಲ ಬೆಂಗಳೂರು ಆಕಾಶವಾಣಿಯಲ್ಲಿ ಆಗಾಗ ಕೇಳಿ ಬರುವ ಈ ಹಾಡನ್ನು ಸಾಧ್ಯವಾದರೆ ಒಮ್ಮೆ ಕೇಳಿ ಗಾಂಧೀಜಿಯ ಆ ಭವ್ಯರೂಪು ನಿಮ್ಮ ಕಣ್ಣ ಮುಂದೆ ಮೂಡಿಬರುತ್ತದೆ ....

ದಾಸ್ಯ ತುಂಬಿದಾ ದೇಶದೊಳಗೆ
ಚಿಂತನೆ ಚೈತನ್ಯ ತಂದೆ ಬಾಪು,ಬಾಪೂ...
ಮೌಲ್ಯ ಮರೆತ ಮಂದಿ ನಡುವೆ
ಮಾನವೀಯ ತೇಜ ನಿನ್ನ ರೂಪು

ಮಂದಹಾಸ ಮೂರ್ತಿಯಾಗಿ ಜನಮಾನಸ ಮಿಡಿದೆ
ಶ್ರದ್ದೆಯೆಂಬ ಗದ್ದೆಯೊಳಗೆ ಸತ್ಯ ಬಿತ್ತಿ ಬೆಳೆದೆ
ಸ್ವಾತಂತ್ರ್ಯದ ಹೋರಾಟದಿ ಶಾಂತಿ ಮಂತ್ರ ಹಿಡಿದೆ
ಭಾರತೀಯ ಬದುಕಿಗೇನೆ ಕಾಯಕಲ್ಪ ಕಡೆದೆ

ನಿನ್ನ ಹಾದಿ ಮರೆತ ನಾವು ತೊಳಲಿ,ಬಳಲಿ,ಬೆಂದು
ಬವಣೆ ಪಥದ ಬೆಂಕಿಯಲ್ಲಿ ನಡೆದಿಹೆವು ಇಂದು
ನಿನ್ನ ನೆನಪು ಸ್ಪೂರ್ತಿ,ಹುರುಪು ದೇಶೀಯತೆ ಕಂಪು
ವಿಶ್ವಪ್ರೇಮ,ಸಹನೆ,ಕರುಣೆ ನಿನ್ನತನದ ಛಾಪು

ಸತ್ಯ ,ಅಹಿಂಸೆ ,ಶಾಂತಿಯ ಹರಿಕಾರ ಬಾಪೂ ನಿನಗೆ ನಮ್ಮ ನಮನ...

Sunday, October 01, 2006

ಹರಿಯುವ ನದಿಯಾ ನೋಡುತ ನಿಂತೆ...



ಹರಿಯುವ ನದಿಯಾ ನೋಡುತ ನಿಂತೆ

ಅಲೆಗಳು ಕುಣಿದಿತ್ತು

ಕಲಕಲ ಕಲಕಲ ಮಂಜುಳನಾದವು

ಕಿವಿಗಳ ತುಂಬಿತ್ತು

ಅದ ಕೇಳಿ ನಾ ಮೈ ಮರೆತೆ

ಸ್ವರವೊಂದು ಆಗಲೆ ಕಲಿತೇ

ಹಾಡಿದೆ ಈ ಕವಿತೇ...

ನಾ ಹಾಡಿದೆ ಈ ಕವಿತೇ...